samachara
www.samachara.com
ಗಂಗಾಧರ ಚಡಚಣ ಹತ್ಯೆ ಪ್ರಕರಣ: ಪಿಎಸ್‌ಐ ಗೋಪಾಲ ಹಳ್ಳೂರ ನ್ಯಾಯಾಂಗ ಬಂಧನಕ್ಕೆ
ಸುದ್ದಿ ಸಾರ

ಗಂಗಾಧರ ಚಡಚಣ ಹತ್ಯೆ ಪ್ರಕರಣ: ಪಿಎಸ್‌ಐ ಗೋಪಾಲ ಹಳ್ಳೂರ ನ್ಯಾಯಾಂಗ ಬಂಧನಕ್ಕೆ

ಗಂಗಾಧರ ಚಡಚಣ ಕೊಲೆ ಪ್ರಕರಣದಲ್ಲಿ ಪೊಲೀಸರು ಭಾಗಿಯಾಗಿದ್ದಾರೆ ಎಂದು ಸುತ್ತಮುತ್ತಲಿನ ಸಾರ್ವಜನಿಕರು ಮಾತನಾಡುತ್ತಿದ್ದರು. ಈಗ ದೊರೆತಿರುವ ಸಾಕ್ಷ್ಯಾಧಾರಗಳು ಸಾರ್ವಜನಿಕರ ಅನುಮಾನಗಳನ್ನು ನಿಜವಾಗಿಸುವ ಹಾದಿಯಲ್ಲಿವೆ.

ಎನ್‌ಕೌಂಟರ್‌ಗೆ ಬಲಿಯಾದ, ಭೀಮಾ ತೀರದ ಹಂತಕ ಎಂದೇ ಪ್ರಖ್ಯಾತನಾಗಿದ್ದ ಧರ್ಮರಾಜ್‌ ಚಡಚಣರ ಸಹೋದರ ಗಂಗಾಧರ ಚಡಚಣ ನಿಗೂಢವಾಗಿ ನಾಪತ್ತೆಯಾಗಿದ್ದರು. ಈಗ ಪೊಲೀಸರು ಇದು ಕೊಲೆ ಪ್ರಕರಣ ಎಂದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಸ್‌ಐ ಗೋಪಾಲ ಹಳ್ಳೂರ ವಿರುದ್ಧ ಸಾಕ್ಷಿ ದೊರೆತಿವೆ ಎಂದು ಸಬ್‌ಇನ್ಸ್‌ಪೆಕ್ಟರ್‌ ಪ್ರಕಾಶ್‌ ನಿಕ್ಕಂ ತಿಳಿಸಿದ್ದಾರೆ.

ಈ ಕುರಿತು ಸುದ್ಧಿ ಸಂಸ್ಥೆಗಳ ಜತೆ ಮಾತನಾಡಿದ ಸಬ್‌ಇನ್ಸ್‌ಪೆಕ್ಟರ್‌ ಪ್ರಕಾಶ್ ನಿಕ್ಕಂ, “ಗಂಗಾಧರ ಚಡಚಣ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರು ಆರೋಪಿಗಳನ್ನು ನಾವು ಬಂಧಿಸಿದ್ದೇವೆ. ಈ ಹಿಂದೆ ಚಡಚಣದಲ್ಲಿ ಪಿಎಸ್‌ಐ ಆಗಿ ಕಾರ್ಯ ನಿರ್ವಹಿಸಿದ್ದ ಗೋಪಾಲ ಹಳ್ಳೂರ ಸೇರಿದಂತೆ ಮೂರು ಜನ ಪೇದೆಗಳ ವಿರುದ್ಧ ಸಾಕ್ಷಿಗಳು ದೊರೆತಿವೆ. ನಾಲ್ಕು ಜನರನ್ನೂ ಕೂಡ ಈಗಾಗಲೇ ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ,” ಎಂದು ಹೇಳಿದ್ದಾರೆ.

ಇಡೀ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ ಎಂದು ಪ್ರಕಾಶ್‌ ನಿಕ್ಕಂ ತಿಳಿಸಿದ್ದಾರೆ. ಈ ಪ್ರಕರಣದ ಪ್ರಮುಖ ಆರೋಪಿಯಾದ ಮಹಾದೇವ ಸಾಹುಕಾರ ಬೈರಗೊಂಡ ತಪ್ಪಿಸಿಕೊಂಡಿದ್ದಾನೆ. ಆತನ ಪತ್ತೆಗಾಗಿ ಎರಡು ತಂಡಗಳನ್ನು ರಚಿಸಲಾಗಿದೆ. ಎರಡೂ ತಂಡಗಳೂ ಕೂಡ ಕಾರ್ಯಾಚರಣೆ ನಡೆಸುತ್ತಿವೆ ಎಂದು ಪ್ರಕಾಶ್ ನಿಕ್ಕಂ ಹೇಳಿದ್ದಾರೆ.

ಕೆಲವು ದಿನಗಳ ಹಿಂದೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಉತ್ತರ ವಲಯದ ಐಜಿಪಿ ಆಲೋಕ್‌ ಕುಮಾರ್‌ ಸ್ವತಃ ತಾವೇ ಆಗಮಿಸಿದ್ದರು. ‘ಪೊಲೀಸ್‌ ಇಲಾಖೆಯ ಅಧಿಕಾರಿಗಳೇ ಗಂಗಾಧರ ಚಡಚಣ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ. ಈ ಕುರಿತು ಏನು ಹೇಳುತ್ತೀರಿ?’ ಎಂದು ವರದಿಗಾರರು ಕೇಳಿದ ಪ್ರಶ್ನೆಗೆ ಸಿಡಿಮಿಡಿಗೊಂಡಿದ್ದ ಐಜಿಪಿ ಅಲೋಕ್‌ ಕುಮಾರ್‌, “ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಕೂಡ ನಿಶ್ಚಿತವಾಗಿ ಶಿಕ್ಷೆಗೆ ಗುರಿ ಪಡಿಸಲಾಗುವುದು,” ಎಂದು ತಿಳಿಸಿದ್ದರು. ಈಗ ದೊರೆತಿರುವ ಸಾಕ್ಷ್ಯಾಧಾರಗಳು ಸಾರ್ವಜನಿಕರ ಮಾತುಗಳನ್ನು ನಿಜಗೊಳಿಸುವ ಹಾದಿಯಲ್ಲಿವೆ.