samachara
www.samachara.com
‘ಅಮಾನ್ಯೀಕರಣ’: ಅಮಿತ್ ಶಾ ನಿರ್ದೇಶಕರಾಗಿರುವ ಸಹಕಾರಿ ಬ್ಯಾಂಕ್‌ನಲ್ಲಿ ಅಕ್ರಮದ ವಾಸನೆ
ಸುದ್ದಿ ಸಾರ

‘ಅಮಾನ್ಯೀಕರಣ’: ಅಮಿತ್ ಶಾ ನಿರ್ದೇಶಕರಾಗಿರುವ ಸಹಕಾರಿ ಬ್ಯಾಂಕ್‌ನಲ್ಲಿ ಅಕ್ರಮದ ವಾಸನೆ

ಅಹಮದಾಬಾದ್‌ ಡಿಸ್ಟ್ರಿಕ್ಟ್ ಕೋ ಆಪರೇಟಿವ್‌ ಬ್ಯಾಂಕ್‌ ಅಮಾನ್ಯೀಕರಣ ನಡೆದು 5 ದಿನಗಳಲ್ಲಿ 745.59 ಕೋಟಿ ಮೌಲ್ಯದ ನೋಟುಗಳನ್ನು ಬದಲಾಯಿಸಿಕೊಟ್ಟಿದೆ. ಅಂದಹಾಗೆ ಈ ಬ್ಯಾಂಕ್‌ನ ನಿರ್ದೇಶಕರಲ್ಲಿ ಒಬ್ಬರು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ.

samachara

samachara

ಭಾರತೀಯ ಜನತಾ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ನಿರ್ದೇಶಕರಾಗಿರುವ ಜಿಲ್ಲಾ ಸಹಕಾರ ಬ್ಯಾಂಕ್‌, ಅನಾಣ್ಯೀಕರಣ ಸಂಧರ್ಭದಲ್ಲಿ ಅತಿ ಹೆಚ್ಚು 500 ಮತ್ತು 1,000 ರೂಪಾಯಿಗಳ ನೋಟಗಳನ್ನು ಬದಲಾಯಿಸಿಕೊಟ್ಟ ಜಿಲ್ಲಾ ಸಹಕಾರ್‌ ಬ್ಯಾಂಕ್‌ ಆಗಿದೆ. ಮುಂಬೈನ ಸಾಮಾಜಿಕ ಹೋರಾಟಗಾರರೊಬ್ಬರು ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಈ ಮಾಹಿತಿ ಅಮಾನ್ಯೀಕರಣ ಸಮಯದಲ್ಲಿ ಭ್ರಷ್ಟಾಚಾರ ದೊಡ್ಡ ಮಟ್ಟದಲ್ಲಿ ನಡೆದಿದೆ ಎಂಬ ಆರೋಪಕ್ಕೆ ಹೊಸ ತಿರುವು ನೀಡಿದೆ. 

ಅಮಿತ್‌ ಶಾ ನಿರ್ದೇಶಕರಾಗಿರುವ ಅಹಮದಾಬಾದ್‌ ಡಿಸ್ಟ್ರಿಕ್ಟ್ ಕೋ ಆಪರೇಟಿವ್‌ ಬ್ಯಾಂಕ್‌ ದೊಡ್ಡ ಮುಖಬೆಲೆಯ ನೋಟುಗಳು ಮಾನ್ಯತೆ ಕಳೆದುಕೊಂಡು 5 ದಿನಗಳಲ್ಲಿ ಬರೋಬ್ಬರಿ 745.59 ಕೋಟಿ ರೂಪಾಯಿ ಮೌಲ್ಯದ ನೋಟುಗಳನ್ನು ಬದಲಾಯಿಸಿಕೊಟ್ಟಿದೆ.

2016ರ ನವೆಂಬರ್‌ 9ರಂದು ಪ್ರಧಾನಿ ಮೋದಿ ಅನಾಣ್ಯೀಕರಣದ ಘೋಷಣೆ ಮಾಡಿದ್ದರು. ಈ ಸಮಯದಲ್ಲಿ ಜಿಲ್ಲಾ ಸಹಕಾರ ಬ್ಯಾಂಕ್‌ಗಳಲ್ಲಿ ಕಪ್ಪು ಹಣವನ್ನು ಬದಲಾವಣೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ನ. 15ರ ವೇಳೆಗೆ ಹಳೆಯ ನೋಟುಗಳ ಬದಲಿಗೆ ಹೊಸ ನೋಟುಗಳನ್ನು ನೀಡುವ ಹಕ್ಕನ್ನು ಸಹಕಾರಿ ಬ್ಯಾಂಕ್‌ಗಳಿಂದ ಹಿಂತೆಗೆದುಕೊಳ್ಳಲಾಗಿತ್ತು. ಆದರೆ ಅಷ್ಟರೊಳಗಾಗಿ ಮೇಲಿನ ಬ್ಯಾಂಕ್‌ ಸುಮಾರು 747 ಕೋಟಿ ರೂಪಾಯಿ ವ್ಯವಹಾರ ಮಾಡಿ ಆಗಿತ್ತು.

ಅಹಮದಾಬಾದ್‌ ಡಿಸ್ಟ್ರಿಕ್ಟ್ ಕೋ ಆಪರೇಟಿವ್‌ ಬ್ಯಾಂಕ್‌ನ (ಎಡಿಸಿಬಿ) ವೆಬ್‌ಸೈಟ್‌ ನೀಡುವ ಮಾಹಿತಿ ಪ್ರಕಾರ ಅಮಿತ್‌ ಶಾ ಹಲವಾರು ವರ್ಷಗಳಿಂದ ಬ್ಯಾಂಕ್‌ನ ನಿರ್ದೇಶಕರಾಗಿದ್ದಾರೆ. 2000ದಲ್ಲಿ ಬ್ಯಾಂಕ್‌ನ ಅಧ್ಯಕ್ಷ ಕೂಡ ಆಗಿದ್ದರು. 2017ರ ಮಾರ್ಚ್‌ 31ರ ವೇಳೆಗೆ ಈ ಬ್ಯಾಂಕ್‌ ಒಟ್ಟು 5,050 ರೂಪಾಯಿಗಳ ಠೇವಣಿಯನ್ನು ಪಡೆದುಕೊಂಡಿತ್ತು. 2016-17ನೇ ಸಾಲಿನಲ್ಲಿ 14.31 ಕೋಟಿ ನಿವ್ವಳ ಲಾಭ ಪಡೆದಿತ್ತು.

ಎಡಿಸಿ ಬ್ಯಾಂಕ್‌ನ ನಿರ್ದೇಶಕರ ಪಟ್ಟಿಯಲ್ಲಿ ಅಮಿತ್ ಶಾ. 
ಎಡಿಸಿ ಬ್ಯಾಂಕ್‌ನ ನಿರ್ದೇಶಕರ ಪಟ್ಟಿಯಲ್ಲಿ ಅಮಿತ್ ಶಾ. 

ಜಿಲ್ಲಾ ಸಹಕಾರಿ ಬ್ಯಾಂಕ್‌ಗಳ ಸಾಲಿನಲ್ಲಿ ಎಡಿಸಿಬಿ ಬಿಟ್ಟರೆ ಹೆಚ್ಚಿನ ನೋಟುಗಳನ್ನು ಬದಲಾಯಿಸಿ ಕೊಟ್ಟಿರುವುದು ರಾಜ್‌ಕೋಟ್‌ ಜಿಲ್ಲಾ ಸಹಕಾರ ಬ್ಯಾಂಕ್‌. ಗುಜರಾತ್‌ ಮುಖ್ಯಮಂತ್ರಿ ವಿಜಯ್‌ ರೂಪಾನಿ ಸಚಿವ ಸಂಪುಟದ ಸದಸ್ಯ ಜಯೇಶ್‌ಬಾಯ್ ವಿತ್ತಲಬಾಯ್‌ ರಾದಾಡಿಯಾ ಅದ್ಯಕ್ಷತೆಯ ಈ ಬ್ಯಾಂಕ್‌ ಒಟ್ಟು 693.19 ಕೋಟಿ ಮೌಲ್ಯದ ಹಳೆ ನೋಟುಗಳನ್ನು ಪಡೆದಿತ್ತು.

ಅಹಮದಾಬಾದ್‌ ಮತ್ತು ರಾಜ್‌ಕೋಟ್‌ ಜಿಲ್ಲಾ ಸಹಕಾರಿ ಬ್ಯಾಂಕ್‌ಗಳು ಪಡೆದಿರುವ ಹಳೆ ನೋಟುಗಳ ಮೊತ್ತ ಗುಜರಾತ್‌ ರಾಜ್ಯ ಸಹಕಾರ ಬ್ಯಾಂಕ್‌ ಪಡೆದಿರುವ ಮೊತ್ತಕ್ಕಿಂತಲೂ ಹೆಚ್ಚು. ಗುಜರಾತ್‌ ರಾಜ್ಯ ಸಹಕಾರಿ ಬ್ಯಾಂಕ್‌ಗೆ ಅನಾಣ್ಯೀಕರಣದ ಸಂದರ್ಭದಲ್ಲಿ 1.11 ಕೋಟಿ ಮೊತ್ತದ ಹಳೆ ನೋಟುಗಳಷ್ಟೇ ಬಂದಿದ್ದವು.

ಆರ್‌ಟಿಐ ಮೂಲಕ ಈ ಮಾಹಿತಿಗಳನ್ನು ಹೊರತಂದಿರುವ ಹೋರಾಟಗಾರ ಮನೋರಂಜನ್‌ ಎಸ್‌ ರಾಯ್‌, ಅನಾಣ್ಯೀಕರಣದ ವೇಳೆ ರಾಜ್ಯ ಮತ್ತು ಜಿಲ್ಲಾ ಸಹಕಾರಿ ಬ್ಯಾಂಕ್‌ಗಳು ಪಡೆದಿರುವ ಹಳೆ ನೋಟುಗಳ ಮೊತ್ತ ಜನರಿಗೆ ತಿಳಿದಿದ್ದು ಇದೇ ಮೊದಲ ಬಾರಿ ಎಂದಿದ್ದಾರೆ. ನಬಾರ್ಡ್‌ನ ಚೀಫ್‌ ಜನರಲ್‌ ಮ್ಯಾನೇಜರ್‌ ಎಸ್. ಸರವಣವೇಲ್‌ ಆರ್‌ಟಿಐ ಅಡಿಯಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ.

ಆರ್‌ಟಿಐ ಅಡಿಯಲ್ಲಿ ದೊರೆತಿರುವ ಮಾಹಿತಿ ಪ್ರಕಾರ 7 ಸಾರ್ವಜನಿಕ ವಲಯದ ಬ್ಯಾಂಕ್‌ಗಳು, 32 ರಾಜ್ಯ ಸಹಕಾರಿ ಬ್ಯಾಂಕ್‌ಗಳು, 370 ಜಿಲ್ಲಾ ಸಹಕಾರಿ ಬ್ಯಾಂಕ್‌ಗಳು ಹಾಗೂ 39 ಅಂಚೆ ಕಚೇರಿಗಳು 7.91 ಲಕ್ಷ ಕೋಟಿ ಮೌಲ್ಯದ ಹಳೆಯ ನೋಟುಗಳನ್ನು ಪಡೆದಿದ್ದು, ಈ ಮೊತ್ತ ಆರ್‌ಬಿಐಗೆ ತಲುಪಿದ ಅಮಾನ್ಯಗೊಂಡ ನೋಟುಗಳ ಮೊತ್ತದ ಶೇ.52ರಷ್ಟಾಗಿದೆ. ಆರ್‌ಬಿಐ ಒಟ್ಟು 15.28 ಕೋಟಿ ಮೌಲ್ಯದ ಹಳೆ ನೋಟುಗಳನ್ನು ಹಿಂಪಡೆದಿತ್ತು.

ಈ 7.91 ಲಕ್ಷ ಕೋಟಿಗಳಲ್ಲಿ 7 ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಂದ 7.57 ಕೋಟಿ ಮೌಲ್ಯದ ನೋಟುಗಳು ಆರ್‌ಬಿಐಗೆ ದೊರೆತಿವೆ. 32 ರಾಜ್ಯ ಸಹಕಾರಿ ಬ್ಯಾಂಕ್‌ಗಳಿಂದ 6,407 ಕೋಟಿ ಮತ್ತು 370 ಜಿಲ್ಲಾ ಸಹಕಾರಿ ಬ್ಯಾಂಕ್‌ಗಳಿಂದ 22,271 ಕೋಟಿ ಮೌಲ್ಯದ ಹಳೆಯ ನೋಟುಗಳು ಆರ್‌ಬಿಐಗೆ ತಲುಪಿವೆ. 39 ಅಂಚೆ ಕಚೇರಿಗಳಿಂದ 4,408 ಕೋಟಿ ರೂಪಾಯಿ ಮೌಲ್ಯದ ಹಳೆಯ ನೋಟುಗಳು ಆರ್‌ಬಿಐ ಕೈಸೇರಿವೆ.

ಅನಾಣ್ಯೀಕರಣದ 15 ತಿಂಗಳ ನಂತರ ಸರಕಾರ ಒಟ್ಟು ಅಮಾನ್ಯಗೊಂಡ ನೋಟುಗಳ ಒಟ್ಟು ಮೊತ್ತ 15.44 ಕೋಟಿ ರೂಪಾಯಿಗಳು ಎಂದು ಘೋಷಿಸಿತ್ತು. ಈ ಮೊತ್ತದಲ್ಲಿ 15.28 ಲಕ್ಷ ಕೋಟಿ ರೂಪಾಯಿಗಳು ಅಂದರೆ ಶೇ.99ರಷ್ಟು ಮೊತ್ತದ ಹಳೆಯ ನೋಟುಗಳ ಆರ್‌ಬಿಐ ಕೈಸೇರಿದ್ದವು.

ದೇಶದಲ್ಲಿನ 370 ಸಹಕಾರಿ ಬ್ಯಾಂಕ್‌ಗಳು ಬದಲಾಯಿಸಿಕೊಟ್ಟಿರುವ ಹಳೆ ನೋಟುಗಳ ಮೊತ್ತ 22,271 ಕೋಟಿ. ಅದರಲ್ಲಿ ಅಮಿತ್‌ ಶಾ ಮತ್ತು ಜಯೇಶ್‌ಬಾಯ್ ವಿತ್ತಲಬಾಯ್‌ರ ಬ್ಯಾಂಕ್‌ 2 ಬ್ಯಾಂಕ್‌ಗಳು 5 ದಿನದಲ್ಲಿ 1,439 ಕೋಟಿ ಹಣವನ್ನು ಪಡೆದಿದ್ದವು. ಈ ಅಂಶ ಸಹಜವಾಗಿಯೇ ಅಕ್ರಮ ನಡೆದಿರುವ ಸಾಧ್ಯತೆಯನ್ನು ಮುಂದಿಡುತ್ತಿವೆ.

ಮೇಲೆ ತಿಳಿಸಿರುವ ಬ್ಯಾಂಕ್‌ಗಳನ್ನು ಬಿಟ್ಟು ದೇಶದಲ್ಲಿ ಇನ್ನೂ 14 ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್‌ಗಳಿವೆ. ಜತೆಗೆ ಗ್ರಾಮೀಣ, ನಗರ ಬ್ಯಾಂಕ್‌ಗಳು, ಐಸಿಐಸಿಐ, ಎಚ್‌ಡಿಎಫ್‌ಸಿ ತರಹದ ಹಲವಾರು ಖಾಸಗಿ ಬ್ಯಾಂಕ್‌ಗಳು, ಸ್ಥಳೀಯ ಸಹಕಾರಿ ಬ್ಯಾಂಕ್‌ಗಳು, ಜನಕಲ್ಯಾಣ್‌ ಬ್ಯಾಂಕ್‌ಗಳು, ಪರವಾನಗಿ ಹೊಂದಿರುವ ಖಾಸಗಿ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ಎಲ್ಲಾ ಬ್ಯಾಂಕ್‌ಗಳು ಸೇರಿ ಲಕ್ಷಾಂತರ ಶಾಖೆಗಳು ಭಾರತದಲ್ಲಿವೆ. ಇಷ್ಟೆಲ್ಲಾ ಬ್ಯಾಂಕ್‌ಗಳ ನಡುವೆ ಅಮಿತ್‌ ಶಾ ಮತ್ತು ಜಯೇಶ್‌ಬಾಯ್ ವಿತ್ತಲಬಾಯ್‌ ರಾದಾಡಿಯಾ ಪದಾಧಿಕಾರಿಗಳಾಗಿರುವ ಬ್ಯಾಂಕ್‌ಗಳಿಗೆ ಮಾತ್ರ ಕೇವಲ 5 ದಿನಗಳಲ್ಲಿ ಇಷ್ಟು ಮೊತ್ತದ ಹಣ ಜಮಾವಣೆಯಾಯಿತು ಎಂಬ ಪ್ರಶ್ನೆ ಸಹಜವಾಗಿದೆ.