samachara
www.samachara.com
ರಂಜಾನ್‌ ದಿನವೂ ಕಾಶ್ಮೀರ ಪ್ರಕ್ಷುಬ್ಧ: ದಕ್ಷಿಣದಲ್ಲಿ ಯುವಕನ ಬಲಿ
ಸುದ್ದಿ ಸಾರ

ರಂಜಾನ್‌ ದಿನವೂ ಕಾಶ್ಮೀರ ಪ್ರಕ್ಷುಬ್ಧ: ದಕ್ಷಿಣದಲ್ಲಿ ಯುವಕನ ಬಲಿ

ಈದ್‌ ಪ್ರಾರ್ಥನೆ ಮುಗಿದು ಕೆಲಹೊತ್ತು ಕಳೆಯುವ ಮೊದಲೇ ಕಾಶ್ಮೀರದ ಅನಂತ್‌ನಾಗ್‌ ಪಟ್ಟಣದಲ್ಲಿ ಭದ್ರತಾ ಸಿಬ್ಬಂದಿ ಹಾಗೂ ಬಂಡುಕೋರರ ನಡುವೆ ಘರ್ಷಣೆ ನಡೆದಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಯುವಕ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.

ಈದ್‌ ಪ್ರಾರ್ಥನೆ ಮುಗಿದು ಕೆಲಹೊತ್ತು ಕಳೆಯುವ ಮೊದಲೇ ದಕ್ಷಿಣ ಕಾಶ್ಮೀರದ ಅನಂತ್‌ನಾಗ್‌ ಪಟ್ಟಣದಲ್ಲಿ ಭದ್ರತಾ ಸಿಬ್ಬಂದಿ ಮತ್ತು ಬಂಡುಕೋರರ ನಡುವೆ ಘರ್ಷಣೆ ಏರ್ಪಟ್ಟಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಯುವಕನೊಬ್ಬ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.

ಶನಿವಾರ ಅನಂತ್‌ನಾಗ್‌ ಪಟ್ಟಣದ ಜಂಗ್ಲತ್‌ ಮಂಡಿ ಎಂಬ ಪ್ರದೇಶದಲ್ಲಿ ನಡೆದ ಘರ್ಷಣೆಯಲ್ಲಿ ಸರಿ ಸಮಾರು 10 ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಬ್ರಾಕ್ಪೋರಾ ಎಂಬ ಪ್ರದೇಶದಲ್ಲಿ ವಾಸವಾಗಿದ್ದ 20 ವರ್ಷ ಪ್ರಾಯದ ಯುವಕ ಶೀರಜ್‌ ಅಹ್ಮದ್‌, ಘಟನೆಯ ವೇಳೆ ತೀವ್ರವಾಗಿ ಗಾಯಯಗೊಂಡು ಆಸ್ಪತ್ರೆ ಸೇರಿದ್ದ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕೆಲವೇ ಹೊತ್ತಿನಲ್ಲಿ ಶೀರಜ್‌ ಅಹ್ಮದ್‌ ಕೊನೆಯುಸಿರೆಳೆದಿದ್ದಾನೆ.

ಘರ್ಷಣೆಯ ವೇಳೆ ಗುಂಪುಗೂಡಿದ್ದ ಜನರನ್ನು ಕದಲಿಸುವ ಸಲುವಾಗಿ ಪೊಲೀಸರು ಅಶ್ರುವಾಯುಗಳನ್ನು ಸಿಡಿಸಿದ್ದರು. ಜತೆಗೆ ಚಿಕ್ಕ ಚಿಕ್ಕ ಉಕ್ಕಿನ ತುಂಡುಗಳನ್ನು ಸಿಡಿಸುವ ಪೆಲ್ಲೆಟ್‌ ಗನ್‌ಗಳೂ ಕೂಡ ಈ ವೇಳೆ ಬಳೆಕಯಾಗಿದ್ದವು.

ಶೀರಜ್‌ ಅಹ್ಮದ್‌ ಸಾವಿನ ಕುರಿತು ಮಾತನಾಡಿರುವ ಪೊಲೀಸರು ಆತನ ಸಾವು ಕೈಬಾಂಬ್‌ನಿಂದಾಗಿ ಸಂಭವಿಸಿದೆ ಎಂದಿದ್ದಾರೆ. “ಕೈ ಬಾಂಬ್‌ ಸ್ಪೋಟಗೊಂಡಿರುವ ಕಾರಣದಿಂದಾಗಿ ಶೀರಜ್‌ ಗಾಯಗೊಂಡಿದ್ದ. ಆತನ ಬಲಗೈ ಬಾಂಬ್‌ ಸ್ಪೋಟದಿಂದಾಗಿ ಸಂಪೂರ್ಣವಾಗಿ ಗಾಯಗೊಂಡಿತ್ತು. ಆಸ್ಪತ್ರೆ ದಾಖಲಿಸಿದರೂ ಕೂಡ ಚಿಕಿತ್ಸೆ ಫಲಕಾರಿಯಾಗದೇ ಶೀರಜ್‌ ಸಾವನ್ನಪ್ಪಿದ್ದಾನೆ,” ಎಂದು ಪೊಲೀಸ್‌ ವಕ್ತಾರರು ಸುದ್ದಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಪವಿತ್ರ ರಂಜಾನ್‌ನ ಕೊನೆಯ ದಿನವಾದ ಶನಿವಾರದಂದು ಕಾಶ್ಮೀರದಲ್ಲಿ ಹಲವಾರು ಹಿಂಸಾಚಾರದ ಘಟನೆಗಳು ವರದಿಯಾಗಿವೆ. ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಪಾಕಿಸ್ತಾನಿ ಸೈನಿಕರು ನಡೆಸಿರುವ ದಾಳಿಗೆ 21 ವರ್ಷದ ಸೈನಿಕರೊಬ್ಬರು ಮೃತಪಟ್ಟಿದ್ದಾರೆ.

ಕಾಶ್ಮೀರದ ರಾಜಧಾನಿ ಶ್ರೀನಗರದ ಹೊರಭಾಗದಲ್ಲಿರುವ ಲಾಸ್ಜನ್‌ ಎಂಬ ಪ್ರದೇಶದಲ್ಲಿ ಬಂಡುಕೋರರು ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಿದ್ದಾರೆ. ಸಿಆರ್‌ಪಿಎಫ್‌ನ 29ನೇ ಬೆಟಾಲಿಯನ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೊಲೀಸ್‌ ಕಾನ್ಸ್‌ಟೆಬಲ್‌ ದಿನೇಶ್‌ ಪಶ್ವಾನ್‌ ತೀವ್ರವಾಗಿ ಗಾಯಗೊಂಡಿದ್ದಾರೆ. ಆಸ್ಪತ್ರೆಗೆ ದಾಖಲಿಸಲಾಗಿದ್ದು, ಯಾವುದೇ ಪ್ರಾಣಾಪಾಯವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಅನಂತ್‌ನಾಗ್‌ ಪಟ್ಟಣದಿಂದ ಸುಮಾರು 40 ಕಿಲೋ ಮೀಟರ್‌ಗಳಷ್ಟೂ ದೂರದಲ್ಲಿರುವ ಪುಲ್ವಾಮಾ ಎಂಬಲ್ಲಿ ಶುಕ್ರವಾರ ಸೈನಿಕರ ಗುಂಡಿಗೆ ಯುವಕನೊಬ್ಬ ಬಲಿಯಾಗಿದ್ದ ಎನ್ನಲಾಗಿತ್ತು. ಈ ಕೊಲೆಯನ್ನು ವಿರೋಧಿಸಿ ಶನಿವಾರ ಪುಲ್ವಾಮಾದ ಜನರು ಪ್ರತಿಭಟನೆ ನಡೆಸಿದ್ದಾರೆ. ರಂಜಾನ್‌ ಆರಂಭಗೊಂಡ ದಿನದಿಂದ ಇಲ್ಲಿಯವರೆಗೂ ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿರುವ ಮೊದಲನೇ ವ್ಯಕ್ತಿ ಈ ಯುವಕ ಎನ್ನಲಾಗಿದೆ.

ಶೋಪಿಯನ್‌ ಎಂಬ ಪ್ರದೇಶದಲ್ಲಿ ಕಲ್ಲು ತೂರಾಟ ನಡೆದಿದೆ. ಶ್ರೀನಗರದ ಈದ್ಗಾ ಮೈದಾನದಲ್ಲಿ ಪ್ರಾರ್ಥನಾ ಸಭೆಯಲ್ಲಿ ಸಹಸ್ರಾರು ಜನ ಭಾಗವಹಿಸಿದ್ದ ಸಂದರ್ಭದಲ್ಲಿ ಘರ್ಷಣೆ ಏರ್ಪಟ್ಟಿದೆ. ಉತ್ತರ ಕಾಶ್ಮೀರದ ಸೊಪೋರ್‌ ಮತ್ತು ಕುಪ್ವಾರ ಪ್ರದೇಶಗಳಲ್ಲಿ ಕೂಡ ಗುಂಪು ಘರ್ಷಣೆಗಳು ಸಂಭವಿಸಿವೆ.

ಕೇವಲ 2 ದಿನಗಳ ಹಿಂದೆಯಷ್ಟೇ ಕಾಶ್ಮೀರದಲ್ಲಿ ನಡೆದ ಪತ್ರಕರ್ತ ಹಾಗೂ ಸಂಪಾದಕ ಶುಜಾತ್‌ ಬುಖಾರಿಯ ಹತ್ಯೆ ದೇಶದೆಲ್ಲೆಡೆ ಸದ್ದು ಮಾಡಿತ್ತು. ಇವರ ಜತೆಗೆ ಸೈನಿಕ ಔರಂಗಜೇಬ್‌ ಕೂಡ ಕೊಲ್ಲಲ್ಪಟ್ಟಿದ್ದರು. ಶನಿವಾರವೂ ಕೂಡ ಕಾಶ್ಮೀರದಲ್ಲಿ ಹಿಂಸೆ ಮುಂದುವರೆದಿದೆ. ಒಬ್ಬ ವ್ಯಕ್ತಿ ಸಾವನ್ನಪ್ಪಿ ಹಲವಾರು ವ್ಯಕ್ತಿಗಳು ಗಾಯಗೊಂಡಿದ್ದಾರೆ.