ಲೋಕಸಭೆ ಚುನಾವಣೆ 2019: ದೇವೇಗೌಡ ಎಂಬ ‘ಅಂಬ್ರೆಲಾ ಫಿಗರ್’!
ಸುದ್ದಿ ಸಾರ

ಲೋಕಸಭೆ ಚುನಾವಣೆ 2019: ದೇವೇಗೌಡ ಎಂಬ ‘ಅಂಬ್ರೆಲಾ ಫಿಗರ್’!

ತೃತೀಯ ರಂಗ ಎಂಬುದು ಅಸ್ಥಿತ್ವದಲ್ಲಿರಬೇಕಾದರೆ ಅದಕ್ಕೆ ತಮ್ಮ ನಾಯಕತ್ವ ಅನಿವಾರ್ಯ ಎಂಬ ಸಂದೇಶವನ್ನು ಜೆಡಿಎಸ್‌ ವರಿಷ್ಠ ಎಚ್‌. ಡಿ. ದೇವೇಗೌಡ ಈಗ ರವಾನಿಸಿದ್ದಾರೆ.

ರಾಜ್ಯದಲ್ಲಿ ಒಂದು ಕಡೆ ಸಮ್ಮಿಶ್ರ ಸರಕಾರದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ ‘ಸಮನ್ವಯ’ದ ಕೊರತೆ ಎದ್ದು ಕಾಣುತ್ತಿದೆ. ಎರಡೂ ಪಕ್ಷಗಳ ನಡುವೆ ಸಮನ್ವಯ ಸಾಧಿಸಬೇಕಾದ ಸ್ಥಾನದಲ್ಲಿರುವವರೇ ಮುಖ್ಯಮಂತ್ರಿ ಎಚ್‌. ಡಿ. ಕುಮಾರಸ್ವಾಮಿ ಬಗ್ಗೆ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಆದರೆ, ಈ ಮಧ್ಯೆ ಜೆಡಿಎಸ್‌ ವರಿಷ್ಠ ಎಚ್‌. ಡಿ. ದೇವೇಗೌಡರು 2019ರ ಚುನಾವಣೆಯಲ್ಲಿ ತೃತೀಯ ಪರ್ಯಾಯದ ಒಗ್ಗಟ್ಟಿನ ಬಗ್ಗೆ ಒಗಟಿನಂಥ ಮಾತನ್ನಾಡಿದ್ದಾರೆ.

ರಾಜ್ಯದಲ್ಲಿ ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿಯಾಗಿ ಎಚ್‌.ಡಿ. ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕರಿಸುವ ಸಮಾರಂಭದಲ್ಲಿ ರಾಷ್ಟ್ರದ ಎಡಪಕ್ಷಗಳ ಪ್ರಮುಖ ನಾಯಕರು ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಿದ್ದರು. ಆದರೆ, ವೇದಿಕೆ ಮೇಲೆ ಕಂಡ ಎಡಪಕ್ಷಗಳ ಆ ಒಗ್ಗಟ್ಟು ಮುಂಬರುವ ಚುನಾವಣೆ ಹೊತ್ತಿಗೆ ಕಾಣುವ ಭರವಸೆ ಇಲ್ಲ ಎಂಬ ಮಾತನ್ನು ಜೆಡಿಎಸ್‌ ವರಿಷ್ಠ ಎಚ್‌. ಡಿ. ದೇವೇಗೌಡ ಆಡಿದ್ದಾರೆ.

ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ವಿಧಾನಸೌಧದ ಎದುರಿನ ವೇದಿಕೆಯ ಮೇಲೆ ಎಡಪಕ್ಷಗಳ ಮುಖಂಡರು ಕೈ ಕೈ ಜೋಡಿಸಿದ್ದು 2019ರ ಹೊತ್ತಿಗೆ ಈ ಎಲ್ಲರೂ ಒಗ್ಗಟ್ಟಾಗಿ ಚುನಾವಣೆ ಎದುರಿಸಲಿದ್ದಾರೆ ಎಂಬುದರ ಮುನ್ಸೂಚನೆ ಎಂದೇ ವಿಶ್ಲೇಷಿಸಲಾಗಿತ್ತು. ಆದರೆ, ದೇವೇಗೌಡರು ಈಗ ಹೇಳಿರುವ ಒಗಟಿನಂಥ ಮಾತು ದೇಶದ ತೃತೀಯ ರಾಜಕೀಯ ಪರ್ಯಾಯಕ್ಕೆ ಒಗ್ಗಟ್ಟಿನ ಕೊರತೆ ಇದೆ ಎಂಬುದನ್ನು ಬಹಿರಂಗ ಪಡಿಸಿದೆ.

2014ರಲ್ಲಿ ತೃತೀಯ ರಂಗದ ಚರ್ಚೆಗೆ ಕಾವು ನೀಡಿದ್ದ ಈ ಭೇಟಿ
2014ರಲ್ಲಿ ತೃತೀಯ ರಂಗದ ಚರ್ಚೆಗೆ ಕಾವು ನೀಡಿದ್ದ ಈ ಭೇಟಿ

ದೇವೇಗೌಡರ ನಾಯಕತ್ವವಿಲ್ಲದೆ ತೃತೀಯ ರಾಜಕೀಯ ಪರ್ಯಾಯ ಎಂಬುದು ಅಷ್ಟು ಸುಲಭವಿಲ್ಲ ಎಂಬುದನ್ನು ದೇವೇಗೌಡರ ಮಾತು ಧ್ವನಿಸುತ್ತಿದೆ. ಅಲ್ಲದೆ ಎಡಪಕ್ಷಗಳ ಒಗ್ಗಟ್ಟಿಗಾಗಿ ದೇವೇಗೌಡರ ಅನಿವಾರ್ಯತೆ ಇದೆ ಎಂಬುದನ್ನು ಅವರ ಮಾತು ಸ್ಪಷ್ಟಪಡಿಸುತ್ತಿರುವಂತಿದೆ.

ಎಡಪಕ್ಷಗಳು 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಒಗ್ಗಟ್ಟಾಗಿ ಬಿಜೆಪಿ ವಿರುದ್ಧವಾಗಿ ನಿಲ್ಲುತ್ತವೆ ಎಂಬ ಚರ್ಚೆಗಳು ಈ ಹಿಂದೆ ನಡೆದಿವೆ. ಆದರೆ, ಸದ್ಯ ದ್ವೀಪಗಳಂತಿರುವ ಈ ಎಡಪಕ್ಷಗಳನ್ನು ಒಟ್ಟಾಗಿ ಸೇರಿಸಲು ದೇವೇಗೌಡ ಎಂಬ ‘ಸಾಮಾನ್ಯ ಶಕ್ತಿ’ಯ ಅಗತ್ಯವಿದೆ ಎಂಬುದನ್ನು ಖುದ್ದು ದೇವೇಗೌಡರೇ ಹೇಳಿಕೊಂಡಿದ್ದಾರೆ.

ದೇಶದ ರಾಜಕೀಯ ಚಿತ್ರಣವನ್ನು ನೋಡಿದರೆ ಪರ್ಯಾಯ ರಾಜಕೀಯ ಪಕ್ಷಗಳು ಪ್ರಾದೇಶಿಕವಾಗಿ ತಮ್ಮದೇ ಆದ ಸಿದ್ಧಾಂತಗಳ ಮೇಲೆ ತಮ್ಮ ಅಸ್ಥಿತ್ವವನ್ನು ಉಳಿಸಿಕೊಂಡಿವೆ. ಆದರೆ, ಈ ಎಲ್ಲಾ ಪ್ರಾದೇಶಿಕ ಪಕ್ಷಗಳು ಒಗ್ಗಟ್ಟಾಗಿ ಒಂದುಗೂಡುವುದು ಅಷ್ಟು ಸುಲಭವಿಲ್ಲ ಎಂಬುದು ದೇಶದ ರಾಜಕಾರಣವನ್ನು ಸೂಕ್ಷ್ಮವಾಗಿ ಗಮನಿಸಿರುವ ಎಲ್ಲರಿಗೂ ಗೊತ್ತಿರುವಂಥದ್ದೇ.

ದೇವೇಗೌಡರ ಹೇಳಿಕೆ ಹಾಗೂ ಅವರು ಪದೇ ಪದೇ ದೆಹಲಿಗೆ ಹೋಗಿ ಬರುತ್ತಿರುವುದನ್ನು ನೋಡಿದರೆ 2019ರ ರಾಜಕೀಯ ಸಂದರ್ಭದಲ್ಲಿ ತಾವೇ ಕೇಂದ್ರ ಬಿಂದುವಾಗಿರಬೇಕೆಂದು ಅವರು ಪ್ರಯತ್ನ ನಡೆಸುತ್ತಿರುವಂತಿದೆ. ತೃತೀಯ ರಂಗದ ಅಸ್ಥಿತ್ವ ಇರುವುದಾದರೆ ಅದರ ನಾಯಕತ್ವ ತಮ್ಮದೇ ಆಗಿರಬೇಕೆಂಬುದು ದೇವೇಗೌಡರ ಇರಾದೆ.
- ಡಾ. ಹರೀಶ್‌ ರಾಮಸ್ವಾಮಿ, ರಾಜಕೀಯ ವಿಶ್ಲೇಷಕ

“ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಎಡಪಕ್ಷಗಳ ನಾಯಕರನ್ನು ಆಹ್ವಾನಿಸಿದ್ದೇ ತೃತೀಯ ರಂಗದ ಒಗ್ಗಟ್ಟನ್ನು ಮರು ಪ್ರದರ್ಶಿಸುವುದಕ್ಕಾಗಿ. ಆದರೆ, ಎಡಪಕ್ಷಗಳ ಒಳಗೆ ಅನೇಕ ಅಭಿಪ್ರಾಯ ಭೇದಗಳಿವೆ. ತನ್ನ ಶಕ್ತಿ ಕುಗ್ಗಿರುವುದು ಈಗ ಕಾಂಗ್ರೆಸ್‌ಗೆ ಕೂಡಾ ಗೊತ್ತಾಗಿದೆ. ಹೀಗಾಗಿ 2019ರಲ್ಲಿ ತೃತೀಯ ರಂಗ ಎಂಬುದು ಅಧಿಕಾರಕ್ಕೆ ಬರಬೇಕಾದರೆ ಕಾಂಗ್ರೆಸ್‌ ಸೇರಿದಂತೆ ಎಡಪಕ್ಷಗಳೆಲ್ಲವೂ ಅನಿವಾರ್ಯವಾಗಿ ದೇವೇಗೌಡರನ್ನು ನಾಯಕ ಎಂದು ಒಪ್ಪಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಇದನ್ನೇ ದೇವೇಗೌಡ ಮಾರ್ಮಿಕವಾಗಿ ಹೇಳಿದ್ದಾರೆ” ಎನ್ನುತ್ತಾರೆ ರಾಜಕೀಯ ವಿಶ್ಲೇಷಕ ಡಾ. ಹರೀಶ್‌ ರಾಮಸ್ವಾಮಿ.

2019ರ ವೇಳೆಗೆ ತೃತೀಯ ಪರ್ಯಾಯವಾಗಬಹುದು ಎನ್ನಲಾಗುತ್ತಿರುವ ಪಕ್ಷಗಳೆಲ್ಲವೂ ಆಂತರಿಕವಾಗಿ ಹಲವು ಭಿನ್ನಾಭಿಪ್ರಾಯಗಳನ್ನು ಹೊಂದಿವೆ ಎಂಬುದಂತೂ ಸತ್ಯ. ಚಂದ್ರಬಾಬು ನಾಯ್ಡು ಮತ್ತು ಕೆ. ಚಂದ್ರಶೇಖರ್‌ ರಾವ್‌ ನಡುವೆ ಉತ್ತಮ ಸಂಬಂಧವಿಲ್ಲ. ಎಡಪಂಥದವರ ಬಗ್ಗೆ ಮಮತಾ ಬ್ಯಾನರ್ಜಿ ಒಲವಿಲ್ಲ. ಮಮತಾ ಬ್ಯಾನರ್ಜಿ ಕಂಡರೆ ಎಡಪಂಥದವರಿಗೆ ಆಗುವುದಿಲ್ಲ.

ಪರ್ಯಾಯ ಎಂಬ ಮಾತು ಬಂದಾಗ ಅಖಿಲೇಶ್‌- ಮಾಯಾವತಿ ಒಂದಾಗಬಹುದು. ಆದರೆ, ಅದಕ್ಕೆ ಲಾಲೂ ಪ್ರಸಾದ್‌ ಒಪ್ಪುತ್ತಾರೆ ಎಂದು ಹೇಳುವುದು ಕಷ್ಟ. ಇನ್ನು ಶರದ್‌ ಯಾದವ್, ನವೀನ್‌ ಪಟ್ನಾಯಕ್‌ ತೃತೀಯ ಪರ್ಯಾಯದ ಪ್ರಯತ್ನ ನಡೆಸುತ್ತಿರುವ ಹಲವರನ್ನು ಒಪ್ಪುವುದು ಕಷ್ಟವಿದೆ.

ಆದರೆ ಈ ಎಲ್ಲರೂ ದೇವೇಗೌಡರನ್ನು ಒಪ್ಪುತ್ತಾರೆ. ಹೀಗಾಗಿ ದೇವೇಗೌಡ ಇವರೆಲ್ಲರಿಗೂ ಒಂದು ರೀತಿ ‘ಅಂಬ್ರೆಲಾ ಫಿಗರ್‌’ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಹೀಗಾಗಿಯೇ ತೃತೀಯ ಪರ್ಯಾಯದ ಪ್ರಯತ್ನದಲ್ಲಿರುವ ನಾಯಕರನ್ನು ಒಂದುಗೂಡಿಸಬೇಕಿದ್ದರೆ ತಮ್ಮ ನಾಯತ್ವ ಬೇಕು ಎಂಬುದು ದೇವೇಗೌಡರ ಮಾತಿನ ಧ್ವನಿ.

ಸಾರ್ವಜನಿಕವಾಗಿ ನಾವು ತೋರಿಸುತ್ತಿರುವ ಒಗ್ಗಟ್ಟು 2019ರ ಚುನಾವಣೆಯಲ್ಲಿ ಕಾಣುವುದು ಕಷ್ಟ ಎಂದು ದೇವೇಗೌಡ ಹೇಳಿದ್ದಾರೆ. ತೃತೀಯ ಪರ್ಯಾಯಕ್ಕೆ ಅವರ ನಾಯಕತ್ವ ಅನಿವಾರ್ಯ ಎಂಬ ಬಗ್ಗೆ ದೇವೇಗೌಡರೇ ಹೇಳಿಕೊಂಡಿದ್ದಾರೆ. ಅವರ ನಾಯಕತ್ವವನ್ನು ಎಡಪಕ್ಷದ ಎಲ್ಲರೂ ಒಪ್ಪುವುದರಿಂದ ಈ ರಾಜಕೀಯ ಅನಿವಾರ್ಯತೆಯ ಬಗ್ಗೆ ದೇವೇಗೌಡರು ಮಾತನಾಡಿದ್ದಾರೆ.
- ಎಸ್‌. ಮಹದೇವ ಪ್ರಕಾಶ್‌, ಹಿರಿಯ ರಾಜಕೀಯ ವಿಶ್ಲೇಷಕ

ಎಡಪಕ್ಷಗಳು ಒಗ್ಗಟ್ಟಾಗಬಹುದು ಎಂಬುದು ಹೊರ ನೋಟಕ್ಕೆ ಕಾಣುವಷ್ಟು ಸುಲಭವಿಲ್ಲ. ಎಡಪಕ್ಷಗಳ ಒಳಗೆ ಅನೇಕ ವೈರುಧ್ಯಗಳಿವೆ. ಎಡಪಕ್ಷಗಳ ನಾಯಕರ ನಡುವೆ ಹಲವು ಭಿನ್ನಾಭಿಪ್ರಾಯಗಳಿವೆ. ಈ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಅವರೆಲ್ಲರೂ ಒಪ್ಪಿಕೊಳ್ಳಬಹುದಾಗ ಏಕಮೇವಾದ್ವಿತೀಯ ನಾಯಕ ಎಂದರೆ ದೇವೇಗೌಡರು ಮಾತ್ರ.

ಎಡಪಕ್ಷದ ಎಲ್ಲರೊಂದಿಗೂ ಚೆನ್ನಾಗಿರುವ ದೇವೇಗೌಡರು ಕಾಂಗ್ರೆಸ್ ಜತೆಗೇ ಮುಂದಿನ ಚುನಾವಣೆ ಎದುರಿಸುವುದಾಗಿ ಹೇಳಿಕೊಳ್ಳುತ್ತಿದ್ದಾರೆ. 2019ರ ಚುನಾವಣೆಯಲ್ಲಿ ಒಂದು ವೇಳೆ ಬಿಜೆಪಿ ಅಲ್ಪಮತಕ್ಕೆ ಕುಸಿದರೆ ಕಾಂಗ್ರೆಸ್‌ ಹಾಗೂ ಎಡಪಕ್ಷಗಳ ಬೆಂಬಲದೊಂದಿಗೆ ಸರಕಾರ ರಚಿಸುವ ಸಾಧ್ಯತೆಯ ಕಡೆಗೂ ದೇವೇಗೌಡರು ಚಿಂತಿಸುತ್ತಿರಬಹುದು.

ಒಳಗೆ ಏನೇ ಇದ್ದರೂ ಮಾಯಾವತಿ, ಮಮತಾ ಬ್ಯಾನರ್ಜಿ, ಚಂದ್ರಶೇಖರ್‌ ರಾವ್‌, ನವೀನ್‌ ಪಟ್ನಾಯಕ್‌, ಲಾಲೂ ಪ್ರಸಾದ್‌, ಶರದ್‌ ಪವಾರ್‌ ಎಲ್ಲರೂ ದೇವೇಗೌಡರ ನಾಯಕತ್ವವನ್ನು ಒಪ್ಪಿಕೊಳ್ಳುತ್ತಾರೆ. ಇದನ್ನು ಈಗಿನಿಂದಲೇ ಅಧಿಕೃತಗೊಳಿಸಲು ದೇವೇಗೌಡರು ಪ್ರಯತ್ನ ನಡೆಸುತ್ತಿದ್ದಾರೆ. ಇದಕ್ಕಾಗಿ ಎಡಪಕ್ಷಗಳ ನಾಯಕತ್ವ ವಿಚಾರ ಗೊಂದಲಮಯವಾಗಿರುವ ಸಂದರ್ಭದಲ್ಲಿ ತಮ್ಮ ನಾಯಕತ್ವದ ದಾಳವನ್ನು ದೇವೇಗೌಡರು ಉರುಳಿಸಿದ್ದಾರೆ.

ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಕಾಣಿಸಿಕೊಂಡ ತೃತೀಯ ರಂಗದ ಒಗ್ಗಟ್ಟು
ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಕಾಣಿಸಿಕೊಂಡ ತೃತೀಯ ರಂಗದ ಒಗ್ಗಟ್ಟು

ಅತಂತ್ರ ರಾಜಕೀಯ ಸನ್ನಿವೇಶವೇ ಅಧಿಕಾರ ತಂದುಕೊಟ್ಟಿರುವ ಇತಿಹಾಸ ಜೆಡಿಎಸ್‌ಗಿದೆ. ಈಗ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿರುವುದು ಹಾಗೂ ಈ ಹಿಂದೆ ದೇವೇಗೌಡರು ಪ್ರಧಾನಮಂತ್ರಿಯಾಗಿದ್ದೂ ಇಂಥ ಸನ್ನಿವೇಶಗಳಿಂದ ಸೃಷ್ಟಿಯಾದ ಅನಿವಾರ್ಯ ಸಂದರ್ಭಗಳಿಂದಲೇ.

1996ರಲ್ಲಿ ರಾಜಕೀಯ ಅತಂತ್ರವೇ ದೇವೇಗೌಡರನ್ನು ಪ್ರಧಾನಿ ಹುದ್ದೆಗೇರುವಂತೆ ಮಾಡಿತ್ತು. ಆಗಲೂ ಎಡಪಕ್ಷಗಳಿಗೆ ಸೂಕ್ತ ಎಂದು ಕಂಡಿದ್ದು ದೇವೇಗೌಡರೇ. 2019ರಲ್ಲಿ ತಾವು ಮತ್ತೆ ಪ್ರಧಾನಿಯಾಗದಿದ್ದರೂ ಕಿಂಗ್‌ ಮೇಕರ್‌ ಆಗುವ ಲೆಕ್ಕಾಚಾರದಲ್ಲಿ ದೇವೇಗೌಡರು ಇರುವಂತಿದೆ. ಹೀಗಾಗಿ ಅದಕ್ಕೆ ಬೇಕಾದ ಅಖಾಡವನ್ನು ಅವರು ಈಗಿನಿಂದಲೇ ಸಜ್ಜುಗೊಳಿಸಿಕೊಳ್ಳುತ್ತಿದ್ದಾರೆ.

2019ರ ಚುನಾವಣೆಯಲ್ಲಿ ಅತಂತ್ರ ಪರಿಸ್ಥಿತಿ ಉಂಟಾದರೆ ಅದರ ಹೆಚ್ಚಿನ ಲಾಭ ಜೆಡಿಎಸ್‌ಗೆ ಆಗಬಹುದು ಎಂಬ ಲೆಕ್ಕಾಚಾರದಲ್ಲಿ ದೇವೇಗೌಡರು ಇದ್ದಾರೆ. ಹೀಗಾಗಿಯೇ ದೇವೇಗೌಡರು ತೃತೀಯ ಪರ್ಯಾಯ ರಾಜಕಾರಣಕ್ಕೆ ತಮ್ಮ ನಾಯಕತ್ವದ ಅಗತ್ಯವಿದೆ ಎಂಬ ಸಂದೇಶವನ್ನು ಸೂಚ್ಯವಾಗಿ ರವಾನಿಸಿದ್ದಾರೆ.

ಒಂದು ವೇಳೆ ಎಡಪಕ್ಷಗಳಲ್ಲಿ ಈಗಿರುವ ಯಾವುದೇ ನಾಯಕರು ತೃತೀಯ ರಂಗದ ನಾಯಕರಾಗಲು ಬಯಸಿದರೆ ಅದಕ್ಕೆ ಒಂದಲ್ಲಾ ಒಂದು ಕಡೆಯಿಂದ ವಿರೋಧ ಬರುವುದು ಸಹಜ. ಆದರೆ, ಇಂಥ ವಿರೋಧ ಎಡಪಕ್ಷಗಳಲ್ಲಿ ಅಜಾತಶತ್ರು ಎನಿಸಿರುವ ದೇವೇಗೌಡರಿಗೆ ಎದುರಾಗುವುದು ಕಷ್ಟ. ಹೀಗಾಗಿ ಮುಂಬರುವ ಚುನಾವಣೆಯಲ್ಲಿ ಅತಂತ್ರ ಸನ್ನಿವೇಶ ಸೃಷ್ಟಿಯಾಗಿ ತೃತೀಯ ರಂಗ ಬಲಗೊಂಡರೆ ದೇವೇಗೌಡರು ಕಿಂಗ್‌ ಅಥವಾ ಕಿಂಗ್‌ ಮೇಕರ್‌ ಆಗುವುದರಲ್ಲಿ ಯಾವುದೇ ಅನುಮಾನಗಳಿಲ್ಲ.