‘ಬಜರಂಗದಳ, ವಿಹಿಂಪ ಧಾರ್ಮಿಕ ಉಗ್ರಗಾಮಿ ಸಂಘಟನೆಗಳು’: ವರ್ಲ್ಡ್‌ ಫ್ಯಾಕ್ಟ್‌ಬುಕ್
ಸುದ್ದಿ ಸಾರ

‘ಬಜರಂಗದಳ, ವಿಹಿಂಪ ಧಾರ್ಮಿಕ ಉಗ್ರಗಾಮಿ ಸಂಘಟನೆಗಳು’: ವರ್ಲ್ಡ್‌ ಫ್ಯಾಕ್ಟ್‌ಬುಕ್

ವಿಶ್ವ ಹಿಂದೂ ಪರಿಷತ್‌ ಮತ್ತು ಬಜರಂಗ ದಳಗಳನ್ನು ‘ಧಾರ್ಮಿಕ ಉಗ್ರಗಾಮಿ ಸಂಘಟನೆಗಳು’ ಎಂದಿರುವ ಅಮೆರಿಕಾದ ಸಿಐಎ ಸಂಸ್ಥೆಯ ‘ವರ್ಲ್ಡ್‌ ಫ್ಯಾಕ್ಟ್‌ಬುಕ್‌’, ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ‘ರಾಷ್ಟ್ರೀಯವಾದಿ ಸಂಘಟನೆ’ ಎಂದು ಕರೆದಿದೆ.

ಅಮೆರಿಕಾದ ‘ಕೇಂದ್ರ ಗುಪ್ತಚರ ಸಂಸ್ಥೆ’ (ಸಿಐಎ) ತನ್ನ ವರ್ಷದ ‘ವರ್ಲ್ಡ್‌ ಫ್ಯಾಕ್ಟ್‌ಬುಕ್‌’ ಅನ್ನು ಜೂನ್ 14ರಂದು ಪ್ರಕಟಿಸಿದೆ. ಭಾರತದ ಬಗ್ಗೆ ಮಾತನಾಡುವಾಗ ಫ್ಯಾಕ್ಟ್‌ಬುಕ್, ಹಲವಾರು ಸಂಘಟನೆಗಳನ್ನು ರಾಜಕೀಯವಾಗಿ ಒತ್ತಡ ಹೇರುವ ಸಂಘಟನೆಗಳು ಎಂದು ವ್ಯಾಖ್ಯಾನಿಸಿದೆ.

‘ರಾಜಕೀಯವಾಗಿ ಒತ್ತಡ ತರುವ ಗುಂಪುಗಳು ಮತ್ತು ನಾಯಕರು’ ತಲೆಬರಹದ ಅಡಿಯಲ್ಲಿ ಸಿಐಎ ‘ವಿಶ್ವ ಹಿಂದೂ ಪರಿಷತ್’ (ವಿಹಿಂಪ) ಮತ್ತು ‘ಬಜರಂಗ ದಳ’ಗಳನ್ನು ಧಾರ್ಮಿಕ ಉಗ್ರಗಾಮಿ ಸಂಘಟನೆಗಳ ಪಟ್ಟಿಗೆ ಸೇರಿಸಿದೆ. ಭಾರತೀಯ ಜನತಾ ಪಕ್ಷದ ಮಾತೃಸಂಸ್ಥೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್.ಎಸ್.ಎಸ್) ವನ್ನು ರಾಷ್ಟ್ರೀಯವಾದಿ ಸಂಘಟನೆ ಎಂದು ಕರೆದಿದೆ.

ಸಾಂಧರ್ಭಿಕ ಚಿತ್ರ.
ಸಾಂಧರ್ಭಿಕ ಚಿತ್ರ.
‘ದಿ ವೈರ್‌’

ಭಾರತದಲ್ಲಿನ ಇತರೆ ಮುಸ್ಲಿಂ ಸಂಘಟನೆಗಳು ಕೂಡ ಇದರ ಅಡಿಯಲ್ಲೇ ಸ್ಥಾನ ಪಡೆದಿವೆ. ಕಾಶ್ಮೀರದ ಕಣಿವೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ‘ಆಲ್‌ ಪಾರ್ಟಿಸ್‌ ಹುರಿಯತ್‌ ಕಾನ್ಫೆರೆನ್ಸ್’ ಸಂಘಟನೆಯನ್ನು ಪ್ರತ್ಯೇಕತಾವಾದಿ ಗುಂಪು ಎಂದಿರುವ ಫ್ಯಾಕ್ಟ್‌ಬುಕ್‌, ಮೊಹಮ್ಮದ್‌ ಮದಾನಿ ನೇತೃತ್ವದ ‘ಜಾಮಿಯತ್‌ ಉಲೇಮಾ-ಇ ಹಿಂದ್’ ಸಂಘಟನೆಗೆ ಧಾರ್ಮಿಕ ಸಂಘಟನೆ ಎಂಬ ಹಣೆಪಟ್ಟಿ ಕಟ್ಟಿದೆ.

ಇವುಗಳ ಜತೆಗೆ ಭಾರತದ ನೂರಾರು ಸಮಾಜ ಸುಧಾರಣಾ ಸಂಘಟನೆಗಳು, ಭ್ರಷ್ಟಾಚಾರ ವಿರೋಧಿ ಸಂಘಟನೆಗಳು, ಸ್ಥಳೀಯ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪರಿಸರ ಸಂಘಟನೆಗಳು ಸೇರಿದಂತೆ ಲೆಕ್ಕಕ್ಕಿಲ್ಲದಷ್ಟು ಧಾರ್ಮಿಕ ಸಂಘಟನೆಗಳು ಭಾರತದಲ್ಲಿವೆ ಎಂದು ಸಿಐಎ ತಿಳಿಸಿದೆ.

‘ಬಜರಂಗದಳ, ವಿಹಿಂಪ ಧಾರ್ಮಿಕ ಉಗ್ರಗಾಮಿ ಸಂಘಟನೆಗಳು’: ವರ್ಲ್ಡ್‌ ಫ್ಯಾಕ್ಟ್‌ಬುಕ್
ಚಿತ್ರಕೃಪೆ: ವರ್ಲ್ಡ್ ಫ್ಯಾಕ್ಟ್‌ಬುಕ್‌

ಈ ಕುರಿತು ಲೈವ್‌ ಮಿಂಟ್‌ ಸುದ್ದಿ ಸಂಸ್ಥೆಯೊಟ್ಟಿಗೆ ಮಾತನಾಡಿರುವ ವಿಶ್ವ ಹಿಂದೂ ಪರಿಷತ್‌ನ ವಕ್ತಾರ ವಿನೋದ್‌ ಬನ್ಸಾಲ್‌, “ನಾವು ಇದುವರೆಗೂ ಸಿಐಎ ವರದಿಯನ್ನು ನೋಡಿಲ್ಲ. ಮೊದಲು ಈ ವರದಿಯ ಕುರಿತು ಅಧ್ಯಯನ ನಡೆಸಬೇಕಿದೆ. ನಂತರ ಪ್ರತಿಕ್ರಿಯೆ, ಪ್ರತ್ಯುತ್ತರಗಳನ್ನು ನೀಡಬಹುದು,” ಎಂದಿದ್ದಾರೆ.

ಸಿಐಎ ವರದಿಯ ಕುರಿತು ‘ದಿ ಪ್ರಿಂಟ್‌’ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಬಜರಂಗ ದಳದ ಪ್ರಮುಖರೊಬ್ಬರು ‘ಕಾನೂನೂನಾತ್ಮಕ ಕ್ರಮವನ್ನು ಕೈಗೊಳ್ಳುತ್ತೇವೆ’ ಎಂದಿದ್ದಾರೆ. ಹಿಂದುತ್ವ ಸಂಘಟನೆಗಳ ರಾಷ್ಟ್ರೀಯ ಸಂಚಾಲಕ ಮನೋಜ್‌ ವರ್ಮ, “ಪರಿಣಿತರೊಟ್ಟಿಗೆ ಈ ಕುರಿತು ಚರ್ಚಿಸಿ, ಇದನ್ನು ವಿರೋಧಿಸಲು ಬೇಕಾದ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗುತ್ತೇವೆ,” ಎಂದಿದ್ದಾರೆ.

ಅಂತರರಾಷ್ಟ್ರೀಯ ವ್ಯವಹಾರಗಳ ಸಚಿವಾಲಯ ಈ ಕುರಿತು ಪ್ರತಿಕ್ರಿಯಿಸಿಲ್ಲ. ಅಮೆರಿಕಾದ ದೂತವಾಸಕ್ಕೆ ಈ ಕುರಿತು ಇ-ಮೇಲ್‌ ಕಳುಹಿಸಿದ್ದರೂ ವರದಿ ಪ್ರಕಟವಾಗುವವರೆಗೆ ಪ್ರತಿಕ್ರಿಯೆ ದೊರೆತಿಲ್ಲ ಎಂದು ಲೈವ್‌ ಮಿಂಟ್‌ ವರದಿ ಮಾಡಿದೆ.

‘ಡೈಲಿ ಓ’ ಸುದ್ದಿ ಸಂಸ್ಥೆ ತನ್ನ ವರದಿಯಲ್ಲಿ, ಒಂದೆಡೆ ದೆಹಲಿಯ ಹಿಂದೂ ಸೇನಾ ಸಂಘಟನೆ ಕಾರ್ಯಕರ್ತರು ಹೋಮ, ಹವನ, ಕೇಕ್‌, ಸೆಲ್ಫಿಗಳ ಜತೆ ಅಮೆರಿಕಾ ಅಧ್ಯಕ್ಷ್ಯ ಡೊನಾಲ್ಡ್‌ ಟ್ರಂಪ್‌ರ 72ನೇ ಹುಟ್ಟಹಬ್ಬವನ್ನುಆಚರಿಸುತ್ತಿದ್ದಾರೆ. ಮತ್ತೊಂದೆಡೆ ಅದೇ ಅಮೆರಿಕಾ ಮತ್ತೆರಡು ಪ್ರಮುಖ ಹಿಂದೂ ಸಂಘಟನೆಗಳನ್ನು ಉಗ್ರಗಾಮಿ ಸಂಘಟನೆ ಎಂದು ಕರೆದಿದೆ ಎಂದು ಬರೆದಿದೆ.

ಅಮೆರಿಕಾದ ಸಿಐಎ ಪ್ರಕಟಿಸುವ ಫ್ಯಾಕ್ಟ್‌ಬುಕ್‌ ವಿಶ್ವದ ನಾನಾ ರಾಷ್ಟ್ರಗಳ ಕುರಿತು ಮಾಹಿತಿ ನೀಡುತ್ತದೆ. ಬೇರೆ ಬೇರೆ ರಾಷ್ಟ್ರಗಳ ಜನಸಂಖ್ಯೆ, ಭೌಗೋಳಿಕತೆ, ಸಂವಹನ, ಆರ್ಥಿಕತೆ, ಆಡಳಿತ ವರ್ಗ, ಮಿಲಿಟರಿ ಇತ್ಯಾದಿ ವಿವರಗಳು ಇಲ್ಲಿ ದೊರೆಯುತ್ತವೆ. 1962ರಿಂದಲೂ ಕೂಡ ಸಿಐಎ ಈ ರೀತಿ ರಾಷ್ಟ್ರಗಳ ಕುರಿತ ಮಾಹಿತಿ ಪಟ್ಟಿಯನ್ನು ತಯಾರಿಸುತ್ತಲೇ ಬರುತ್ತಿದೆ. ಆದರೆ 1975ರವರೆಗೂ ಈ ಮಾಹಿತಿಗಳನ್ನು ಜನರ ಮುಂದೆ ಇಟ್ಟಿರಲಿಲ್ಲ. ಈಗ ಸಾಮಾನ್ಯರೂ ಕೂಡ ಈ ಫ್ಯಾಕ್ಟ್‌ಬುಕ್‌ನ ಮಾಹಿತಿಗಳನ್ನು ನೋಡಬಹುದು.

ವರ್ಲ್ಡ್ ಫ್ಯಾಕ್ಟ್‌ಬುಕ್‌ನಲ್ಲಿ ದೊರೆಯುವ ಸಿಐಎ ಪ್ರಕಟಿಸಿದ ಮಾಹಿತಿ ಅಮೆರಿಕಾ ಸರಕಾರದ ಕಚೇರಿಯ ಕೆಲಸಗಳಿಗೆ ಬಳಕೆಯಾಗುತ್ತವೆ. ಈ ಅಧ್ಯಯನಗಳಲ್ಲಿ ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಸಂಪನ್ಮೂಲ ವ್ಯಕ್ತಿಗಳನ್ನು ಮಾಹಿತಿ ಮೂಲವನ್ನಾಗಿ ಬಳಸಿಕೊಳ್ಳಲಾಗುತ್ತದೆ. ಈ ಬಾರಿಯ ಫ್ಯಾಕ್ಟ್‌ಬುಕ್ ಬಜರಂಗದಳ ಹಾಗೂ ವಿಶ್ವಹಿಂದೂ ಪರಿಷತ್ ಹೆಸರಿಸಿರುವುದರಿಂದ ಹಾಗೂ ಅದೇ ಕಾಲದಲ್ಲಿ ಭಾರತದಲ್ಲಿ ರಾಷ್ಟ್ರೀಯವಾದಿ ಪಕ್ಷದ ನೇತೃತ್ವದ ಸರಕಾರ ಆಡಳಿತ ನಡೆಸುತ್ತಿರುವುದರಿಂದ ಸಹಜವಾಗಿಯೇ ಗಮನ ಸೆಳೆಯುತ್ತಿದೆ.