‘ರಕ್ತ ಚಂದಿರ 2018’: ಶತಮಾನದ ದೀರ್ಘಾವಧಿಯ ಚಂದ್ರ ಗ್ರಹಣವನ್ನು ಭಾರತದಿಂದ ನೋಡಬಹುದೇ?
ಸುದ್ದಿ ಸಾರ

‘ರಕ್ತ ಚಂದಿರ 2018’: ಶತಮಾನದ ದೀರ್ಘಾವಧಿಯ ಚಂದ್ರ ಗ್ರಹಣವನ್ನು ಭಾರತದಿಂದ ನೋಡಬಹುದೇ?

ಇದೇ ವರ್ಷದ ಜನವರಿ 31ರಂದು ಜಗತ್ತು ಸೂಪರ್‌ ಬ್ಲೂ ಬ್ಲಡ್‌ ಮೂನ್‌ಗೆ ಸಾಕ್ಷಿಯಾಗಿತ್ತು. ಈ ಅವಕಾಶ ಮತ್ತೆ ದೊರೆಯಲಿದೆ. ಆದರೆ ಈ ಬಾರಿ ಕಾಣುವುದು ಬ್ಲಡ್‌ ಮೂನ್‌ ಮಾತ್ರ. ಆದರೆ 100ಕ್ಕೂ ಹೆಚ್ಚು ನಿಮಿಷಗಳ ಕಾಲ ಕೆಂಪು ಚಂದ್ರನನ್ನು ಕಾಣಬಹುದು.

ಮುಂದಿನ ತಿಂಗಳ 27ನೇ ತಾರೀಖಿನಂದು ಜಗತ್ತು ಶತಮಾನದ ದೀರ್ಘ ಸಮಯದ ‘ಕೆಂಪು ಚಂದ್ರ’ನನ್ನು ನೋಡುವ ಸಾಧ್ಯತೆಗಳಿವೆ. ಅದಕ್ಕೆ ಮೋಡ ಮುಸುಕಿದ ವಾತಾವರಣವಿರದೇ ಇಡೀ ಆಕಾಶ ಶುಭ್ರವಾಗಿ ಇರಬೇಕಷ್ಟೇ.

ಕೆಲವು ತಿಂಗಳುಗಳ ಹಿಂದೆಯಷ್ಟೇ ಜಗತ್ತು ಕೆಂಪು ಚಂದ್ರನಿಗೆ ಸಾಕ್ಷಿಯಾಗಿತ್ತು. ಜನರ ಕಿವಿಗಳು ‘ಕೆಂಪು ಚಂದ್ರ’ ಎಂಬ ಪದವನ್ನು ಮರೆಯುವ ಮುಂಚೆಯೇ ಮತ್ತೊಮ್ಮೆ ಚಂದ್ರ ಕೆಂಪು ಬಣ್ಣದಲ್ಲಿ ಕಾಣಿಸಿಕೊಳ್ಳಲಿದ್ದಾನೆ. ಜತೆಗೆ ದೀರ್ಘಾವಧಿಯಲ್ಲಿ ಕಾಣಿಸುತ್ತಾನೆ ಕೂಡ.

ಜುಲೈ 27ರಂದು ಸಂಭವಿಸಲಿರುವ ಚಂದ್ರ ಗ್ರಹಣ ಇಡೀ ಶತಮಾನದ ಅತಿ ದೊಡ್ಡ ಚಂದ್ರ ಗ್ರಹಣ ಎನಿಸಲಿದೆ. ಜಗತ್ತಿನ ಜನರು ಆಕಾಶ ಕಾಯಗಳ ನೆರಳು ಬೆಳಕಿನ ಆಟವನ್ನು ಸರಿಸುಮಾರು 100 ನಿಮಿಷಗಳಿಗೂ ಹೆಚ್ಚಿನ ಅವಧಿ ವೀಕ್ಷಿಸಬಹುದಾಗಿದೆ. ಈ ಚಂದ್ರ ಗ್ರಹಣವು ಜುಲೈ 27ರ ಸಂಜೆ 7:30ರಿಂದ ಆರಂಭಗೊಂಡು ರಾತ್ರಿ 9:13ಕ್ಕೆ ಮುಕ್ತಾಯಗೊಳ್ಳಬಹುದು ಎಂದು ಖಗೋಳ ವಿಜ್ಞಾನಿಗಳು ಹೇಳಿದ್ದಾರೆ.

ಉತ್ತರ ಅಮೆರಿಕಾದ ಜನರಿಗೆ ಈ ಸುದೀರ್ಘ ಚಂದ್ರ ಗ್ರಹಣವನ್ನು ನೇರವಾಗಿ ನೋಡುವ ಅದೃಷ್ಟವಿಲ್ಲ. ನೋಡಲೇಬೇಕು ಎಂದು ಬಯಸುವವರು ನೇರ ಪ್ರಸಾರದಲ್ಲಿ ಕೆಂಪು ಚಂದ್ರನನ್ನು ಕಣ್ತುಂಬಿಕೊಳ್ಳಬಹುದು ಅಷ್ಟೇ. ಆಫ್ರಿಕಾ, ಮಧ್ಯ ಪ್ರಾಚ್ಯ, ದಕ್ಷಿಣ ಏಷ್ಯಾ ಮತ್ತು ಹಿಂದೂ ಮಹಾ ಸಾಗರ ಪ್ರದೇಶದ ಆಸುಪಾಸಿನ ಜನರು ಕೆಂಪು ಚಂದ್ರನಿಗೆ ಸಾಕ್ಷಿಯಾಗಬಹುದು.

ಮೇರಿ ಲ್ಯಾಂಡ್‌ನ ಗ್ರೀನ್‌ ಬೆಲ್ಟ್ ಪ್ರದೇಶದಲ್ಲಿರುವ ನಾಸಾದ ಉಪ ಕೇಂದ್ರ ಗೋಡ್ಡಾರ್ಡ್ ಸ್ಪೇಸ್‌ ಫ್ಲೈಟ್‌ ಸೆಂಟರ್‌ನ ಖಗೋಳ ವಿಜ್ಞಾನಿ ನೋಹ್‌ ಪೆಟ್ರೋ ಹೇಳಿರುವ ಪ್ರಕಾರ, ಆಕಾಶ ಶುಭ್ರವಾಗಿದ್ದರೆ ಈ ಭಾಗದ ಜನ ಬರಿಗಣ್ಣಿನಲ್ಲೂ ಕೂಡ ಕೆಂಪು ಚಂದ್ರನನ್ನು ಕಾಣಬಹುದು.

ನೇರವಾಗಿ ಚಂದ್ರನನ್ನು ಕಾಣಲು ಸಾಧ್ಯವಾಗದವರು ಅಂತರ್ಜಾಲದಲ್ಲಿ ಚಂದ್ರನ ದರ್ಶನ ಪಡೆಯಬಹುದು. ಈ ಖಗೋಳ ವಿಸ್ಮಯವನ್ನು ಅಮೆರಿಕಾದ ಬಾಹ್ಯಕಾಶ ಸಂಸ್ಥೆ ನೇರ ಪ್ರಸಾರ ಮಾಡಲಿದೆ. ನಾಸಾದ ಜಾಲತಾಣ( https://www.timeanddate.com/live/ )ದಲ್ಲಿ ಕೆಂಪು ಚಂದ್ರನನ್ನು ಕಾಣಬಹುದು.

ಕೆಂಪು ಬಣ್ಣವೇಕೆ?:

ಇದೇ ವರ್ಷದ ಜೂನ್ 31ರಂದು ಜಗತ್ತು ಕೆಂಪು ಚಂದಿರನಿಗೆ ಸಾಕ್ಷಿಯಾಗಿತ್ತು. ಈಗ ಮತ್ತೊಮ್ಮೆ ಈ ಅವಕಾಶ ದೊರೆತಿದೆ. ಜುಲೈ 27ರಂದು ನಡೆಯಲಿರುವ ಸಂಪೂರ್ಣ ಚಂದ್ರ ಗ್ರಹಣದ ವೇಳೆಯಲ್ಲಿ ಚಂದ್ರ ಕೆಂಪು ಬಣ್ಣಕ್ಕೆ ತಿರುಗಲಿದೆ. ಅದಕ್ಕಾಗಿಯೇ ಈ ಹೆಸರು ನೀಡಲಾಗಿದೆ.

ಸೂರ್ಯ ಮತ್ತು ಚಂದ್ರರ ನಡುವೆ ಭೂಮಿ ಹಾದುಹೋಗುವ ಸಂಧರ್ಭದಲ್ಲಿ ಭೂಮಿಯ ನೆರಳು ಚಂದ್ರನ ಮೇಲೆ ಬೀಳುವ ಕಾರಣದಿಂದಾಗಿ ಚಂದ್ರ ಗ್ರಹಣ ಉಂಟಾಗುತ್ತದೆ. ಆಗ ಭೂಮಿಯ ನೆರಳು ಬಿದ್ದ ಚಂದ್ರನ ಭಾಗವು ಗೋಚರಿಸುವುದಿಲ್ಲ. ಆದರೆ ಈ ಬಾರಿ ಹಾಗಾಗುವುದಿಲ್ಲ. ಗ್ರಹಣ ಸಂಭವಿಸುತ್ತದೆಯಾದರೂ ಸೂರ್ಯನ ಬೆಳಕು ಚಂದ್ರನ ಮೇಲ್ಮೈಯನ್ನು ತಲುಪಲಿದೆ. ಆದ ಕಾರಣ, ಚಂದ್ರ ಗಾಢ ಕೆಂಪಲ್ಲದಿದ್ದರೂ, ಕೆಂಪು-ಕಿತ್ತಳೆ ಬಣ್ಣಗಳ ಮಿಶ್ರಿತ ರೂಪದಲ್ಲಿ ಕಾಣಿಸಲಿದ್ದಾನೆ. ಈ ವಿದ್ಯಮಾನಕ್ಕೆ ‘ಚದುರುವಿಕೆ’ (scattering) ಎನ್ನಲಾಗುತ್ತದೆ.

ಸೂರ್ಯನ ಬೆಳಕು ಭೂಮಿಯ ವಾತಾವರಣವನ್ನು ಹಾದು ಹೋದಾಗಲೆಲ್ಲಾ ಗಾಳಿಯಲ್ಲಿನ ಕಣಗಳು ಹಲವಾರು ರೀತಿಯ ಬೆಳಕಿನ ಕಿರಣಗಳ ಹುಟ್ಟಿಗೆ ಕಾರಣವಾಗುತ್ತವೆ. ತರಂಗಾಂತರಗಳು ಕಡಿಮೆಯಿದ್ದಾಗ ನೀಲಿ ಮತ್ತು ಕೆನ್ನೆರಳೆ ಬಣ್ಣದ ಕಿರಣಗಳು ಹುಟ್ಟಿಕೊಳ್ಳುತ್ತವೆ. ತರಂಗಾಂತರಗಳು ಹೆಚ್ಚಾಗಿದ್ದಾಗ ಕೆಂಪು ಮತ್ತು ಕಿತ್ತಳೆ ಬಣ್ಣದ ಕಿರಣಗಳು ಕಾಣಿಸಿಕೊಳ್ಳುತ್ತವೆ. ಈ ಕಿರಣಗಳು ಚಂದ್ರನ ಮೈಲ್ಮೈ ಕಡೆಗೆ ಭಾಗಿಕೊಳ್ಳುತ್ತವೆ.ಈ ಬೆಳಕು ಚಂದ್ರನನ್ನು ತಾತ್ಕಾಲಿಕವಾಗಿ ಹೊಸ ಬಣ್ಣಕ್ಕೆ ತಿರುಗಿಸಲಿದೆ. ಆದ್ದರಿಂದ ಚಂದ್ರನ ಮೇಲ್ಮೈ ಸಾಮಾನ್ಯವಾಗಿ ಇರುವುದಕ್ಕಿಂತ ಹೆಚ್ಚು ಮೊಬ್ಬಾಗಿ ಕಾಣಸುತ್ತದೆ. ಕೆಂಪು ಬಣ್ಣಕ್ಕೆ ತಿರುಗುವ ಚಂದ್ರ ಭೂಮಿಯ ನೆರೆಯ ಗ್ರಹ ‘ಮಂಗಳ’ದಂತೆ ಗೋಚರಿಸುತ್ತದೆ.