ರಸ್ತೆ ಅಪಘಾತ: ಅಗಲಿದ ಸಂವಾದ ಬಳಗದ ಮೂವರು ಸಂಗಾತಿಗಳು
ಸುದ್ದಿ ಸಾರ

ರಸ್ತೆ ಅಪಘಾತ: ಅಗಲಿದ ಸಂವಾದ ಬಳಗದ ಮೂವರು ಸಂಗಾತಿಗಳು

ಇತ್ತೀಚಿಗಷ್ಟೇ ಸಾಮಾಜಿಕ ಚಳವಳಿಗಳಿಗೆ ಕಾಲಿಟ್ಟಿದ್ದ ‘ಸಂವಾದ’ ಬಳಗದ ಮೂರು ಜನ ವಿದ್ಯಾರ್ಥಿಗಳು ಭಾನುವಾರ ರಾತ್ರಿ ರಸ್ತೆ ಅಪಘಾತದಲ್ಲಿ ಮೃತರಾಗಿದ್ದಾರೆ. ಚಿಕ್ಕವಯಸ್ಸಿನಲ್ಲಿಯೇ ಸಮಾಜಮುಖಿಗಳಾಗಿದ್ದ ಅವರಿಗೆ ಅಂತಿಮ ವಿದಾಯಗಳು.

‘ಸಂವಾದ’ ಬಳದ ಮೂವರು ಯುವ ಸಂಗಾತಿಗಳು ಭಾನುವಾರ ರಾತ್ರಿ ಮುಧೋಳ ಬೆಂಗಳೂರು ರಸ್ತೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತರಾಗಿದ್ದಾರೆ. ಇತ್ತೀಚಿಗಷ್ಟೇ ಸಾಮಾಜಿಕ ಚಳವಳಿಗಳಲ್ಲಿ ಕಾಣಿಸಿಕೊಳ್ಳಲು ಆರಂಭಿಸಿದ್ದ ಈ ಯುವಕ, ಯುವತಿಯರು ಕುಟುಂಬದವರು ಹಾಗೂ ಸ್ನೇಹಿತರನ್ನು ಅಗಲಿದ್ದಾರೆ.

ಭಾಗಲಕೋಟೆಯಲ್ಲಿ ನಡೆದ ಮದುವೆ ಸಮಾರಂಭದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಸಮಾರಂಭದಲ್ಲಿ ಹಲವಾರು ಹಿರಿಯರು, ಚಿಂತಕರು, ಸಾಮಾಜಿಕ ಹೋರಾಟಗಾರರು ಭಾಗಿಯಾಗಿದ್ದರು. ಇವರೆಲ್ಲರೊಟ್ಟಿಗೆ ವಿವಾಹಕ್ಕೆ ಸಾಕ್ಷಿಯಾದ ಈ ವಿದ್ಯಾರ್ಥಿಗಳು ಕಾರಿನಲ್ಲಿ ಮರಳಿ ಬೆಂಗಳೂರಿನತ್ತ ಬರುವಾಗ ರಸ್ತೆ ಮಧ್ಯೆ ಬೀಕರ ಅಪಘಾತಕ್ಕೆ ತುತ್ತಾಗಿದ್ದಾರೆ. ಕಾರಿಗೆ ದೊಡ್ಡ ಕಂಟೈನರ್‌ ಒಂದು ಡಿಕ್ಕಿ ಹೊಡೆದದ್ದು ಅಪಘಾತಕ್ಕೆ ಕಾರಣವಾಗಿದೆ.

ಇತ್ತೀಚಿಗಷ್ಟೇ ಸಮಾಜಮುಖಿ ಚಿಂತನೆ ಆರಂಭಿಸಿದ್ದ 20ರ ಹರೆಯದ ಮಂದಾರ, 19 ವರ್ಷದ ರುಕ್ಮಿಣಿ ಮತ್ತು 26 ವರ್ಷ ವಯಸ್ಸಿನ ನೆವಿಲ್‌ ಮೃತ ದುರ್ದೈವಿಗಳು. ಇವರೊಂದಿಗಿದ್ದ ಮಹೇಂದ್ರ ಚಿಂತಾಜನಕ ಸ್ಥಿತಿಯಲ್ಲಿದ್ದರೆ, ಮನೋಹರ್ ಹೆಚ್ಚಿನ ಅಪಾಯದಿಂದ ಪಾರಾಗಿದ್ದಾರೆ. ಅಪಘಾತಕ್ಕೆ ಒಳಪಟ್ಟವರಲ್ಲಿ 4 ಜನ ಒಂದೇ ಕುಟುಂಬಕ್ಕೆ ಸೇರಿದ್ದು, ಚಾಮರಾಜನಗರ ಜಿಲ್ಲೆಯ ಕೊರಮಘಟ್ಟ ಮೂಲದವರು.

ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದ ನೆವಿಲ್‌ ಕುಟುಂಬಕ್ಕೆ ತಾವೇ ಆಧಾರವಾಗಿದ್ದರು. ತಾಯಿಯೂ ಕೂಡ ಸಾಮಾಜಿಕ ಹೋರಾಟದ ಹಿನ್ನಲೆಯವರೇ ಆಗಿದ್ದರಿಂದ ಹೆಚ್ಚಿನ ಸಾಮಾಜಿಕ ಕಳಕಳಿ ಹೊಂದಿದ್ದರು. ತಮಟೆ ವಾದನದ ಮೇಲೆ ಹಿಡಿತ ಸಾಧಿಸಿದ್ದ ನೆವಿಲ್‌, ಹಲವಾರು ಸಾಮಾಜಿಕ ಹೋರಾಟಗಳ ವೇದಿಕೆಯ ಮೇಲೆ ತಮಟೆ ಬಾರಿಸಿದ್ದರು.

ಮಂದಾರ ಮತ್ತು ರುಕ್ಮಿಣಿ ಇದೀಗಷ್ಟೇ ಸಮಾಜಮುಖಿ ಚಿಂತನೆಯಲ್ಲಿ ತೊಡಗಿದ್ದರು. ಹಲವಾರು ಹೋರಾಟಗಳಲ್ಲಿ ಭಾಗವಹಿಸಿದ್ದರು. ಅಪಾಘಾತದಿಂದ ಪಾರಾಗಿರುವ ಮನೋಹರ್ ಕೂಡ ತಮಟೆ ಮತ್ತು ಜಂಬೆ ವಾದನಗಳಿಂದ ಹೆಸರು ಗಳಿಸಿದಾರೆ. ಸಧ್ಯ ಸಾವಿನಿಂದ ಪಾರಾಗಿದ್ದು, ತಮ್ಮ ಮಹೇಂದ್ರನ ಜತೆ ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರೂ ಕೂಡ ಆದಷ್ಟು ಬೇಗ ಚೇತರಿಕೆಯಾಗಲಿ ಎಂಬ ಆಶಯದೊಂದಿಗೆ ಅಗಲಿದ ಯುವ ಸಮಾಜಮುಖಿ ಮಿತ್ರರಿಗೆ ಸಂತಾಪಸಹಿತ ಅಂತಿಮ ವಿದಾಯಗಳು.