ನಲಪಾಡ್‌ ಸೆರೆವಾಸ ಅಂತ್ಯ: 116 ದಿನಗಳ ಬಳಿಕ ರಿಲೀಸ್
ಸುದ್ದಿ ಸಾರ

ನಲಪಾಡ್‌ ಸೆರೆವಾಸ ಅಂತ್ಯ: 116 ದಿನಗಳ ಬಳಿಕ ರಿಲೀಸ್

ಅಂತೂ ಮಹಮ್ಮದ್ ನಲಪಾಡ್ ಗೆ ಷರತ್ತುಬಧ್ದ ಜಾಮೀನು ಮಂಜೂರಾಗಿದೆ. ವಿದ್ವತ್ ಮೇಲಿನ ಹಲ್ಲೆ ಪ್ರಕರಣದಲ್ಲಿ ಕಳೆದ 116 ದಿನಗಳಿಂದ ಜೈಲಿನಲ್ಲಿದ್ದ ಶಾಸಕ ಹ್ಯಾರಿಸ್ ಪುತ್ರನಿಗೆ ಬಿಡುಗಡೆ ಭಾಗ್ಯ ಸಿಕ್ಕಿದೆ.

ಅಂತೂ ಮಹಮ್ಮದ್ ನಲಪಾಡ್ ಗೆ ಷರತ್ತುಬಧ್ದ ಜಾಮೀನು ಮಂಜೂರಾಗಿದೆ. ವಿದ್ವತ್ ಮೇಲಿನ ಹಲ್ಲೆ ಪ್ರಕರಣದಲ್ಲಿ ಕಳೆದ 116 ದಿನಗಳಿಂದ ಜೈಲಿನಲ್ಲಿದ್ದ ಶಾಸಕ ಹ್ಯಾರಿಸ್ ಪುತ್ರನಿಗೆ ಬಿಡುಗಡೆ ಭಾಗ್ಯ ಸಿಕ್ಕಿದೆ.

ಮಹಮ್ಮದ್ ನಲಪಾಡ್ ಮತ್ತು ಇತರ ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನೆನ್ನೆಗೆ ಪೂರ್ಣಗೊಳಿಸಿದ್ದ ನ್ಯಾಯಾಲಯ ತೀರ್ಪನ್ನು ಜೂನ್ 14ಕ್ಕೆ ಕಾಯ್ದಿರಿಸಿತ್ತು. ಹೈಕೋರ್ಟ್ ಏಕ ಸದಸ್ಯ ಪೀಠದ ನ್ಯಾಯಾಧೀಶ ಮೈಕೆಲ್ ಡಿ ಕುನ್ಹ ಮಹಮ್ಮದ್‌ ನಲಪಾಡ್‌ಗೆ ಷರತ್ತು ಬದ್ಧ ಜಾಮೀನು ನೀಡಿದ್ದಾರೆ.

2 ಲಕ್ಷ ರೂಪಾಯಿ ಬಾಂಡ್ ಜೊತೆಗೆ ಇಬ್ಬರ ಶ್ಯೂರಿಟಿ ನೀಡುವಂತೆ ತಿಳಿಸಲಾಗಿದೆ. ನ್ಯಾಯಾಲಯದ ಅನುಮತಿ ಇಲ್ಲದೆ ಬೆಂಗಳೂರು ಬಿಟ್ಟು ತೆರಳದಂತೆ, ಸಾಕ್ಷಿಗಳ ಮೇಲೆ ಪ್ರಭಾವ ಬೀರದಂತೆ ಷರತ್ತು ವಿಧಿಸಲಾಗಿದೆ. ತನಿಖೆಗೆ ಸಹಕರಿಸಬೇಕು, ನ್ಯಾಯಾಲಯದ ವಿಚಾರಣೆಗೆ ಹಾಜರಾಗಬೇಕು ಎಂಬ ಷರತ್ತುಗಳು ಸೇರಿವೆ. ಜಾಮೀನು ಕೋರಿ ಅಧೀನ ನ್ಯಾಯಾಲಯಗಳಲ್ಲಿ ನಲಪಾಡ್ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಂಡ ಹಿನ್ನಲೆಯಲ್ಲಿ ಹೈಕೋರ್ಟ್ ಮೊರೆ ಹೋಗಿದ್ದರು.

ಮೊಹಮ್ಮದ್‌ ನಲಪಾಡ್‌ನಿಂದ ಹಲ್ಲೆಗೊಳಗಾದ ವಿದ್ವತ್‌.
ಮೊಹಮ್ಮದ್‌ ನಲಪಾಡ್‌ನಿಂದ ಹಲ್ಲೆಗೊಳಗಾದ ವಿದ್ವತ್‌.

ನಲಪಾಡ್ ಪರ ಹಿರಿಯ ನ್ಯಾಯವಾದಿ ಬಿವಿ ಆಚಾರ್ಯ ವಾದ ಮಂಡನೆ ಮಾಡಿದ್ದು, ಆರೋಪಿ ಶಾಸಕರ ಪುತ್ರ ಎಂದ ಮಾತ್ರಕ್ಕೆ ಪ್ರಭಾವ ಬೀರುತ್ತಾರೆ ಎನ್ನಲಾಗದು. ಪ್ರಕರಣ ನಡೆದು ಇಷ್ಟು ದಿನಗಳಾದರೂ ಯಾವ ಪ್ರಭಾವವನ್ನು ಬೀರಿಲ್ಲ. ದೋಷಾರೋಪ ಪಟ್ಟಿ ಸಲ್ಲಿಕೆಯಾಗಿರುವುದರಿಂದ ಜಾಮೀನು ನೀಡಿ ಎಂದು ನ್ಯಾಯಾಧೀಶರಲ್ಲಿ ಮನವಿ ಮಾಡಿದ್ದರು.

ಹಲ್ಲೆಗೊಳಗಾದ ವಿದ್ವತ್ ಪರ ವಕೀಲ ಶ್ಯಾಂಸುಂದರ್ ಆರೋಪಿ ಪ್ರಭಾವಿಯಾಗಿದ್ದು, ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ಜಾಮೀನು ಮಂಜೂರು ಮಾಡಬಾರದು ಎಂದು ವಾದ ಮಂಡಿಸಿದ್ದರು. ಅಂತಿಮವಾಗಿ ತೀರ್ಪು ಕಾಯ್ದಿರಿಸಿದ್ದ ಹೈಕೋರ್ಟ್ ಏಕಸದಸ್ಯ ಪೀಠ ಷರತ್ತುಬದ್ಧ ಜಾಮೀನು ನೀಡಿದೆ.

ಕಳೆದ ಫೆಬ್ರವರಿ 17ರಂದು ಯುಬಿ ಸಿಟಿಯ ಫರ್ಜಿ ಕೆಫೆಯಲ್ಲಿ ಉದ್ಯಮಿ ಪುತ್ರ ವಿದ್ವತ್ ಮೇಲೆ ಮಹಮ್ಮದ್ ನಲಪಾಡ್ ಮತ್ತು ಸ್ನೇಹಿತರು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಹಲ್ಲೆಗೊಳಗಾದ ವಿದ್ವತ್ ಮಲ್ಯ ಆಸ್ಪತ್ರೆಗೆ ದಾಖಲಾಗಿ ಹಲವು ದಿನಗಳ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು.

ಈ ಪ್ರಕರಣ ಇಡೀ ದೇಶಾದ್ಯಂತ ಸುದ್ದಿ ಮಾಡಿತ್ತು. ನಲಪಾಡ್ ವರ್ತನೆಗೆ ವ್ಯಾಪಕ ಖಂಡನೆ ವ್ಯಕ್ತವಾಗುವುದರ ಜೊತೆಗೆ ಆರೋಪಿ ರಕ್ಷಣೆ ನಡೆಯುತ್ತಿದೆ ಎಂದು ಆಗಿನ ಕಾಂಗ್ರೆಸ್ ಸರ್ಕಾರದ ವಿರುದ್ಧವೂ ಆಕ್ರೋಶ ವ್ಯಕ್ತವಾಗಿತ್ತು. ಮಾಧ್ಯಮ ಮತ್ತು ರಾಜ್ಯ, ದೇಶದ ಗಮನ ಸೆಳೆದ ಪ್ರಕರಣದಲ್ಲೀಗ ಆರೋಪಿಗೆ ಜಾಮೀನು ಮಂಜೂರಾಗಿದೆ.