ಸೈದ್ಧಾಂತಿಕ ವಿರೋಧ, ಅಭಿವೃದ್ಧಿಗೆ ಸಹಕಾರ: ದಿಲ್ಲಿ ರಾಜಕೀಯ ಬಿಕ್ಕಟ್ಟಿಗೆ ಪರಿಹಾರ ಎಲ್ಲಿದೆ? 
ಸುದ್ದಿ ಸಾರ

ಸೈದ್ಧಾಂತಿಕ ವಿರೋಧ, ಅಭಿವೃದ್ಧಿಗೆ ಸಹಕಾರ: ದಿಲ್ಲಿ ರಾಜಕೀಯ ಬಿಕ್ಕಟ್ಟಿಗೆ ಪರಿಹಾರ ಎಲ್ಲಿದೆ? 

ಪಕ್ಷ, ಸಿದ್ಧಾಂತ, ಯೋಚನೆಗಳು ಬೇರೆ ಬೇರೆಯಾದರೂ ಸಹ ಗಣರಾಜ್ಯದ ವ್ಯವಸ್ಥೆಯಲ್ಲಿ ನಾಯಕರು ಪರಸ್ಪರ ಸಂಧಿಸಬೇಕಾಗುತ್ತದೆ, ಕುಳಿತು ಚರ್ಚಿಸಬೇಕಾಗುತ್ತದೆ. ಭಾನುವಾರ ಅಂತಹದೊಂದು ಬೆಳವಣಿಗೆ ದಿಲ್ಲಿಯಲ್ಲಿ ನಡೆದಿದೆ. 

ಲೆಫ್ಟಿನೆಂಟ್‌ ಗವರ್ನರ್‌ ಅನಿಲ್‌ ಬೈಜಲ್‌ರ ಕಚೇರಿಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ನಡೆಸುತ್ತಿರುವ ಹೋರಾಟ ದೆಹಲಿ ಸರಕಾರ ವರ್ಸಸ್‌ ಕೇಂದ್ರ ಸರಕಾರ ಎನ್ನುವಂತಾಗಿದೆ. ಕೇಜ್ರಿವಾಲ್‌ರ ಹೋರಾಟಕ್ಕೆ ದೇಶದ ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳು ಶನಿವಾರ ಬೆಂಬಲ ಸೂಚಿಸಿದ್ದಾರೆ. ಅದೇ ಮುಖ್ಯಮಂತ್ರಿಗಳು ಭಾನುವಾರ ಪ್ರಧಾನಿ ಮೋದಿಯವರ ಕೈಕುಲುಕಿ ಶುಭ ಕೋರಿದ್ದಾರೆ. ಗಣತಂತ್ರ ವ್ಯವಸ್ಥೆ ಎಂದರೆ ಇದೇ.

ಸಾರ್ವಜನಿಕರ ಮುಂದೆ ಪ್ರಧಾನಿ ನರೇಂದ್ರ ಮೋದಿಯವರನ್ನು ಅಲ್ಲಗೆಳೆಯುವ, ಪ್ರಧಾನಿ ಕಾರ್ಯಗಳನ್ನು ಟೀಕಿಸುವ ಈ ನಾಲ್ಕೂ ಮುಖ್ಯಮಂತ್ರಿಗಳು ಪ್ರಧಾನಿ ಮೋದಿಗೆ ಎದುರಾದಾಗ ನಗು ಚೆಲ್ಲಿದ್ದಾರೆ. ಮೋದಿಯೂ ಕೂಡ ಅವರೊಟ್ಟಿಗೆ ಆಪ್ತರಂತೆ ವರ್ತಿಸಿದ್ದಾರೆ.

ಕರ್ನಾಟಕದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಅಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಮತ್ತು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಭಾನುವಾರ ನೀತಿ ಆಯೋಗದ ಸಭೆಗೆ ತೆರಳಿದ್ದ ವೇಳೆ ಪ್ರಧಾನಿಯವರನ್ನು ಭೇಟಿಯಾಗಿದ್ದಾರೆ.

ಸಾರ್ವಜನಿಕವಾಗಿ ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಕ್ಷ ಕರ್ನಾಟಕದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರಿಗೆ ರಾಜಕೀಯ ವಿರೋಧ ಪಕ್ಷ. ಅವರ ತಂದೆ ಮಾಜಿ ಪ್ರಧಾನಿ ದೇವೇಗೌಡರೂ ಕೂಡ ಬಿಜೆಪಿಯ ವಿರೋಧಿ. ಕೇರಳದ ಪಿಣರಾಯಿ ವಿಜಯನ್‌ರ ಸರಕಾರ ಪಕ್ಕ ಎಡಪಂಥೀಯ ಧೋರಣೆಗಳನ್ನು ಹೊಂದಿದ್ದರೆ, ಮೋದಿ ನೇತೃತ್ವದ ಕೇಂದ್ರ ಸರಕಾರ ಮತ್ತು ಬಿಜೆಪಿ ಪಕ್ಷ ಬಲಪಂಥೀಯ ಧೋರಣೆಯನ್ನು ಹೊಂದಿರುವವರು.

ತೃಣಮೂಲ ಕಾಂಗ್ರೆಸ್‌ನ ಮಮತಾ ಬ್ಯಾನರ್ಜಿ ದೇಶದಲ್ಲಿ ಮೋದಿ ಸರಕಾರವನ್ನು ಉರುಳಿಸಿ ತೃತೀಯ ರಂಗವನ್ನು ಅಧಿಕಾರಕ್ಕೆ ತರುವಲ್ಲಿ ಶ್ರಮಿಸುತ್ತಿರುವ ಪ್ರಮುಖ ರಾಜಕೀಯ ನಾಯಕರಲ್ಲೊಬ್ಬರು. ಇನ್ನುಳಿದ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನವನ್ನು ನೀಡಲು ಹಿಂದೇಟು ಹಾಕಿದ್ದರಿಂದ ಇತ್ತೀಚಿಗಷ್ಟೇ ಬಿಜೆಪಿ ಜತೆಗಿನ ಸಂಬಂಧವನ್ನು ಸಂಪೂರ್ಣವಾಗಿ ಕಡೆದುಕೊಂಡಿದ್ದವರು. ಮೋದಿಯ ಬದ್ಧ ವೈರಿಗಳಂತೆ ಗೋಚರಿಸುವ ಇವರು ಈಗ ಮೋದಿಯನ್ನು ಕಂಡು ನಗೆ ಬೀರಿದ್ದಾರೆ.

ಸೈದ್ಧಾಂತಿಕ ವಿರೋಧ, ಅಭಿವೃದ್ಧಿಗೆ ಸಹಕಾರ: ದಿಲ್ಲಿ ರಾಜಕೀಯ ಬಿಕ್ಕಟ್ಟಿಗೆ ಪರಿಹಾರ ಎಲ್ಲಿದೆ? 

ನೀತಿ ಆಯೋಗದ ಸಭೆಯಲ್ಲಿಯೂ ಕೂಡ ಚಂದ್ರಬಾಬು ನಾಯ್ಡು, ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವಂತೆ ಒತ್ತಾಯಿಸಿದ್ದಾರೆ. ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಕೂಡ ಇದೇ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಚಂದ್ರಬಾಬು ನಾಯ್ಡುರವರ ಬೇಡಿಕೆಯನ್ನು ಬೆಂಬಲಿಸಿ ಮಮತಾ ಬ್ಯಾನರ್ಜಿ ವಾದ ಮಂಡಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಸಭೆಯಲ್ಲಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ನೀತಿಗಳನ್ನು ರೂಪಿಸುವಲ್ಲಿ ರಾಜ್ಯ ಸರಕಾರಗಳು ಮಹತ್ವದ ಪಾತ್ರವನ್ನು ನಿರ್ವಹಿಸುತ್ತವೆ ಎಂದಿದ್ದಾರೆ. “ಈ ಬಾರಿ ಕೇಂದ್ರ ಸರಕಾರದಿಂದ ರಾಜ್ಯಗಳಿಗೆ ಸರಿಸುಮಾರು 11 ಲಕ್ಷ ಕೋಟಿ ಹಣ ಬಿಡುಗಡೆಯಾಗಲಿದೆ. ಕಳೆದ ವರ್ಷ 6 ಲಕ್ಷ ಕೊಟಿ ರೂಪಾಯಿಗಳು ಬಿಡುಗಡೆಯಾಗಿತ್ತು. ಉಜ್ವಲಾ, ಸೌಭಾಗ್ಯ, ಉಜಾಲ, ಜನ್‌ಧನ್, ಜೀವನ್ ಜ್ಯೋತಿ, ಸುರಕ್ಷಾ ಭೀಮಾ ಯೋಜನೆ ಹಾಗೂ ಇಂಧ್ರ ಧನುಶ್‌ ಯೋಜನೆಗಳು ಪ್ರಮುಖ ಯೋಜನೆಗಳು,” ಎಂದು ಮೋದಿ ಹೇಳಿದ್ದಾರೆ.

ಶನಿವಾರದ ದಿನ ಮಮತಾ ಬ್ಯಾನರ್ಜಿ ಅರವಿಂದ್‌ ಕೇಜ್ರಿವಾಲ್‌ರ ನಿವಾಸಕ್ಕೆ ಭೇಟಿ ನೀಡಿದ್ದರು. ಈ ಸಂಧರ್ಭದಲ್ಲಿ ದಿಲ್ಲಿಯ ಪರಿಸ್ಥಿತಿಯನ್ನು ಸಾಂವಿಧಾನಿಕ ಬಿಕ್ಕಟ್ಟು ಎಂದು ಕರೆದಿದ್ದರು. ಈ ವೇಳೆ, “ಇದೊಂದು ಸಾಂವಿಧಾನಿಕ ಬಿಕ್ಕಟ್ಟು. ಇದರಿಂದ ಸರಕಾರ ಮತ್ತು ಜನ ಸಮಾನ್ಯರು ಬೆಲೆ ತೆರುವಂತೆ ಆಗಬಾರದು,” ಎಂದು ಹೇಳಿಕೆ ನೀಡಿದ್ದರು.

“ನಮಗೆ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ರನ್ನು ಭೇಟಿ ಮಾಡುವ ಆಶಯವಿತ್ತು. ಆದರೆ ಅವರನ್ನು ಭೇಟಿಯಾಗಲು ಅವಕಾಶ ನೀಡಲಿಲ್ಲ. ನಂತರದಲ್ಲಿ ನಾಲ್ಕೂ ರಾಜ್ಯಗಳ ಮುಖ್ಯಮಂತ್ರಿಗಳು ಲೆಫ್ಟಿನೆಂಟ್‌ ಗವರ್ನರ್‌ರಿಗೆ ಭೇಟಿಯಾಗಲು ಅವಕಾಶ ನೀಡುವಂತೆ ಕೋರಿ ಪತ್ರ ಬರೆದಿದ್ದೆವು. ಆದರೆ ಲೆಫ್ಟಿನೆಂಟ್‌ ಗವರ್ನರ್‌ ಇಲ್ಲಿಲ್ಲ ಎಂದು ಉತ್ತರ ದೊರೆಯಿತು. ಹಲವು ಸಮಯ ಕಾದರೂ ಕೂಡ ನಮಗೆ ಕೇಜ್ರಿವಾಲ್‌ರನ್ನು ಭೇಟಿಯಾಗಲು ಬಿಡಲಿಲ್ಲ,” ಎಂದು ಮಮತಾ ಬ್ಯಾನರ್ಜಿ ಸುದ್ದಿ ಮಾಧ್ಯಮಗಳ ಮುಂದೆ ಹೇಳಿದ್ದರು.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯೂ ಕೂಡ ಮಮತಾ ಬ್ಯಾನರ್ಜಿಯ ಮಾತುಗಳನ್ನೇ ಪುನರುಚ್ಚರಿಸಿದರು. “ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ಗೆ ಬೆಂಬಲ ನೀಡುವ ಸಲುವಾಗಿ ನಾವಿಲ್ಲಿಗೆ ಬಂದಿದ್ದೆವು. ಆದರೆ ಅದು ಸಾಧ್ಯವಾಗಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಮಧ್ಯ ಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸಬೇಕು ಎಂಬ ಬೇಡಿಕೆಯನ್ನು ಅವರ ಮುಂದಿಡುತ್ತಿದ್ದೇವೆ,” ಎಂದರು.

ಶನಿವಾರವಷ್ಟೇ ನಾಲ್ವರು ಮುಖ್ಯಮಂತ್ರಿಗಳು ಪ್ರಧಾನಿ ವಿರುದ್ಧ ಮಾತನಾಡಿದ್ದರು. ಆದರೆ ಎದುರು ಸಿಕ್ಕಾಗ ಕತೆ ಬೇರೆಯಾಗಿದೆ. ಪ್ರಧಾನಿ ಮೋದಿ ಆದಿಯಾಗಿ 4 ಜನ ಮುಖ್ಯಮಂತ್ರಿಗಳೂ ಕೂಡ ಆಪ್ತರಂತೆ ವರ್ತಿಸಿದ್ದಾರೆ.

ಗಣರಾಜ್ಯ ವ್ಯವಸ್ಥೆಯಲ್ಲಿ ಕೇಂದ್ರ, ರಾಜ್ಯ ಎರಡಕ್ಕೂ ಕೂಡ ಪ್ರಾಮುಖ್ಯತೆಯಿರುತ್ತದೆ. ಎರಡೂ ಸರಕಾರಗಳು ನಡುವೆ ಪರಸ್ಪರ ಸಹಕಾರದ ಅಗತ್ಯವಿರುತ್ತದೆ. ವಿಚಾರಗಳು ಬೇರೆಯಾದ ಮಾತ್ರಕ್ಕೆ ಸಂಬಂಧವನ್ನೇ ಕಡಿದುಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಎಷ್ಟೇ ವೈರುಧ್ಯವಿದ್ದರೂ ಕೂಡ ಒಕ್ಕೂಟ ವ್ಯವಸ್ಥೆಯ ಭಾಗವಾಗಿರುವುದುರಿಂದ ಮುಖತಃ ಭೇಟಿಯಾಗಿ, ಹಸ್ತ ಲಾಘವ ನೀಡಿ ಮಾತನಾಡಲೇಬೇಕು. ಪರಸ್ಪರ ಸಹಕಾರ ನೀಡದೆ ದೇಶದ ಅಭಿವೃದ್ಧಿ ಅಸಾಧ್ಯ ಎಂಬುದನ್ನೂ ಗಮನಿಸಬೇಕಿದೆ.

ಶನಿವಾರ ಮತ್ತು ಭಾನುವಾರ ನಡೆದಿರುವುದು ಕೂಡ ಇದೇ. ಶನಿವಾರದಂದು ವಿಚಾರಗಳ ದೃಷ್ಟಿಯಿಂದ ಒಬ್ಬರಿಗಿಂತ ಒಬ್ಬರು ಭಿನ್ನವೆನಿಸುವ ನಾಲ್ಕು ಜನ ಮುಖ್ಯಮಂತ್ರಿಗಳು, ಅವರೆಲ್ಲರಿಗಿಂತಲೂ ಭಿನ್ನವೆನಸುವ ಅರವಿಂದ್‌ ಕೇಜ್ರಿವಾಲ್‌ಗೆ ಬೆಂಬಲ ನೀಡಿಲು ತೆರಳಿದ್ದರು. ಮಾರನೇ ದಿನ ಭಾನುವಾರ ನೀತಿ ಆಯೋಗದ ಸಭೆಯಲ್ಲಿ ಪ್ರಧಾನಿಗಳಿಗೆ ಎದುರಾಗಿ ಕೈಕುಲುಕಿದರು.

ಇನ್ನೇನು ಇಬ್ಬರ ಮಧ್ಯೆ ಮಾತುಗಳು ತಾರಕಕ್ಕೇರಿ ಅಣ್ವಸ್ತ್ರ ಪ್ರಯೋಗವನ್ನು ಮಾಡಿಯೇ ಬಿಡುತ್ತಾರೆ ಎನ್ನುವಂತೆ ವರ್ತಿಸಿದ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್‌ ಟಂಪ್ರ್‌ ಮತ್ತು ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್‌ ಜಾಂಗ್‌-ಉನ್‌ರೇ ಪರಸ್ಪರ ಭೇಟಿಯಾಗಿ ಮಾತನಾಡಿದ್ದಲ್ಲದೇ ಒಂದಷ್ಟು ದೂರ ಜತೆಗೆ ಹೆಜ್ಜೆ ಹಾಕಿದ್ದಾರೆ.

ಜಗತ್ತು ಈ ನಿಟ್ಟಿನಲ್ಲಿ ಸಾಗುತ್ತಿರುವಾಗ ದೇಶದ ರಾಜಧಾನಿಯಲ್ಲಿಯೇ ರಾಜಕೀಯ ಬಿಕ್ಕಟ್ಟು ಸೃಷ್ಟಿಸಿಕೊಂಡು, ಅದರ ಸುತ್ತಲೇ ಸುತ್ತುವುದು ದೇಶದ ರಾಜಕೀಯಕ್ಕೆ ಒಳ್ಳೆಯ ಶೋಬೆಯನ್ನಂತೂ ತರುವುದಿಲ್ಲ. ನೀತಿ ಆಯೋಗದ ಸಭೆಯಲ್ಲಿ ಕಂಡ ಸೌಹಾರ್ಧದ ಚಿತ್ರಣ, ದಿಲ್ಲಿಯಲ್ಲೂ ಕಂಡುಬರಬೇಕಿದೆ.