ಅಮಿತ್ ಶಾ ಭೇಟಿಯಾದ ಮಾರನೇ ದಿನವೇ ತೃಣಮೂಲ ಕಾಂಗ್ರೆಸ್‌ ಸೇರಿದ 4 ಕುಟುಂಬಗಳು!
ಸುದ್ದಿ ಸಾರ

ಅಮಿತ್ ಶಾ ಭೇಟಿಯಾದ ಮಾರನೇ ದಿನವೇ ತೃಣಮೂಲ ಕಾಂಗ್ರೆಸ್‌ ಸೇರಿದ 4 ಕುಟುಂಬಗಳು!

ಬಿಜೆಪಿಯ ಜನಸಂಪರ್ಕ ಆಂದೋಲನದ ಭಾಗವಾಗಿ ಅಮಿತ್ ಶಾ ಪ.ಬಂಗಾಳದ ಪುರುಲಿಯಾ ಜಿಲ್ಲೆಯ ಕೆಲವು ಮನೆಗಳಿಗೆ ಭೇಟಿ ನೀಡಿದ್ದರು. ಈ ಭೇಟಿಯ ಮಾರನೇ ದಿನವೇ ಅಮಿತ್ ಶಾ ಭೇಟಿಯಾದ 4 ಕುಟುಂಬಗಳು ತೃಣಮೂಲ ಕಾಂಗ್ರೆಸ್‌ನ ಸದಸ್ಯತ್ವ ಸ್ವೀಕರಿಸಿವೆ.

ಭಾರತೀಯ ಜನತಾ ಪಕ್ಷದ ರಾಷ್ಟ್ರಾಧ್ಯಕ್ಯ ಅಮಿತ್‌ ಶಾ, ಪಕ್ಷದ ‘ಜನ ಸಂಪರ್ಕ ಅಭಿಯಾನ’ದ ಭಾಗವಾಗಿ ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯಲ್ಲಿನ ಗ್ರಾಮೀಣ ಕುಟುಂಬಗಳ ಮನೆಗಳಿಗೆ ಭೇಟಿ ನೀಡಿದ್ದರು. ಅಮಿತ್‌ ಶಾ ಭೇಟಿ ನೀಡಿ ಒಂದು ದಿನ ಕಳೆಯುವುದರೊಳಗೆ ಶಾ ಭೇಟಿಯಾದ 4 ಕುಟುಂಬಗಳು ರಾಜ್ಯದಲ್ಲಿ ಅಧಿಕಾರದಲ್ಲಿರುವ ತೃಣಮೂಲ ಕಾಂಗ್ರೆಸ್‌ ಪಕ್ಷದ ಸದಸ್ಯತ್ವವನ್ನು ಸ್ವೀಕರಿಸಿವೆ.

ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಲು ಬಯಸಿದ ನಾಲ್ಕೂ ಕುಟುಂಬಗಳ ಸದಸ್ಯರನ್ನು ತೃಣಮೂಲ ಕಾಂಗ್ರೆಸ್‌ ನಾಯಕರು ಮಾಧ್ಯಮಗಳ ಮುಂದೆ ಪಕ್ಷದ ಧ್ವಜ ನೀಡುವ ಮೂಲಕ ಸ್ವಾಗತಿಸಿದ್ದಾರೆ. ಮುಗ್ಧ ಗ್ರಾಮಸ್ಥರನ್ನು ಬೆದರಿಸಿ, ಬಿಜೆಪಿಗೆ ಸೇರ್ಪಡೆಯಾಗುವಂತೆ ಅಮಿತ್ ಶಾ ಒತ್ತಾಯಿಸಿದ್ದರು ಎಂದು ತೃಣಮೂಲ ಕಾಂಗ್ರೆಸ್‌ ನಾಯಕರು ಸುದ್ದಿ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ.

ಪುರುಲಿಯಾ ನಗರದ ನಿವಾಸಿ ಫುಚು ರಾಜ್ಬೋರ್‌ ಎನ್ನುವವರನ್ನು ಗುರುವಾರ ಅಮಿತ್‌ ಶಾ ಭೇಟಿಯಾಗಿದ್ದರು. ಶುಕ್ರವಾರ ರಾಜ್ಭೋರ್‌ ಕುಟುಂಬ ಸಮೇತ ತೃಣಮೂಲ ಕಾಂಗ್ರೆಸ್‌ ಪಕ್ಷದ ಸದಸ್ಯತ್ವವನ್ನು ಸ್ವೀಕರಿಸಿದ್ದಾರೆ. ರಾಜ್ಭೋರ್‌ ಹೇಳುವಂತೆ, ಅವರು ರಾಜಕೀಯ ಕಾರಣಗಳ ಬದಲು ತೃಣಮೂಲ ಕಾಂಗ್ರೆಸ್‌ ಮತ್ತದರ ಅಧಿನಾಯಕಿ ಮಮತಾ ಬ್ಯಾನರ್ಜಿಯವರ ಆಕರ್ಷಣೆಗೆ ಒಳಗಾಗಿ ತೃಣಮೂಲ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ. ಅಮಿತ್‌ ಶಾ ಭೇಟಿ ನೀಡಿದ ನಂತರ ತೃಣಮೂಲ ಕಾಂಗ್ರೆಸ್‌ನ ಸಹಾಯವನ್ನು ಪಡೆಯುವ ಸಲುವಾಗಿ ತಾವು ಕೊಲ್ಕತ್ತಾಗೆ ಬಂದಿರುವುದಾಗಿ ರಾಜ್ಭೋರ್ ತಿಳಿಸಿದ್ದಾರೆ.

ತೃಣಮೂಲ ಕಾಂಗ್ರೆಸ್‌ ಪಕ್ಷದ ಕಚೇರಿಯಲ್ಲಿ ನಾಯಕ ಮದನ್‌ ಮಿತ್ರ ಪಕ್ಕದಲ್ಲಿ ಕುಳಿತು ಮಾಧ್ಯಮಗಳ ಮುಂದೆ ಮಾತನಾಡಿದ ರಾಜ್ಭೋರ್‌, “ಅಮಿತ್‌ ಶಾ ನಮ್ಮ ಮನೆಗೆ ಭೇಟಿ ನೀಡಿದ ನಂತರ ಭಯವುಂಟಾಗಿತ್ತು. ಆದಕಾರಣ ಸ್ವಯಿಚ್ಛೆಯಿಂದ ನಾವು ಇಲ್ಲಿಗೆ ಬಂದಿದ್ದೇವೆ. ನಮಗೆ ತೃಣಮೂಲ ಕಾಂಗ್ರೆಸ್‌ ಮತ್ತು ಮಮತಾ ಬ್ಯಾನರ್ಜಿ ಏನು ಎನ್ನುವುದು ಗೊತ್ತು. ಅವರ ಆಶ್ರಯವನ್ನು ಬಯಸಿ ನಾವಿಲ್ಲಿಗೆ ಬಂದಿದ್ದೇವೆ,” ಎಂದಿದ್ದಾರೆ.

ತೃಣಮೂಲ ಕಾಂಗ್ರೆಸ್‌ ಸೇರಲು ಬಂದ ಕುಟುಂಬಗಳಿಗೆ ಪಕ್ಷದ ಧ್ವಜವನ್ನಿತ್ತ ಮದನ್ ಮಿತ್ರ, ಅಮಿತ್ ಶಾ ಪುರುಲಿಯಾದ ಹಿಂದುಳಿದ ಮತ್ತು ಬುಡಕಟ್ಟು ಸಮುದಾಯದವರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದು, ರಾಜ್ಯದಲ್ಲಿ ತೊಂದರೆ ಉಂಟುಮಾಡುವ ಪ್ರಯತ್ನ ನಡೆಸುತ್ತಿದ್ದಾರೆ ಎಂದಿದ್ದಾರೆ.

ಶಾರದಾ ಚಿಟ್‌ಫಂಡ್ಸ್ ಹಗರಣದಲ್ಲಿ ಸಿಬಿಐ ಪೊಲೀಸರಿಂದ ಬಂಧನಕ್ಕೆ ಒಳಪಟ್ಟಿದ್ದ ತೃಣಮೂಲ ಕಾಂಗ್ರೆಸ್‌ನ ಮಾಜಿ ಶಾಸಕ ಮದನ್‌ ಮಿತ್ರ ಮಾಧ್ಯಮಗಳ ಮುಂದೆ ಮಾತನಾಡಿ, “ಬಂಗಾಳದ ಜನರಿಗೆ ಈ ಪಕ್ಷಗಳ ಕುರಿತು ಮಾತನಾಡುವಷ್ಟು ಸಮಯವಿಲ್ಲ. ಈ ಬಡಜನರು ಅಮಿತ್ ಶಾ ತಮ್ಮ ಮನೆಗಳಿಗೆ ಬಂದಾಗ ಭಯಭೀತರಾಗಿದ್ದಾರೆ” ಎಂದಿದ್ದಾರೆ.

“ಪಶ್ಚಿಮ ಬಂಗಾಳ ರಾಜ್ಯವು ಉತ್ತರ ಪ್ರದೇಶ, ಮಧ್ಯ ಪ್ರದೇಶಗಳಂತಲ್ಲ. ಇಲ್ಲಿನ ಪ್ರತಿ ಇಂಚು ಭೂಮಿಯಲ್ಲೂ ಕೂಡ ಅವರು ಸವಾಲನ್ನು ಎದುರಿಸಬೇಕಾಗುತ್ತದೆ. ಜನರನ್ನು ತೊಂದರೆಗೆ ಒಳಪಡಿಸಿ, ಒಡೆಯುವ ಬಿಜೆಪಿಯ ತಂತ್ರಗಾರಿಕೆ ಪಶ್ಚಿಮ ಬಂಗಾಳದಲ್ಲಿ ಕೆಲಸ ಮಾಡುವುದಿಲ್ಲ,” ಎಂದು ಮದನ್‌ ಮಿತ್ರಾ ಬಿಜೆಪಿ ಪಾಳಯವನ್ನು ಕುಟುಕಿದ್ದಾರೆ.

ತೃಣಮೂಲ ಕಾಂಗ್ರೆಸ್‌ನ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಬಿಜೆಪಿ, ರಾಜ್ಯದಲ್ಲಿ ಅಧಿಕಾರ ಹಿಡಿದಿರುವ ತೃಣಮೂಲ ಕಾಂಗ್ರೆಸ್‌ ‘ಅಸಹ್ಯದ ರಾಜಕಾರಣ’ ನಡೆಸುತ್ತಿದ್ದು, ಮುಂದೆ ಅದೇ ಅವರಿಗೆ ತಿರುಗುಬಾಣವಾಗಲಿದೆ ಎಂದಿದೆ.

ಈ ಕುರಿತು ಮಾತನಾಡಿದ ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ರಾಹುಲ್ ಸಿನ್ಹಾ, “ಅಮಿತ್ ಶಾ ಪುರುಲಿಯಾದ 4 ಅಥವಾ 5 ಮನೆಗಳಿಗೆ ಭೇಟಿ ನೀಡಿದ್ದರು. ಆದರೆ ಆ ಮನೆಗಳು ಬಿಜೆಪಿ ಕಾರ್ಯಕರ್ತರ ಮನೆಗಳಾಗಿರಲಿಲ್ಲ. ನಂತರದಲ್ಲಿ ತೃಣಮೂಲ ಕಾಂಗ್ರೆಸ್‌ ನಾಯಕರು ಹಳ್ಳಿಗರಿಗೆ ಕೊಲ್ಕತ್ತಾಗೆ ಬಂದು ತಮ್ಮ ಪಕ್ಷಕ್ಕೆ ಸೇರುವಂತೆ ಒತ್ತಾಯ ಪಡಿಸಿದ್ದಾರೆ. ಆದರೆ ಬಂಗಾಳದ ಎಲ್ಲಾ ಜನರನ್ನು ಹೀಗೆ ಒತ್ತಾಯದಿಂದ ಒಲಿಸಿಕೊಳ್ಳಲು ಸಾಧ್ಯವಿಲ್ಲ. ಬಂಗಾಳದ ಜನರು ತೃಣಮೂಲ ಕಾಂಗ್ರೆಸ್‌ಗೆ ಸರಿಯಾದ ಸಮಯದಲ್ಲಿ ತಕ್ಕ ಉತ್ತರ ನೀಡುತ್ತಾರೆ,” ಎಂದು ಕಿಡಿ ಕಾರಿದ್ದಾರೆ.