samachara
www.samachara.com
ಪಿಎನ್‌ಬಿ ಹಗರಣ; ನೀರವ್‌ ಮೋದಿ ಸಾಲ ಮಾಡಿರುವುದು ಮುಂಬೈ ಶಾಖೆಯಲ್ಲಷ್ಟೇ ಅಲ್ಲ!
ಸುದ್ದಿ ಸಾರ

ಪಿಎನ್‌ಬಿ ಹಗರಣ; ನೀರವ್‌ ಮೋದಿ ಸಾಲ ಮಾಡಿರುವುದು ಮುಂಬೈ ಶಾಖೆಯಲ್ಲಷ್ಟೇ ಅಲ್ಲ!

ನೀರವ್ ಮೋದಿ ಗ್ರೂಪ್ಸ್‌ ಕೇವಲ ಮುಂಬೈನ ಶಾಖೆಯಲ್ಲಷ್ಟೇ ಸಾಲ ಪಡೆದಿಲ್ಲ. ಈತನ ಒಡೆತನದ ಫೈರ್‌ಸ್ಟಾರ್‌ ಡೈಮಂಡ್‌ ಕಂಪನಿ ಹಾಂಗ್‌ಕಾಂಗ್‌ ಮತ್ತು ದುಬೈನಲ್ಲಿನ ಪಂಜಾನ್‌ ನ್ಯಾಷನಲ್‌ ಬ್ಯಾಂಕ್‌ಗಳಲ್ಲೂ ಕೂಡ ಸಾಲ ಪಡೆದಿದೆ.

samachara

samachara

ನೀರವ್‌ ಮೋದಿ ಗ್ರೂಪ್‌ನ ವಂಚನೆ ಕೇವಲ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನ ಮುಂಬೈ ಶಾಖೆಗೆ ಮಾತ್ರ ಸೀಮಿತವಾಗಿಲ್ಲ. ಇದೇ ಬ್ಯಾಂಕ್‌ನ ಹಾಂಗ್‌ಕಾಂಗ್‌ ಮತ್ತು ದುಬೈನಲ್ಲಿರುವ ಶಾಖೆಗಳಿಗೂ ನೀರವ್ ಹಗರಣ ವ್ಯಾಪಿಸಿಕೊಂಡಿದೆ. ಈ ಶಾಖೆಗಳೂ ಕೂಡ ನೀರವ್‌ ಮೋದಿ ಗ್ರೂಪ್‌ಗೆ ಸಾಲ ನೀಡಿವೆ. ತನಿಖಾ ಏಜೆನ್ಸಿಗಳಿಗೆ ಸಲ್ಲಿಕೆಯಾಗಿರುವ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನ ಆಂತರಿಕ ವರದಿ ಈ ಮಾಹಿತಿಯನ್ನು ಬಹಿರಂಗಗೊಳಿಸಿದೆ.

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್ ಆಂತರಿಕ ವರದಿಯ ಪ್ರಕಾರ ಹಾಂಗ್‌ಕಾಂಗ್‌ನಲ್ಲಿರುವ ನೀರವ್‌ ಮೋದಿ ಗ್ರೂಪ್‌ನ ಫೈರ್‌ಸ್ಟಾರ್‌ ಡೈಮಂಡ್ಸ್‌ ಲಿಮಿಟೆಡ್‌ ಕಂಪನಿ ಹಾಂಗ್‌ಕಾಂಗ್‌ನ ಪಿಎನ್‌ಬಿ ಶಾಖೆಯಿಂದ ಸಾಲವನ್ನು ಪಡೆದಿದೆ. ಇದೇ ರೀತಿ ದುಬೈನಲ್ಲಿ ಕೂಡ ನೀರವ್ ಮೋದಿ ಒಡೆತನದ ಫೈರ್‌ಸ್ಟಾರ್‌ ಎಫ್‌ಜೆಡ್‌ಇ ಕಂಪನಿ ದುಬೈನ ಪಿಎನ್‌ಬಿ ಶಾಖೆಯಲ್ಲಿ ಸಾಲ ಪಡೆದುಕೊಂಡಿದೆ.

ತನಿಖೆಯ ಸಂದರ್ಭದಲ್ಲಿ ಈ ಮಾಹಿತಿ ಹೊರಬಿದ್ದಿದ್ದು, ಒಟ್ಟಾರೆ ನೀರವ್‌ ಮೋದಿ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನಿಂದ ಪಡೆದಿರುವ ಒಟ್ಟು ಸಾಲ 14,000 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ.

“ತನಿಖಾ ಮಾಹಿತಿಗಳು ಹೇಳುವಂತೆ ನೀರವ್ ಮೋದಿ ಗ್ರೂಪ್‌ ಬೇರೆ ಇನ್ಯಾವುದೇ ಶಾಖೆಗಳಲ್ಲಿ ವಂಚನೆ ಮಾಡಿಲ್ಲ. ಹಾಂಗ್‌ಕಾಂಗ್‌ ಮತ್ತು ದುಬೈಗಳಲ್ಲಿನ ಶಾಖೆಗಳಲ್ಲಿ ನಡೆದಿರುವ ನೀರವ್‌ ಮೋದಿ ಗ್ರೂಪ್ಸ್‌ನ ವ್ಯವಹಾರಗಳನ್ನು ವಂಚನೆ ಎಂದು ಪರಿಗಣಿಸಲಾಗಿಲ್ಲ” ಎಂದು ತನಿಖಾ ಏಜೆನ್ಸಿಗಳಿಗೆ ಬ್ಯಾಂಕ್‌ ಸಲ್ಲಿಸಿರುವ ಆಂತರಿಕ ವರದಿ ಹೇಳಿದೆ.

ಫೆಬ್ರವರಿ ತಿಂಗಳ ಕೊನೆಯ ವಾರದಲ್ಲಿ ನೀರವ್‌ ಮೋದಿ ಗ್ರೂಪ್ಸ್‌ನ ಕೋಟಿ ವಂಚನೆ ಪ್ರಕರಣ ಬಯಲಿಗೆ ಬರುತ್ತಿದ್ದಂತೆ, ಅಮೆರಿಕಾದಲ್ಲಿದ್ದ ಫೈರ್‌ಸ್ಟಾರ್‌ ಡೈಮಂಡ್‌ ಕಂಪನಿ ತಾನು ದಿವಾಳಿಯಾಗಿರುವುದಾಗಿ ನ್ಯೂಯಾರ್ಕ್‌ನ ಸದರನ್‌ ಕೋರ್ಟ್‌ನಲ್ಲಿ ಘೋಷಿಸಿಕೊಂಡಿತ್ತು. ಈ ವಿಚಾರಣೆಯಲ್ಲಿ ಪಾಲ್ಗೊಂಡಿದ್ದ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌, ತನ್ನನ್ನು ವಂಚಿಸಿ ಪಡೆದ ಬಹುಪಾಲು ಹಣ ಅಮೆರಿಕದಲ್ಲಿರುವ ನೀರವ್‌ ಮೋದಿ ಗ್ರೂಪ್‌ಗೆ ಹರಿದು ಬಂದಿರುವುದಾಗಿ ವಾದ ಮಾಡಿತ್ತು.

ಒಟ್ಟು 162 ಪುಟಗಳ ಪಿಎನ್‌ಬಿ ಆಂತರಿಕ ವರದಿ, ಮುಂಬೈನ ಬ್ರಾಡಿ ಹೌಸ್‌ ಶಾಖೆಯ ಕೆಲ ಉದ್ಯೋಗಿಗಳ ಗುಂಪಿನ ಮೇಲೆ ಈ ವಂಚನೆಯ ಆಪಾದನೆ ಹೊರಿಸಿದೆ. ವಜ್ರದ ವ್ಯಾಪಾರಿ ನೀರವ್‌ ಮೋದಿ ಮತ್ತು ಅತನ ಸಂಬಂಧಿಕ ಮೆಹುಲ್ ಚೋಕ್ಸಿಗೆ ಅನಧಿಕೃತ ಲೆಟರ್‌ ಆಫ್‌ ಅಂಡರ್‌ಟೇಕಿಂಗ್‌ಗಳನ್ನು ನೀಡಿ, ದೇಶದಲ್ಲೇ ಅತಿ ದೊಡ್ಡ ಬ್ಯಾಂಕ್‌ ವಂಚನೆಗೆ ದಾರಿ ಮಾಡಿಕೊಟ್ಟಿರುವುದಾಗಿ ದೂರಿದೆ.

Also read: 'ವೈಟ್ ಕಾಲರ್ ದರೋಡೆ': ನೀರವ್ ಮೋದಿ, ಪಿಎನ್‌ಬಿ ಆಚೆಗೆ ಅಂತಹದ್ದೇ ಹಲವು ಪ್ರಕರಣಗಳು ಬಯಲಿಗೆ

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಈ ವರದಿಯ ಜತೆಗೆ ತನ್ನ ಆತಂರಿಕ ಇ-ಮೇಲ್‌ಗಳನ್ನು ಕೂಡ ದಾಖಲೆಗಳನ್ನಾಗಿ ತನಿಖಾ ಸಂಸ್ಥೆಗಳಿಗೆ ನೀಡಿದೆ.

2016-17ರ ವಿತ್ತೀಯ ವರ್ಷದ ನಾಲ್ಕನೇ ತ್ರೈಮಾಸಿಕ ಅವಧಿ ಜನವರಿಯಿಂದ ಮಾರ್ಚ್‌ ತಿಂಗಳ ಸಮಯದಲ್ಲಿ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಒಟ್ಟು 13,419.91 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ. ಈ ಅವಧಿಯಲ್ಲಿ ಬ್ಯಾಂಕ್‌ ಗಳಿಸಿದ್ದ ಲಾಭ 261.90 ಕೋಟಿ ರೂಪಾಯಿಗಳು.

ನೀರವ್‌ ಮೋದಿ ಮಾಡಿದ ವಂಚನೆಯ ಕಾರಣದಿಂದಾಗಿ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಈಗಾಗಲೇ 7,178 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ. ಉಳಿದ ಮೊತ್ತವನ್ನು ಈ ಹಣಕಾಸು ವರ್ಷದ ಉಳಿದ ಮೂರು ತ್ರೈಮಾಸಿಕ ಅವಧಿಯಲ್ಲಿ ತುಂಬಿಕೊಡುವುದಾಗಿ ಬ್ಯಾಂಕ್‌ ಹೇಳಿಕೊಂಡಿದೆ.

ಬ್ಯಾಂಕ್‌ನ ಸ್ವಿಫ್ಟ್‌ ಸಿಸ್ಟಮ್‌ ಮತ್ತು ಕೋರ್‌ ಬ್ಯಾಂಕಿಂಗ್‌ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಂಡು ನೀರವ್‌ ಮೋದಿಗೆ ಅನಧಿಕೃತ ಲೆಟರ್‌ ಆಫ್‌ ಅಂಡರ್‌ಟೇಕಿಂಗ್‌(LOU) ಮತ್ತು ಫಾರಿನ್‌ ಲೆಟರ್‌ ಆಫ್‌ ಕ್ರೆಡಿಟ್‌ಗಳನ್ನು (FLC) ನೀಡಲಾಗಿತ್ತು. ಈ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಂಡು ನೀರವ್‌ ಮೋದಿ ಒಡೆತನದ ಸಂಸ್ಥೆಗಳು ವಿದೇಶಿ ಬ್ಯಾಂಕ್‌ಗಳಲ್ಲಿ ಹಣ ಪಡೆದಿದ್ದವು. ಈಗ ಈ ಹಣವನ್ನು ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಭರಿಸಬೇಕಾಗಿದೆ. ಈಗಾಗಲೇ ವಿದೇಶಿ ಬ್ಯಾಂಕ್‌ಗಳಿಗೆ ಪಿಎನ್‌ಬಿ 6,586.11 ಕೋಟಿ ರೂಪಾಯಿಗಳನ್ನು ನಿಡಿದೆ.

Also read: ಅಧುನಿಕ ವ್ಯವಸ್ಥೆಗಳ ಮಧ್ಯೆಯೇ ಕೈಚಳಕ ತೋರಿಸಿದ ಅಧಿಕಾರಿಗಳು