ಕೇಂದ್ರ ವರ್ಸಸ್‌ ದಿಲ್ಲಿ ಸರಕಾರ: ಕೇಜ್ರಿವಾಲ್‌ ಹೋರಾಟಕ್ಕೆ ದನಿಗೂಡಿಸಿದ ನಟ ಪ್ರಕಾಶ್‌ ರಾಜ್
ಸುದ್ದಿ ಸಾರ

ಕೇಂದ್ರ ವರ್ಸಸ್‌ ದಿಲ್ಲಿ ಸರಕಾರ: ಕೇಜ್ರಿವಾಲ್‌ ಹೋರಾಟಕ್ಕೆ ದನಿಗೂಡಿಸಿದ ನಟ ಪ್ರಕಾಶ್‌ ರಾಜ್

ದಿಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಪರ ಮಾತನಾಡಿರುವ ನಟ ಪ್ರಕಾಶ್‌ ರಾಜ್‌, ಪ್ರಧಾನಿ ಮೋದಿಗೆ ಸಲಹೆ ನೀಡಿದ್ದಾರೆ. ಫಿಟ್‌ನೆಸ್‌ ಚಾಲೆಂಜ್‌ ಮಧ್ಯೆ ಬಿಡುವು ಮಾಡಿಕೊಂಡು, ಕೇಜ್ರಿವಾಲ್‌ರ ಮುಷ್ಕರದ ಕಡೆ ಗಮನ ನೀಡಿ ಎಂದಿದ್ದಾರೆ.

ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಪರ ಮಾತನಾಡಿರುವ ನಟ ಪ್ರಕಾಶ್‌ ರಾಜ್‌, ಪ್ರಧಾನಿ ಮೋದಿಗೆ ಸಲಹೆ ನೀಡಿದ್ದಾರೆ. ಫಿಟ್‌ನೆಸ್‌ ಚಾಲೆಂಜ್‌ ಮಧ್ಯೆ ಸ್ವಲ್ಪ ಬಿಡುವು ಮಾಡಿಕೊಂಡು, ಲೆಫ್ಟಿನೆಂಟ್‌ ಗವರ್ನರ್‌ ವಿರುದ್ಧ ಅರವಿಂದ್‌ ಕೇಜ್ರಿವಾಲ್‌ ಆರಂಭಿಸಿರುವ ಮುಷ್ಕರದ ಕಡೆ ಗಮನ ನೀಡಿ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಆಡಳಿತವನ್ನು ಮುಕ್ತವಾಗಿ ಟೀಕಿಸುವ ಮೂಲಕ ಚರ್ಚೆಗೊಳಗಾದ ಬಹುಭಾಷಾ ನಟ ಪ್ರಕಾಶ್‌ ರಾಜ್‌, ಮತ್ತೆ ಸುದ್ದಿ ಕೇಂದ್ರಕ್ಕೆ ಬಂದಿದ್ದಾರೆ. ಲೆಫ್ಟಿನೆಂಟ್‌ ಗವರ್ನರ್‌ ಅನಿಲ್‌ ಬೈಜಲ್‌ರ ಕಚೇರಿಯಲ್ಲಿ ಧರಣಿ ನಡೆಸುತ್ತಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಪರವಾಗಿ ಬ್ಯಾಟಿಂಗ್‌ ನಡೆಸಿದ್ದಾರೆ.

ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಕಳೆದ ವಾರ ತಮ್ಮ ಸಚಿವ ಸಂಪುಟ ಸದಸ್ಯರಾದ ಮನೀಶ್‌ ಸಿಸೋಡಿಯಾ, ಗೋಪಾಲ್‌ ರಾಜ್‌ ಹಾಗೂ ಸತ್ಯೇಂದರ್‌ ಜೈನ್‌ರೊಂದಿಗೆ ಲೆಫ್ಟಿನೆಂಟ್‌ ಗವರ್ನರ್‌ ಅನಿಲ್‌ ಬೈಜಲ್‌ರನ್ನು ಭೇಟಿ ಮಾಡಲೆಂದು ಅವರ ಕಚೇರಿಗೆ ತೆರಳಿದ್ದರು. ಐಎಎಸ್‌ ಅಧಿಕಾರಿಗಳು ನಡೆಸುತ್ತಿರುವ ಹೋರಾಟ ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ಚರ್ಚೆ ಮಾಡುವ ಉದ್ದೇಶ ಅವರದಾಗಿತ್ತು. ಆದರೆ ಅನಿಲ್‌ ಬೈಜಲ್‌ರನ್ನು ಭೇಟಿ ಮಾಡಲು ಸಾಧ್ಯವಾಗಿಲ್ಲ. ಅಂದಿನಿಂದಲೂ ಕೂಡ ಕೇಜ್ರಿವಾಲ್ ಲೆಫ್ಟಿನೆಂಟ್‌ ಗವರ್ನರ್‌ ಕಚೇರಿ ಗೆಸ್ಟ್‌ ರೂಮ್‌ನಲ್ಲಿಯೇ ಹೋರಾಟವನ್ನು ಆರಂಭಿಸಿದ್ದರು. ಇಂದಿಗೆ ಅರವಿಂದ್‌ ಕೇಜ್ರಿವಾಲ್‌ ಮತ್ತವರ ಸಂಗಡಿಗರ ಹೋರಾಟ 7ನೇ ದಿನಕ್ಕೆ ಕಾಲಿಟ್ಟಿದೆ.

ಈ ಕುರಿತು ಟ್ವಿಟ್‌ ಮಾಡಿರುವ ನಟ ಪ್ರಕಾಶ್‌ ರಾಜ್‌, “ಪ್ರಿಯ ಅತ್ಯುನ್ನತ ನಾಯಕರೇ.. ನೀವು ಫಿಟ್‌ನೆಸ್‌ ಚಾಲೆಂಜ್‌, ಯೋಗ ಹಾಗೂ ವ್ಯಾಯಾಮಗಳಲ್ಲಿ ನಿರತರಾಗಿದ್ದೀರಿ ಎಂದು ತಿಳಿದಿದೆ. ಒಂದು ನಿಮಿಷ ದೀರ್ಘ ಉಸಿರು ತೆಗೆದುಕೊಂಡು ಸುತ್ತಲೂ ಗಮನಿಸಿ. ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ರ ಜತೆ ಕಾರ್ಯ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿ... ನಿಮ್ಮ ಕರ್ತವ್ಯವನ್ನು ನಿರ್ವಹಿಸಿ” ಎಂದು ಪ್ರಧಾನ ಮಂತ್ರಿಗಳನ್ನು ಕುಟುಕಿದ್ದಾರೆ.

ಪ್ರಕಾಶ್‌ ರಾಜ್‌ರ ಟ್ವಿಟ್‌ ಸಾಕಷ್ಟು ಗದ್ದಲವನ್ನು ಉಂಟುಮಾಡಿದೆ. ಜನ ಪ್ರಕಾಶ್‌ ರಾಜ್‌ರನ್ನು ಬೆಂಬಲಿಸಿ ಮಾತನಾಡಿದರೆ, ಇನ್ನುಷ್ಟು ಮಂದಿ ಅರವಿಂದ್‌ ಕೇಜ್ರಿವಾಲ್‌ ದಿಲ್ಲಿ ಜನತೆಗೆ ನೀಡಿರುವ ಸೌಲಭ್ಯಗಳ ಕುರಿತು ವ್ಯಂಗ್ಯವಾಡಿದ್ದಾರೆ.

‘ಜಸ್ಟ್‌ ಆಸ್ಕಿಂಗ್‌’ ಟ್ಯಾಷ್‌ಟ್ಯಾಗ್‌ ಮೂಲಕ ಕರ್ನಾಟಕ ಬಿಜೆಪಿ ಅಥವಾ ಪ್ರಧಾನಿ ಮೋದಿಯನ್ನು ಪ್ರಶ್ನಿಸಿ ಪ್ರಕಾಶ್‌ ರಾಜ್‌ ಆರಂಭಿಸಿದ ಪ್ರಶ್ನೆ ಕೇಳುವ ಕಾರ್ಯ ಅಂದೋಲನದ ರೂಪ ಪಡೆದುಕೊಂಡಿತ್ತು. ‘ಜಸ್ಟ್‌ ಆಸ್ಕಿಂಗ್‌’ ಎಂಬ ಹ್ಯಾಷ್‌ಟ್ಯಾಗ್‌ಅನ್ನು ಮೊದಲು ಸಾಮಾಜಿಕ ಜಾಲತಾಣಗಳಲ್ಲಿ ಬಳಸಿದ್ದ ಪ್ರಕಾಶ್‌ ರಾಜ್‌ಗೆ ಭರಪೂರ ಬೆಂಬಲ ದೊರೆತಿತ್ತು.

ರಜನಿಕಾಂತ್‌, ಕಮಲ್ ಹಾಸನ್‌ರಂತೆ ಸಕ್ರಿಯ ರಾಜಕಾರಣಕ್ಕೆ ಇಳಿಯುವ ಮನಸ್ಸಿಲ್ಲ ಎಂದಿದ್ದ ಪ್ರಕಾಶ್‌ ರಾಜ್‌, ನಾನು ಯಾವ ಪಕ್ಷದ ಸದಸ್ಯನಾಗಲು ಬಯಸುವುದಿಲ್ಲ ಎಂದಿದ್ದರು. ದೇಶದ ನಾಗರಿಕರ ಜತೆ ನಿಲ್ಲುತ್ತೇನೆ ಎಂದು ಸ್ಪಷ್ಟ ಪಡಿಸಿದ್ದರು.

ಕರ್ನಾಟಕದ ಚುನಾವಣೆ ನಡೆದು ಫಲಿತಾಂಶ ಹೊರಬೀಳುವವರೆಗೂ ‘ಸಂವಿಧಾನ ಉಳಿಸಿ’ ಹೆಸರಿನಲ್ಲಿ ರಾಜ್ಯವನ್ನು ಸುತ್ತಿದ್ದ ಪ್ರಕಾಶ್‌ ರಾಜ್‌, ನಂತರದ ದಿನಗಳಲ್ಲಿ ಸರಕಾರಿ ಶಾಲೆಗಳ ಪುನರುಜ್ಜೀವನಕ್ಕೆ ಅಣಿಯಾಗಿದ್ದರು. ಈಗ ಮತ್ತೆ ಟ್ವೀಟ್‌ ಮಾಡಿ, ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ರ ಹೋರಾಟಕ್ಕೆ ದನಿಗೂಡಿಸಿದ್ದಾರೆ.

ಪ್ರಕಾಶ್ ರಾಜ್‌ ಜತೆ ನಟ ಹಾಗೂ ರಾಜಕಾರಣಿ ಶತೃಘ್ನ ಸಿನ್ಹಾ ಕೂಡ ಅರವಿಂದ್‌ ಕೇಜ್ರಿವಾಲ್‌ರನ್ನು ಬೆಂಬಲಿಸಿ ಟ್ವಿಟ್‌ ಮಾಡಿದ್ದಾರೆ. ಅರವಿಂದ್‌ ಕೇಜ್ರಿವಾಲ್‌ರನ್ನು ‘ಜೆಂಟಲ್‌ಮ್ಯಾನ್‌ ಪೊಲಿಟೀಷಿಯನ್‌’ ಎಂದಿರುವ ಶತೃಘ್ನ ಸಿನ್ಹಾ, “ಈಜುಗಾರನ ಕೈಗಳನ್ನು ಕಟ್ಟಿ ಈಜಲು ಬಿಟ್ಟರೆ, ಆತ ಹೇಗೆ ಈಜಲು ಸಾಧ್ಯ?” ಎಂದು ಪ್ರಶ್ನಿಸಿದ್ದಾರೆ.

ಕಳೆದ ಶನಿವಾರವಷ್ಟೇ ಕರ್ನಾಟಕದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಪಿಣರಾಯಿ ವಿಜಯನ್, ಮಮತಾ ಬ್ಯಾನಜಿ ಹಾಗೂ ಚಂದ್ರಬಾಬು ನಾಯ್ಡು ದೆಹಲಿಗೆ ತೆರಳಿದ್ದಾಗ ಅರವಿಂದ್‌ ಕೇಜ್ರಿವಾಲ್‌ಗೆ ಬೆಂಬಲ ಸೂಚಿಸಿದ್ದರು.

ಅರವಿಂದ್‌ ಕೇಜ್ರಿವಾಲ್‌ ನಡೆಸುತ್ತಿರುವ ಹೋರಾಟ 7ನೇ ದಿನಕ್ಕೆ ಕಾಲಿಟ್ಟಿದ್ದು, ದೇಶದ ಹಲವಾರು ಪ್ರಮುಖರ ಬೆಂಬಲವನ್ನು ಪಡೆದುಕೊಳ್ಳುತ್ತಿದೆ. ಈವರೆಗೂ ಕೂಡ ಕೇಜ್ರಿವಾಲ್‌ ಹೋರಾಟದ ಕುರಿತಾಗಿ ಪ್ರಧಾನಿ ಮೋದಿ ಒಂದು ಮಾತನ್ನೂ ಕೂಡ ಆಡಿಲ್ಲ. ಕೇಂದ್ರ ಸರಕಾರ ವರ್ಸಸ್‌ ದೆಹಲಿ ಸರಕಾರ ಎಂಬಂತಾಗಿರುವ ಈ ಹೋರಾಟ ಎಲ್ಲಿಗೆ ಕೊನೆಯಾಗುತ್ತದೆ ಎನ್ನುವುದುನ್ನು ಕಾಲವೇ ತಿಳಿಸಲಿದೆ.