samachara
www.samachara.com
ಕೇಜ್ರಿವಾಲ್ ಧರಣಿಗೆ ವಿರೋಧ: ‘ತುರ್ತು ಅರ್ಜಿ’ ಮುಂದೂಡಿದ ಸುಪ್ರಿಂ ಕೋರ್ಟ್
ಸುದ್ದಿ ಸಾರ

ಕೇಜ್ರಿವಾಲ್ ಧರಣಿಗೆ ವಿರೋಧ: ‘ತುರ್ತು ಅರ್ಜಿ’ ಮುಂದೂಡಿದ ಸುಪ್ರಿಂ ಕೋರ್ಟ್

ದೆಹಲಿ ಹೈಕೋರ್ಟ್ ಕೇಜ್ರಿವಾಲ್‌ ಹೋರಾಟವನ್ನು ಅಸಂವಿಧಾನಿಕ ಎಂದು, ಜೂನ್ 22ಕ್ಕೆ ತುರ್ತು ವಿಚಾರಣೆ ನಡೆಸಲು ಸಿದ್ಧವಾಗಿದೆ. ಮತ್ತೊಂದೆಡೆ ಸುಪ್ರಿಂ ಕೋರ್ಟ್ ಈ ಕುರಿತ ಅರ್ಜಿಯ ತುರ್ತು ವಿಚಾರಣೆಯನ್ನು ಹಲವಾರು ದಿನಗಳ ಕಾಲಕ್ಕೆ ಮುಂದೂಡಿದೆ.

samachara

samachara

ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಮತ್ತು ಅವರ ಸಂಪುಟದ ಮೂರು ಜನ ಸಹೋದ್ಯೋಗಿಗಳು ಲೆಫ್ಟಿನೆಂಟ್‌ ಗವರ್ನರ್‌ ಕಚೇರಿಯಲ್ಲಿ 9 ದಿನಗಳಿಂದ ನಡೆಸುತ್ತಿದ್ದ ಧರಣಿಯನ್ನು ವಿರೋಧಿಸಿ ಸುಪ್ರಿಂ ಕೋರ್ಟ್‌ನಲ್ಲಿ ಅರ್ಜಿ ದಾಖಲಾಗಿತ್ತು. ಅರ್ಜಿಯನ್ನು ತುರ್ತಾಗಿ ಪರಿಶೀಲಿಸಲು ಮನವಿ ಮಾಡಲಾಗಿತ್ತು. ಆದರೆ ಅರ್ಜಿಯ ತುರ್ತು ಪರಿಶೀಲನೆಯನ್ನು ಸುಪ್ರಿಂ ಕೋರ್ಟ್‌ ನಿರಾಕರಿಸಿದೆ. 

ಅರವಿಂದ್‌ ಕೇಜ್ರಿವಾಲ್‌ ಮತ್ತು ಅವರ ಸಂಪುಟದ ಸಹೋದ್ಯೋಗಿಗಳು ಕಳೆದ ವಾರದಲ್ಲಿ ದೆಹಲಿಯ ಲೆಫ್ಟಿನೆಂಟ್‌ ಗವರ್ನರ್‌ ಅನಿಲ್‌ ಬೈಜಲ್‌ರನ್ನು ಭೇಟಿಯಾಗಲು ತೆರಳಿದ್ದರು. ಐಎಎಸ್ ಅಧಿಕಾರಿಗಳು ನಡೆಸುತ್ತಿರುವ ಮುಷ್ಕರವನ್ನು ನಿಲ್ಲಿಸಿ ತಮ್ಮ ಕೆಲಸವನ್ನು ಸರಿಯಾಗಿ ನಿರ್ವಹಿಸುಬೇಕೆಂದು ಆದೇಶಿಸುವಂತೆ ಅರವಿಂದ್‌ ಕೇಜ್ರಿವಾಲ್‌ ಮನವಿ ಮಾಡುವವರಿದ್ದರು. ಜತೆಗೆ ದೆಹಲಿ ನಾಗರಿಕರ ಸಮಸ್ಯೆಗಳು ಕುರಿತು ಕೂಡ ಚರ್ಚಿಸುವುದಿತ್ತು ಎಂದು ಕೇಜ್ರಿವಾಲ್ ತಿಳಿಸಿದ್ದರು. ಆದರೆ ಅನಿಲ್‌ ಬೈಜಲ್‌ರ ಭೇಟಿ ಸಾಧ್ಯವಾಗಿರಲಿಲ್ಲ. ಆಗಿನಿಂದ ಆರಂಭಗೊಂಡಿದ್ದ ಅರವಿಂದ್‌ ಕೇಜ್ರಿವಾಲ್‌ರ ಹೋರಾಟ 8 ದಿನಗಳಾದರೂ ಕೂಡ ಮುಂದುವರಿಯುತ್ತಲೇ ಇತ್ತು.

ಅರವಿಂದ್‌ ಕೇಜ್ರಿವಾಲ್‌ ನಡೆಸಿದ ಹೋರಾಟಕ್ಕೆ ಬೆಂಬಲವಾಗಿ ಸಹಸ್ರಾರು ಜನ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ದೆಹಲಿಯಲ್ಲಿ ಮೆರವಣಿಗೆ ನಡೆಸಿದ್ದರು. ಕರ್ನಾಟಕ, ಆಂಧ್ರ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ಕೇರಳ ರಾಜ್ಯಗಳ ಮುಖ್ಯಮಂತ್ರಿಗಳು ಅರವಿಂದ್ ಕೇಜ್ರಿವಾಲ್‌ ಹೋರಾಟಕ್ಕೆ ಬೆಂಬಲ ಸೂಚಿಸಿದ್ದರು. ಬಹುಭಾಷಾ ನಟ ಪ್ರಕಾಶ್, ನಟ ಹಾಗೂ ರಾಜಕಾರಣಿ ಶತೃಘ್ನ ಸಿನ್ಹಾ ಅರವಿಂದ್‌ ಕೇಜ್ರಿವಾಲ್‌ ಪರವಾಗಿ ದನಿಯೆತ್ತಿದ್ದರು. ದಿನದಿಂದ ದಿನಕ್ಕೆ ಕೇಜ್ರಿವಾಲ್‌ ಪರವಾದ ಬೆಂಬಲ ಹೆಚ್ಚಾಗುತ್ತಲೇ ಸಾಗಿತ್ತು.

ಅರವಿಂದ್‌ ಕೇಜ್ರಿವಾಲ್‌ ಹೋರಾಟಕ್ಕೆ ಸಂಬಂಧಿಸಿದಂತೆ, ಈ ಹೋರಾಟವನ್ನು ಅಸಂವಿಧಾನಿಕ ಎಂದು ಘೋಷಿಸಬೇಕೆಂದು ಹರಿನಾಥ್‌ ರಾಮ್‌ ಎನ್ನುವವರು ಸುಪ್ರಿಂ ಕೋರ್ಟ್‌ನಲ್ಲಿ ಅರ್ಜಿ ದಾಖಲಿಸಿದ್ದರು.

ಮಂಗಳವಾರ ಬೆಳಗ್ಗೆ ಅರ್ಜಿದಾರ ಹರಿನಾಥ್‌ ರಾಮ್‌ ಪರ ವಾದಿಸಿದ ವಕೀಲ ಶಶಾಂಕ್‌ ಸುಧಿ, ‘ದೆಹಲಿ ಜನತೆ ಸಂಕಷ್ಟದಲ್ಲಿದ್ದಾರೆ. ಆದರೆ ದೆಹಲಿಯ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಎಲ್‌ಜಿ ಕಚೇರಿಯಲ್ಲಿ ಅಸಂವಿಧಾನಿಕ ಮತ್ತು ಕಾನೂನುಬಾಹಿರ ಹೋರಾಟವನ್ನು ನಡೆಸುತ್ತಿದ್ದಾರೆ. ಆದ್ದರಿಂದ ಈ ಅರ್ಜಿಯನ್ನು ತುರ್ತಾಗಿ ಪರಿಶೀಲಿಸಿ, ಅರವಿಂದ್‌ ಕೇಜ್ರಿವಾಲ್‌ರ ಹೋರಾಟವನ್ನು’ಅಸಾಂವಿಧಾನಿಕ’ ಎಂದು ಘೋಷಿಸಬೇಕು,’ ಎಂದು ಮನವಿ ಮಾಡಿದರು.

ನ್ಯಾಯಮೂರ್ತಿ ಇಂದು ಮಲ್ಹೋತ್ರ ಮತ್ತು ನ್ಯಾಯಮೂರ್ತಿ ಎಸ್. ಎ. ನಜೀರ್‌ರ ನ್ಯಾಯಪೀಠ ವಿಚಾರಣೆಯನ್ನು ಬೇಸಿಗೆ ರಜೆ ಮುಗಿದ ನಂತರ ನಡೆಸುವುದಾಗಿ ತಿಳಿಸಿದೆ.

ನಿನ್ನೆಯಷ್ಟೆ ದೆಹಲಿ ಹೈಕೋರ್ಟ್‌ನಲ್ಲಿ ಅರವಿಂದ್‌ ಕೇಜ್ರಿವಾಲ್‌ ಹೋರಾಟದ ಕುರಿತು ಸಲ್ಲಿಕೆಯದ ಅರ್ಜಿ ವಿಚಾರಣೆ ನಡೆದಿತ್ತು. ದೆಹಲಿ ಹೈಕೋರ್ಟ್ ಅರವಿಂದ್‌ ಕೇಜ್ರಿವಾಲ್‌ರ ನಡೆಗೆ ಛೀಮಾರಿ ಹಾಕಿ, ಹೋರಾಟವನ್ನು ಅಸಂವಿಧಾನಿಕ ಎಂದು ಕರೆದಿತ್ತು. ಯಾರಾದರು ಮನೆ ಅಥವಾ ಕಚೇರಿಯಲ್ಲಿ ನಡೆಸುವುದನ್ನು ಮುಷ್ಕರ ಎಂದು ಕರೆಯಲಾಗುವುದಿಲ್ಲ ಎಂದು ತಿಳಿಸಿತ್ತು. ಈ ಕುರಿತ ಅರ್ಜಿಯನ್ನು ತುರ್ತು ಎಂದು ಪರಿಗಣಿಸಿದ ಹೈಕೋರ್ಟ್, ಜೂನ್‌ 22ರಂದು ವಿಚಾರಣೆ ನಡೆಸುವುದಾಗಿ ತಿಳಿಸಿತ್ತು.

ದೆಹಲಿ ಹೈಕೋರ್ಟ್ ಅರವಿಂದ್‌ ಕೇಜ್ರಿವಾಲ್‌ ಧರಣಿಯನ್ನು ಅಸಂವಿಧಾನಿಕ ಎಂದು ಅಲ್ಲಗೆಳೆದಿದ್ದರೆ, ಸುಪ್ರಿಂ ಕೋರ್ಟ್ ಅರ್ಜಿಯ ತುರ್ತು ವಿಚಾರಣೆಯನ್ನು ನಿರಾಕರಿಸಿದೆ. ಒಂದೆಡೆ ಆಮ್‌ ಆದ್ಮಿ ಸದಸ್ಯರಷ್ಟೇ ಅಲ್ಲದೇ ಇತರೆ ರಾಜ್ಯಗಳ ಮುಖ್ಯಮಂತ್ರಿಗಳು ಕೇಜ್ರಿವಾಲ್‌ ಹೋರಾಟವನ್ನು ಬೆಂಬಲಿಸಿ, ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವರು ದೆಹಲಿ ಬಿಕ್ಕಟ್ಟನ್ನು ಪರಿಹರಿಸಲು ಮಧ್ಯಪ್ರವೇಶ ಮಾಡಬೇಕು ಎಂದಿದ್ದಾರೆ. ಆದರೆ ಪ್ರಧಾನಿ ಈ ಕುರಿತು ಮಾತನಾಡಿಲ್ಲ. ಇದುವರೆಗೂ ಕೂಡ ಲೆಫ್ಟಿನೆಂಟ್‌ ಗವರ್ನರ್‌ ಅನಿಲ್‌ ಬೈಜಲ್‌ ಕೇಜ್ರಿವಾಲ್‌ರನ್ನು ಭೇಟಿಯಾಗುವ ಮನಸ್ಸು ಮಾಡಿಲ್ಲ. ಇವರೆಲ್ಲರ ಹಗ್ಗ ಜಗ್ಗಾಟದ ಮಧ್ಯೆ ಬಡವಾಗುತ್ತಿರುವುದು ಮಾತ್ರ ದೆಹಲಿಯ ಪ್ರಜೆಗಳು.

Also read: ಕೇಂದ್ರ ವರ್ಸಸ್‌ ದಿಲ್ಲಿ ಸರಕಾರ: ಕೇಜ್ರಿವಾಲ್‌ ಹೋರಾಟಕ್ಕೆ ದನಿಗೂಡಿಸಿದ ನಟ ಪ್ರಕಾಶ್‌ ರಾಜ್