samachara
www.samachara.com
ವಿಶ್ವ ಸಂಸ್ಥೆಯ ವರದಿ, ಸಂಪಾದಕ ಬುಖಾರಿ ಹತ್ಯೆ ಮತ್ತು ಪ್ರಕ್ಷುಬ್ಧ ಜಮ್ಮು ಕಾಶ್ಮೀರ
ಸುದ್ದಿ ಸಾರ

ವಿಶ್ವ ಸಂಸ್ಥೆಯ ವರದಿ, ಸಂಪಾದಕ ಬುಖಾರಿ ಹತ್ಯೆ ಮತ್ತು ಪ್ರಕ್ಷುಬ್ಧ ಜಮ್ಮು ಕಾಶ್ಮೀರ

ಗುರುವಾರ ವಿಶ್ವಸಂಸ್ಥೆ ಮಾನವ ಹಕ್ಕುಗಳ ವಿಭಾಗ ಕಾಶ್ಮೀರದ ಕುರಿತು ವರದಿಯೊಂದನ್ನು ಪ್ರಕಟಿಸಿತ್ತು. ಭಾರತ ಈ ವರದಿಯನ್ನು ಅಲ್ಲಗೆಳೆದಿತ್ತು. ಆದರೆ ವರದಿ ಬಿಡುಗಡೆಯಾದ ದಿನವೇ ಕಾಶ್ಮೀರದ ಪತ್ರಕರ್ತರೊಬ್ಬರ ಸಾವು ದೇಶಾದ್ಯಂತ ಸುದ್ದಿಯಾಗಿದೆ.

ಗುರುವಾರ ವಿಶ್ವಸಂಸ್ಥೆ ಮಾನವ ಹಕ್ಕುಗಳ ವಿಭಾಗ ಕಾಶ್ಮೀರದಲ್ಲಿನ ಮಾನವ ಹಕ್ಕುಗಳ ಕುರಿತು ವರದಿಯೊಂದನ್ನು ಪ್ರಕಟಿಸಿತ್ತು. ಆದರೆ ಭಾರತ ವಿಶ್ವಸಂಸ್ಥೆಯ ವರದಿಯನ್ನು ಅಲ್ಲಗೆಳೆದಿತ್ತು. ಆದರೆ ವರದಿ ಬಿಡುಗಡೆಯಾದ ದಿನವೇ ಕಾಶ್ಮೀರದ ಪ್ರಮುಖ ಪತ್ರಕರ್ತರೊಬ್ಬರ ಸಾವು ದೇಶಾದ್ಯಂತ ಸುದ್ದಿಯಾಗಿದೆ.

ಶ್ರೀನಗರದ ಪ್ರೆಸ್‌ ಕಾಲೋನಿಯಲ್ಲಿ 50ರ ಪ್ರಾಯದ, ‘ದಿ ರೈಸಿಂಗ್ ಕಾಶ್ಮೀರ್’ ದಿನ ಪತ್ರಿಕೆ ಸಂಪಾದಕ ಶುಜಾತ್‌ ಬುಖಾರಿಯನ್ನು ಬೈಕ್‌ನಲ್ಲಿ ಬಂದ ಬಂದೂಕುದಾರಿಗಳು ಹತ್ಯೆಗೈದಿದ್ದಾರೆ. ಶುಜಾತ್‌ ಬುಖಾರಿ ಇಫ್ತಾರ್‌ ಕೂಟಕ್ಕೆ ತರಳುತ್ತಿದ್ದರು ಎಂದು ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.

ಗುರುವಾರ ಸಂಜೆ ಪ್ರೆಸ್‌ ಕಾಲೋನಿಯಲ್ಲಿರುವ ತಮ್ಮ ಪತ್ರಿಕೆಯ ಕಚೇರಿಯಿಂದ ಶುಜಾತ್‌ ಬುಖಾರಿ ಹೊರಗೆ ಹೆಜ್ಜೆಯಿಟ್ಟ ಮರುಕ್ಷಣದಲ್ಲೇ ಈ ಕೃತ್ಯ ನಡೆದಿದೆ. ಶುಜಾತ್‌ ಬುಖಾರಿ ಜತೆ ಅವರ ಇಬ್ಬರು ಭದ್ರತಾ ಸಿಬ್ಬಂದಿಗಳೂ ಕೂಡ ಗುಂಡೇಟಿಗೆ ಬಲಿಯಾಗಿದ್ದಾರೆ.

ಶುಜಾತ್‌ ಬುಖಾರಿ ಕಾಶ್ಮೀರದ ಸ್ಥಳಿಯ ಪತ್ರಿಕೆ ‘ರೈಸಿಂಗ್‌ ಕಾಶ್ಮೀರ್‌’ನ ಸಂಸ್ಥಾಪಕರೂ ಹೌದು. ಮೂರು ತಿಂಗಳ ಹಿಂದೆ ಶುಜಾತ್‌ ಬುಖಾರಿಯ ‘ರೈಸಿಂಗ್‌ ಕಾಶ್ಮೀರ್‌’ ಪತ್ರಿಕೆ ಹತ್ತು ವರ್ಷಗಳನ್ನು ಪೂರೈಸಿತ್ತು. ಈ ಸಂದರ್ಭದಲ್ಲಿ ಶುಜಾತ್‌ ಬುಖಾರಿ ತಮ್ಮ ಸಂಪಾದಕೀಯ ಲೇಖನದಲ್ಲಿ “ಕಾಶ್ಮೀರದಲ್ಲಿ ಪತ್ರಿಕೋದ್ಯಮ ನಡೆಸುವವರ ಮುಂದಿರುವ ಮೊದಲ ಸವಾಲು ಬದುಕುಳಿಯುವುದು” ಎಂದಿದ್ದರು. ಈಗ ಈ ಮಾತು ಸತ್ಯವೆನಿಸಿದೆ.

ತಮ್ಮ ದಿಟ್ಟ ಬರವಣಿಗೆಯಿಂದಲೇ ಹೆಸರು ಪಡೆದಿದ್ದ ಶುಜಾತ್‌ ಬುಖಾರಿಯವರನ್ನು ಕೊಲ್ಲಲು ಈ ಮುಂಚೆಯೇ ಮೂರು ಬಾರಿ ಪ್ರಯತ್ನಿಸಲಾಗಿತ್ತು. ಉತ್ತರ ಕಾಶ್ಮೀರದ ಸಂಗ್ರಾಮ ವಿಧಾನಸಭಾ ಕ್ಷೇತ್ರದ ಶಾಸಕ ಬಶರತ್‌ ಬುಖಾರಿಯವರ ಸಹೋದರರಾದ ಶುಜಾತ್‌ ಬುಖಾರಿ, ಹತ್ಯೆಯ ಪ್ರಯತ್ನಗಳಿಗೆ ಹಿಂಜರಿಯದೇ ತಮ್ಮ ಬರವಣಿಗೆಯನ್ನು ಮುಂದುವರೆಸಿದ್ದರು.

ಮೊದಲಿಂದಲೂ ಕೂಡ ಕಾಶ್ಮೀರದ ಸಮಸ್ಯೆಗಳನ್ನು ಜಗತ್ತಿನ ಮುಂದೆ ತೆರೆದಿಡುತ್ತಾ ಬಂದಿದ್ದ ಶುಜಾತ್‌ ಬುಖಾರಿ, ಶಾಂತಿಯನ್ನು ಬಯಸುತ್ತಿದ್ದರು. ಇತ್ತೀಚಿನ ಲೇಖನವೊಂದರಲ್ಲಿ ‘ಕಾಶ್ಮೀರ ಕಣಿವೆಯಲ್ಲಿನ ಸಶಸ್ತ್ರ ಪಡೆಗಳಿಗೆ ನೀಡಿರುವ ವಿಶೇಷ ಅಧಿಕಾರಗಳ ಕಾಯ್ದೆಯನ್ನು ಹಿಂತೆಗೆದುಕೊಳ್ಳಬೇಕು’ ಎಂದಿದ್ದರು. ತಮ್ಮ ಅಧಿಕಾರದಿಂದ ಸಶಸ್ತ್ರ ಪಡೆಗಳು ಸಾಮಾನ್ಯ ಜನರನ್ನು ಶೋಷಣೆಗೆ ಒಳಪಡಿಸುತ್ತಿವೆ ಎಂದು ಶುಜಾತ್‌ ಬುಖಾರಿ ಬರೆದಿದ್ದರು.

ಶುಜಾತ್‌ ತಮ್ಮ ಹಲವಾರು ಲೇಖನಗಳಲ್ಲಿ ಗಡಿಗಳಲ್ಲಿ ಕೇಳಿಸುತ್ತಿರುವ ಗುಂಡಿನ ಮೊರೆತ ನಿಲ್ಲಬೇಕು ಎಂದಿದ್ದರು. ಗಡಿಯಲ್ಲಿ ಮೊಳಗುತ್ತಿರುವ ಗುಂಡಿನ ಸದ್ದು ಎರಡೂ ದೇಶಗಳಿಗೆ ಹೇಗೆ ಅಪಾಯಕಾರಿ ಎಂದು ಬುಖಾರಿ ವಿವರಿಸಿದ್ದರು.

ಶಾಂತಿಯನ್ನು ಬಯಸಿ ಗುಂಡುಗಳ ಮೊರೆತ ನಿಲ್ಲಲಿ ಎಂದು ಬಯಸಿದ ಶುಜಾತ್‌ ಬುಖಾರಿಯೇ ಈಗ ಗುಂಡಿಗೆ ಬಲಿಯಾಗಿದ್ದಾರೆ. ಕಾಶ್ಮೀರದ ಕಣಿವೆಯಲ್ಲಿನ ಹಿಂಸೆಗೆ ಬಲಿಯಾದ ನಾಗರಿಕ ಪೈಕಿ ಈಗ ಶುಜಾತ್‌ ಬುಖಾರಿಯೂ ಸೇರಿದ್ದಾರೆ.

ವಿಶ್ವ ಸಂಸ್ಥೆಯ ಮಾನವ ಹಕ್ಕು ವಿಭಾಗ ಗುರುವಾರ ಬೆಳಗ್ಗೆಯಷ್ಟೇ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಕುರಿತು ವರದಿಯೊಂದನ್ನು ಬಿಡಗಡೆಗೊಳಿಸಿದೆ. 2016ರ ಜೂನ್‌ನಿಂದ 2018ರ ಏಪ್ರಿಲ್‌ ಅವಧಿಯಲ್ಲಿ ಕಾಶ್ಮೀರದಲ್ಲಿ ನಡೆದ ಘಟನೆಗಳ ಬಗ್ಗೆ ಈ ವರದಿ ಬೆಳಕು ಚೆಲ್ಲಿದೆ. ಇದು ಈ ಅವಧಿಯಲ್ಲಿ ಕಾಶ್ಮೀರದಲ್ಲಿನ ಮಾನವ ಹಕ್ಕುಗಳು ಎಷ್ಟು ಸರುಕ್ಷಿತವಾಗಿದ್ದವು ಎನ್ನುವದರ ಕುರಿತಾದ ವರದಿ ಎಂದು ವಿಶ್ವಸಂಸ್ಥೆ ಹೇಳಿದೆ. ಈ ವರದಿ ಬಿಡುಗಡೆಗೊಂಡ ದಿನವೇ ಪತ್ರಕರ್ತರ ಹತ್ಯೆಯಾಗಿದೆ.

ವರದಿ ಹೇಳುವಂತೆ, ಕಾಶ್ಮೀರದಲ್ಲಿ ಮಾನವ ಹಕ್ಕುಗಳು ನಿಕೃಷ್ಟ ಸ್ಥಿತಿಯನ್ನು ತಲುಪಿವೆ. ಈಗಲೂ ಕೂಡ ಪ್ರತಿಭಟನಾಕಾರರ ಮೇಲೆ ಸೈನಿಕರು ಗುಂಡಿನ ಮಳೆ ಸುರಿಸುತ್ತಿದ್ದಾರೆ. ಪ್ರತಿಭಟನೆಯ ಕಾವೂ ಕೂಡ ಹೆಚ್ಚಾಗಿದ್ದು, ಪುರುಷರು ಮಹಿಳೆಯರು ಎನ್ನದೆ ಎಲ್ಲರೂ ಬೀದಿಗಿಳಿದಿದ್ದಾರೆ. ಜನವರಿ 27ರಂದು ಕಾಲೇಜು ವಿದ್ಯಾರ್ಥಿಗಳು ದೊಡ್ಡ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದ್ದರು. ಈ ವೇಳೆಯಲ್ಲಿ ಸಶಸ್ತ್ರ ಸೈನಿಕರ ಗುಂಡುಗಳು ಮೂರು ಜನ ನಾಗರಿಕರ ಪ್ರಾಣಗಳನ್ನು ಬಲಿತೆಗೆದುಕೊಂಡಿದ್ದವು. ಹಲವಾರು ಜನರನ್ನು ಊನಗೊಳಿಸಿದ್ದವು. ಇದಕ್ಕೆ ಪ್ರತಿಯಾಗಿ ಜನರಿಂದ ಕಲ್ಲುಗಳ ದಾಳಿಯೂ ನಡೆದಿತ್ತು.

ಈಗ ಈ ಪರಿಸ್ಥಿತಿ ದಕ್ಷಿಣ ಕಾಶ್ಮೀರ ಭಾಗಕ್ಕೂ ವಿಸ್ತರಿಸಿದೆ. ಹಲವಾರು ದಿನಗಳಿಂದ ಸಾಕಷ್ಟು ಜನ ನಾಗರಿಕರು ಸೈನ್ಯದ ಗುಂಡಿಗೆ ಬಲಿಯಾಗಿದ್ದಾರೆ. ಈ ಕುರಿತಂತೆ ಕಾಶ್ಮೀರ ರಾಜ್ಯ ಪೊಲೀಸರು 10 ಜನ ಸೈನಿಕರ ಮೇಲೆ ಎಫ್‌ಐಆರ್‌ ದಾಖಲಿಸಿದ್ದರು. ಮಾರ್ಚ್‌ 5ರಂದು ಸೈನಿಕನೊಬ್ಬ ಎಫ್‌ಐಆರ್‌ಅನ್ನು ರದ್ದುಗೊಳಿಸುವಂತೆ ಸುಪ್ರಿಂ ಕೋರ್ಟ್‌ ಮೊರೆಹೋಗಿದ್ದ. ಈ ಅರ್ಜಿಯ ತೀರ್ಪು ಹೊರಬೀಳುವವರೆಗೂ ಈ ಕುರಿತ ತನಿಖೆಗಳನ್ನು ನಿಲ್ಲಿಸಬೇಕು ಎಂದು ಸುಪ್ರಿಂ ಕೋರ್ಟ್ ಆದೇಶಿಸಿದೆ.

ಮಾರ್ಚ್‌ 4ರಂದು ಸೈನಿಕರ ಗುಂಡಿಗೆ 4 ಜನ ಬಲಿಯಾಗಿ, ಇಬ್ಬರು ಗಾಯಗೊಂಡಿದ್ದರು. ಅವರನ್ನು ಸಶಸ್ತ್ರ ಗುಂಪೊಂದರ ಸದಸ್ಯರು ಎನ್ನುಲಾಗಿತ್ತು. ಆದರೆ ಈ ಹೇಳಿಕೆ ಕುರಿತು ತೀವ್ರ ವಿರೋಧ ವ್ಯಕ್ತವಾಗಿತ್ತು. ಹಲವಾರು ಶಾಸಕರು ಈ ಕುರಿತು ಸ್ವತಂತ್ರ ತನಿಖೆ ನಡೆಯಬೇಕೆಂದು ಆಗ್ರಹಿಸಿದ್ದರು.

ಏಪ್ರಿಲ್ 1ರಂದು 4 ಪ್ರದೇಶಗಳಲ್ಲಿ ನಡೆದ ಗುಂಡಿನ ಕಾಳಗಕ್ಕೆ 3 ಜನ ನಾಗರಿಕರು ಸೇರಿದಂತೆ, 13 ಜನ ಸಶಸ್ತ್ರ ಬಂಡುಕೋರರು ಹಾಗೂ 3 ಜನ ಸೈನಿಕರು ಸಾವನ್ನಪ್ಪಿದ್ದರು. ವರದಿ ಹೇಳುವಂತೆ ಕಾಶ್ಮೀರದಲ್ಲಿ ಹಲವಾರು ಜನ ಸೈನಿಕರಿಂದ ಬಂಧನಕ್ಕೊಳಪಟ್ಟು ಪೆಟ್ಟು ತಿಂದು ಸತ್ತಿದ್ದಾರೆ. ಚಿಕ್ಕ ಮಕ್ಕಳು ಕೂಡ ಬಂಧನಕ್ಕೆ ಒಳಪಟ್ಟಿದ್ದಾರೆ. ಕಳೆದ ವರ್ಷ ಏಪ್ರಿಲ್‌ ತಿಂಗಳಿನಲ್ಲಿ ಫಾರೂಖ್‌ ಅಹಮದ್‌ ದಾರ್‌ ಎಂಬ ವ್ಯಕ್ತಿಯನ್ನು ಮಾನವ ಗುರಾಣಿಯಾಗಿ ಬಳಸಿಕೊಂಡ ವೀಡಿಯೋ ಇಡೀ ದೇಶಾದ್ಯಂತ ವೈರಲ್‌ ಆಗಿತ್ತು. ಹೀಗೆ ವ್ಯಕ್ತಿಯೊಬ್ಬನನ್ನು ಅಮಾನುಷವಾಗಿ ಬಳಸಿಕೊಂಡ ಮೇಜರ್‌ಗೆ ಸನ್ಮಾನವೂ ನಡೆದಿತ್ತು ಎಂದು ವರದಿಯಾಗಿತ್ತು.

ಆದರೆ ಭಾರತ ಸರಕಾರ ವಿಶ್ವಸಂಸ್ಥೆಯ ವರದಿಯನ್ನು ಅಲ್ಲಗೆಳೆದಿದೆ. ಆದರೆ ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆಯ ಮಾತನಾಡುತ್ತಿದ್ದ ಬರಹಗಾರ, ಪತ್ರಕರ್ತ ಶುಜಾನ್‌ ಬುಖಾರಿ ಸಾವನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ. ಇದು ದೇಶದ ಮುಕುಟದಂತಿರುವ ರಾಜ್ಯವೊಂದು ಎಷ್ಟರ ಮಟ್ಟಿಗೆ ಪ್ರಕ್ಷುಬ್ಧಗೊಂಡಿದೆ ಎಂಬುದನ್ನು ಸಾರಿ ಹೇಳುತ್ತಿದೆ.