samachara
www.samachara.com
ವಿಶ್ವಸಂಸ್ಥೆ ಮಾನವ ಹಕ್ಕುಗಳ ಆಯೋಗದಿಂದ ಹೊರಬಂದ ‘ಹಕ್ಕುಗಳ ಹಂತಕ ಅಮೆರಿಕ’
ಸುದ್ದಿ ಸಾರ

ವಿಶ್ವಸಂಸ್ಥೆ ಮಾನವ ಹಕ್ಕುಗಳ ಆಯೋಗದಿಂದ ಹೊರಬಂದ ‘ಹಕ್ಕುಗಳ ಹಂತಕ ಅಮೆರಿಕ’

ಇತಿಹಾಸದುದ್ದಕ್ಕೂ ತನ್ನ ಸ್ವಾರ್ಥಕ್ಕಾಗಿ ಹಲವಾರು ದೇಶಗಳ ನಾಗರಿಕರ ಮಾನವ ಹಕ್ಕುಗಳನ್ನು ಅಮೆರಿಕ ದಮನ ಮಾಡುತ್ತಲೇ ಬಂದಿದೆ. ವಲಸಿಗರಿಂದ ಅವರ ಮಕ್ಕಳನ್ನು ದೂರ ಮಾಡಿದ ಅಮೆರಿಕದ ಕ್ರೂರ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.

samachara

samachara

ಇತಿಹಾಸದುದ್ದಕ್ಕೂ ತನ್ನ ಸ್ವಾರ್ಥಕ್ಕಾಗಿ ಹಲವಾರು ದೇಶಗಳ ನಾಗರಿಕರ ಮಾನವ ಹಕ್ಕುಗಳನ್ನು ದಮನ ಮಾಡುತ್ತಲೇ ಬಂದಿದೆ ಅಮೆರಿಕ. ಯಾವಾಗ ವಲಸಿಗರಿಂದ ಅವರ ಮಕ್ಕಳನ್ನು ದೂರ ಮಾಡಿದ ಕ್ರೂರ ಕ್ರಮಕ್ಕೆ ಅಮೆರಿಕಾಗೆ ವಿರೋಧ ವ್ಯಕ್ತವಾಯಿತೋ, ಆಗ ಅಮೆರಿಕಕ್ಕೆ ಸಹಿಸದಾಯಿತು.

ಈಗಷ್ಟೇ ಅಮೆರಿಕ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗದಿಂದ ಹೊರಬಂದಿದೆ. ಈ ಕುರಿತು ವಿಶ್ವಸಂಸ್ಥೆಯಲ್ಲಿ ಅಮೆರಿಕದ ರಾಯಭಾರಿಯಾಗಿರುವ ನಿಕ್ಕಿ ಹ್ಯಾಲೆ, ‘ ಈ ಆಯೋಗ ಪಕ್ಷಪಾತದಿಂದ ಕೂಡಿದ ಒಂದು ಗುಂಪು’ ಎಂದು ಟೀಕಿಸಿ, ಮಾನವ ಹಕ್ಕುಗಳ ದಮನ ಮಾಡುವವರನ್ನು ರಕ್ಷಿಸುವ ಈ ಆಯೋಗದಿಂದ ಅಮೆರಿಕ ಹೊರನಡೆದಿದೆ ಎಂದು ಘೋಷಿಸಿದ್ದಾರೆ.

ಹಾಗೆ ನೋಡಿದರೆ, ಯುಎನ್‌ಎಚ್‌ಆರ್‌ಸಿ ಅಂತಹ ಪರಿಣಾಮಕಾರಿ ಸಂಸ್ಥೆ ಅಲ್ಲವಾದರೂ ಅದು ಮಾನವ ಹಕ್ಕುಗಳ ಪ್ರತಿಪಾದನೆಗೆ ಅಂತರಾಷ್ಟ್ರೀಯವಾಗಿ ಲಭ್ಯವಿರುವ ವೇದಿಕೆ ಮತ್ತು ಧ್ವನಿ ಎಂಬುದಂತೂ ನಿಜ. ಅದಕ್ಕೆ ಹಲವು ಸಲ ಹಿನ್ನಡೆ ಆಗಿದ್ದರೆ, ಅದು ಅಮೆರಿಕ ಮತ್ತು ಇಸ್ರೇಲ್‍ನಂತಹ ಹಲವು ಹಕ್ಕು ಹಂತಕ ದೇಶಗಳ ವಿರುದ್ಧ ಗಟ್ಟಿ ಧ್ವನಿ ಎತ್ತದಿರುವ ಕಾರಣಕ್ಕೆ.

ದಿಢೀರನೆ ಅಮೆರಿಕ ಹೊರಹೋಗಲು ಕಾರಣವೇನು?:

ಅಮೆರಿಕ ಈಗ ನಡೆಸುತ್ತಿರುವ ವಲಸಿಗ ಮಕ್ಕಳ ಹಕ್ಕು ಹರಣದ ವಿರುದ್ಧ ಸ್ವತಃ ವಿಶ್ವಸಂಸ್ಥೆ ಮತ್ತು ಯುಎನ್‌ಎಚ್‌ಆರ್‌ಸಿ ಜೋರು ಧ್ವನಿಯಲ್ಲಿ ಆಕ್ಷೇಪ ಎತ್ತಿ ಕಠಿಣ ಪದಗಳಲ್ಲಿ ಟೀಕಿಸಿದ್ದೇ ಅಮೆರಿಕ ಹೊರಹೋಗಲು ಕಾರಣವಾಗಿದೆ. ಜಗತ್ತಿನ ಹತ್ತು ಹಲವು ರಾಷ್ಟ್ರಗಳೂ ಅಮೆರಿಕದ ಕ್ರಮವನ್ನು ಖಂಡಿಸಿವೆ.

ಸೋಮವಾರ ವಿಶ್ವಸಂಸ್ಥೆಯ ಸೆಕ್ರೆಟರಿ ಜನರಲ್ ಆಚಿಟಿನಿಯೋ ಗುಟೆರಸ್ ಪ್ರತಿಕ್ರಿಯಿಸಿ, “ವಲಸಿಗರು ಮತ್ತು ಯುದ್ಧ, ರಾಜಕೀಯ ನಿರಾಶ್ರಿತರನ್ನು ಗೌರವ, ಘನತೆಯಿಂದ ಕಾಣುವುದು ಎಲ್ಲರ ಕರ್ತವ್ಯ. ವಲಸಿಗರ ಮಕ್ಕಳನ್ನು ಪೋಷಕರಿಂದ ದೂರ ಮಾಡುವುದು ನಿರ್ದಯಿ ಕ್ರಮ. ಕುಟುಂಬದ ಒಗ್ಗಟ್ಟನ್ನು ಸಂರಕ್ಷಿಸುವುದು ಎಲ್ಲರ ಹೊಣೆ,” ಎಂದಿದ್ದರು. ಎಂದಿನಂತೆ ಅವರು ಅಮೆರಿಕದ ಹೆಸರು ಪ್ರಸ್ತಾಪಿಸದೇ ಇದ್ದರೂ, ಸಂದೇಶ ಸ್ಪಷ್ಟವಾಗಿಯೇ ಇತ್ತು.

ಸೋಮವಾರ ಯುಎನ್‌ಎಚ್‌ಆರ್‌ಸಿ ಮುಖ್ಯಸ್ಥ ಜೇಡ್ ರಫಾದ್ ಅಲ್ ಹುಸೇನ್, ವಲಸಿಗ ಮಕ್ಕಳ ಹಕ್ಕುಗಳ ದಮನದ ವಿಷಯ ಎತ್ತಿ ಮಾತನಾಡುತ್ತ, “ಆತ್ಮಸಾಕ್ಷಿಯಿರುವ ಯಾರೂ ಇದನ್ನು ಒಪ್ಪಲಾಗದು. ಇದೊಂದು ಕ್ರೂರ ನಿರ್ಧಾರ. ಅಮೆರಿಕ ಕೂಡಲೇ ಈ ನೀತಿಯನ್ನು ಹಿಂದಕ್ಕೆ ಪಡೆದು, ಮಕ್ಕಳ ಹಕ್ಕುಗಳ ಅಧಿವೇಶನ ನಡೆಸಬೇಕು,” ಎಂದು ಹರಿಹಾಯ್ದಿದ್ದರು.

ಇಂತಹ ಕಟುಟೀಕೆಗಳನ್ನು ಅಮೆರಿಕ ಎಂದೂ ಸಹಿಸಿಲ್ಲ. ಇದರ ಬೆನ್ನಲ್ಲೇ ಅಮೆರಿಕದ ಮಕ್ಕಳ ವೈದ್ಯರ ಸಂಘವಂತೂ ಟ್ರಂಪ್‍ಗೆ ಮರ್ಮಾಘಾತ ನೀಡುವಂತಹ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ‘ಇದೊಂದು ಕ್ರೂರವಾದ, ಸರಕಾರಿ ಪ್ರಾಯೋಜಿತ ಮಕ್ಕಳ ಮೇಲಿನ ದೌರ್ಜನ್ಯ. ಹೀಗೇ ಮುಂದುವರೆದರೆ, ದುರಸ್ತಿ ಮಾಡಲಾಗದ ದೀರ್ಘಕಾಲೀನ ದುಷ್ಪರಿಣಾಮವನ್ನು ಬೀರಲಿದೆ,’ ಎಂದು ಮಕ್ಕಳ ವೈದ್ಯರ ಸಂಘ ಹೇಳಿದೆ.

ಇಂತಹ ಯಾವ ಎಚ್ಚರಿಕೆಯನ್ನು ಲೆಕ್ಕಿಸದ ಅಮೆರಿಕಾ ಯುಎನ್‌ಎಚ್‌ಆರ್‌ಸಿಯನ್ನೇ ಟೀಕಿಸಿ ಹೊರಬಂದಿದೆ. ಹೊರಬರುವ ವಿಷಯವನ್ನು ಬಹಿರಂಗ ಮಾಡಿದ ನಿಕ್ಕಿ ಹ್ಯಾಲೆ, ಹಕ್ಕುಗಳ ಆಯೋಗದ ಸಭೆಗಳಲ್ಲಿ, ಪ್ಯಾಲೆಸ್ಟೇಮಿಯನ್ನರ ಮೇಲೆ ದಬ್ಬಾಳಿಕೆ ನಡೆಸುವ ಇಸ್ರೇಲ್ ದೇಶವನ್ನು ಸಮರ್ಥಿಸಿಕೊಳ್ಳಲು ಹೆಣಗಾಡಿದ ಮಹಿಳೆ!

ಹಕ್ಕುಗಳ ಹಂತಕ ಅಮೆರಿಕ ವಲಸಿಗರ ಮಕ್ಕಳ ಮೇಲೆ ನಡೆಸಿರುವ ದೌರ್ಜನ್ಯವನ್ನು ವಿಶ್ವಸಂಸ್ಥೆ ಗಂಭೀರವಾಗಿ ಪರಿಗಣಿಸಬೇಕು. ವಿಶ್ವದ ಎಲ್ಲ ದೇಶಗಳು ಧ್ವನಿ ಎತ್ತಬೇಕು. ಅಂದಂತೆ ಟ್ವಿಟರ್‌ನಲ್ಲಿ ಸುಷ್ಮಾ ಸ್ವರಾಜ್ ಈ ಬಗ್ಗೆ ಏನೂ ಹೇಳಿದಂತಿಲ್ಲ, ಅವರ ಗುರು ಇಲ್ಲಿನ ದೌರ್ಜನ್ಯಗಳಿಗೆ ಸ್ಫೂರ್ತಿಯಾಗಿರುವಾಗ ಅವರೇನು ಟ್ವೀಟ್ ಮಾಡಲು ಸಾಧ್ಯ?

ಹಕ್ಕು ಆಯೋಗ ಮತ್ತು ಅಮೆರಿಕ:

2006ರಲ್ಲಿ ವಿಶ್ವಸಂಸ್ಥೆಯು ಮಕ್ಕಳ ಹಕ್ಕುಗಳ ಆಯೋಗ ಸ್ಥಾಪಿಸಿದಾಗ ಆಗಿನ ಅಧ್ಯಕ್ಷ ಜಾರ್ಜ್ ಬುಷ್ ನೇತೃತ್ವದ ಅಮೆರಿಕ ಆಡಳಿತ ಈ ಆಯೋಗವನ್ನು ಬಹಿಷ್ಕರಿಸಿತ್ತು. 2009ರಲ್ಲಿ ಬರಾಕ್ ಒಬಾಮಾ ಅಧ್ಯಕ್ಷರಾಗಿದ್ದದಾಗ ಸೇರ್ಪಡೆಗೊಂಡಿತು.

ಹಕ್ಕುಗಳ ಆಯೋಗ ಸ್ಥಾಪನೆ ಆದಾಗಿನಿಂದಲೂ ಅದರ ಜೊತೆ ಅಮೆರಿಕದ ಸಂಘರ್ಷ ಇದ್ದೇ ಇದೆ. ರಾಜಕೀಯ ಅಸ್ಥಿರತೆ ಇರುವ ದೇಶಗಳಲ್ಲಿ ನಾಗರಿಕ ಹಕ್ಕುಗಳ ರಕ್ಷಣೆಯ ನೆಪದಲ್ಲಿ ಕಾಲು ಇಡುತ್ತಿದ್ದ ಅಮೆರಿಕ ಸೈನ್ಯ ಅಲ್ಲಿ ಶಾಂತಿ ಸ್ಥಾಪನೆ ಹೆಸರಲ್ಲಿ ಬಾಂಬುಗಳ ಮಳೆ ಸುರಿಸಿ ಅಮಾಯಕರ ಜೀವ ಪಡೆಯುತ್ತ ಬಂದಿದೆ. ಈಗ ಸಿರಿಯಾ, ಅಂದು ಅಫ್ಘಾನಿಸ್ತಾನ್, ಇರಾಕ್- ಪಟ್ಟಿ ಹೀಗೇ ಸಾಗುತ್ತದೆ.