samachara
www.samachara.com
ಮೋದಿ ಸರಕಾರದ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಹ್ಮಣಿಯನ್ ರಾಜೀನಾಮೆ
ಸುದ್ದಿ ಸಾರ

ಮೋದಿ ಸರಕಾರದ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಹ್ಮಣಿಯನ್ ರಾಜೀನಾಮೆ

ಭಾರತದ ಮುಖ್ಯ ಆರ್ಥಿಕ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದ ಅರವಿಂದ್‌ ಸುಬ್ರಹ್ಮಣಿಯನ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ವಿತ್ತ ಸಚಿವ ಅರುಣ್‌ ಜೇಟ್ಲಿ ಫೇಸ್‌ಬುಕ್‌ ಪೋಸ್ಟ್‌ ಮೂಲಕ ಈ ಮಾಹಿತಿಯನ್ನು ಬಹಿರಂಗಗೊಳಿಸಿದ್ದಾರೆ.

samachara

samachara

ಭಾರತದ ಮುಖ್ಯ ಆರ್ಥಿಕ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದ ಅರವಿಂದ್‌ ಸುಬ್ರಹ್ಮಣಿಯನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಪೋಸ್ಟ್‌ ಹಾಕುವ ಮೂಲಕ ಈ ಮಾಹಿತಿಯನ್ನು ಬಹಿರಂಗಗೊಳಿಸಿದ್ದಾರೆ.

“ಕೆಲವು ದಿನಗಳ ಹಿಂದೆ ಅರವಿಂದ್‌ ಸುಬ್ರಹ್ಮಣಿಯನ್ ವೀಡಿಯೋ ಕಾನ್ಫರೆನ್ಸ್‌ನಲ್ಲಿ ನನ್ನ ಜತೆ ಮಾತನಾಡಿದರು. ಕೌಟುಂಬಿಕ ಕಾರಣಗಳಿಂದಾಗಿ ಅಮೆರಿಕಾಗೆ ತೆರಳಬೇಕಿದೆ ಎಂದು ತಿಳಿಸಿದರು. ಅವರು ನೀಡಿದ ಕಾರಣಗಳು ಕುಟುಂಬಕ್ಕೆ ಸಂಬಂಧಿಸಿದವು ಮತ್ತು ಅರವಿಂದ್‌ ಸುಬ್ರಹ್ಮಣಿಯನ್‌ರಿಗೆ ಆ ವಿಷಯಗಳು ಅಷ್ಟೇ ಮುಖ್ಯವಾಗಿದ್ದವು. ಅವರ ರಾಜೀನಾಮೆಯನ್ನು ಒಪ್ಪಿಕೊಳ್ಳುವುದನ್ನು ಬಿಟ್ಟು ಇನ್ಯಾವ ಆಯ್ಕೆಯನ್ನೂ ಕೂಡ ಅರವಿಂದ್‌ ಸುಬ್ರಹ್ಮಣಿಯನ್ ಮುಂದಿಡಲಿಲ್ಲ,” ಎಂದು ವಿತ್ತ ಸಚಿವ ಅರುಣ್‌ ಜೇಟ್ಲಿ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ತಿಳಿಸಿದ್ದಾರೆ.

ಅರವಿಂದ್‌ ಸುಬ್ರಹ್ಮಣಿಯನ್ ಭಾರತದ ಆರ್ಥಿಕತೆಯ ಸಮಗ್ರ ಆರ್ಥಿಕ ನಿರ್ವಹಣೆಗೆ ನೀಡಿದ ಕೊಡುಗೆಗಳನ್ನು ನೆನೆಸಿಕೊಂಡಿರುವ ಅರುಣ್‌ ಜೇಟ್ಲಿ, ಧನ್ಯವಾದಗಳನ್ನು ಅರ್ಪಿಸಿದ್ದಾರೆ.

“ವೈಯಕ್ತಿಕವಾಗಿ ನಾನು ಅರವಿಂದ್‌ ಸುಬ್ರಹ್ಮಣಿಯನ್ ಚೈತನ್ಯ, ಶಕ್ತಿ, ಭೌದ್ಧಿಕ ಸಾಮರ್ಥ್ಯ ಹಾಗೂ ವಿಚಾರಧಾರೆಗಳನ್ನು ಕಳೆದುಕೊಳ್ಳುತ್ತಿದ್ದೇನೆ. ದಿನದಲ್ಲಿ ಹಲವಾರು ಬಾರಿ ನನ್ನ ಕೊಠಡಿಗೆ ಬರುತ್ತಿದ್ದ ಅರವಿಂದ್‌ ಸುಬ್ರಹ್ಮಣಿಯನ್, ಹಲವಾರು ವಿಷಯಗಳನ್ನು ಹಂಚಿಕೊಳ್ಳುತ್ತಿದ್ದರು. ಈಗ ಅದೆಲ್ಲವೂ ದೂರವಾಗಿದೆ. ಆದರೂ ಕೂಡ ಅವರ ಹೃದಯ ಇಲ್ಲೇ ಇರುತ್ತದೆ ಎನ್ನುವುದನ್ನು ನಾನು ಬಲ್ಲೆ. ಅವರು ಎಲ್ಲೇ ಇದ್ದರೂ ಕೂಡ ಸಲಹೆ ಮತ್ತು ವಿಶ್ಲೇಷಣೆಗಳನ್ನು ಸದಾಕಾಲ ನೀಡುತ್ತಲೇ ಇರುತ್ತಾರೆ ಎಂಬ ನಂಬಿಕೆ ನನಗಿದೆ,” ಎಂದು ಅರುಣ್‌ ಜೇಟ್ಲಿ ಬರೆದುಕೊಂಡಿದ್ದಾರೆ.

ಅರುಣ್‌ ಜೇಟ್ಲಿಯವರ ಬರಹಕ್ಕೆ ಅರವಿಂದ್‌ ಸುಬ್ರಹ್ಮಣಿಯನ್ ಪ್ರತಿಕ್ರಿಯೆ ನೀಡಿದ್ದಾರೆ. “ಭಾರತದ ಮುಖ್ಯ ಆರ್ಥಿಕ ಸಲಹೆಗಾರನಾಗಿ ನಿರ್ವಹಿಸಿದ ಉದ್ಯೋಗ ನಾನು ಮಾಡಿದ ಎಲ್ಲಾ ಕೆಲಸಗಳಲ್ಲಿ ಹೆಚ್ಚಿನ ಗೌರವವನ್ನು, ತೃಪ್ತಿಯನ್ನು, ಉತ್ತೇಜನವನ್ನೂ ತಂದುಕೊಟ್ಟಿದೆ,” ಎಂದು ಅರವಿಂದ್‌ ಸುಬ್ರಹ್ಮಣಿಯನ್ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಅರವಿಂದ್‌ ಸುಬ್ರಹ್ಮಣಿಯನ್ ಮೂಲತಃ ತಮಿಳುನಾಡಿದ ರಾಜಧಾನಿ ಚೆನ್ನೈನವರು. 1959ರ ಜೂನ್ 7ರಂದು ಜನಿಸಿದ ಅರವಿಂದ್ ಸುಬ್ರಹ್ಮಣಿಯನ್, ದೆಹಲಿಯ ಸೆಂಟ್‌ ಜೋಸೆಫ್‌ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪಡೆದರು. ಮುಂದಿನ ವಿದ್ಯಾಭ್ಯಾಸವನ್ನು ಅಹಮದಾಬಾದ್‌ನ ಇಂಡಿಯನ್ ಇನ್ಸ್‌ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್ ಮತ್ತು ಆಕ್ಸ್‌ವರ್ಡ್ ವಿಶ್ವವಿದ್ಯಾಲಯದಲ್ಲಿ ಮುಗಿಸಿದರು.

ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಉಪ ನಿರ್ದೇಶಕರಾಗಿ ಕಾರ್ಯ ನಿರ್ವಸಿದ್ದ ಅರವಿಂದ್ ಸುಬ್ರಹ್ಮಣಿಯನ್, 1999 ಮತ್ತು 2000ಗಳಲ್ಲಿ ಹಾರ್ವರ್ಡ್‌ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದರು. 2008ರಿಂದ 2010ರವರೆಗೂ 3 ವರ್ಷಗಳ ಕಾಲ ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು.

ರಘುರಾಮ್‌ ರಾಜನ್‌ರ ನಂತರ 2014ರ ಅಕ್ಟೋಬರ್‌ 16ರಂದು ಭಾರತದ ಮುಖ್ಯ ಆರ್ಥಿಕ ಸಲಹೆಗಾರರ ಸ್ಥಾನವನ್ನು ವಹಿಸಿಕೊಂಡ ಅರವಿಂದ್‌ ಸುಬ್ರಹ್ಮಣಿಯನ್, ಈ ಸ್ಥಾನಕ್ಕೇರಿದ 16ನೇ ವ್ಯಕ್ತಿಯಾಗಿದ್ದರು. ದೇಶದ ವಿತ್ತ ಸಚಿವರಾದ ಅರುಣ್‌ ಜೇಟ್ಲಿಗೆ ಸಮಗ್ರ ಆರ್ಥಿಕತೆಗೆ ಸಂಬಂಧಿಸಿದ ಸಲಹೆಗಳು, ಸಾಮಾನ್ಯ ಜವಾಬ್ದಾರಿಗಳು, ವಿಶ್ಲೇಷಣೆಗಳನ್ನು ನೀಡಿದ್ದರು. ಆರ್ಥಿಕ ಸಲಹೆಗಾರರ ಕಾರ್ಯಾವಧಿ ಮೂರು ವರ್ಷ. ಕಳೆದ ವರ್ಷವೇ ಅರವಿಂದ್‌ ಸುಬ್ರಹ್ಮಣಿಯನ್‌ರ ಕಾರ್ಯಾವಧಿ ಮುಕ್ತಾಯವಾಗಿತ್ತು. ಆದರೂ ಕೂಡ ಅರವಿಂದ್‌ರ ಕಾರ್ಯಾವಧಿಯನ್ನು ವಿಸ್ತರಿಸಲಾಗಿತ್ತು.

ಈಗ ಅರವಿಂದ್‌ ಸುಬ್ರಹ್ಮಣಿಯನ್ ಕೌಟುಂಬಿಕ ಕಾರಣಗಳಿಂದಾಗಿ ವೃತ್ತಿಯನ್ನು ತೊರೆದು, ಅಮೆರಿಕಾಗೆ ತೆರಳಲಿದ್ದಾರೆ. ವಿತ್ತ ಸಚಿವ ಅರುಣ್‌ ಜೇಟ್ಲಿ ಅರವಿಂದ್‌ ಸುಬ್ರಹ್ಮಣಿಯನ್‌ ಯಾವಾಗ ಹುದ್ದೆ ತೊರೆಯುತ್ತಾರೆ ಎನ್ನುವುದನ್ನು ಸ್ಪಷ್ಟಪಡಿಸಿಲ್ಲ. ನಂತರ ಮಾತನಾಡಿರುವ ಅರವಿಂದ್‌ ಸುಬ್ರಹ್ಮಣಿಯನ್ ಇನ್ನು 1 ಅಥವಾ 2 ತಿಂಗಳಲ್ಲಿ ವೃತ್ತಿ ತೊರೆಯಲಿದ್ದು, ಒಳ್ಳೆಯ ನೆನಪುಗಳೊಂದಿಗೆ ಅಮೆರಿಕಾಗೆ ತೆರಳಲಿದ್ದೇನೆ ಎಂದಿದ್ದಾರೆ.