ಹೀಗೊಂದು ಬೇಡಿಕೆ: ‘ಬಜೆಟ್‌ನ ಶೇ.15ರಷ್ಟನ್ನಾದರೂ ಪ್ರಾಥಮಿಕ ಶಿಕ್ಷಣಕ್ಕೆ ಮೀಸಲಿಡಿ’
ಸುದ್ದಿ ಸಾರ

ಹೀಗೊಂದು ಬೇಡಿಕೆ: ‘ಬಜೆಟ್‌ನ ಶೇ.15ರಷ್ಟನ್ನಾದರೂ ಪ್ರಾಥಮಿಕ ಶಿಕ್ಷಣಕ್ಕೆ ಮೀಸಲಿಡಿ’

ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್‌ ಮಂಡನೆಗೂ ಮುಂಚೆ ವಿಶೇಷ ಅಧಿವೇಶನವನ್ನು ಕರೆದು ಸಿದ್ಧತೆ ನಡೆಸುತ್ತಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ಶಾಲಾ ಶಿಕ್ಷಣವನ್ನು ಕೂಡ ಪ್ರಮುಖವಾಗಿ ಸ್ವೀಕರಿಸುವಂತೆ ಸಮನ್ವಯ ವೇದಿಕೆ ಮನವಿ ಮಾಡಿದೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್‌ ಮಂಡನೆಗೆ ಬೇಕಾದ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ. ಈ ಬಜೆಟ್‌ನಲ್ಲಿ ದೇಶದ ಅಭಿವೃದ್ಧಿಗೆ ಮೂಲವಾಗಿರುವ ಶಿಕ್ಷಣವನ್ನು ಸದೃಢಗೊಳಸಿಬೇಕಿರುವುದು ಅತ್ಯಗತ್ಯ. ಹೀಗಾಗಿ ಶಾಲಾ ಶಿಕ್ಷಣವನ್ನು ಅಭಿವೃದ್ಧಿಪಡಿಸುವ ಸಲುವಾಗಿ ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಮುಖ್ಯಮಂತ್ರಿಗಳ ಮುಂದೆ ಹಲವಾರು ಬೇಡಿಕೆಗಳನ್ನಿಟ್ಟಿದೆ.

ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ರಾಜ್ಯದಲ್ಲಿ ಕಳೆದ ಎರಡು ದಶಕಗಳಿಂದ ಕಾರ್ಯ ನಿರ್ವಹಿಸುತ್ತಿದೆ. ‘ಸರಕಾರಿ ಶಾಲೆ ಉಳಿಯಲಿ ಬೆಳೆಯಲಿ, ನೆರೆಹೊರೆಯ ಸಮಾನ ಶಾಲೆಯಾಗಲಿ’ ಎಂಬ ಘೋಷವಾಕ್ಯದಡಿ ಈ ವೇದಿಕೆ ಕಾರ್ಯ ನಿರ್ವಹಿಸುತ್ತಿದೆ. ರಾಜ್ಯದ ಸರಕಾರಿ ಶಾಲೆಗಳಲ್ಲಿ ಶಾಲಾಭಿವೃದ್ಧಿ ಮತ್ತು ಮತ್ತು ಮೇಲುಸ್ತುವಾರಿ ಸಮಿತಿಗಳಿವೆ. 18 ಜನ ಸದಸ್ಯ ಬಲವನ್ನು ಹೊಂದಿರುವ ಈ ಸಮಿತಿಗಳಲ್ಲಿ ಸರಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಪೋಷಕರು ಸದಸ್ಯರಾಗಿರುತ್ತಾರೆ. ರಾಜ್ಯದೊಳಗಿನ ಇಂತಹ ಎಲ್ಲಾ ಸಮಿತಿಗಳನ್ನು ಒಟ್ಟುಗೂಡಿಸಿಕೊಂಡು ಸಮನ್ವಯ ವೇದಿಕೆ ಸರಕಾರಿ ಶಾಲೆಗಳ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ.

ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವುದರ ಮೂಲಕ ಸಂವಿಧಾನದ ಮೌಲ್ಯಗಳಾದ ಸಮಾನತೆ, ಸಾಮಾಜಿಕ ನ್ಯಾಯ ಮತ್ತು ತಾರತಮ್ಯ ರಹಿತ ಸಮಾಜವನ್ನು ಕಟ್ಟಿಕೊಳ್ಳಬೇಕೆಂಬ ಆಶಯವನ್ನು ಈ ಸಮನ್ವಯ ಸಮಿತಿ ಹೊಂದಿದೆ. ಜತೆಗೆ ಬಲಿಷ್ಠ ಸಾರ್ವಜನಿಕ ಶಾಲಾ ಶಿಕ್ಷಣ ವ್ಯವಸ್ಥೆಯಿಂದ ಮಾತ್ರ ಸುಸ್ಥಿರ ಅಭಿವೃದ್ಧಿಯುತ ಕರ್ನಾಟಕವನ್ನು ನಿರ್ಮಿಸಲು ಸಾಧ್ಯ ಎಂಬ ನಂಬಿಕೆ ಈ ಸಮನ್ವಯ ವೇದಿಕೆಯದ್ದು.

ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್‌ ಮಂಡನೆಗೂ ಮುಂಚೆ ವಿಶೇಷ ಅಧಿವೇಶನವನ್ನು ಕರೆದು ಸಿದ್ಧತೆ ನಡೆಸುತ್ತಿದ್ದಾರೆ. ಈ ಸಿದ್ಧತೆಗಳ ಜತೆಗೆ ಬಜೆಟ್‌ನಲ್ಲಿ ಶಾಲಾ ಶಿಕ್ಷಣವನ್ನು ಕೂಡ ಪ್ರಮುಖವಾಗಿ ಸ್ವೀಕರಿಸುವಂತೆ ಸಮನ್ವಯ ವೇದಿಕೆ ಮನವಿ ಮಾಡಿದೆ. ಶಾಲಾ ಶಿಕ್ಷಣ ಅಭಿವೃದ್ಧಿಗೆ ಸಂಬಂಧಿಸಿದಂತೆ ಒಟ್ಟು 6 ಹಕ್ಕೊತ್ತಾಯಗಳನ್ನು ಮುಖ್ಯಮಂತ್ರಿ ಹೆಚ್‌.ಡಿ. ಕುಮಾರಸ್ವಾಮಿಯವರ ಮುಂದಿಟ್ಟಿದೆ. ವೇದಿಕೆ ಹಕ್ಕೊತ್ತಾಯಗಳು ಈ ಕೆಳಕಂಡಂತಿವೆ:

  • ರಾಜ್ಯದಲ್ಲಿ 10ಕ್ಕಿಂತ ಕಡಿಮೆ ಮಕ್ಕಳಿರುವ ಸುಮಾರು 3347 ಕಿರಿಯ ಪ್ರಾಥಮಿಕ ಶಾಲೆಗಳು ಹಾಗು 57 ಹಿರಿಯ ಪ್ರಾಥಮಿಕ ಶಾಲೆಗಳಿವೆ . ಇವು ಅಪಾಯದ ಅಂಚಿನಲ್ಲಿರುವ ಸರ್ಕಾರಿ ಶಾಲೆಗಳು . ಈ ಶಾಲೆಗಳಲ್ಲಿ ದಾಖಲಾತಿಯನ್ನು ಹೆಚ್ಚಿಸಿ ಉಳಿಸಿಕೊಳ್ಳುವ ದೃಷ್ಟಿಯಿಂದ ಕೂಡಲೇ ಈ ಶಾಲೆಗಳಲ್ಲಿ ಪೂರ್ವ-ಪ್ರಾಥಮಿಕ ತರಗತಿಗಳನ್ನು ಪ್ರಾರಂಭಿಸಲು ಅನುವಾಗುವಂತೆ ಬಜೆಟ್ ನಲ್ಲಿ ಪ್ರಸ್ತಾಪಿಸಬೇಕು .
  • ಈ ಹಿಂದೆ ಮಾನ್ಯ ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್ ನಲ್ಲಿ ರೂ.23350 ಕೋಟಿಯನ್ನು ಶಿಕ್ಷಣಕ್ಕೆ ಒದಗಿಸಿದ್ದರು. ಇದು ಒಟ್ಟು ಆಯವ್ಯಯದ ಶೇಕಡ 11.05 ರಷ್ಟಿದ್ದು, ಈಗ ಮಂಡಿಸಲಿರುವ ಬಜೆಟ್ ನಲ್ಲಿ ಶಾಲಾ ಶಿಕ್ಷಣಕ್ಕೆ ಶೇಕಡ 15ರಷ್ಟನ್ನು ಮೀಸಲಿಡಬೇಕು .
  • ಶಾಲಾಹಂತದಲ್ಲಿ ರಚನೆಯಾಗಿರುವ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳು ಸರ್ಕಾರಿ ಶಾಲೆಗಳನ್ನು ಉಳಿಸಿ-ಬೆಳೆಸಿ ನೆರೆಹೊರೆಯ ಸಮಾನ ಶಾಲೆಗಳನ್ನಾಗಿ ಪರಿವರ್ತಿಸಲು ಶಕ್ತಿ ಮೀರಿ ಕೆಲಸ ನಿರ್ವಹಿಸುತ್ತಿವೆ. ಈ ಹಿನ್ನೆಲೆಯಲ್ಲಿ, ಶಾಲಾಹಂತದ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳು ಎಲ್ಲಾ 18 ಜನ ಚುನಾಯಿತ ಸದಸ್ಯರಿಗೆ ಮತ್ತು ಉಳಿದ ಪದನಿಮಿತ್ತ ಹಾಗು ನಾಮನಿರ್ದೇಶನ ಸದಸ್ಯರಿಗೆ ಶಾಲಾ ಹಂತದಲ್ಲಿಯೇ ತರಬೇತಿ ನೀಡುವ ಕುರಿತು ಬಜೆಟ್‌ನಲ್ಲಿ ಉಲ್ಲೇಖಿಸಬೇಕು
  • ಖಾಲಿ ಇರುವ ಎಲ್ಲಾ 28,582 ಶಿಕ್ಷಕರ ಹುದ್ದೆಗಳನ್ನು ತುಂಬಲು ಬಜೆಟ್‌ನಲ್ಲಿ ಪ್ರಸ್ತಾಪಿಸಿ, ಹಣ ಮೀಸಲಿಡಬೇಕು
  • ಸೆಪ್ಟೆಂಬರ್ 2017 ರಲ್ಲಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ಸರ್ಕಾರಿ ಶಾಲೆಗಳ ಸಬಲೀಕರಣ ಸಮಿತಿಯ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಲು ಅವಶ್ಯಕವಾದ ರೂಪು-ರೇಷೆಗಳನ್ನು ರೂಪಿಸಿ ಜಾರಿಗೊಳಿಸಲು ವರದಿಯಲ್ಲಿನ ಶಿಫಾರಸಿನಂತೆ ಉನ್ನತ ಮಟ್ಟದ ಸಲಹಾ ಸಮಿತಿಯನ್ನು ರಚಿಸುವ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪಿಸಬೇಕು.
  • ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಪ್ರವೇಶ, ಶುಲ್ಕ ಮತ್ತು ಮಕ್ಕಳ-ಪಾಲಕರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳನ್ನು ನಿಯಂತ್ರಿಸಲು ವಿಶೇಷ ಕಾನೂನನ್ನು ರೂಪಿಸುವ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪಿಸಬೇಕು

ಈ ಹಕ್ಕೊತ್ತಾಯಗಳ ಕುರಿತು ‘ಸಮಾಚಾರ’ದ ಜತೆ ಮಾತನಾಡಿದ ಸಮನ್ವಯ ವೇದಿಕೆಯ ಮಹಾಪೋಷಕರು ಮತ್ತು ಶಿಕ್ಷಣ ತಜ್ಞರಾದ ಪಿ.ವಿ. ನಿರಂಜನಾರಾಧ್ಯ, “ದೆಹಲಿಯಲ್ಲಿ ಕಳೆದ ವರ್ಷ ಒಟ್ಟು ವಾರ್ಷಿಕ ಬಜೆಟ್‌ನ 24ರಷ್ಟು ಹಣವನ್ನು ಶಿಕ್ಷಣಕ್ಕಾಗಿ ಮೀಸಲಿಟ್ಟಿತ್ತು. ಈಗ ಅಲ್ಲಿನ ಸರಕಾರಿ ಶಾಲೆಗಳು ಉತ್ತಮಮ ಸಾಧನೆಯನ್ನು ಮಾಡಿದೆ. ಅನುದಾನ ಹೆಚ್ಚಾದಷ್ಟೂ ಗುಣಮಟ್ಟ ಹೆಚ್ಚಾಗುತ್ತದೆ. ಅದ್ದಾಕ್ಕಾಗಿ ಈ ಬಾರಿಯ ಬಜೆಟ್‌ನ ಶೇ.15ರಷ್ಟನ್ನು ಶಿಕ್ಷಣಕ್ಕೆ ಮೀಸಲಾಗಿಡಬೇಕೆಂದು ಮನವಿ ಮಾಡಿದ್ದೇವೆ,” ಎಂದರು.

ಮುಂದುವರಿದು ಮಾತನಾಡಿದ ನಿರಂಜನಾರಾಧ್ಯ, “ಸರಕಾರ ಕೇವಲ ಅಧಿಕಾರಿಗಳ ಮಾತುಗಳನ್ನಷ್ಟೇ ಕೇಳುತ್ತಿದೆ. ನಿಜವಾಗಿಯೂ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರನ್ನು ಕೇಳುತ್ತಿಲ್ಲ. ನಿಜವಾದ ಸಮಸ್ಯೆಗಳೂ ಕೂಡ ಸರಕಾರವನ್ನು ಮುಟ್ಟುತ್ತಿಲ್ಲ. ಶಾಲಾ ಶಿಕ್ಷಣ ಅಭಿವೃದ್ಧಿಗೆ ಅಗತ್ಯವಿರುವುದೇನು ಎನ್ನುವುದು ಸರಕಾರಕ್ಕೆ ತಲುಪಬೇಕಿದೆ. ಅದಕ್ಕಾಗಿ ಈ ಹಕ್ಕೊತ್ತಾಯಗಳನ್ನು ಸರಕಾರದ ಮುಂದಿಡಲಾಗಿದೆ,” ಎಂದು ತಿಳಿಸಿದರು.