samachara
www.samachara.com
ಮೋದಿ ಭದ್ರತೆಗೆ ಹೊಸ ಗೈಡ್‌ಲೈನ್ಸ್; ಸಚಿವರು, ಅಧಿಕಾರಿಗಳೂ ಕೂಡ ಮೋದಿ ಬಳಿ ಹೋಗುವಂತಿಲ್ಲ!
ಸುದ್ದಿ ಸಾರ

ಮೋದಿ ಭದ್ರತೆಗೆ ಹೊಸ ಗೈಡ್‌ಲೈನ್ಸ್; ಸಚಿವರು, ಅಧಿಕಾರಿಗಳೂ ಕೂಡ ಮೋದಿ ಬಳಿ ಹೋಗುವಂತಿಲ್ಲ!

ಮುಂಬರಲಿರುವ ಲೋಕಸಭಾ ಚುನಾವಣೆ ಮತ್ತು ಚುನಾವಣಾ ಪ್ರಚಾರಗಳನ್ನು ಗಮನದಲ್ಲಿ ಇರಿಸಿಕೊಂಡು ಗೃಹ ಸಚಿವ ರಾಜನಾಥ್‌ಸಿಂಗ್‌ ಸಭೆ ನಡೆಸಿದ್ದಾರೆ. ಮೋದಿಯ ಭದ್ರತೆಯನ್ನು ಹೆಚ್ಚಿಸುವ ಸಲುವಾಗಿ ಹಲವಾರು ಹೊಸ ನಿರ್ದೇಶನಗಳನ್ನು ನೀಡಿದ್ದಾರೆ.

samachara

samachara

ದೇಶದ ಪ್ರಧಾನಿ ನರೇಂದ್ರ ಮೋದಿಗೆ ಹೆಚ್ಚಿನ ಭದ್ರತೆಯನ್ನು ಒದಗಿಸಲು ಮುಂದಾಗಿರುವ ಕೇಂದ್ರ ಗೃಹ ಸಚಿವಾಲಯ, ರಾಜ್ಯಗಳಿಗೆ ಹೊಸ ಭದ್ರತಾ ನಿರ್ದೇಶನಗಳನ್ನು ನೀಡಿದೆ. ಈ ನಿರ್ದೇಶನಗಳ ಪ್ರಕಾರ ಮಂತ್ರಿಗಳು ಮತ್ತು ಸರಕಾರಿ ಅಧಿಕಾರಿಗಳೂ ಕೂಡ ಪ್ರಧಾನಿ ನರೇಂದ್ರ ಮೋದಿಯವರಿಂದ ದೂರ ನಿಲ್ಲಬೇಕಿದೆ.

ಮುಂಬರಲಿರುವ ಲೋಕಸಭಾ ಚುನಾವಣೆಗೆ ಸಿದ್ಧವಾಗುತ್ತಿರುವ ಪ್ರಧಾನಿ ಮೋದಿ ‘ಬಾರಿ ಬೆಲೆಯ ಗುರಿ’ಯಾಗಿದ್ದು, ಅನಾಮಧೇಯ ಬೆದರಿಕೆಗಳು ಮೋದಿ ಅವರಿಗೆ ಬಂದಿವೆ ಎನ್ನಲಾಗಿದೆ. ಈ ಕಾರಣಕ್ಕಾಗಿಯೇ ಗೃಹ ಸಚಿವಾಲಯ ಮೋದಿ ಅವರ ಭದ್ರತಾ ನಿಯಮಗಳನ್ನು ಇನ್ನಷ್ಟು ಬಿಗಿಯಾಗಿಸಿದ್ದು, ಮಂತ್ರಿಗಳು ಅಧಿಕಾರಿಗಳೂ ಕೂಡ ಏಕಾಏಕಿ ಮೋದಿ ಸನಿಹಕ್ಕೆ ತೆರಳವಂತಿಲ್ಲ. ವಿಶೇಷ ರಕ್ಷಣಾ ತಂಡದ ಅನುಮತಿಯ ನಂತರವಷ್ಟೇ ಮೋದಿ ಬಳಿಗೆ ಸಾಗಬಹುದು.

ಆಡಳಿತ ಪಕ್ಷದ ಬಿಜೆಪಿಯ ಮುಂಚೂಣಿ ನಾಯಕ ಮತ್ತು ಮುಖ್ಯ ಕ್ಯಾಂಪೈನರ್‌ ಎನಿಸಿಕೊಂಡಿರುವ ನರೇಂದ್ರ ಮೋದಿಗೆ ವಿಶೇಷ ರಕ್ಷಣಾ ತಂಡ ಕೆಲವು ಸಲಹೆಗಳನ್ನು ನೀಡಿದೆ. 2019ರ ಲೋಕಸಭಾ ಚುನಾವಣೆಯ ಪ್ರಚಾರದ ವೇಳೆಯಲ್ಲಿ ಮೋದಿ ಸಾರ್ವಜನಿಕ ರೋಡ್‌ ಶೋಗಳಲ್ಲಿ ಸಾಗದಂತೆ ವಿಶೇಷ ರಕ್ಷಣಾ ತಂಡ ಎಚ್ಚರಿಕೆ ನೀಡಿದೆ. ಸಾರ್ವಜನಿಕ ರೋಡ್‌ ಶೋಗಳು ಹೆಚ್ಚಿನ ಅಪಾಯ ತಂದೊಡ್ಡಬಹುದು ಎಂಬ ಆತಂಕವನ್ನುವಿಶೇಷ ರಕ್ಷಣಾ ತಂಡ ವ್ಯಕ್ತಪಡಿಸಿದೆ. ಮೆರವಣಿಗೆಗಳ ಬದಲು ಕಾರ್ಯಕ್ರಮಗಳಲ್ಲಿ ಭಾಷಣ ನಡೆಸುವಂತೆ ಸಲಹೆ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕ್ಲೋಸ್‌ ಪ್ರೊಟೆಕ್ಷನ್‌ ಟೀಮ್‌ನ ಹೊಸ ನಿಯಮಗಳು:

ಪ್ರಧಾನ ಮಂತ್ರಿಗಳ ಭದ್ರತೆಯ ಭಾಗವಾಗಿರುವ ಕ್ಲೋಸ್‌ ಪ್ರೊಟೆಕ್ಷನ್‌ ಟೀಮ್‌, ತಾನು ಕೈಗೊಂಡಿರುವ ಹೊಸ ಭದ್ರತಾ ನಿಯಮಗಳನ್ನು ವಿವರಿಸಿದೆ. ಹೊಸ ನಿಯಮಗಳಲ್ಲಿ ಅಗತ್ಯ ಬಿದ್ದಾಗ ಮಂತ್ರಿಗಳು ಮತ್ತು ಅಧಿಕಾರಿಗಳನ್ನೂ ಕೂಡ ದೂರವಿರಿಸುವುದೂ ಕೂಡ ಒಂದು.

ಜೂನ್‌ 7ರಂದು ಪುಣೆ ಪೊಲೀಸರು ಕೋರ್ಟ್‌ಗೆ ಪತ್ರವೊಂದನ್ನು ಸಲ್ಲಿಸಿದ್ದರು. ದೆಹಲಿ ನಿವಾಸಿಯಿಂದ ಬಂದದ್ದು ಎನ್ನಲಾಗಿದ್ದ ಆ ಪತ್ರದಲ್ಲಿ ಮೋದಿ ಜೀವಕ್ಕೆ ಸಂಚಕಾರ ತರಬಹುದುದಾದ ಸೂಚನೆಗಳಿದ್ದವು ಎಂದು ಪೊಲೀಸರು ಹೇಳಿದ್ದರು. ಈ ಸಂಬಂಧ ನಿಷೇಧಿತ ಪಕ್ಷ ಸಿಪಿಐ(ಮಾವೋಯಿಸ್ಟ್‌) ಜತೆಗೆ ನಂಟು ಹೊಂದಿರುವವರು ಎಂಬ ಆರೋಪದ ಮೇಲೆ 5 ಜನರನ್ನು ಪೊಲೀಸರು ಬಂಧಿಸಿದ್ದರು.

ಆ ಪತ್ರದಲ್ಲಿ ಮೋದಿ ಅವರನ್ನು ಕೊಲ್ಲಲು ಸಂಚು ರೂಪಿಸಿದ್ದ ವಿಷಯವಿತ್ತು ಹಾಗೂ ರಾಜೀವ್‌ ಗಾಂಧಿ ರೀತಿಯಲ್ಲೇ ಮೋದಿಯವರನ್ನು ಹತ್ಯೆ ಮಾಡಲು ಬಂಧಿತರು ಯೋಜನೆ ತಯಾರಿಸಿದ್ದರು ಎಂದು ಪೊಲೀಸರು ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದರು.

ಇತ್ತೀಚಿಗಷ್ಟೇ ಮೋದಿ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ವ್ಯಕ್ತಿಯೊಬ್ಬ 6 ಹಂತದ ಭದ್ರತಾ ವ್ಯವಸ್ಥೆಯನ್ನು ದಾಟಿ ಮೋದಿಯವರ ಕಾಲು ಮುಟ್ಟಲು ಪ್ರಯತ್ನಿಸಿದ್ದ. ಸಾಮಾನ್ಯ ವ್ಯಕ್ತಿಯೊಬ್ಬನ ಈ ಪ್ರಯತ್ನ ಭದ್ರತಾ ಸಿಬ್ಬಂದಿಗಳಲ್ಲಿ ಆತಂಕವನ್ನು ಮೂಡಿಸಿತ್ತು.

ಈ ಎರಡು ಬೆಳವಣಿಗೆಗಳ ಹಿನ್ನಲೆಯಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್‌, ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್‌ ಗೌಬಾ ಮತ್ತು ಗುಪ್ತಚರ ಇಲಾಖೆಯ ನಿರ್ದೇಶಕ ರಾಜೀವ್‌ ಜತೆ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಪ್ರಧಾನ ಮಂತ್ರಿಗಳ ಭದ್ರತೆಯ ಕುರಿತು ಅವಲೋಕನ ನಡೆಸಲಾಗಿತ್ತು.

ರಾಜನಾಥ್‌ ಸಿಂಗ್‌ ನಿರ್ದೇಶನಗಳು:

ಈ ಸಭೆಯಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌, ಪ್ರಧಾನಿ ಮೋದಿಯವರ ಭದ್ರತಾ ವ್ಯವಸ್ಥೆಯನ್ನು ಬಲಗೊಳಿಸಲು ಬೇಕಾದ ಎಲ್ಲಾ ಕ್ರಗಳನ್ನು ಕೈಗೊಳ್ಳುವಂತೆ ಅಧಿಕಾರಿ ಸೂಚಿಸಿದ್ದಾರೆ. ಅದಕ್ಕಾಗಿ ಇನ್ನಿತರ ಏಜೆನ್ಸಿಗಳ ಸಲಹೆಗಳನ್ನೂ ಕೂಡ ಸ್ವೀಕರಿಸಿ ಎಂದಿದ್ದಾರೆ.

ನಕ್ಸಲ್‌ ಪ್ರಭಾವಿತ ರಾಜ್ಯಗಳಾದ ಛತ್ತೀಸ್‌ಗಢ, ಜಾರ್ಖಂಡ್‌, ಮಧ್ಯ ಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳ ಇನ್ನಿತರೆ ರಾಜ್ಯಗಳನ್ನು ಗೃಹ ಸಚಿವಾಲಯ ಸೂಕ್ಷ ಪ್ರದೇಶಗಳು ಎಂಬ ಪಟ್ಟಿಗೆ ಸೇರಿಸಿದೆ. ಪ್ರಧಾನ ಮಂತ್ರಿ ಮೋದಿ ರಾಜ್ಯಕ್ಕೆ ಭೇಟಿ ನೀಡುವ ಸಂಧರ್ಭದಲ್ಲಿ ಹೆಚ್ಚಿನ ನಿಗಾ ವಹಿಸಬೇಕು ಎಂದು ಗೃಹ ಸಚಿವಾಲಯ ರಾಜ್ಯಗಳ ಪೊಲೀಸ್‌ ಮುಖ್ಯಸ್ಥರಿಗೆ ತಿಳಿಸಿದೆ.

ಕೇರಳ ಮೂಲದ ಪಾಪುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಸಂಘಟನೆಯ ಮೇಲೂ ಭದ್ರತಾ ಏಜೆನ್ಸಿಗಳು ವಿಶೇಷ ನಿಗಾ ವಹಿಸಿವೆ ಎನ್ನಲಾಗಿದೆ.