ಜೂಜನ್ನು ಶಾಸನಬದ್ಧಗೊಳಿಸಲು ಮಹಾಭಾರತದ ಉದಾಹರಣೆ ನೀಡಿದ ಕಾನೂನು ಆಯೋಗ  
ಸುದ್ದಿ ಸಾರ

ಜೂಜನ್ನು ಶಾಸನಬದ್ಧಗೊಳಿಸಲು ಮಹಾಭಾರತದ ಉದಾಹರಣೆ ನೀಡಿದ ಕಾನೂನು ಆಯೋಗ  

ಭಾರತೀಯ ಕಾನೂನು ಆಯೋಗ ತಾನು ನೀಡಿರುವ ವರದಿಯಲ್ಲಿ ಜೂಜನ್ನು ತಡೆಗಟ್ಟಲು ಇರುವ ಏಕೈಕ ದಾರಿಯೆಂದರೆ ಜೂಜನ್ನು ಶಾಸನಬದ್ಧವಾಗಿಸುವುದು ಎಂದಿದೆ.

ಭಾರತೀಯ ಕಾನೂನು ಅಯೋಗ ಗುರುವಾರ ಕೇಂದ್ರ ಸರಕಾರಕ್ಕೆ ತನ್ನ ವರದಿಯನ್ನು ಸಲ್ಲಿಸಿದ್ದು, ಅಕ್ರಮ ಜೂಜಾಟವನ್ನು ತಡೆಗಟ್ಟುವುದು ಸಾಧ್ಯವಿಲ್ಲ ಎಂದಿದೆ. ಜತೆಗೆ ನಮ್ಮ ಮುಂದಿರುವ ಏಕೈಕ ಆಯ್ಕೆಯೆಂದರೆ ಜೂಜಾಟವನ್ನು ಕಾನೂನಾತ್ಮಕಗೊಳಿಸುವುದು ಎಂದು ತಿಳಿಸಿದೆ.

ಸುಪ್ರಿಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿ. ಎಸ್‌. ಚೌಹಣ್‌ ಅಧ್ಯಕ್ಷತೆಯ ಆಯೋಗವು ‘ಕ್ಯಾಶ್‌ಲೆಸ್‌’ ಜೂಜಾಟದಿಂದ ಸರಕಾರದ ಆದಾಯ ಜಾಸ್ತಿಯಾಗಲಿದ್ದು, ಕಾನೂನು ಬಾಹಿರ ಜೂಜಾಟವನ್ನು ತಡೆಗಟ್ಟಬಲ್ಲದು ಎಂದು ವರದಿ ನೀಡಿದೆ. ಹಣದ ಮೂಲಕ ಜೂಜಾಡುವವರ ಮೇಲೆ ದಂಡ ವಿಧಿಸಿಬಹುದು ಎಂದಿದ್ದು, ಜೂಜಾಟದ ಮೇಲೆ ಆದಾಯ ತೆರಿಗೆ, ಜಿಎಸ್‌ಟಿ ಅಡಿಯಲ್ಲಿ ತೆರಿಗೆ ವಿಧಿಸಿ ಬಂದ ಆದಾಯವನ್ನು ಜನಕಲ್ಯಾಣ ಕಾರ್ಯಗಳಿಗೆ ಬಳಸಬಹುದು ಎಂದು ಸೂಚನೆ ನೀಡಿದೆ.

ವರದಿ ಹೇಳಿರುವಂತೆ, ಜೂಜು ಆಡುವವರು ಮತ್ತು ನಡೆಸುವವರ ಆಧಾರ್‌ ನಂಬರ್‌ ಮತ್ತು ಪ್ಯಾನ್‌ ಕಾರ್ಡ್ ನಂಬರ್‌ಗಳನ್ನು ಲಿಂಕ್‌ ಮಾಡಿಸಿಕೊಳ್ಳುವುದರ ಮೂಲಕ ಅವರ ಮೇಲೆ ನಿಗಾ ಇಡಬಹುದು ಎಂದಿದೆ. ಜೂಜಾಟವನ್ನು ‘ಸಮಂಜಸವಾದ ಜೂಜಾಟ’(Proper Gambling) ಮತ್ತು ‘ಸಣ್ಣ ಜೂಜಾಟ’(Small gambling) ಎಂದು 2 ಭಾಗವಾಗಿ ವರ್ಗೀಕರಿಸಿದೆ. ಮೊದಲನೇ ಜೂಜಾಟವು ಶ್ರೀಮಂತರಿಗೆ ಸಂಬಂಧಪಟ್ಟಿದ್ದು, ಎರಡನೆಯದು ಕಡಿಮೆ ಆದಾಯವಿರುವ ವರ್ಗಗಳಿಗೆ ಸಂಬಂಧಿಸಿದೆ. ಸದ್ಯ ಭಾರತದಲ್ಲಿ ಕುದುರೆ ರೇಸ್‌ ಮೇಲೆ ಬೆಟ್ಟಿಂಗ್‌ ಕಟ್ಟುವುದು ಮಾತ್ರ ಕಾನೂನಾತ್ಮಕ ಎನಿಸಿಕೊಂಡಿದೆ.

‘Legal Framework: Gambling and Sports Betting including Cricket in India’ ಎಂಬ ಹೆಸರಿನಲ್ಲಿ ವರದಿಯನ್ನು ನೀಡಿರುವ ಕಾನೂನು ಆಯೋಗ, ಜೂಜನ್ನು ವಿಧಿಬದ್ಧಗೊಳಿಸುವುದರಿಂದ ಉದ್ಯೋಗ ಸೃಷ್ಟಿಯಾಗುವುದರ ಜತೆಗೆ ವಿದೇಶಿ ನೇರ ಬಂಡವಾಳ ಕೂಡ ಹರಿದುಬರಲಿದೆ ಎಂದಿದೆ.

ವರದಿಗಳ ಪ್ರಕಾರ ಕಾನೂನು ಆಯೋಗ ಈ ವರದಿಯನ್ನು ಸಿದ್ಧಪಡಿಸಲು ವಿದ್ಯಾರ್ಥಿಗಳು, ಕಾನೂನು ತಜ್ಞರು ಮತ್ತು ಸಾಮಾನ್ಯ ಜನರಿಂದ ಮಾಹಿತಿ ಸಂಗ್ರಹಿಸಿದೆ. ಈ ಮಾಹಿತಿಯ ಮೇಲೆ ಜೂಜಾಟವನ್ನು ತಡೆಗಟ್ಟುವುದಕ್ಕಿಂತ ಶಾಸನಬದ್ಧಗೊಳಿಸುವುದೇ ಲೇಸು ಎಂಬ ತೀರ್ಮಾನಕ್ಕೆ ಕಾನೂನೂ ಆಯೋಗ ಬಂದಿದೆ.

ಜೂಜಾಟವನ್ನು ಕಾನುನುಬದ್ಧಗೊಳಿಸುವುದರ ಕುರಿತು ಮಾತನಾಡುವಾಗ ಕಾನೂನು ಆಯೋಗ ‘ಮಹಾಭಾರತವನ್ನು ಉದಾಹರಣೆಯನ್ನಾಗಿ ನೀಡಿದೆ. ‘ಜೂಜಾಟವು ಮಹಾಭಾರತದ ಕಾಲದಲ್ಲೇ ಶಾಸನಬದ್ಧವಾಗಿತ್ತು. ಧರ್ಮರಾಯ ತನ್ನ ಹೆಂಡತಿಯನ್ನು ಪಣವಾಗಿ ಕಟ್ಟಿರದಿದ್ದರೆ ಮಹಾಭಾರತ ನಡೆಯುತ್ತಲೇ ಇರುತ್ತಿರಲಿಲ್ಲ ಎಂದು ವರದಿಯಲ್ಲಿ ತಿಳಿಸಿದೆ.

ಕ್ರಿಕೆಟ್‌ ಅಸೋಸಿಯೇಷನ್‌ ಆಫ್‌ ಬಿಹಾರ್‌ ಮತ್ತು ಇನ್ನಿತರ ಕ್ರಿಕೆಟ್‌ ಮಂಡಳಿಗಳ ವ್ಯಾಜ್ಯವೊಂದನ್ನು ವಿಚಾರಣೆ ನಡೆಸುತ್ತಿದ್ದ ವೇಳೆಯಲ್ಲಿ ಸುಪ್ರಿಂ ಕೋರ್ಟ್, ದೇಶದಲ್ಲಿ ಜೂಜನ್ನು ಶಾಸನಬದ್ಧಗೊಳಿಸುವುದರ ಸಾಧ್ಯತೆಗಳ ಬಗ್ಗೆ ವರದಿ ನೀಡುವಂತೆ ಕಾನೂನು ಆಯೋಗಕ್ಕೆ ತಿಳಿಸಿತ್ತು. ಆದ್ದರಿಂದಾಗಿ ಕಾನೂನು ಆಯೋಗ ಈ ವರದಿಯನ್ನು ಸಿದ್ಧಪಡಿಸಿದೆ. ಜೂಜಾಟವನ್ನು ದೇಶದಲ್ಲಿ ಕಾನೂನುಬದ್ಧಗೊಳಿಸದಿದ್ದರೆ, ಜೂಜಾಟಕ್ಕೆ ತಡೆಯೊಡ್ಡಲು ಸಾಧ್ಯವಿಲ್ಲ ಎಂದಿದೆ.