‘ಡಿಜಿಟಲ್‌ ಇಂಡಿಯಾ’ದಲ್ಲಿ ಕುಂಟುತ್ತಾ ಸಾಗುತ್ತಿದೆ ಅಂತರ್ಜಾಲ ಕ್ರಾಂತಿ 
ಸುದ್ದಿ ಸಾರ

‘ಡಿಜಿಟಲ್‌ ಇಂಡಿಯಾ’ದಲ್ಲಿ ಕುಂಟುತ್ತಾ ಸಾಗುತ್ತಿದೆ ಅಂತರ್ಜಾಲ ಕ್ರಾಂತಿ 

ಭಾರತದ ಶೇ. 78ರಷ್ಟು ಜನ ಸ್ಮಾರ್ಟ್‌ ಫೋನ್‌ಗಳನ್ನು ಬಳಸುತ್ತಿಲ್ಲ. ಶೇ.80ರಷ್ಟು ಜನ ಇನ್ನೂ ಸಾಮಾಜಿಕ ಜಾಲತಾಣಗಳಿಗೆ ಕಾಲಿಟ್ಟಿಲ್ಲ. 

ಪ್ರಧಾನಿ ನರೇಂದ್ರ ಮೋದಿ ಭಾರತವನ್ನು ‘ಡಿಜಿಟಲ್ ಇಂಡಿಯಾ’ ಆಗಿಸಲು ಹಲವಾರು ಪ್ರಯತ್ನಗಳನ್ನು ಕೈಗೊಂಡಿದ್ದಾರೆ. ಆದರೆ 2017ರಲ್ಲಿ ಭಾರತದಲ್ಲಿ ಇಂಟರ್‌ನೆಟ್‌ ಬಳಸುತ್ತಿದ್ದ ವಯಸ್ಕರ ಸಂಖ್ಯೆ ಕೇವಲ ಶೇ. 25ರಷ್ಟು ಮಾತ್ರ. ಪೇವ್‌ ಅಧ್ಯಯನ ಕೇಂದ್ರ ನಡೆಸಿರುವ ವಿಶ್ವಮಟ್ಟದ ಅಧ್ಯಯನದಲ್ಲಿ ಈ ಮಾಹಿತಿ ಬಹಿರಂಗಗೊಂಡಿದೆ.

ಪೇವ್‌ ಅಧ್ಯಯನದ ವರದಿ ಹೇಳುವ ಪ್ರಕಾರ, ವಿಶ್ವದಲ್ಲಿ ಅತಿಹೆಚ್ಚು ಜನ ಅಂತರ್ಜಾಲದಲ್ಲಿ ತೊಡಗಿಕೊಂಡಿರುವ ದೇಶ ದಕ್ಷಿಣ ಕೊರಿಯಾ. ದಕ್ಷಿಣ ಕೊರಿಯಾ ಶೇ.96ರಷ್ಟು ಜನ ಇಂಟರ್‌ನೆಟ್ ಬಳಸುತ್ತಿದ್ದಾರೆ. ಒಟ್ಟು 37 ದೇಶಗಳಲ್ಲಿ ಸಮೀಕ್ಷೆ ನಡೆಸಲಾಗಿದ್ದು, ದಕ್ಷಿಣ ಕೊರಿಯಾ ಮೊದಲ ಸ್ಥಾನವನ್ನು ಪಡೆದಿದೆ.

ಸಮೀಕ್ಷೆಯ ಪ್ರಕಾರ 2013ರ ವೇಳೆ ಭಾರತದ ಶೇ.13ರಷ್ಟು ಜನ ಸ್ಮಾರ್ಟ್‌ ಫೋನ್‌ಗಳನ್ನು ಹೊಂದಿದ್ದರು. 2017ರ ವೇಳೆಗೆ ಈ ಸಂಖ್ಯೆ ಶೇ.22ಕ್ಕೆ ಏರಿಕೆಯಾಗಿದೆ. 2013ರಲ್ಲಿ ಭಾರತದ ಶೇ. 8ರಷ್ಟು ಜನರು ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿದ್ದರು. ಈಗ ಶೇ.20ರಷ್ಟು ಜನ ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿದ್ದಾರೆ.

ಸಮೀಕ್ಷೆ ಅಂಕಿ ಅಂಶಗಳನ್ನು ಗಮನಿಸುವುದಾದರೆ, ಭಾರತದ ಶೇ.78ರಷ್ಟು ಜನ ಸ್ಮಾರ್ಟ್‌ ಫೋನ್‌ಗಳನ್ನು ಬಳಸುತ್ತಿಲ್ಲ. ಶೇ.80ರಷ್ಟು ಜನ ಇನ್ನೂ ಸಾಮಾಜಿಕ ಜಾಲತಾಣಗಳಿಗೆ ಕಾಲಿಟ್ಟಿಲ್ಲ. ಫೇಸ್‌ಬುಕ್‌, ವಾಟ್ಸ್ಆಪ್, ಟ್ವಿಟ್ಟರ್‌ಗಳ ಬಳಕೆ ಭಾರತದ ಬಹುಸಂಖ್ಯಾತ ಜನಕ್ಕೆ ತಿಳಿದಿಲ್ಲ.

ಹೆಚ್ಚು ಸ್ಮಾರ್ಟ್‌ ಫೋನ್‌ ಹೊಂದಿರುವವರ ಪೈಕಿ ಉತ್ತರ ಅಮೆರಿಕಾ ಮೊದಲನೇ ಸ್ಥಾನದಲ್ಲಿದೆ. ಯರೋಪ್‌ ಖಂಡ ಮತ್ತು ಏಷ್ಯಾ-ಪೆಸಿಫಿಕ್‌ ಪ್ರದೇಶಗಳು ನಂತರದ ಸ್ಥಾನಗಳಲ್ಲಿವೆ.

ಇಂಟರ್‌ನೆಟ್‌ ಬಳಕೆದಾರರ ಪೈಕಿ ದಕ್ಷಿಣ ಕೊರಿಯಾ ಮೊದಲ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ, ನೆದರ್‌ಲ್ಯಾಂಡ್‌, ಸ್ವೀಡನ್‌, ಕೆನಡಾ, ಅಮೆರಿಕಾ, ಇಸ್ರೇಲ್‌, ಇಂಗ್ಲೆಂಡ್‌, ಜೆರ್ಮನಿ, ಫ್ರಾನ್ಸ್‌ ಮತ್ತು ಸ್ಪೈನ್‌ ನಂತರದ 9 ಸ್ಥಾನಗಳಲ್ಲಿವೆ. ಅತೀ ಕಡಿಮೆ ಅಂತರ್ಜಾಲವನ್ನು ಬಳಸುತ್ತಿರುವುದು ಆಫ್ರಿಕಾದ ಸಹರಾ ಪ್ರದೇಶದ ಜನರು.

ಅಭಿವೃದ್ಧಿಯತ್ತ ಓಡುತ್ತಿರುವ ತೃತೀಯ ಜಗತ್ತಿನ ರಾಷ್ಟ್ರಗಳಲ್ಲಿ ಅಂತರ್ಜಾಲದ ಬಳಕೆದಾರರ ಪ್ರಮಾಣ ಹೆಚ್ಚುತ್ತಿದೆ. ಈ ದೇಶಗಳಲ್ಲಿ 2015-16ರಲ್ಲಿ ಶೇ.25ರಷ್ಟು ಜನ ಸಾಮಾಜಿಕ ಜಾಲತಾಣಗಳಲ್ಲಿ ಇದ್ದರು. 2017ರ ಅಂತ್ಯದ ವೇಳೆಗೆ ಈ ಸಂಖ್ಯೆ ಶೇ.53ನ್ನು ದಾಟಿದೆ. ಈ ದೇಶಗಳಲ್ಲಿ ಒಂದುವರೆ ವರ್ಷದ ಅವಧಿಯಲ್ಲಿ ಸಾಮಾಜಿಕ ಜಾಲತಾಣಗಳನ್ನು ಬಳಸುವವರ ಸಂಖ್ಯೆ ದುಪ್ಪಟ್ಟಾಗಿದೆ ಎಂದು ವರದಿ ಹೇಳುತ್ತದೆ.

ವರದಿ ಹೇಳುವಂತೆ, ಜಗತ್ತಿನ ಮುಂಚೂಣಿಗೆ ಬರುತ್ತಿರುವ ಮತ್ತು ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿರುವ 19 ರಾಷ್ಟ್ರಗಳಲ್ಲಿ ಕಳೆದ ಐದು ವರ್ಷಗಳಲ್ಲಿ ಅಂತರ್ಜಾಲ ಬಳಕೆದಾರರ ಸಂಖ್ಯೆ ದಿನದಿಂದ ದಿನಕ್ಕೆ ಏರತೊಡಗಿದೆ. ಅವುಗಳ ಪೈಕಿ ಭಾರತವೂ ಒಂದು. 2013ರ ವೇಳೆ ಭಾರತದಲ್ಲಿ ಶೇ.16ರಷ್ಟು ಜನ ಅಂತರ್ಜಾಲ ಬಳಸುತ್ತಿರುವುದಾಗಿ ತಿಳಿಸಿದ್ದರು. ಸದ್ಯ ಈ ಸಂಖ್ಯೆ ಶೇ. 25ನ್ನು ತಲುಪಿದೆ.

2013 ಮತ್ತು 2014ರಲ್ಲಿ ಮುಂದುವರೆಯುತ್ತಿರುವ ದೇಶಗಳಲ್ಲಿನ ಶೇ.42ರಷ್ಟು ಜನರು ಅಂತರ್ಜಾಲಕ್ಕೆ ತೆರೆದುಕೊಂಡಿದ್ದರು. 2017ರ ಅಂತ್ಯಕ್ಕೆ ಈ ಸಂಖ್ಯೆ ಶೇ.64ಕ್ಕೆ ಏರಿಕೆಯಾಗಿದೆ.

ಇದೇ ವೇಳೆಯಲ್ಲಿ ಅಭಿವೃದ್ಧಿ ಹೊಂದಿರುವ ದೇಶಗಳಲ್ಲೂ ಕೂಡ ಸಮಾಜಿಕ ಜಾಲತಾಣಗಳನ್ನು ಬಳಸುವವರ ಸಂಖ್ಯೆ ಹೆಚ್ಚಾಗಿದೆ. ಅಭಿವೃದ್ಧಿ ಹೊಂದಿದ 17 ದೇಶಗಳಲ್ಲಿ 2015- 2016ರಲ್ಲಿ ಶೇ.86ರಷ್ಟು ಮಂದಿ ಸ್ಮಾರ್ಟ್‌ ಫೋನ್‌ಗಳನ್ನು ಹೊಂದಿದ್ದರು. 2017ರ ಅಂತ್ಯಕ್ಕೆ ಈ ಸಂಖ್ಯೆ ಶೇ. 87 ಮುಟ್ಟಿದೆ. ಅಂದರೆ ಒಂದು ವರ್ಷದ ಅವಧಿಯಲ್ಲಿ ಅಭಿವೃದ್ಧಿ ಹೊಂದಿರುವ ದೇಶಗಳಲ್ಲಿ ಶೇ. 1ರಷ್ಟು ಮಾತ್ರವೇ ಮಾರುಕಟ್ಟೆ ವಿಸ್ತರಣೆ ಕಂಡಿದೆ.

ಜಗತ್ತಿನ ಇತರೆ ಮುಂದುವರೆಯುತ್ತಿರುವ ದೇಶಗಳೊಟ್ಟಿಗೆ ಹೋಲಿಸಿಕೊಂಡರೆ ಡಿಜಿಟಲೀಕರಣದಲ್ಲಿ ಭಾರತ ಅಭಿವೃದ್ಧಿಯೇನೋ ಸಾಧಿಸುತ್ತಿದೆ. ಆದರೆ ಭಾರತದಲ್ಲಿ ನಡೆಯುತ್ತಿರುವ ‘ಡಿಜಿಟಲ್ ಕಾಂತ್ರಿ’ಯ ಅಬ್ಬರದ ಜತೆಯಿಟ್ಟು ನೋಡಿದರೆ ಈ ಅಂಕಿ ಅಂಶಗಳು ಭಾರಿ ಬೆಳವಣಿಗೆ ನಡೆದಿಲ್ಲ ಎಂಬುದನ್ನು ಸಾರುತ್ತಿವೆ. ಅಂತರ್ಜಾಲ ಬಳಕೆದಾರರ ಅಂಕಿ ಅಂಶಗಳು ಇದೇ ವೇಗದಲ್ಲಿ ಮುಂದುವರಿದರೆ, ಅಭಿವೃದ್ಧಿ ಹೊಂದಿರುವ ದೇಶಗಳ ಅಂತರ್ಜಾಲ ಕ್ರಾಂತಿಯನ್ನು ಸರಿದೂಗಿಸಲು ದಶಕಗಳ ಕಾಲ ಕಾಯಬೇಕಾಗುತ್ತದೆ.