samachara
www.samachara.com
‘ರಾಮ ಮಂದಿರ ನಿರ್ಮಾಣದ ಬಗ್ಗೆ ಸಂದೇಹ ಬೇಡ’; ಚುನಾವಣೆ ಹೊಸ್ತಿಲಲ್ಲಿ ಅಯೋಧ್ಯೆ ನೆನಪಿಸಿದ ಯೋಗಿ!
ಸುದ್ದಿ ಸಾರ

‘ರಾಮ ಮಂದಿರ ನಿರ್ಮಾಣದ ಬಗ್ಗೆ ಸಂದೇಹ ಬೇಡ’; ಚುನಾವಣೆ ಹೊಸ್ತಿಲಲ್ಲಿ ಅಯೋಧ್ಯೆ ನೆನಪಿಸಿದ ಯೋಗಿ!

ಇಷ್ಟು ದಿನ ತೆರೆಮರೆಯಲ್ಲಿದ್ದ ರಾಮ ಮಂದಿರ- ಬಾಬ್ರಿ ಮಸೀದಿ ವಿವಾದಕ್ಕೆ ಈಗ ಮತ್ತೊಮ್ಮೆ ಚಾಲನೆ ದೊರೆತಿದೆ. 2019ರ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವ ಹೊತ್ತಲ್ಲಿ ಬಿಜೆಪಿ ಮತ್ತೆ ರಾಮ ಮಂದಿರ ನಿರ್ಮಾಣದ ಮಾತನ್ನಾಡುತ್ತಿದೆ.

samachara

samachara

ಕಳೆದ ಲೋಕಸಭಾ ಚುನಾವಣೆ ವೇಳೆಯಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವುದು ಬಿಜೆಪಿಯ ಮುಖ್ಯ ಪ್ರಚಾರ ವಿಷಯಗಳಲ್ಲಿ ಒಂದಾಗಿತ್ತು. ಆದರೆ ಬಿಜೆಪಿ ಚುನಾವಣೆಯಲ್ಲಿ ಗೆದ್ದು ಕೇಂದ್ರದಲ್ಲಿ ಅಧಿಕಾರ ಹಿಡಿದು 4 ವರ್ಷಗಳಾದರೂ ಕೂಡ ರಾಮ ಮಂದಿರ ನಿರ್ಮಾಣದ ಸೊಲ್ಲೆತ್ತಿರಲಿಲ್ಲ. ಈಗ ಮೊತ್ತೊಮ್ಮೆ ಲೋಕಸಭಾ ಚುನಾವಣೆ ಸನ್ನಿಹಿತವಾಗುತ್ತಿರುವ ಹೊತ್ತಲ್ಲಿ ಯೋಗಿ ಆದಿತ್ಯನಾಥ್‌ ರಾಮ ಮಂದಿರ ನಿರ್ಮಾಣದ ಕುರಿತು ಮಾತನಾಡಿದ್ದಾರೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ಯೋಗಿ ಆದಿತ್ಯನಾಥ್‌ ಅಯೋಧ್ಯೆಯಲ್ಲಿ ನಡೆದ ‘ಸಂತ ಸಮ್ಮೇಳನ’ದಲ್ಲಿ ಮಾತನಾಡಿದ್ದು, ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುತ್ತೇವೆ. ಅದರಲ್ಲಿ ಯಾವ ಸಂದೇಹವೂ ಇಲ್ಲ ಎಂದಿದ್ದಾರೆ.

“ಮರ್ಯಾದಾ ಪುರುಷೋತ್ತಮ ರಾಮ ಇಡೀ ಬ್ರಹ್ಮಾಂಡದ ಒಡೆಯ. ಅಯೋಧ್ಯೆ ಮೇಲೆ ಭಗವಾನ್ ರಾಮನ ಕೃಪೆಯಿದ್ದು, ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣ ಆಗಿಯೇ ಆಗುತ್ತದೆ. ಇದರ ಬಗ್ಗೆ ಯಾವುದೇ ಸಂದೇಹ ಬೇಡ,” ಎಂದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ.

ಯೋಗಿ ಆದಿತ್ಯನಾಥ್‌ ಮಾತನಾಡುವುದಕ್ಕೂ ಮುಂಚೆ ಸಭೆಯನ್ನುದ್ದೇಶಿಸಿ ಮಾತನಾಡಿದ ‘ರಾಮ ಜನ್ಮಭೂಮಿ ನ್ಯಾಸ್‌’ ಸಂಘಟನೆಯ ಸದಸ್ಯ ರಾಮ್‌ ವಿಲಾಸ್‌ ವೇದಾಂತಿ, “ರಾಮ ಮಂದಿರದ ನಿರ್ಮಾಣ ಮಾಡಲು ಕೋರ್ಟ್‌ನ ಅನುಮತಿಗಾಗಿ ನಾವು ಕಾಯುತ್ತಿಲ್ಲ” ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

ಈ ಹಿಂದೆ ಕೋರ್ಟ್‌ನ ಅನುಮತಿ ಇಲ್ಲದೆಯೇ ಎಲ್ಲವೂ ನಡೆದಂತೆ ಈಗಲೂ ಕೂಡ ನಡೆಯುತ್ತದೆ ಎಂದು ವೇದಾಂತಿ ಹೇಳಿದ್ದಾರೆ. ಈ ಮಾತಿನ ಮೂಲಕ ಕೋರ್ಟ್ ಅನುಮತಿ ಇಲ್ಲದೆಯೂ ಬಾಬ್ರಿ ಮಸೀದಿ ಧ್ವಂಸ ಮಾಡಿದ ವಿಷಯವನ್ನು ವೇದಾಂತಿ ನೆನಪಿಸಿದ್ದಾರೆ ಎನ್ನಲಾಗಿದೆ.

ಮುಂದುವರೆದು ಮಾತನಾಡಿದ ವೇದಾಂತಿ, “2019ರ ಚುನಾವಣೆ ಆರಂಭವಾಗುವುದಕ್ಕೂ ಮೊದಲೇ ಅಯೋಧ್ಯೆಯಲ್ಲಿ ರಾಮ ಮಂದಿರದ ನಿರ್ಮಾಣ ಆರಂಭಗೊಳ್ಳುತ್ತದೆ. ಈ ಕುರಿತು ನಾನು ನಿಮಗೆ ಭರವಸೆ ನೀಡುತ್ತೇನೆ,” ಎಂದಿದ್ದಾರೆ.

ರಾಮ ಮಂದಿರ ನಿರ್ಮಾಣಕ್ಕೆ ತಡೆಯೊಡ್ಡಲು ಹಲವಾರು ಜನ ಪಿತೂರಿ ನಡೆಸುತ್ತಿದ್ದಾರೆ ಎಂದಿರುವ ಆದಿತ್ಯನಾಥ್‌, ಸ್ವಲ್ಪ ಕಾಲ ಸುಮ್ಮನಿರುವಂತೆ ನೆರೆದಿದ್ದ ಸಭಿಕರಲ್ಲಿ ಮನವಿ ಮಾಡಿದ್ದಾರೆ.

“ಒಂದೆಡೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿ, 2019ಕ್ಕೂ ಮುಂಚೆ ವಿಚಾರಣೆ ನಡೆಯದಂತೆ ಮಾಡುತ್ತಿರುವ ಜನ, ಇನ್ನೊಂದೆಡೆ ರಾಮ ಮಂದಿರ ನಿರ್ಮಾಣಕ್ಕಾಗಿ ಬಿಜೆಪಿ ಏನೂ ಮಾಡಲಿಲ್ಲ ಎಂದು ಜರಿಯುತ್ತಿದ್ದಾರೆ. ಕೇಂದ್ರ ಸರಕಾರದಲ್ಲಿ ಬಿಜೆಪಿ ಅಥವಾ ಯಾರೇ ಇರಲಿ, ಸಾಂವಿಧಾನಿಕ ಮಾರ್ಗದಲ್ಲಿ ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಇರುವ ದಾರಿಗಳನ್ನು ಹುಡುಕಲು ಶ್ರಮ ಹಾಕಲಾಗುತ್ತದೆ,” ಎಂದು ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ.

ಇದೇ ಮೊದಲ ಬಾರಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ 2019ರ ಲೋಕಸಭಾ ಚುನಾವಣೆ ಮತ್ತು ರಾಮ ಮಂದಿರ ನಿರ್ಮಾಣಕ್ಕೆ ನೇರ ಸಂಬಂಧ ಕಲ್ಪಿಸಿ ಮಾತನಾಡಿದ್ದಾರೆ. ರಾಮ ಮಂದಿರ ನಿರ್ಮಾಣ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಯ ಹಂತದಲ್ಲಿದ್ದರೂ ಕೂಡ ಈ ಬಗ್ಗೆ ಮಾತನಾಡಿರುವ ಯೋಗಿ ಆದಿತ್ಯನಾಥ್‌ಗೆ ಸಂಘ ಪರಿವಾರದ ಸದಸ್ಯರು ಜೋರು ದನಿಯ ಮೂಲಕ ಬೆಂಬಲ ಸೂಚಿಸಿದ್ದಾರೆ.

ಕಳೆದ ಮಾರ್ಚ್‌ ತಿಂಗಳ ಅವಧಿಯಲ್ಲಿ ಸಾಮಾಜಿಕ ಹೊಣೆಗಾರಿಕೆಯ ಹೆಸರಿನಲ್ಲಿ ಕಾರ್ಪೊರೇಟ್‌ ಕಂಪನಿಗಳಿಂದ ಹಣ ಪಡೆದು ಸರಯೂ ನದಿ ತೀರದಲ್ಲಿ 100 ಅಡಿ ಎತ್ತರದ ರಾಮನ ಪುತ್ಥಳಿಯನ್ನು ನಿರ್ಮಿಸಲಾಗುವುದು ಎಂದು ಯೋಗಿ ಆದಿತ್ಯನಾಥ್‌ ಹೇಳಿದ್ದರು. ರಾಮನ ವಿಗ್ರಹವು ಸಾಮಾಜಿಕ ಬೆಳವಣಿಗೆಯನ್ನು ಉಂಟುಮಾಡುತ್ತದೆ ಎಂದು ಆದಿತ್ಯನಾಥ್‌ ಈ ವೇಳೆ ತಿಳಿಸಿದ್ದರು.

ಕಳೆದ ವರ್ಷ ನವೆಂಬರ್‌ ತಿಂಗಳಿನಲ್ಲಿ ಸುಪ್ರಿಂಕೋರ್ಟ್ ರಾಮ ಮಂದಿರ ಕುರಿತಾದ ಕೊನೆಯ ವಿಚಾರಣೆಯನ್ನು ಕೈಗೆತ್ತಿಕೊಳ್ಳುವುದಕ್ಕೂ ಒಂದು ದಿನದ ಮುಂಚೆ ಆರ್‌ಎಸ್‌ಎಸ್‌ನ ಮುಖ್ಯಸ್ಥ ಮೋಹನ್‌ ಭಾಗವತ್‌ ಈ ಕುರಿತು ಮಾತನಾಡಿದ್ದರು. “ರಾಮ ಜನ್ಮಭೂಮಿಯಲ್ಲಿ ರಾಮನ ಮಂದಿರವಷ್ಟೇ ನಿರ್ಮಾಣವಾಗಬೇಕು. ಬೇರೇನೂ ತಲೆ ಎತ್ತಬಾರದು. ರಾಮಮಂದಿರವನ್ನು ಅದೇ ಕಲ್ಲುಗಳಿಂದ ಮತ್ತು ರಾಮ ಮಂದಿರಕ್ಕಾಗಿ ಸುಮಾರು 20-25ವರ್ಷಗಳ ಕಾಲ ದುಡಿದವರಿಂದ ನಿರ್ಮಿಸಲಾಗುತ್ತದೆ,” ಎಂದಿದ್ದರು.

ಮತ್ತೊಂದೆಡೆ ವಿಶ್ವ ಹಿಂದೂ ಪರಿಷತ್‌ ರಾಮ ಮಂದಿರದ ನಿರ್ಮಾಣಕ್ಕಾಗಿ ದೇಶದ ಮೂಲೆ ಮೂಲೆಗಳಿಂದ ಲಾರಿಗಳ ತುಂಬಾ ಕಲ್ಲುಗಳನ್ನು ಹೇರಿಕೊಂಡು ತರುತ್ತಿದೆ.

ವಿಶ್ವ ಹಿಂದೂ ಪರಿಷತ್‌ ನಾಯಕ ತ್ರಿಲೋಕಿನಾಥ್‌, “ಇಂದು ರಾಜಸ್ಥಾನದ ಭಾರತ್‌ಪುರದಿಂದ 2 ಲಾರಿ ಕಲ್ಲುಗಳು ಬಂದಿವೆ. ರಾಮ ಮಂದಿರದ ಸಂಪೂರ್ಣ ನಿರ್ಮಾಣಕ್ಕಾಗಿ 100 ಲಾರಿ ಲೋಡ್‌ಗಳಿಗಿಂತಲೂ ಹೆಚ್ಚಿನ ಕಲ್ಲು ಬೇಕು. ಇನ್ನು ಕೆಲವೇ ದಿನಗಳಲ್ಲಿ ಅಷ್ಟೂ ಕಲ್ಲುಗಳನ್ನು ಜೋಡಿಸುತ್ತೇವೆ, “ ಎಂದು ಕಳೆದ ವರ್ಷ ಹೇಳಿದ್ದರು.

ರಾಮ ಮಂದಿರಕ್ಕಾಗಿ ವಿಶ್ವ ಹಿಂದೂ ಪರಿಷತ್‌ ಪೇರಿಸಿಟ್ಟಿರುವ ಕಲ್ಲುಗಳು.
ರಾಮ ಮಂದಿರಕ್ಕಾಗಿ ವಿಶ್ವ ಹಿಂದೂ ಪರಿಷತ್‌ ಪೇರಿಸಿಟ್ಟಿರುವ ಕಲ್ಲುಗಳು.
ಚಿತ್ರ ಕೃಪೆ: ಎನ್‌ಡಿ ಟಿವಿ

ಬಾಬ್ರಿ ಮಸೀದಿ ಮತ್ತು ರಾಮ ಮಂದಿರದ ಪ್ರಕರಣವನ್ನು ಭೂ ವಿವಾದ ಎಂದು ಪರಿಗಣಿಸಿರುವ ಸುಪ್ರಿಂ ಕೋರ್ಟ್, ಪ್ರಕರಣದ ಮಧ್ಯೆ ಮೂರನೇ ವ್ಯಕ್ತಿಗಳ ಮಧ್ಯಪ್ರವೇಶಕ್ಕೆ ಆಸ್ಪದ ನೀಡುವುದಿಲ್ಲ ಎಂದಿದೆ. ವಿಚಾರಣೆಯ ವೇಳೆ ರಾಮ ಮಂದಿರ ನಿರ್ಮಾಣದ ಪರ ವಕೀಲರು, ‘ಪ್ರಕರಣವು ಭಾರತದ ಕೋಟ್ಯಾಂತರ ಹಿಂದೂಗಳ ನಂಬಿಕೆಯನ್ನು ಒಳಗೊಂಡಿದೆ’ ಎಂದು ವಾದಿಸಿದ ಸಂದರ್ಭದಲ್ಲಿ ಕೋರ್ಟ್ ಈ ನಿರ್ಧಾರಕ್ಕೆ ಬಂದಿದೆ. ಅಲಹಾಬಾದ್‌ ಹೈಕೋರ್ಟ್‌ ನೀಡಿದ ತೀರ್ಪಿನ ನಂತರ ಸಲ್ಲಿಕೆಯಾದ ಸುಮಾರು 14 ಮೇಲ್ಮನವಿ ಅರ್ಜಿಗಳ ವಿಚಾರಣೆಯನ್ನು ಸುಪ್ರಿಂ ಕೋರ್ಟ್ ಈಗಾಗಲೇ ನಡೆಸಿದೆ.

2010ರ ಸೆಪ್ಟೆಂಬರ್‌ 10ರಂದು ಅಲಹಾಬಾದ್‌ ಹೈಕೋರ್ಟ್ ರಾಮ ಮಂದಿರ ಬಾಬ್ರಿ ಮಸೀದಿ ವಿವಾದದ ಕುರಿತು ತೀರ್ಪು ನೀಡಿತ್ತು. ವಿವಾದಿತ 2.77 ಎಕರೆ ಭೂಮಿಯನ್ನು ಮೂರು ಭಾಗಗಳನ್ನಾಗಿ ಮಾಡಿ, ನಿರ್ಮೋಹಿ ಅಖಾರ ಪಂಥ, ಸುನ್ನಿ ವಕ್ಫ್‌ ಬೋರ್ಡ್ ಮತ್ತು ರಾಮ ಮಂದಿರಕ್ಕೆ ತಲಾ ಒಂದೊಂದು ಭಾಗವನ್ನು ನೀಡಿ ಆದೇಶ ಹೊರಡಿಸಿತ್ತು. ಆದರೆ ಈ ತೀರ್ಪನ್ನು ವಿರೋಧಿಸಿ ಹಲವರು ಸುಪ್ರಿಂ ಕೋರ್ಟ್‌ನ ಮೆಟ್ಟಿಲು ಹತ್ತಿದ್ದರು.

ಇಷ್ಟು ದಿನ ತೆರೆಮರೆಯಲ್ಲಿದ್ದ ರಾಮ ಮಂದಿರ ನಿರ್ಮಾಣ ವಿಚಾರವನ್ನು ಉತ್ತರ ಪ್ರದೇಶ ಬಿಜೆಪಿ ಸರಕಾರದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಮತ್ತೆ ಮುನ್ನೆಲೆಗೆ ತಂದಿದ್ದಾರೆ. ಮತ್ತೊಂದು ಲೋಕ ಸಭಾ ಚುನಾವಣೆ ಹತ್ತಿರದಲ್ಲಿರುವುದರಿಂದಲೇ ಮತ್ತೊಮ್ಮೆ ರಾಮಜನ್ಮ ಭೂಮಿ ವಿಚಾರ ಮಾನ್ಯತೆ ಪಡೆದುಕೊಳ್ಳುತ್ತಿದೆಯೇ ಎಂಬ ಚರ್ಚೆಗೆ ಬಿಜೆಪಿಯ ಈ ನಡೆ ಕಾರಣವಾಗಿದೆ.