samachara
www.samachara.com
ಮುರಿದು ಬಿದ್ದ ಬಿಜೆಪಿ- ಪಿಡಿಪಿ ಮೈತ್ರಿ: ಪ್ರಕ್ಷುಬ್ಧ ಕಣಿವೆ ರಾಜ್ಯದಲ್ಲಿ ರಾಜ್ಯಪಾಲರ ಆಳ್ವಿಕೆ?  
ಸುದ್ದಿ ಸಾರ

ಮುರಿದು ಬಿದ್ದ ಬಿಜೆಪಿ- ಪಿಡಿಪಿ ಮೈತ್ರಿ: ಪ್ರಕ್ಷುಬ್ಧ ಕಣಿವೆ ರಾಜ್ಯದಲ್ಲಿ ರಾಜ್ಯಪಾಲರ ಆಳ್ವಿಕೆ?  

ಈ ಹಿಂದೆ ಮಹಾರಾಷ್ಟ್ರದ ಶಿವ ಸೇನೆ ಮತ್ತು ಆಂಧ್ರ ಪ್ರದೇಶದ ತೆಲುಗು ದೇಶಂ ಪಕ್ಷಗಳು ಬಿಜೆಪಿಯ ಸ್ನೇಹವನ್ನು ಕಡಿದುಕೊಂಡಿದ್ದವು. ಈಗ ಬಿಜೆಪಿಯೇ ಜಮ್ಮು ಮತ್ತು ಕಾಶ್ಮೀರದ ಪಿಡಿಪಿ ಒಟ್ಟಿಗಿನ ನಂಟನ್ನು ಮುರಿದುಕೊಂಡಿದೆ.

samachara

samachara

ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ಪೀಪಲ್ಸ್ ಡೆಮಾಕ್ರಟಿಕ್‌ ಪಾರ್ಟಿಗೆ ನೀಡಿದ್ದ ತನ್ನ ಬೆಂಬಲವನ್ನು ಹಿಂಪಡೆದುಕೊಂಡಿದೆ. ಬಿಜೆಪಿ ಈ ನಿರ್ಧಾರವನ್ನು ಕೈಗೊಂಡ ಕೆಲ ಸಮಯದಲ್ಲೇ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪತ್ರವನ್ನು ರಾಜ್ಯಪಾಲರಿಗೆ ರವಾನಿಸಿದ್ದಾರೆ.  

ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ಮತ್ತು ಪೀಪಲ್ಸ್ ಡೆಮಾಕ್ರಟಿಕ್‌ ಪಾರ್ಟಿಗಳೆರಡೂ ಸೇರಿ ಸಮ್ಮಿಶ್ರ ಸರಕಾರ ರಚಿಸಿದ್ದವು. ಒಟ್ಟು 87 ವಿಧಾನಸಭಾ ಕ್ಷೇತ್ರಗಳಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ಅಧಿಕಾರ ರಚಿಸಲು 44 ಸ್ಥಾನಗಳು ಬೇಕು. 28 ಸ್ಥಾನಗಳನ್ನು ಗೆದ್ದಿದ್ದ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ, 25 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ ಜತೆ ಸೇರಿ ಮೈತ್ರಿ ಸರಕಾರ ರಚಿಸಿತ್ತು. ಈಗ ಬಿಜೆಪಿ ತನ್ನ ಬೆಂಬಲವನ್ನು ಹಿಂಪಡೆದಿರುವ ಕಾರಣ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ನೇತೃತ್ವದ ಸರಕಾರ ಉರುಳಿ ಬಿದ್ದಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ರಾಮ್‌ ಮಹದೇವ್‌, “ಪೀಪಲ್ಸ್ ಡಿಮಾಕ್ರಟಿಕ್‌ ಪಾರ್ಟಿಯ ಜತೆ ಮೈತ್ರಿ ಸರಕಾರದಲ್ಲಿ ಮುಂದುವರೆಯುವುದು ಕಷ್ಟವಾಗುತ್ತಿತ್ತು. ಅದಕ್ಕಾಗಿ ನಮ್ಮ ಬೆಂಬಲವನ್ನು ಹಿಂದಕ್ಕೆ ಪಡೆದುಕೊಂಡಿದ್ದೇವೆ,” ಎಂದು ತಿಳಿಸಿದ್ದಾರೆ.

ಮುಂದುವರಿದು ಮಾತನಾಡಿದ ರಾಮ್‌ ಮಹದೇವ್‌, “ಕಣಿವೆ ರಾಜ್ಯದಲ್ಲಿ ಭಯೋತ್ಪಾದನೆ, ಹಿಂಸೆ ಮತ್ತು ಮೂಲಭೂತವಾದ ತೀವ್ರವಾಗಿ ಹೆಚ್ಚಿವೆ. ಸಾಮಾನ್ಯ ಜನರ ಮೂಲಭೂತ ಹಕ್ಕುಗಳು ಅಪಾಯಕಾರಿ ಸ್ಥಿತಿಯನ್ನು ತಲುಪಿವೆ,” ಎಂದಿದ್ದಾರೆ.

ರಾಮ್‌ ಮಹದೇವ್‌ ಹೇಳುವಂತೆ ಜಮ್ಮು ಮತ್ತು ಕಾಶ್ಮೀರದ ಎಲ್ಲಾ ಬಿಜೆಪಿ ಸಚಿವರು ರಾಜೀನಾಮೆಯನ್ನು ನೀಡಲಿದ್ದಾರೆ. ರಾಜ್ಯದಲ್ಲಿ ರಾಜ್ಯಪಾಲರ ಆಳ್ವಿಕೆ ಜಾರಿಯಾಗಬೇಕು ಎಂಬ ಬೇಡಿಕೆಯನ್ನು ಬಿಜೆಪಿ ಮುಂದಿಟ್ಟಿದೆ.

“ಜಮ್ಮು ಮತ್ತು ಕಾಶ್ಮೀರ ಭಾರತದ ಒಕ್ಕೂಟ ವ್ಯವಸ್ಥೆಯ ಒಂದು ಭಾಗ. ಈ ಒಕ್ಕೂಟ ವ್ಯವಸ್ಥೆಯ ಭದ್ರತೆ ಮತ್ತು ಏಕತೆ ಉಳಿಸುವ ನಿಟ್ಟಿನಲ್ಲಿ ಈ ತೀರ್ಮಾನವನ್ನು ಕೈಗೊಂಡಿದ್ದದೇವೆ. ಕಾಶ್ಮೀರದಲ್ಲಿರುವ ಪರಿಸ್ಥಿತಿಯನ್ನು ತಹಬದಿಗೆ ತರಬೇಕಿದೆ. ಅದಕ್ಕಾಗಿ ಅಧಿಕಾರದಿಂದ ಕೆಳಗಿಳಿದು, ರಾಜ್ಯಪಾಲರ ಕೈಗೆ ಅಧಿಕಾರವನ್ನು ವರ್ಗಾಯಿಸಲು ಬಯಸಿದ್ದೇವೆ,” ಎಂದು ರಾಮ್ ಮಹದೇವ್‌ ಹೇಳಿದ್ದಾರೆ.

ರಂಜಾನ್‌ ಕಾರಣಕ್ಕಾಗಿ ಕೇಂದ್ರ ಸರಕಾರ ಕಾಶ್ಮೀರದಲ್ಲಿ ಉಗ್ರರೊಟ್ಟಿಗೆ ನಡೆಸುತ್ತಿದ್ದ ಯುಧ್ಧಕ್ಕೆ ವಿರಾಮ ಘೋಷಿಸಿತ್ತು. ಒಂದು ತಿಂಗಳ ಕಾಲ ಭಾರತೀಯ ಸೈನಿಕರು ಉಗ್ರರ ವಿರುದ್ಧ ಕಣಕ್ಕಿಳಿದಿರಲಿಲ್ಲ. ಆದ ಕಾರಣದಿಂದಲೇ ಪ್ರಖ್ಯಾತ ಪತ್ರಕರ್ತ ಶುಜಾತ್‌ ಬುಖಾರಿ ಮತ್ತು ಯೋಧ ಔರಂಗಜೇಬ್‌ರನ್ನು ಉಗ್ರರು ಬೇರೆ ಬೇರೆ ಸಮಯಗಳಲ್ಲಿ ಕೊಂದಿದ್ದರು. ರಂಜಾನ್‌ ಮುಗಿದ ನಂತರ ಕದನ ವಿರಾಮವನ್ನು ಹಿಂಪಡೆಯಲು ಕೇಂದ್ರ ಬಿಜೆಪಿ ಸರಕಾರ ಮುಂದಾಗಿತ್ತು. ಆದರೆ ಪಿಡಿಪಿಗೆ ಕೇಂದ್ರದ ಈ ನಡೆ ಇಷ್ಟವಾಗಿರಲಿಲ್ಲ. ಇದೇ ಕಾರಣಕ್ಕಾಗಿ ಎರಡೂ ಪಕ್ಷಗಳ ನಡುವಿನ ಮೈತ್ರಿಯಲ್ಲಿ ಬಿರುಕು ಉಂಟಾಗಿದೆ ಎಂಬ ಕಾರಣವನ್ನು ಬಿಜೆಪಿ ಮುಂದಿಟ್ಟಿದೆ.

ಬಿಜೆಪಿ ನಾಯಕರು ಜಮ್ಮು ಮತ್ತು ಕಾಶ್ಮೀರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ಪಿಡಿಪಿ ಅಡ್ಡ ಬರುತ್ತಿದೆ ಎಂದ ರಾಮ್ ಮಹದೇವ್‌, “ಕೇಂದ್ರದಲ್ಲಿರುವ ಬಿಜೆಪಿ ಸರಕಾರ ರಾಜ್ಯಕ್ಕಾಗಿ ಹಲವಾರು ಅನುಕೂಲಗಳನ್ನು ಮಾಡಿಕೊಟ್ಟಿತ್ತು,’’ ಎಂದಿದ್ದಾರೆ.

ಕಳೆದ ತಿಂಗಳಲ್ಲಿ ಬಿಜೆಪಿ ಮತ್ತು ಪಿಡಿಪಿ ಪಕ್ಷಗಳೆರಡರ ನಡುವೆ ಮಾತಿಗೆ ಮಾತು ಬೆಳದಿದ್ದವು. ಎರಡೂ ಪಕ್ಷಗಳ ನಡುವೆ ವೈಮನಸ್ಯ ಉಂಟಾಗಿತ್ತು. ಎರಡೂ ಪಕ್ಷಗಳು ಸಾರ್ವಜನಿಕರ ಮುಂದೆ ಪರಸ್ಪರ ನಿಂದಿಸುವ ಕೆಲಸವನ್ನು ಮಾಡಿದ್ದವು. ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂಸೆ ಜಾಗ ಪಡೆಯಲು, ಭಯೋತ್ಪಾದನೆ ಜಾಸ್ತಿ ಆಗಲು ಕಾರಣ ಎಂದು ಪರಸ್ಪರರು ಆರೋಪಿಸಿದ್ದರು. ಈಗ ಬಿಜೆಪಿ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಬೆಂಬಲವನ್ನು ಹಿಂಪಡೆದಿದ್ದರೆ, ಮೆಹಬೂಬಾ ಮುಫ್ತಿ ರಾಜೀನಾಮೆ ನೀಡಿದ್ದಾರೆ.

ಪರಸ್ಪರ ವಿರೋಧಿ ಧೋರಣೆಗಳನ್ನು ಹೊಂದಿರುವ ಎರಡೂ ಪಕ್ಷಗಳು ಮೈತ್ರಿ ಸರಕಾರ ರಚಿಸಿ 3 ವರ್ಷಗಳ ಕಾಲ ಆಡಳಿತ ನಡೆಸಿದ್ದವು. ಈ ಪ್ರಶ್ನೆ ಬಂದಾಗ ಬಿಜೆಪಿ ನಾಯಕ ರಾಮ್ ಮಹದೇವ್‌, “ನಮಗೆ ಮೈತ್ರಿಯಾಗಬೇಕು ಎಂದೇನೂ ಇರಲಿಲ್ಲ. ಯಾವ ಪಕ್ಷಕ್ಕೂ ಬಹುಮತ ದೊರೆಯದ ಕಾರಣ ಸಮ್ಮಿಶ್ರ ಸರಕಾರ ರಚಿಸಲು ಮುಂದಾಗಿದ್ದೆವು. ಇಲ್ಲವಾಗಿದ್ದರೆ ಕಣಿವೆ ರಾಜ್ಯದಲ್ಲಿ ರಾಜ್ಯಪಾಲರ ಆಡಳಿತವೋ ಅಥವಾ ರಾಷ್ಟ್ರಪತಿಗಳ ಆಡಳಿತವೋ ಇರುತ್ತಿತ್ತು ಅಷ್ಟೇ. ಹೀಗಾಗುವುದು ಇಷ್ಟವಿರದಿದ್ದ ಕಾರಣಕ್ಕೆ ಮಾತ್ರವೇ ಪೀಪಲ್‌ ಡೆಮಾಕ್ರಟಿಕ್‌ ಪಾರ್ಟಿ ಜತೆಗೂಡಿ ಸರಕಾರ ರಚಿಸಿದ್ದೆವು,” ಎಂದಿದ್ದಾರೆ.

ಕಣಿವೆ ರಾಜ್ಯದಲ್ಲಿ ನಡೆದ ಈ ರಾಜಕೀಯ ಬೆಳವಣಿಗೆಗೆ ಟ್ವಿಟರಾತಿಗಳು ನೀಡಿದ ಪ್ರತಿಕ್ರಿಯೆಗಳು ಹೀಗಿವೆ: