‘ಸಾಲ ಮಾಡಿ ತುಪ್ಪ ತಿನ್ನಿ’: 1.20 ಲಕ್ಷ ಕೋಟಿ ಅನುತ್ಪಾದಕ ಸಾಲ ವಜಾ!
ಸುದ್ದಿ ಸಾರ

‘ಸಾಲ ಮಾಡಿ ತುಪ್ಪ ತಿನ್ನಿ’: 1.20 ಲಕ್ಷ ಕೋಟಿ ಅನುತ್ಪಾದಕ ಸಾಲ ವಜಾ!

ಕಳೆದ 10 ವರ್ಷಗಳಲ್ಲಿ ಬ್ಯಾಂಕ್‌ಗಳು ಅನುಭವಿಸಿರುವ ನಷ್ಟಕ್ಕಿಂತ ಹೆಚ್ಚು ಸಾಲವನ್ನು ವಜಾ ಮಾಡಿರುವುದು ಇದೇ ಮೊದಲು. ಲಾಸನ್ನೇ ಹಾಸಿ ಹೊದ್ದು ಮಲಗಿರುವಾಗ ಮತ್ತೆ ಎನ್‌ಪಿಎಯನ್ನು ಘೋಷಿಸಿರುವುದು ನೀರಿಳಿಯದ ಗಂಟಲಲ್ಲಿ ಕಡುಬು ತುರುಕಿದಂತಾಗಿದೆ.

ಅನಾಣ್ಯೀಕರಣದಿಂದಾಗಿ ಕುಸಿದು ಹೋಗಿದ್ದ ಭಾರತದ ಆರ್ಥಿಕತೆ ಚೇತರಿಸಿಕೊಳ್ಳುವ ಹಾದಿಯಲ್ಲಿತ್ತು. ಬ್ಯಾಂಕ್‌ಗಳು ತಮ್ಮನ್ನು ತಾವು ಸುಧಾರಿಸಿಕೊಳ್ಳುವ ಮಾರ್ಗದಲ್ಲಿದ್ದವು. ಆದರೆ ತಮಗಾಗಿದ್ದ ನಷ್ಟವನ್ನು ತುಂಬಿಕೊಳ್ಳಬೇಕು ಎನ್ನುತ್ತಿರುವಾಗಲೇ ಮತ್ತೊಂದು ಹೊಡೆತವನ್ನು ಬ್ಯಾಂಕ್‌ಗಳು ಅನುಭವಿಸಿವೆ. ಎನ್‌ಪಿಎ ಹೆಸರಿನಲ್ಲಿ ಲಕ್ಷಾಂತರ ಕೋಟಿ ಸಾಲವನ್ನು ವಜಾ ಮಾಡಿ ಗಾಯದ ಮೇಲೆ ಬರೆ ಎಳೆದುಕೊಂಡಿವೆ.

ಕಳೆದ 2017-18ರ ಆರ್ಥಿಕ ವರ್ಷದಲ್ಲಿ ಭಾರತದ ಬ್ಯಾಂಕ್‌ಗಳು ವಜಾ ಮಾಡಿರುವ ವಸೂಲಾಗದ ಸಾಲದ ಮೊತ್ತ ಬರೋಬ್ಬರಿ 1.20 ಲಕ್ಷ ಕೋಟಿ. ಇದು ಕರ್ನಾಟಕ ರಾಜ್ಯದ ಒಂದು ವರ್ಷದ ಬಜೆಟ್‌ಗಿಂತಲೂ ಹೆಚ್ಚು.

ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಈ ಬಾರಿ ಗರಿಷ್ಟ ಮಟ್ಟದ ನಷ್ಟವನ್ನು ಅನುಭವಿಸಿವೆ. ನಷ್ಟವನ್ನು ಕಾಣುತ್ತಿರುವ ದಿನಗಳಲ್ಲೂ ಕೂಡ ಅದಕ್ಕಿಂತ ಹೆಚ್ಚಿನ ಪ್ರಮಾಣದ ಸಾಲವನ್ನು ಎನ್‌ಪಿಎ ಎಂದು ಕರೆದಿವೆ.

ಭಾರತದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾದ ಎಸ್‌ಬಿಐ ಕಳೆದ ಆರ್ಥಿಕ ವರ್ಷದಲ್ಲಿ 40,196 ಕೋಟಿ ಸಾಲವನ್ನು ವಜಾ ಮಾಡಿದೆ. ಅತಿ ಹೆಚ್ಚು ಸಾಲದ ಹಣವನ್ನು ವಸೂಲಾಗದ ಸಾಲ ಎಂದು ಕರೆದಿರುವುದು ಇದೇ ಬ್ಯಾಂಕ್‌. ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ 10,307 ಕೋಟಿ ಸಾಲದ ಹಣವನ್ನು ವಜಾ ಮಾಡಿದೆ. ಬ್ಯಾಂಕ್‌ ಆಫ್‌ ಇಂಡಿಯಾ 9,093 ಕೋಟಿ, ಕೆನರಾ ಬ್ಯಾಂಕ್‌ 8,310 ಕೋಟಿ, ಪಂಜಾಬ್‌ ನ್ಯಾಷನಲ್ ಬ್ಯಾಂಕ್‌ 7,407 ಕೋಟಿ, ಐಡಿಬಿಐ ಬ್ಯಾಂಕ್‌ 6,632 ಕೋಟಿ, ಬ್ಯಾಂಕ್‌ ಆಫ್‌ ಬರೋಡ 4,948 ಕೋಟಿ ಹಾಗೂ ಅಲಹಬಾದ್‌ ಬ್ಯಾಂಕ್ 3,648 ಕೋಟಿ ರೂಪಾಯಿಗಳನ್ನು ವಸೂಲಾಗದ ಸಾಲ ಎಂದು ಘೋಷಿಸಿ ನಷ್ಟವನ್ನು ಮೇಲೆಳೆದುಕೊಂಡಿವೆ.

ಇತಿಹಾಸವನ್ನು ಗಮನಿಸಿದರೆ ಕಳೆದ ಹತ್ತು ವರ್ಷಗಳಲ್ಲಿ ಬ್ಯಾಂಕ್‌ಗಳು ತಾವು ಅನುಭವಿಸಿರುವ ನಷ್ಟಕ್ಕಿಂತಲೂ ಹೆಚ್ಚು ಸಾಲದ ಹಣವನ್ನು ವಜಾ ಮಾಡಿರುವುದು ಇದೇ ಮೊದಲು. ಲಾಸನ್ನೇ ಹಾಸಿ ಹೊದ್ದು ಮಲಗಿರುವ ಸಂಧರ್ಭದಲ್ಲಿ ಮತ್ತಷ್ಟು ಹಣವನ್ನು ಕೈಬಿಡಬೇಕಾಗಿ ಬಂದಿರುವುದು ನೀರಿಳಿಯದ ಗಂಟಲಲ್ಲಿ ಕಡುಬು ತುರುಕಿದಂತಾಗಿದೆ.

2016-17ನೇ ಆರ್ಥಿಕ ವರ್ಷದಲ್ಲಿ ಸರಕಾರಿ ಸ್ವಾಮ್ಯದ 21 ಬ್ಯಾಂಕ್‌ಗಳು ಲಾಭದಲ್ಲೇ ನಡೆಯುತ್ತಿದ್ದವು. ಆದರೆ 2017-18ನೇ ಸಾಲಿನಲ್ಲಿ 85,370 ಕೋಟಿ ರೂಪಾಯಿಗಳಷ್ಟು ನಷ್ಟವನ್ನು ಕಂಡಿವೆ.

ಬೇರೆ ಬ್ಯಾಂಕ್‌ಗಳು 2016-17ರಲ್ಲಿ 474 ಕೋಟಿ ರೂಪಾಯಗಳಷ್ಟು ನಷ್ಟವನ್ನು ಅನುಭವಿಸಿದ್ದವು. ಆದರೆ ಒಟ್ಟಾರೆ ವಜಾ ಮಾಡಿದ ವಸೂಲಾಗದ ಸಾಲದ ಹಣ 81,683 ಕೋಟಿ ರೂಪಾಯಿಗಳು.

ಹೀಗೆ ವಸೂಲಾಗದ ಸಾಲವನ್ನು ವಜಾ ಮಾಡುತ್ತ ಬರುತ್ತಿರುವುದು ಇತ್ತೀಚಿನ ವಿದ್ಯಮಾನವೇನಲ್ಲ. 2013-14ನೇ ಸಾಲಿನಲ್ಲಿ 34,409 ಕೋಟಿ ರೂಪಾಯಿಗಳನ್ನು ವಜಾ ಮಾಡಿಲಾಗಿತ್ತು. 2014-15ರಲ್ಲಿ 49,018 ಕೋಟಿ ರೂಪಾಯಿಗಳು ಎನ್‌ಪಿಎ ಎನ್ನಿಸಿಕೊಂಡಿದ್ದವು. 2015-16ರಲ್ಲಿ ಈ ವಸುಲಾಗದ ಸಾಲದ ವಜಾ ಮೊತ್ತ 57,585 ಕೊಟಿಗೆ ಏರಿಕೆಯಾಗಿತ್ತು. 2016-17 ವಜಾ ಮಾಡಲ್ಪಟ್ಟ ಒಟ್ಟು ಎನ್‌ಪಿಎ ಮೊತ್ತ 81,683 ಕೋಟಿ ರೂಪಾಯಿಗಳು. ಕಳೆದ ಆರ್ಥಿಕ ಚರ್ಷ 2017-18ರಲ್ಲಿ ಈ ಮೊತ್ತ 1.20 ಲಕ್ಷ ಕೋಟಿ ರೂಪಾಯಿಗಳನ್ನು ಮುಟ್ಟಿದೆ.

ಕಳೆದ ಐದು ವರ್ಷಗಳಲ್ಲಿ ಬ್ಯಾಂಕ್‌ಗಳು ಹಿಂತಿರುಗಿಸಿಕೊಳ್ಳಲಾಗದೆ ಕೈಚೆಲ್ಲಿರುವ ಸಾಲದ ಪ್ರಮಾಣ ಬರೋಬ್ಬರಿ 3.43 ಲಕ್ಷ ಕೋಟಿಗಳು. 2017ರ ಡಿಸೆಂಬರ್‌ವರೆಗೆ ಬ್ಯಾಂಕ್‌ಗಳು ವಜಾ ಮಾಡಿರುವ ಎನ್‌ಪಿಎ ಹಣ 8.31 ಲಕ್ಷ ಕೋಟಿ ರೂಪಾಯಿಗಳನ್ನು ತಲುಪುತ್ತದೆ. ಇದು ಜನರದ್ದೇ ದುಡ್ಡು.

ಒಂದೆಡೆ ಸಾಮಾನ್ಯ ಜನರು ಚಿಕ್ಕ ಪುಟ್ಟ ಉದ್ದಿಮೆಗಳ ಸ್ಥಾಪನೆಗೆ ಕೆಲವು ಲಕ್ಷಗಳನ್ನು ಸಾಲವನ್ನಾಗಿ ಪಡೆಯಲು ಹಲವಾರು ಬಾರಿ ಬ್ಯಾಂಕ್‌ಗಳಿಗೆ ಅಲೆದಾಡಬೇಕಾಗುತ್ತದೆ. ಕೆಲವೊಂದು ತಿಂಗಳು ಸಾಲದ ಕಂತನ್ನು ಸರಿಯಾಗಿ ಪಾವತಿಸಲು ಸಾಧ್ಯವಾಗದಿದ್ದಾಗ ಬ್ಯಾಂಕ್‌ ಸಿಬ್ಬಂದಿಗಳಿಂದ ಮಾತು ಕೇಳಬೇಕಾಗುತ್ತದೆ. ಚಿಕ್ಕ ಪುಟ್ಟ ಸಾಲಗಾರರ ಮೇಲೆ ತಮ್ಮ ಪ್ರಹಾರವನ್ನು ತೋರಿಸುವ ಬ್ಯಾಂಕ್‌ಗಳು ದೊಡ್ಡ ದೊಡ್ಡ ಸಾಲಗಾರರ ಮುಂದೇಕೆ ಸಾಲುಗಟ್ಟಿ ನಿಂತು ಸಾಲ ನೀಡಿ, ಕೆಲವು ವರ್ಷಗಳು ಕಳೆದ ನಂತರ ಆ ಹಣವನ್ನು ಎನ್‌ಪಿಎ ಎಂದು ಘೋಷಿಸುತ್ತವೆ ಎನ್ನುವುದು ಸಧ್ಯದ ಪ್ರಶ್ನೆ.