samachara
www.samachara.com
‘ಹಣ ಪಡೆದು ನ್ಯಾಯದಾನ’: ರಾಯಚೂರಲ್ಲಿ ‘ನಕ್ಸಲ್ ಕರಪತ್ರ’ದ ಕಂಪನ
ಸುದ್ದಿ ಸಾರ

‘ಹಣ ಪಡೆದು ನ್ಯಾಯದಾನ’: ರಾಯಚೂರಲ್ಲಿ ‘ನಕ್ಸಲ್ ಕರಪತ್ರ’ದ ಕಂಪನ

ವ್ಯವಸ್ಥೆಯ ಎಲ್ಲಾ ಅಂಗಗಳು ಕಳಂಕ ಹೊತ್ತುಕೊಂಡಿವೆ, ಇದಕ್ಕೆ ನ್ಯಾಯಾಂಗ ಕೂಡ ಹೊರತಾಗಿಲ್ಲ. ರಾಯಚೂರು ನ್ಯಾಯಾಲಯದಲ್ಲಿ ಮಂಗಳವಾರ ಕಂಡು ಬಂದ ಕರಪತ್ರವೊಂದು ಜಿಲ್ಲಾ ನ್ಯಾಯಾಧೀಶರ ಮೇಲೆಯೇ ಗುರುತರದ ಆರೋಪ ಹೊರಿಸಿದೆ. 

Team Samachara

‘ರಾಯಚೂರಿನ 1ನೇ ಜಿಲ್ಲಾ ನ್ಯಾಯಾಧೀಶರಾದ ಶ್ರೀ ಎಂ. ಮಹದೇವಯ್ಯನವರು ತಮ್ಮ ನ್ಯಾಯಾಲಯದಲ್ಲಿ ಇರುವ ಪ್ರತಿಯೊಂದು ಕೇಸನ್ನು, ಕೇಸಿಗೆ ಅನುಗುಣವಾಗಿ ಸಾವಿರ ಸಾವಿರ, ಲಕ್ಷ ಲಕ್ಷ ಹಣಪಡೆದು ನ್ಯಾಯದಾನ ಮಾಡುತ್ತಿದ್ದಾರೆ...’ ಎಂಬ ಸಾಲುಗಳೊಂದಿಗೆ ಶುರುವಾಗುವ ಕರಪತ್ರದ ಮಾದರಿಯ ಪತ್ರವೊಂದು ರಾಯಚೂರಿನಲ್ಲಿ ಮಂಗಳವಾರ ಕಂಪನಗಳನ್ನು ಎಬ್ಬಿಸಿದೆ.

ಜೈ ನಕ್ಸಲ್, ಜೈ ನಕ್ಸಲ್‌ ಎಂಬ ಒಕ್ಕಣೆಗಳ ಅಡಿಯಲ್ಲಿ ಜಿಲ್ಲಾ ನ್ಯಾಯಾಧೀಶರನ್ನು ಹಾಗೂ ಕೆಲವು ವಕೀಲರನ್ನು ಈ ಕರಪತ್ರ ‘ಭ್ರಷ್ಟರು’ ಎಂದು ಆರೋಪಿಸಿದೆ. ‘ನ್ಯಾಯಾಧೀಶರೇ ತಮ್ಮ ಕರ್ತವ್ಯ ಪಾಲನೆಗೆ ಲಂಚ ಪಡೆಯುವುದಾದರೆ ಸಾಮಾನ್ಯ ಜನತೆ ನ್ಯಾಯ ಒಡೆಯುವುದು ಹೇಗೆ?’ ಎಂದು ಕರಪತ್ರದಲ್ಲಿ ಪ್ರಶ್ನಿಸಲಾಗಿದೆ.

ಬೆಳಗ್ಗೆ ನ್ಯಾಯಾಲಯದ ಕಲಾಪ ಆರಂಭಗೊಂಡ ಸಮಯದಲ್ಲಿ ನ್ಯಾಯಾಲಯದ ಆವರಣದಲ್ಲಿ ಎ4 ಸೈಜಿನ ಕಾಗದಲ್ಲಿ ಪ್ರಿಂಟ್ ಔಟ್‌ ತೆಗೆದ ಪತ್ರದ ಪ್ರತಿಗಳು ಹಂಚಲ್ಪಟ್ಟವು. ಇದು ನ್ಯಾಯಾಲಯದಲ್ಲಿದ್ದವರ ಗಮನಕ್ಕೆ ಬರಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ.

ನ್ಯಾಯಾಲಯದಲ್ಲಿ ಹಂಚಲ್ಪಟ್ಟ ಪತ್ರ. 
ನ್ಯಾಯಾಲಯದಲ್ಲಿ ಹಂಚಲ್ಪಟ್ಟ ಪತ್ರ. 

“ಇದು ನ್ಯಾಯದಿಂದ ವಂಚಿತರಾದವರು ಯಾರೋ ಮಾಡಿರುವ ಕೃತ್ಯದಂತೆ ಮೇಲ್ನೋಟಕ್ಕೆ ಕಂಡುಬರುತ್ತಿದೆ. ನ್ಯಾಯಾಧೀಶರು ಹಾಗೂ ವಕೀಲರ ವಿರುದ್ಧ ಆಕ್ರೋಶವನ್ನು ಹೀಗೆ ಹೊರಹಾಕಿದ್ದಾರೆ. ಅದಕ್ಕೆ ಜೈ ನಕ್ಸಲ್ ಎಂದು ಹಾಕುವ ಮೂಲಕ ಗಮನವನ್ನು ಬೇರೆದೆಡೆ ಸೆಳೆಯುವ ಕೆಲಸ ಮಾಡಿದ್ದಾರೆ. ಭ್ರಷ್ಟಾಚಾರದ ಆರೋಪ ಇದ್ದರೆ ಸಾಕ್ಷಿ ಸಮೇತ ನಿರೂಪಿಸಬೇಕು. ಇಂತಹ ಪತ್ರಗಳನ್ನು ಹಂಚುವುದು ತೇಜೋವಧೆ ಮಾಡುವ ಕೆಲಸ ಬಿಟ್ಟರೆ, ನ್ಯಾಯ ಪಡೆಯಲು ಸಾಧ್ಯವಿಲ್ಲ,’’ ಎನ್ನುತ್ತಾರೆ ವಕೀಲರೊಬ್ಬರು.

ಆವರಣದಲ್ಲಿ ಇಂತಹದೊಂದು ಪತ್ರ ಭಿತ್ತರವಾಗುವುದನ್ನು ಕಂಡ ರಾಯಚೂರು ಜಿಲ್ಲಾ ನ್ಯಾಯಾಲಯದ ವಕೀಲರು ಕಲಾಪ ಭಹಿಷ್ಕಾರಕ್ಕೆ ಮುಂದಾದರು. ಕಕ್ಷಿದಾರರಿಗೆ ಸಮಸ್ಯೆಯಾಗುತ್ತದೆ ಎಂದು ಕೆಲವರು ವಾದಿಸಿದರೂ, ಕಲಾಪದಿಂದ ಹೊರಗುಳಿಯಲು ನಿರ್ಧಾರವನ್ನು ಜಿಲ್ಲಾ ವಕೀಲರ ಸಂಘ ತೆಗೆದುಕೊಂಡಿತು. ಆದರೆ ನ್ಯಾಯಾಧೀಶರ ಮನವಿ ಹಿನ್ನೆಲೆಯಲ್ಲಿ ಭಹಿಷ್ಕಾರವನ್ನು ಹಿಂತೆಗೆದುಕೊಂಡಿದ್ದಾರೆ ಎಂಬ ಮಾಹಿತಿ ಇದೆ.

ನ್ಯಾಯಾಲಯದಲ್ಲಿ ಹಂಚಲ್ಪಟ್ಟ ಪತ್ರದ ವಿರುದ್ಧ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.