ಕೆಸಿ ವ್ಯಾಲಿ ಪ್ರಾಜೆಕ್ಟ್‌ನ ಒಂದು ನೋಟ. 
ಸುದ್ದಿ ಸಾರ

‘ಕೆಸಿ ವ್ಯಾಲಿ’ಯ ಅಪಾಯಕಾರಿ ನಡೆ: ಛೀಮಾರಿ ಹಾಕಿದ ಹೈಕೋರ್ಟ್

ಅಷ್ಟೆ ಅಲ್ಲ, ಮುಂದಾಗುವ ಅನಾಹುತಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ನ್ಯಾಯಪೀಠ, ಸರಕಾರಕ್ಕೆ ಮತ್ತು ಸಂಬಂಧಪಟ್ಟ ಇಲಾಖೆಗಳಿಗೆ ತುರ್ತು ನೋಟೀಸ್ ಜಾರಿ ಮಾಡಿತು.

ನೀರಿನ ಸಮಸ್ಯೆಯನ್ನು ಎದುರಿಸುತ್ತಿರುವ ರಾಜಧಾನಿ ಪಕ್ಕದ ಜಿಲ್ಲೆಗಳಿಗೆ ನೀರು ಹರಿಸುವ ಕೆಸಿ ವ್ಯಾಲಿ ಯೋಜನೆ ಸಂಬಂಧಪಟ್ಟಂತೆ ಸೋಮವಾರ ಹೈಕೋರ್ಟ್‌ ನೀರಾವರಿ ಇಲಾಖೆಗೆ ಛೀಮಾರಿ ಹಾಕಿದೆ.

ಬೆಂಗಳೂರಿನ ತ್ಯಾಜ್ಯ ನೀರನ್ನು ಸಂಸ್ಕರಿಸಿ ಚಿಕ್ಕಬಳ್ಳಾಪುರ ಹಾಗೂ ಕೋಲಾರ ಕೆರೆಗಳನ್ನು ತುಂಬಿಸುವ ಆಲೋಚನೆಯೇ ‘ಕೋಲಮಂಗಲ- ಚೆಲ್ಲಘಟ್ಟ ವ್ಯಾಲಿ’ ಯೋಜನೆ. ಆದರೆ, ರಾಜಧಾನಿಯ ಜನ ಗೃಹ ಕಾರ್ಯಗಳಿಗೆ ಬಳಸಿ ಬಿಟ್ಟ ನೀರಿನ ಜತೆಗೆ ಕೈಗಾರಿಕೆಗಳ ತ್ಯಾಜ್ಯವೂ ಸೇರಿಕೊಳ್ಳುವುದರಿಂದ ಸಂಸ್ಕರಣೆಗೊಂಡರೂ ಕೆಸಿ ವ್ಯಾಲಿಯ ನೀರಿನಲ್ಲಿ ಅಪಾಯಕಾರಿ ರಾಸಾಯನಿಕಗಳು ಸೇರಿಕೊಂಡಿರುವ ಸಾಧ್ಯತೆಗಳಿವೆ.

ಇದನ್ನು ಸಂಸ್ಕರಿಸಿ ಪಕ್ಕದ ಜಿಲ್ಲೆಗಳ ಕೆರೆಗಳನ್ನು ತುಂಬಿಸುವ ಮೊದಲು ನೀರಿನ ಗುಣಮಟ್ಟದ ಕುರಿತು ತೆಗೆದುಕೊಳ್ಳಬೇಕಾದ ವೈಜ್ಞಾನಿಕ ಸುರಕ್ಷತಾ ವಿಧಾನಗಳು ಉಪೇಕ್ಷೆಗೆ ಒಳಗಾಗಿವೆ ಎಂಬ ಟೀಕೆ ಯೋಜನೆ ಆರಂಭದಿಂದಲೂ ಕೇಳಿಬಂದಿತ್ತು.

ಇದೇ ತಿಂಗಳು, ಜೂನ್ 2ರಂದು ಕೆಸಿ ವ್ಯಾಲಿಯಿಂದ ನರಸಾಪುರದ ಬಳಿಯ ಲಕ್ಷ್ಮೀಸಾಗರ ಕೆರೆಗೆ ಪ್ರಾಯೋಗಿಕವಾಗಿ ನೀರು ಹರಿಸಲಾಗಿತ್ತು. ಈ ಸಚಿವ ರಮೇಶ್ ಕುಮಾರ್ ಸಂತೋಷದಿಂದ ಕಣ್ಣೀರು ಹಾಕಿದ್ದರು. ಇದರ ಬೆನ್ನಲ್ಲೇ, ಈ ನೀರು ಕುಡಿಯಲು ಯೋಗ್ಯವಾ? ಇಲ್ಲವಾ ಎಂಬುದನ್ನು ಜನರಿಗೆ ಮಾಹಿತಿ ನೀಡಿ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿತ್ತು. ಇದಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ.

ಹೀಗಿರುವಾಗಲೇ, ಹೈಕೋರ್ಟ್‌ನಲ್ಲಿ ಸಮಿತಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿತ್ತು. ಇದನ್ನು ಪುರಸ್ಕರಿಸಿದ ಮುಖ್ಯ ನ್ಯಾಯಮೂರ್ತಿಗಳಿದ್ದ ದ್ವಿಸದಸ್ಯ ಪೀಠ, ನೀರಾವರಿ ಇಲಾಖೆ ಅಧಿಕಾರಿಗಳಿಗೆ ಆರಂಭದಲ್ಲಿಯೇ ಪ್ರಶ್ನೆಯೊಂದನ್ನು ಮುಂದಿಟ್ಟಿತು. ಕೆಸಿ ವ್ಯಾಲಿ ಯೋಜನೆ ಅಡಿಯಲ್ಲಿ ಸಂಸ್ಕರಣಗೊಂಡ ನೀರಿನ ಸುರಕ್ಷತೆ ಬಗ್ಗೆ ತೆಗೆದುಕೊಂಡ ವೈಜ್ಞಾನಿಕ ಕ್ರಮಗಳೇನು ಎಂದು ಪ್ರಶ್ನಿಸಿತು. ಈ ಕುರಿತು ಅಧಿಕಾರಿಗಳ ಕಡೆಯಿಂದ ಸಮರ್ಪಕ ಉತ್ತರ ಬಾರದ ಹಿನ್ನೆಲೆಯಲ್ಲಿ, ಜು. 4ಕ್ಕೆ ವಿಚಾರಣೆ ಮುಂದೂಡಿತು.

ಅಷ್ಟೆ ಅಲ್ಲ, ಮುಂದಾಗುವ ಅನಾಹುತಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ನ್ಯಾಯಪೀಠ, ಸರಕಾರಕ್ಕೆ ಮತ್ತು ಸಂಬಂಧಪಟ್ಟ ಇಲಾಖೆಗಳಿಗೆ ತುರ್ತು ನೋಟೀಸ್ ಜಾರಿ ಮಾಡಿತು.

Also read: ‘ಸಿಲಿಕಾನ್ ಸಿಟಿ ಚರಂಡಿ ನೀರು ಕುಡಿಯಲು ಯೋಗ್ಯನಾ?’: ಕೆಸಿ ವ್ಯಾಲಿಯಿಂದ ಆತಂಕದ ಪತ್ರ