‘ಗೋ ಇಲಾಖೆ’ ತೆರೆಯುವಂತೆ ಮನವಿ ಸಲ್ಲಿಸಿದ ಬಿಜೆಪಿ ಸಂಸದ
ಸುದ್ದಿ ಸಾರ

‘ಗೋ ಇಲಾಖೆ’ ತೆರೆಯುವಂತೆ ಮನವಿ ಸಲ್ಲಿಸಿದ ಬಿಜೆಪಿ ಸಂಸದ

ಈಗಾಗಲೇ ಮಧ್ಯಪ್ರದೇಶದಲ್ಲಿ ಗೋ ಸಂವರ್ಧನ್‌ ಬೋರ್ಡ್ ಕಾರ್ಯ ನಿರ್ವಹಿಸುತ್ತಿದೆ. ಅದಾಗ್ಯೂ ಸಂಸದ ಸ್ವಾಮಿ ಅಖಿಲೇಶ್ವರಾನಂದ ಗಿರಿ ಮಧ್ಯ ಪ್ರದೇಶದಲ್ಲಿ ಗೋ ಇಲಾಖೆ ತೆರೆಯುವಂತೆ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಣ್‌ಗೆ ಮನವಿ ಸಲ್ಲಿಸಿದ್ದಾರೆ.

ಇತ್ತೀಚಿಗಷ್ಟೇ ಸಚಿವ ದರ್ಜೆಗೇರಿದ ಮಧ್ಯ ಪ್ರದೇಶದ ಸಂಸದ ಸ್ವಾಮಿ ಅಖಿಲೇಶ್ವರಾನಂದ ಗಿರಿ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಣ್‌ರಿಗೆ ಗೋ ಇಲಾಖೆ ತೆರೆಯುವಂತೆ ಮನವಿ ಮಾಡಿದ್ದಾರೆ. ಗೋ ಸಚಿವಾಲಯವನ್ನು ತೆರೆಯುವುದು ಉತ್ತಮವಾದ ಕಾರ್ಯ ಎಂದು ಸ್ವಾಮಿ ಅಖಿಲೇಶ್ವರಾನಂದ ಗಿರಿ ಹೇಳಿದ್ದಾರೆ.

ಮಧ್ಯ ಪ್ರದೇಶದ ಗೋ ಸಂವರ್ಧನ್‌ ಬೋರ್ಡ್‌ನ ಅಧ್ಯಕ್ಷರಾಗಿರುವ ಸ್ವಾಮಿ ಅಖಿಲೇಶ್ವರಾನಂದ ಗಿರಿ ಬುಧವಾರ ಸುದ್ದಿ ಗೋಷ್ಠಿ ನಡೆಸಿದ್ದು, “ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಣ್‌ ಗೋ ಇಲಾಖೆಯನ್ನು ಸ್ಥಾಪಿಸಿದರೆ ಮುಂದಿನ ಜನಾಂಗಗಳಿಗೆ ಮಾದರಿಯಾಗುತ್ತಾರೆ,” ಎಂದಿದ್ದಾರೆ. ಗೋ ಇಲಾಖೆಯು ‘ಸುವರ್ಣ ಮಧ್ಯ ಪ್ರದೇಶ’ವನ್ನು ಸೃಷ್ಟಿಸಲು ಸಹಕಾರಿಯಾಗಲಿದೆ ಎಂದಿರುವ ಅಖಿಲೇಶ್ವರಾನಂದ ಗಿರಿ, ರಾಜ್ಯದಲ್ಲಿರುವ ಗೋಶಾಲೆಗಳು ಗೋ ಇಲಾಖೆಯ ದಿನನಿತ್ಯದ ಕಾರ್ಯಗಳ ಜತೆಯಾಗಿ ನಿಲ್ಲಬೇಕು ಎಂದಿದ್ದಾರೆ.

ಕಳೆದ 2 ವರ್ಷಗಳಿಂದ ಮಧ್ಯ ಪ್ರದೇಶದ ಗೋ ಸಂವರ್ಧನ್‌ ಬೋರ್ಡ್‌ನ ಅಧ್ಯಕ್ಷರಾಗಿರುವ ಸ್ವಾಮಿ ಅಖಿಲೇಶ್ವರಾನಂದ ಗಿರಿ, ಗೋವುಗಳು ಪಶುಸಂಗೋಪನಾ ಇಲಾಖೆಯಿಂದ ಗೋ ಇಲಾಖೆಯ ಅಡಿಯಲ್ಲಿ ಬರಬೇಕು ಎಂದ್ದಿದ್ದು, ರಾಜ್ಯದೊಳಗಿನ 96,000 ಚದರ ಕಿಲೋಮೀಟರ್‌ ಅರಣ್ಯವನ್ನು ಹಸುಗಳಿಗಾಗಿ ಮೀಸಲಿರಿಸಬೇಕು ಮನವಿ ಸಲ್ಲಿಸಿದ್ದಾರೆ.

ಈಗಾಗಲೇ ಮಧ್ಯ ಪ್ರದೇಶದಲ್ಲಿ ಹಸುಗಳ ಸಂರಕ್ಷಣೆಗಾಗಿ ಗೋ ಸಂವರ್ಧನ್‌ ಬೋರ್ಡ್‌ ಇದೆ. 2016ರಲ್ಲಿ ಸ್ಥಾಪನೆಯಾದ ಬೋರ್ಡ್‌ಗೆ ಸ್ವಾಮಿ ಅಖಿಲೇಶ್ವರಾನಂದ ಗಿರಿಯವರೇ ಅಧ್ಯಕ್ಷರಾಗಿದ್ದಾರೆ. ಪಶುಸಂಗೋಪನಾ ಇಲಾಖೆ, ಅರಣ್ಯ ಇಲಾಖೆ, ಗ್ರಾಮೀಣ ಅಭಿವೃದ್ಧಿ ಇಲಾಖೆ, ನಾಗರಿಕ ಆಡಳಿತ, ಕೃಷಿ ಇಲಾಖೆ, ಗೃಹ ಇಲಾಖೆ, ಇಂಧನ ಅಭಿವೃದ್ಧಿ ನಿಗಮ ಹಾಗೂ ಕೃಷಿ ಉತ್ಪನ್ನ ಮಾರಾಟ ಒಕ್ಕೂಟಗಳಲ್ಲವನ್ನೂ ಸೇರಿಸಿ ಈ ಬೋರ್ಡ್ಅನ್ನು ಸ್ಥಾಪಿಸಲಾಗಿದೆ.

ಈ ಬೋರ್ಡ್ ರಾಜ್ಯದಲ್ಲಿ 664 ಗೋಶಾಲೆಗಳನ್ನು ನಡೆಸುತ್ತಿದೆ. ಈ ಗೋಶಾಲೆಗಳಲ್ಲಿ 1.41 ಲಕ್ಷ ಹಸುಗಳನ್ನು ಸಾಕಲಾಗುತ್ತಿದೆ. ಆಗ್ರಾ ಮಾಲ್ವಾ ಜಿಲ್ಲೆಯಲ್ಲಿ 2,000 ಎಕರೆ ವಿಸ್ತೀರ್ಣದಲ್ಲಿ ಕಾಮಧೇನು ಗೋಅಭಯಾರಣ್ಯ ನಿರ್ಮಿಸಲಾಗುತ್ತಿದೆ. ಈ ಪ್ರದೇಶದಲ್ಲಿ 24 ಹಸುಗಳನ್ನು ಸಾಕುವ ಶೆಡ್‌ಗಳು, 85 ಕ್ಯೂಬಿಕ್ ಮೀಟರ್‌ ಅಳತೆಯ 4 ಗೋಬರ್‌ ಗ್ಯಾಸ್‌ ಕೇಂದ್ರಗಳು, 3 ದೊಡ್ಡ ಕಟ್ಟಡಗಳ ಜತೆಗೆ ಸಂಶೋಧನೆಗಾಗಿ ಪ್ರತ್ಯೇಕ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ.

ಇದರ ಜತೆಗೆ ಗೋ ಸಂವರ್ಧನ್‌ ಬೋರ್ಡ್ ಅಡಿಯಲ್ಲಿ 20ರಿಂದ 100 ಎಕರೆ ವಿಸ್ತೀರ್ಣದಲ್ಲಿ ಗೋವಂಶ ವನ್ಯ ವಿಹಾರವನ್ನು ನಿರ್ಮಿಸುವ ಯೋಜನೆಗಳಿವೆ. ಜತೆಗೆ ರಾತ್ರಿ ವೇಳೆ ಹಸುಗಳು ತಂಗಲು ಗೋತಾಣಗಳ ನಿರ್ಮಾಣವಾಗುತ್ತಿದೆ. ಹಸುಗಳ ಮೇವಿಗೆಂದು ಬಿಟ್ಟಿರುವ ಜಾಗಗಳಲ್ಲಿ ಸಂರಕ್ಷಿಸಲು ಗೋಚಾರ್‌ ಭೂಮಿ ವಿಕಾಸ್‌ ಮಿಶನ್ಅನ್ನು ತೆರೆಯಲಾಗಿದೆ.

ಪ್ರತಿವರ್ಷ ಗೋಶಾಲೆಗಳಿಗೆ ಸಂಬಂಧಿಸಿದಂತೆ 2 ದಿನಗಳ ಕಾರ್ಯಾಗಾರ ನಡೆಸಲಾಗುತ್ತಿದೆ. ಪಂಚಗವ್ಯ, ಸಾವಯವ ಗೊಬ್ಬರ, ಸಾವಯವ ಕೀಟ ನಾಶಕ ಇತ್ಯಾದಿ ಉತ್ಪಾದನೆಯನ್ನು ಪ್ರಾರಂಭಿಸಲು ಇಚ್ಚಿಸುವ ವಿದ್ಯಾರ್ಥಿಗಳಿಗೆ ಪಶು ವೈದ್ಯಕೀಯ ವಿಶ್ವ ವಿದ್ಯಾಲಯದಿಂದ ವಿಶೇಷ ವಿದ್ಯಾರ್ಥಿ ವೇತನ ಹಾಗೂ ಉದ್ದಿಮೆ ತೆರೆಯಲು ಹಣಕಾಸಿನ ನೆರವು ನೀಡಲಾಗುತ್ತಿದೆ.

ಗೋ ಸಂವರ್ಧನ್‌ ಬೋರ್ಡ್‌ ಅಡಿಯಲ್ಲಿ ಇಷ್ಟೆಲ್ಲಾ ಕೆಸಲಗಳು ನಡೆಯುತ್ತಿದ್ದರೂ ಕೂಡ, ಸ್ವಾಮಿ ಅಖಿಲೇಶ್ವರಾನಂದ ಗಿರಿ ಹಸುಗಳನ್ನು ಪಶುಸಂಗೋಪನಾ ಇಲಾಖೆಯಿಂದ ಹೊರತಂದು ಪ್ರತ್ಯೇಕ ಗೋ ಇಲಾಖೆ ಸ್ಥಾಪಿಸಬೇಕು ಎಂದು ಮನವಿ ಮಾಡಿದ್ದಾರೆ.

ಎಎನ್‌ಐ ಸುದ್ದಿ ಸಂಸ್ಥೆಯೊಟ್ಟಿಗೆ ಮಾತನಾಡಿರುವ ಅಖಿಲೇಶ್ವರಾನಂದ ಗಿರಿ, “ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಣ್‌ ಜತೆ ಈಗಾಗಲೇ ಸಂವಹನ ನಡೆಸಲಾಗಿದೆ. ಗೋ ಇಲಾಖೆ ತೆರೆಯಲು ಹಣದ ಕೊರತೆಯಿಲ್ಲ. ಈಗ ಗೋ ಇಲಾಖೆ ತೆರೆಯಲು ಬೇಕಿರುವುದು ಇಚ್ಛಾಶಕ್ತಿ ಮತ್ತು ಬದ್ಧತೆ ಅಷ್ಟೇ,"ಎಂದು ಅಖಿಲೇಶ್ವರಾನಂದ ಗಿರಿ ತಿಳಿಸಿದ್ದಾರೆ.

ಮಧ್ಯ ಪ್ರದೇಶದ ಬಿಜೆಪಿ ಸರಕಾರಕ್ಕೆ ಗೋ ಸಂರಕ್ಷಣೆ ಎನ್ನುವುದು ಪ್ರಾಶಸ್ತ್ಯದ ವಿಚಾರವಾಗಿ ತೋರಿದಂತಿದೆ. ಮಧ್ಯಪ್ರದೇಶದ ಹಲವಾರು ಬಿಜೆಪಿ ನಾಯಕರು ಹಸುಗಳ ರಕ್ಷಣೆಯನ್ನು ಆದ್ಯ ಕರ್ತವ್ಯವನ್ನಾಗಿ ತಿಳಿದಂತಿದೆ.

ಕಳೆದ ವರ್ಷ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌‌ ಶಾ ಮಾತನಾಡಿ ರಾಜ್ಯದಲ್ಲಿ ಗೋ ಇಲಾಖೆ ತೆರೆಯುವ ಉದ್ದೇಶವಿದೆ ಎಂದಿದ್ದರು. ಇದಕ್ಕೂ ಮುಂಚೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌, ಭಾರತದ ಸ್ಯತಂತ್ರ ಸಂಗ್ರಾಮದ ಹಿಂದಿರುವ ಸ್ಫೂರ್ತಿ ಗೋ ಸಂರಕ್ಷಣೆ ಎಂದಿದ್ದರು. ರಾಜಸ್ಥಾನದ ಬಿಜೆಪಿ ಶಾಸಕ ಗ್ಯಾನ್‌ ದೇವ್‌ ಅಹುಜಾ, ಯಾರಾದರೂ ಗೋವುಗಳ ಕಳ್ಳಸಾಗಣೆ ಅಥವಾ ಹತ್ಯೆಯಲ್ಲಿ ತೊಡಗಿದರೆ ಅವರನ್ನು ಕೊಲ್ಲಲಾಗುವುದು ಎಂದು ಹೇಳೀಕೆ ನೀಡಿದ್ದರು. ಈಗ ಸ್ವಾಮಿ ಅಖಿಲೇಶ್ವರಾನಂದ ಗಿರಿ ಗೋ ಇಲಾಖೆಯತ್ತ ಚಿತ್ತ ಹರಿಸಿ, ಸುದ್ದಿ ಕೇಂದ್ರಕ್ಕೆ ಬಂದಿದ್ದಾರೆ.