ವಿಪಕ್ಷಗಳ ಒಗ್ಗಟ್ಟು ‘ಅವಕಾಶವಾದಿತನ’ ಎಂದ ಮೋದಿ!
ಸುದ್ದಿ ಸಾರ

ವಿಪಕ್ಷಗಳ ಒಗ್ಗಟ್ಟು ‘ಅವಕಾಶವಾದಿತನ’ ಎಂದ ಮೋದಿ!

ವಿರೋಧ ಪಕ್ಷಗಳ ಒಗ್ಗಟನ್ನು ಅವಕಾಶವಾದಿತನ ಎಂದು ಕರೆದಿರುವ ಪ್ರಧಾನಿ ಮೋದಿ, ಈ ಹಿಂದೆ ತುರ್ತು ಪರಿಸ್ಥಿತಿ ಹೇರಿದ್ದ ಪಕ್ಷದೊಂದಿಗೆ ಕೈಜೋಡಿಸಲು ಇತರೆ ಪಕ್ಷಗಳು ಮುಂದಾಗಿವೆ ಎಂದಿದ್ದಾರೆ.

ಮುಂಬರಲಿರುವ 2019ರ ಲೋಕಸಭಾ ಚುನಾವಣೆಗೆ ವಿರೋಧ ಪಕ್ಷಗಳು ಬಿಜೆಪಿ ವಿರುದ್ಧ ಒಟ್ಟಾಗಿರುವುದರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಹರಿಹಾಯ್ದಿದ್ದಾರೆ. ಗುರುವಾರ ಮಾತನಾಡಿದ ಮೋದಿ, ಹಿಂದೊಮ್ಮೆ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿದ್ದ ಪಕ್ಷವನ್ನು ವಿರೋಧಿಸಿದ್ದ ಪಕ್ಷಗಳು ಈಗ ಅಧಿಕಾರ ಹಿಡಿಯುವ ದುರಾಸೆಯಿಂದ ಅದೇ ಪಕ್ಷದೊಂದಿಗೆ ಹೆಗಲಿಗೆ ಹೆಗಲು ಜೋಡಿಸಿವೆ ಎಂದಿದ್ದಾರೆ.

ಕಬೀರ್‌ ದಾಸರ 500ನೇ ವರ್ಷದ ಪುಣ್ಯ ಸ್ಮರಣೆಯ ಅಂಗವಾಗಿ ಸಂತ ಕಬೀರ್‌ ನಗರದ ಮಗಾರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೋದಿ ಭಾಗವಹಿಸಿದ್ದರು. ಈ ವೇಳೆ ಪ್ರಧಾನಿ ಮೋದಿ ಕಾಂಗ್ರೆಸ್‌, ಬಹುಜನ ಸಮಾಜ ಪಕ್ಷ ಮತ್ತು ಸಮಾಜವಾದಿ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ‘ಸಮಾಜವಾದ’ ಮತ್ತು ‘ಬಹುಜನ’ರ ಬಗ್ಗೆ ಮಾತನಾಡುವವರು ಜನತೆಗೆ ಸುಳ್ಳು ಭರವಸೆಗಳನ್ನು ನೀಡುತ್ತಿದ್ದಾರೆ ಎಂದಿರುವ ಮೋದಿ, ಇವರ ಅಧಿಕಾರದ ದುರಾಸೆ ಇಂದು ಜನರಿಗೆ ಕಾಣಿಸುತ್ತಿದೆ ಎಂದಿದ್ದಾರೆ.

ಮಾತಿನ ಮಧ್ಯೆ ಯಾರ ಹೆಸರುಗಳನ್ನೂ ಕೂಡ ಪ್ರಸ್ತಾಪಿಸದೇ, ದೇಶದ ಜನರು, ಮುಖ್ಯವಾಗಿ ಉತ್ತರ ಪ್ರದೇಶದ ಜನರು ವಿರೋಧ ಪಕ್ಷಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಮೋದಿ ತಿಳಿಸಿದ್ದಾರೆ.

“ಅವರೆಲ್ಲರೂ ಅವರ ಮತ್ತು ಅವರ ಕುಟುಂಬಗಳ ಕಾಳಜಿಯನ್ನು ಹೊಂದಿದ್ದಾರೆಯೇ ಹೊರತು, ಸಮಾಜದ ಅಥವಾ ದೇಶದ ಬಗ್ಗೆ ಕಾಳಜಿ ತೋರಿಸುತ್ತಿಲ್ಲ. ಬಡವರು, ದಲಿತರು, ಹಿಂದುಳಿದವರು ಮತ್ತು ಶೋಷಣೆಗೆ ಒಳಗಾದ ವರ್ಗಗಳಿಗೆ ಮೋಸ ಮಾಡಿ ಕೋಟಿಗಟ್ಟಲೆ ಬೆಲೆ ಬಾಳುವ ಬಂಗಲೆಗಳನ್ನು ಕಟ್ಟಿಕೊಂಡಿದ್ದಾರೆ. ಜತೆಗೆ ಅವರ ಸಹೋದರರು ಮತ್ತು ಸಂಬಂಧಿಕರಿಗೂ ಕೂಡ ಕೋಟಿಗಟ್ಟಲೆ ಆಸ್ತಿ ಸಂಪಾದಿಸಿಕೊಟ್ಟಿದ್ದಾರೆ,” ಎಂದು ಮೋದಿ ಭಾಷಣದ ಮಧ್ಯೆ ಹೇಳಿದ್ದಾರೆ.

‘ತ್ರಿವಳಿ ತಲಾಖ್‌’ ವಿವಾದ:

ಮಾತಿನ ಮಧ್ಯೆ ಸುದೀರ್ಘವಾದ ಚರ್ಚೆಗೆ ಕಾರಣವಾಗಿರುವ ‘ತ್ರಿವಳಿ ತಲಾಖ್‌’ ಬಗ್ಗೆ ಮೋದಿ ಪ್ರಸ್ತಾಪ ಮಾಡಿದ್ದಾರೆ. ವಿರೋಧ ಪಕ್ಷಗಳು ವೋಟ್‌ ಬ್ಯಾಂಕ್‌ಗಾಗಿ ಸಂಸತ್ತಿನಲ್ಲಿ ತ್ರಿವಳಿ ತಲಾಖ್‌ ಮಸೂದೆಯ ಅಂಗೀಕಾರಕ್ಕೆ ತಡೆಯನ್ನು ಒಡ್ಡುತ್ತಿದ್ದಾರೆ ಎಂದು ಆರೋಪಿಸಿದ್ದು, “ಈ ಪಕ್ಷಗಳು ತಮ್ಮ ಸ್ವ ಹಿತಾಸಕ್ತಿಗಾಗಿ ಸಮಾಜವನ್ನು ದುರ್ಬಲಗೊಳಿಸುತ್ತಿರುವುದರ ಜತೆಗೆ ಸಾಮಾಜಿಕ ಪಿಡುಗುಗಳನ್ನು ನಾಶ ಮಾಡಲು ಬಿಡುತ್ತಿಲ್ಲ,” ಎಂದಿದ್ದಾರೆ.

ನೇರವಾಗಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್‌ರ ಹೆಸರನ್ನು ಪ್ರಸ್ತಾಪಿಸದೇ, ಮೋದಿ ಅವರ ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ. “ಮಾಜಿ ಮುಖ್ಯಮಂತ್ರಿಗಳು ವೈಭವೋಪೇತ ಬಂಗಲೆಯಲ್ಲಿ ವಾಸಿಸಲು ಇಷ್ಟ ಪಡುತ್ತಾರೆ, ಆದರೆ ತಮ್ಮ ಸರಕಾರದ ಅವಧಿಯಲ್ಲಿ ಪ್ರಧಾನ ಮಂತ್ರಿ ಆವಾಸ್‌ ಯೋಜನೆಯ ಅಡಿಯಲ್ಲಿ ಬಡವರಿಗೆ ಮನೆ ಕಟ್ಟಿಕೊಡಲು ಅವಕಾಶ ನೀಡಲಿಲ್ಲ,” ಎಂದು ಜರಿದಿದ್ದಾರೆ.

ಡಾ.ಬಿ.ಆರ್‌. ಅಂಬೇಡ್ಕರ್ ಸೇರಿದಂತೆ ಹಲವಾರು ಸಾಮಾಜಿಕ ನಾಯಕರ ಹೆಸರುಗಳನ್ನು ಮಾತಿನ ಮಧ್ಯೆ ಪ್ರಸ್ತಾಪಿಸಿದ ಮೋದಿ, ಈ ಸಾಮಾಜಿಕ ನಾಯಕರ ಹೆಸರಿನಲ್ಲಿ ದುರಾಸೆಯ ರಾಜಕಾರಣ ನಡೆಸಲಾಗುತ್ತಿದೆ ಮತ್ತು ಅವರ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಪ್ರಯತ್ನ ನಡೆಸಲಾಗುತ್ತಿದೆ ಎಂದಿದ್ದಾರೆ.

“ಕೆಲವು ರಾಜಕೀಯ ಪಕ್ಷಗಳಿಗೆ ಸಮಾಜದಲ್ಲಿ ಶಾಂತಿ ನೆಲೆಸಿ ಅಭಿವೃದ್ಧಿ ಉಂಟಾಗುವುದು ಬೇಕಾಗಿಲ್ಲ. ಸಮಾಜ ಅಂಶಾತಿ ಮತ್ತು ಸಂಘರ್ಷದಿಂದ ತುಂಬಿರಬೇಕು ಎಂದು ಅವರು ಬಯಸುತ್ತಾರೆ. ಸಾಮಾಜಿಕ ವಾತಾವರಣದಲ್ಲಿ ಎಷ್ಟೆಷ್ಟು ಅಶಾಂತಿ ಉಂಟಾಗುತ್ತದೆಯೋ ತಮಗೆ ಅಷ್ಟಷ್ಟು ಉಪಯೋಗ ಆಗುತ್ತದೆ ಎಂದು ಅವರು ಭಾವಿಸಿದ್ದಾರೆ. ಆದರೆ ಸತ್ಯ ಏನೆಂದರೆ ಅವರಿಗೆ ನೆಲಮಟ್ಟದ ವಾಸ್ತವ ತಿಳಿದಿಲ್ಲ. ಸಂತ ಕಬೀರ, ಮಹಾತ್ಮಾ ಗಾಂಧಿ ಮತ್ತು ಬಾಬಾ ಸಾಹೇಬರ ತತ್ವಗಳನ್ನು ನಂಬಿಕೊಂಡಿರುವ ಈ ದೇಶದ ನೈಸರ್ಗಿಕ ಮನೋಧರ್ಮದ ಬಗ್ಗೆ ಅವರಿಗೆ ಯಾವುದೇ ಕಲ್ಪನೆ ಇಲ್ಲ,” ಎಂದು ಮೋದಿ ಹೇಳಿದ್ದಾರೆ.