‘ಮತಾಂತರ ನಿಷೇಧ ಕಾಯ್ದೆ’ ರದ್ದತಿಗೆ ಆಸಕ್ತಿ ತೋರಿದ ಅರುಣಾಚಲ ಪ್ರದೇಶ ಸಿಎಂ
ಸುದ್ದಿ ಸಾರ

‘ಮತಾಂತರ ನಿಷೇಧ ಕಾಯ್ದೆ’ ರದ್ದತಿಗೆ ಆಸಕ್ತಿ ತೋರಿದ ಅರುಣಾಚಲ ಪ್ರದೇಶ ಸಿಎಂ

ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಮತಾಂತರ ನಿಷೇಧ ಕಾಯ್ದೆಯನ್ನು ರದ್ದುಗೊಳಿಸುವ ಮಾತುಗಳನ್ನಾಡಿದ್ದಾರೆ. ಈ ಹೇಳಿಕೆಯಿಂದಾಗಿ ರಾಜ್ಯದಲ್ಲಿ ಹಲವಾರು ಪರ ವಿರೋಧ ಚರ್ಚೆಗಳು ಪ್ರಾರಂಭವಾಗಿವೆ.

ಅರುಣಾಚಲ ಪ್ರದೇಶದ ಬಿಜೆಪಿ ಸರಕಾರ 4 ದಶಕಗಳಷ್ಟು ಹಿಂದಿನದಾದ ‘ಮತಾಂತರ ನಿಷೇಧ ಕಾಯ್ದೆ’ಯನ್ನು ರದ್ದುಗೊಳಿಸುವ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿದೆ. ಧಾರ್ಮಿಕ ಮತಾಂತರದ ನಿಷೇಧಕ್ಕೆ ತಡೆಯೊಡ್ಡುವುದು ಜಾತ್ಯಾತೀತತೆಯನ್ನು ವಿರೋಧಿಸಿದಂತಾಗುತ್ತದೆ ಎಂಬ ಕಾರಣವನ್ನು ಅರುಣಾಚಲ ಸರಕಾರ ನೀಡಿದೆ.

ಅರುಣಾಚಲ ಪ್ರದೇಶ 1978ರಲ್ಲೇ ಧಾರ್ಮಿಕ ಸ್ವಾತಂತ್ರ ಹಕ್ಕು ಕಾಯ್ದೆಯನ್ನು ಜಾರಿಗೆ ತಂದಿತ್ತು. ಈ ಕಾಯ್ದೆಯನ್ನು ಮೊದಲು ಜಾರಿಗೆ ತಂದ ರಾಜ್ಯಗಳ ಪೈಕಿ 3ನೇ ಸ್ಥಾನ ಪಡೆದುಕೊಂಡಿತ್ತು. ಮೊದಲೆರಡು ಸ್ಥಾನಗಳಲ್ಲಿ ಒಡಿಶಾ(1967) ಮತ್ತು ಮಧ್ಯ ಪ್ರದೇಶ(1968) ರಾಜ್ಯಗಳಿದ್ದವು. ಈ ಕಾಯ್ದೆಯಡಿ ಮತಾಂತರಕ್ಕೆ ಮುಂದಾಗುವವರಿಗೆ 2 ವರ್ಷಗಳ ಕಾಲ ಜೈಲು ಶಿಕ್ಷೆ ಮತ್ತು 10,000 ರೂಪಾಯಿಗಳ ದಂಡ ವಿಧಿಸಲಾಗುತ್ತಿತ್ತು.

ಅರುಣಾಚಲದ ಕ್ಯಾಥೋಲಿಕ್‌ ಅಸೋಸಿಯೇಷನ್‌ ರೆವೆರೆಂಡ್ ಬ್ರದರ್ ಪ್ರೇಮ್ ಬಾಯ್‌ ಎನ್ನುವವರ 10ನೇ ಪುಣ್ಯಸ್ಮರಣೆಯ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಪೆಮಾ ಖಂಡು, ಮಂತಾಂತರ ನಿ‍ಷೇಧ ಕಾಯ್ದೆ ದೇಶದ ಜ್ಯಾತ್ಯಾತೀತತೆಯನ್ನು ವಿರೋಧಿಸಿದಂತಾಗುತ್ತದೆ ಮತ್ತು ಕ್ರೈಸ್ತ ಸಮುದಾಯವನ್ನು ಗುರಿಯಾಗಿಸಿಕೊಂಡಂತಿದೆ ಎಂದಿದ್ದಾರೆ.

ಮಂದಿನ ದಿನಗಳಲ್ಲಿ ಈ ಕಾಯ್ದೆಯನ್ನು ಬೇಜವಾಬ್ದಾರಿ ಅಧಿಕಾರಿಗಳು ದುರ್ಬಳಕೆ ಮಾಡಿಕೊಳ್ಳಬಾರದು ಎನ್ನುವ ಕಾರಣಕ್ಕಾಗಿ ಈ ಕಾಯ್ದೆಯನ್ನು ರದ್ದುಗೊಳಿಸುವ ಯೋಚನೆಯಿದೆ. ಮಂಬರುವ ಅಧಿವೇಶನದಲ್ಲಿ ಈ ಕುರಿತು ಚರ್ಚೆ ನಡೆಸಲಾಗುವುದು ಎಂದು ಪೆಮಾ ಖಂಡು ತಿಳಿಸಿದ್ದಾರೆ.

“ಕಾಯ್ದೆ ದುರ್ಬಳಕೆಯಾದರೆ ಅದು ಜನರಿಗೆ ಮಾರಕವಾಗಿ ರಾಜ್ಯದಲ್ಲಿ ದೊಡ್ಡ ಮಟ್ಟದ ಹಿಂಸೆಗೆ ದಾರಿಯಾಗುತ್ತದೆ. ಇದರಿಂದಾಗಿ ಅರುಣಾಚಲ ಪ್ರದೇಶ ಚೂರು ಚೂರಾಗಬಹುದು,” ಎಂದು ಖಂಡು ಹೇಳಿದ್ದಾರೆ.

ಬ್ರದರ್‌ ಪ್ರೇಮ್ ಬಾಯ್‌ ಅರುಣಾಚಲ ಪ್ರದೇಶದಲ್ಲಿ ಸುಮಾರು 25 ವರ್ಷಗಳ ಕಾಲ ತಂಗಿದ್ದರು. ಅರುಣಾಚಲ ಪ್ರದೇಶದಲ್ಲಿ ಮತಾಂತರ ಕಾರ್ಯ ನಡೆಸುತ್ತಿದ್ದಾರೆ ಎಂಬ ಆರೋಪದ ಮೇಲೆ ‘ಮತಾಂತರ ನಿಷೇಧ ಕಾಯ್ದೆ’ಯ ಅಡಿಯಲ್ಲಿ ಹಲವಾರು ಬಾರಿ ಜೈಲು ಶಿಕ್ಷೆ ಅನುಭವಿಸಿದ್ದರು.

ಬ್ರದರ್‌ ಪ್ರೇಮ್‌ ತರಹದ ಮತ ಪ್ರಚಾರಕರಿಂದಾಗಿ ಅರುಣಾಚಲ ಪ್ರದೇಶದಲ್ಲಿ ಕಳೆದ ದಶಕಗಳ ಅವಧಿಯಲ್ಲಿ ಕ್ರೈಸ್ತ ಧರ್ಮ ಬಹುಸಂಖ್ಯಾತರ ಧರ್ಮವಾಗಿ ರೂಪುತಳೆದಿದೆ ಎನ್ನುವ ಅಭಿಪ್ರಾಯಗಳಿವೆ. 2001ರ ಜನಗಣತಿಯ ಪ್ರಕಾರ ರಾಜ್ಯದಲ್ಲಿ ಶೇ.18.7ರಷ್ಟು ಜನಸಂಖ್ಯೆಯನ್ನು ಹೊಂದಿದ್ದ ಕ್ರೈಸ್ತ ಸಮುದಾಯ ರಾಜ್ಯದ ಮೂರನೇ ದೊಡ್ಡ ಧರ್ಮವಾಗಿ ಗುರುತಿಸಿಕೊಂಡಿತ್ತು. ಹಿಂದೂಗಳ ಜನಸಂಖ್ಯೆ ಶೇ.34.6 ಹಾಗೂ ಇತರೆ ಸಮುದಾಯಗಳ ಜನರು ಶೇ.30.07ರಷ್ಟಿದ್ದರು.

ಆದರೆ 2011ರ ಜನಗಣತಿಯ ವೇಳೆಗೆ ಕ್ರೈಸ್ತ ಸುಮದಾಯದವರ ಸಂಖ್ಯೆ ಶೇ.30.26ಕ್ಕೆ ಏರಿಕೆಯಾಗಿ ರಾಜ್ಯದ ದೊಡ್ಡ ಧಾರ್ಮಿಕ ಸಮುದಾಯವಾಗಿ ಕಾಣಿಸಿಕೊಂಡಿದೆ. ಹಿಂದೂಗಳ ಸಂಖ್ಯೆ ಶೇ.29.04 ಮತ್ತು ಇತರೆ ಸಮುದಾಯದವರ ಸಂಖ್ಯೆ ಶೇ.26.20ಕ್ಕೆ ಇಳಿಕೆಯಾಗಿದೆ.

ಮುಖ್ಯಮಂತ್ರಿ ಪೆಮಾ ಖಂಡು ಅವರ ನಿರ್ಧಾರ ಸ್ಥಳೀಯ ಸಮುದಾಯಗಳಲ್ಲಿ ಅಸಮಾಧಾನವನ್ನು ಹುಟ್ಟುಹಾಕಿದೆ. ಇಂಡೀಜೀನಿಯಸ್‌ ಫೈಥ್‌ ಅಂಡ್ ಕಲ್ಚರಲ್ ಸೊಸೈಟಿ ಆಫ್ ಅರುಣಾಚಲ ಪ್ರದೇಶ್(IFCSAP) ಹಾಗೂ ನ್ಯಿಶಿ ಇಂಡೀಜೀನಿಯಸ್ ಫೈಥ್ಸ್ ಅಂಡ್ ಕಲ್ಚರಲ್ ಸೊಸೈಟಿ (NIFCS) ಸಂಘಟನೆಗಳು ಪೆಮಾ ಖಂಡು ಮಾತಿಗೆ ವಿರೋಧ ತೋರಿವೆ.

ಸ್ಥಳೀಯ ‘ತನಿ’ ಸಮುದಾಯಕ್ಕೆ ಸೇರಿದ ‘ನ್ಯಿಶಿ’ ಸಂಘಟನೆ ಅರುಣಾಚಲ ಪ್ರದೇಶದ ಅತಿದೊಡ್ಡ ಜನಾಂಗೀಯ ಸಮುದಾಯ ಎನಿಸಿದೆ. ಐಎಫ್‌ಸಿಎಸ್‌ಎಪಿ ಕೂಡ ಸ್ಥಳಿಯ ಪ್ರಮುಖ ಸಂಘಟನೆಗಳಲ್ಲೊಂದು. ಈ ಎರಡೂ ಸಂಘಟನೆಗಳು ಪಾರಂಪರಿಕ ನಂಬಿಕೆ ಮತ್ತು ಸಮುದಾಯಗಳನ್ನು ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ. ಕ್ರೈಸ್ತ ಸಮುದಾಯದ ಜನಸಂಖ್ಯೆಯ ಹೆಚ್ಚಳ ಸ್ಥಳೀಯ ಸಮುದಾಯಗಳ ಪತನಕ್ಕೆ ಕಾರಣವಾಗಿದೆ ಎಂಬ ಆರೋಪ ಈ ಸಂಘಟನೆಗಳದ್ದು.

“ಮುಖ್ಯಮಂತ್ರಿಗಳ ಹೇಳಿಕೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಮತಾಂತರ ನಿಷೇಧ ಕಾಯ್ದೆಯನ್ನು ರದ್ದುಗೊಳಿಸಿದರೆ ಸ್ಥಳೀಯ ಸಮುದಾಯಗಳು ನಷ್ಟ ಅನುಭವಿಸಲಿವೆ. ಇದರ ವಿರುದ್ಧ ಪ್ರಬಲ ಹೋರಾಟ ನಡೆಸಲಿದ್ದೇವೆ” ಎಂದು ಐಎಫ್‌ಸಿಎಸ್‌ಎಪಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಬಾಯ್‌ ತಾಬಾ ಹೇಳಿದ್ದಾರೆ.

ಇನ್ನೊಂದೆಡೆ ಅರುಣಾಚಲ ಕ್ರಿಶ್ಚಿಯನ್‌ ಫೋರಮ್‌ ರಾಜ್ಯ ಬಿಜೆಪಿ ಸರಕಾರದ ನಾಯಕ ಹಾಗೂ ಮುಖ್ಯಮಂತ್ರಿ ಪೆಮಾ ಖಂಡು ಅವರ ಮತಾಂತರ ನಿಷೇಧ ಕಾಯ್ದೆ ಕುರಿತಾದ ಹೇಳಿಕೆಯನ್ನು ಸ್ವಾಗತಿಸಿದೆ.