ದೆಹಲಿ ಮೆಟ್ರೋ ನೌಕರರ ಮುಷ್ಕರದ ಎಚ್ಚರಿಕೆ; ಜೂನ್‌ 30ರಿಂದ ಮೆಟ್ರೋ ರೈಲು ಬಂದ್?
ಸುದ್ದಿ ಸಾರ

ದೆಹಲಿ ಮೆಟ್ರೋ ನೌಕರರ ಮುಷ್ಕರದ ಎಚ್ಚರಿಕೆ; ಜೂನ್‌ 30ರಿಂದ ಮೆಟ್ರೋ ರೈಲು ಬಂದ್?

ವೇತನ ಪರಿಷ್ಕರಣೆ ಮತ್ತು ಇನ್ನಿತರ ಬೇಡಿಕೆಗಳ ಈಡೇರಿಕೆಗಾಗಿ ದೆಹಲಿ ಮೆಟ್ರೋ ನಿಗಮದ ನೌಕರು ಕಳೆದ ಕೆಲವು ದಿನಗಳಿಂದ ಕಪ್ಪು ಕೈಪಟ್ಟಿ ಧರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈಗ ಜೂನ್ 30ರಿಂದ ಮುಷ್ಕರ ಹೂಡುವ ನಿರ್ಧಾರ ಕೈಗೊಂಡಿದ್ದಾರೆ. 

ದೆಹಲಿ ಮೆಟ್ರೋ ನಿಗಮದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಿರ್ವಾಹಕರು, ತಂತ್ರಜ್ಞರು, ಚಾಲಕರು, ನಿಲ್ದಾಣಗಳ ಮೇಲ್ವಿಚಾರಕರು ಹೀಗೆ ಎಲ್ಲರೂ ಸೇರಿ ಸಂಸ್ಥೆಯ ವಿರುದ್ಧ ಜೂನ್‌ 30ರಿಂದ ಮುಷ್ಕರ ನಡೆಸುವ ತಯಾರಿಯಲ್ಲಿದ್ದಾರೆ.

ಕೆಲವು ದಿನಗಳಿಂದ ಸಂಬಳವನ್ನು ಹೆಚ್ಚಿಸುವಂತೆ ಒತ್ತಾಯಸಿ ನೌಕರರು ಕಪ್ಪು ಕೈಪಟ್ಟಿ ಧರಸಿ ಕಾರ್ಯ ನಿರ್ವಹಿಸುವುದರ ಮೂಲಕ ಪ್ರತಿಭಟನೆ ನಡೆಸುತ್ತಿದ್ದರು. ನಿಗಮದ ಅಧಿಕಾರಿಗಳೊಂದಿಗೆ ಹಲವು ಸುತ್ತಿನ ಮಾತುಕತೆಗಳೂ ಕೂಡ ನಡೆದಿತ್ತು. ಆದರೆ ಬೇಡಿಕೆ ಪೂರ್ಣಗೊಳ್ಳದ ಕಾರಣ 9,000 ನೌಕರರು ಮುಷ್ಕರ ಹೂಡಲು ಮುಂದಾಗಿದ್ದಾರೆ.

ಕಳೆದ ವರ್ಷ ಜೂನ್‌ ತಿಂಗಳಿನಲ್ಲೂ ಕೂಡ ವೇತನ ಹೆಚ್ಚಿಸುವಂತೆ ಇದೇ ರೀತಿಯ ಹೋರಾಟ ನಡೆದಿತ್ತು. ಆದರೆ ನಿಗಮ ತಲೆಕೆಡಿಸಿಕೊಂಡಿರಲಿಲ್ಲ. ಹಾಗಾಗಿ ಈ ವರ್ಷವೂ ಕೂಡ ವೇತನವನ್ನು ಪರಿಷ್ಕರಿಸುವಂತೆ ನಿಗಮದ ನೌಕರರು ಪಟ್ಟು ಹಿಡಿದಿದ್ದಾರೆ.

ದೆಹಲಿ ಮೆಟ್ರೋ ನಿಗಮದ ನೌಕರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮಹವೀರ್ ಪ್ರಸಾದ್‌ ಹೇಳುವಂತೆ, ಕಳೆದ 10 ವರ್ಷಗಳಿಂದ ನೌಕರರು ಆರಂಭದ ವೇತನ ಶ್ರೇಣಿಯಲ್ಲೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ವೇತನ ಪರಿಷ್ಕರಣೆ ಮಾಡಬೇಕೆಂದು ನೌಕರರು ಪ್ರತಿಭಟನೆಗೆ ಸಿದ್ಧರಾಗಿದ್ದಾರೆ.

ದೆಹಲಿ ಮೆಟ್ರೋ ನಿಗಮದ ಸಿಬ್ಬಂದಿ ಕೌನ್ಸಿಲ್‌ನ ಕಾರ್ಯದರ್ಶಿ ರವಿ ಭಾರಧ್ವಜ್‌ ಹೇಳುವಂತೆ, ಈಗಾಗಲೇ ದ್ವಾರಕಾ, ಯಮುನಾ ಬ್ಯಾಂಕ್, ವಿಶ್ವವಿದ್ಯಾಲಯ ಸೇರಿದಂತೆ ಹಲವಾರು ನಿಲ್ದಾಣಗಳಲ್ಲಿ ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ. ಜತೆಗೆ ಊಟದ ಅವಧಿಯಲ್ಲಿ ಏನನ್ನೂ ತಿನ್ನದೇ ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ. ಜೂನ್‌ 29ರ ಒಳಗೆ ನೌಕರರ ಬೇಡಿಕೆಗಳು ಪೂರ್ಣಗೊಳದೆ ಹೋದರೆ ಜೂನ್ 30ರಿಂದ ಮೆಟ್ರೋ ರೈಲುಗಳು ಸಂಚರಿಸುವುದಿಲ್ಲ ಎಂದು ನೌಕರರು ನಿಗಮಕ್ಕೆ ಎಚ್ಚರಿಕೆ ನೀಡಿದ್ದಾರೆ.