ಹಿಂದೂ ಉಗ್ರ- ಇಸ್ಲಾಂ ಭಯೋತ್ಪಾದನೆ: ಕ್ವಾಂಟಿಕೋದಿಂದ ಪ್ರಿಯಾಂಕವರೆಗೆ
ಸುದ್ದಿ ಸಾರ

ಹಿಂದೂ ಉಗ್ರ- ಇಸ್ಲಾಂ ಭಯೋತ್ಪಾದನೆ: ಕ್ವಾಂಟಿಕೋದಿಂದ ಪ್ರಿಯಾಂಕವರೆಗೆ

ಪ್ರಿಯಾಂಕರನ್ನು ಟ್ವೀಟ್‌ನಲ್ಲಿ ತರಾಟೆಗೆ ತೆಗೆದುಕೊಂಡ ಅತುಲ್ ಕೊಚ್ಚರ್ ಇಸ್ಲಾಂ ವಿರೋಧಿ ಹೇಳಿಕೆ ದಾಖಲಿಸಿ ವಿವಾದ ಸೃಷ್ಟಿಸಿದ್ದರು. ಈಗ ಕೊಚ್ಚರ್ ವಿರುದ್ದ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿಭಟನೆಗಳು ಆರಂಭವಾಗಿವೆ.

ಕ್ವಾಂಟಿಕೋ ಸೀಸನ್-3ರಲ್ಲಿ ಬಾಲಿವುಡ್ ಕಂ ಹಾಲಿವುಡ್ ನಟಿ ಪ್ರಿಯಾಂಕ ಛೋಪ್ರ ನಟಿಸಿರುವುದು ಎಲ್ಲರಿಗೂ ಗೊತ್ತೇ ಇದೆ. ಈ ಸೀರಿಯಲ್ ಪ್ರಸಾರವಾದ ನಂತರ ವಿವಾದವೊಂದು ಆರಂಭವಾಗಿ ಪ್ರಿಯಾಂಕ ಕ್ಷಮೆ ಕೇಳಿದ್ದೂ ಆಗಿದೆ.

ಸೀರಿಯಲ್‌ನಲ್ಲಿ ಎಫ್ ಬಿಐ ಏಜೆಂಟ್ ಪಾತ್ರ ನಿರ್ವಹಿಸಿರುವ ಪಿಗ್ಗಿ, ಪರಮಾಣು ದಾಳಿ ನಡೆಸಲು ಸಿದ್ದತೆ ನಡೆಸಿದ್ದ ಶಂಕಿತನೊಬ್ಬನನ್ನು ಅರೆಸ್ಟ್ ಮಾಡುತ್ತಾಳೆ. ಆರೋಪಿ ಕೊರಳಲ್ಲಿ ರುದ್ರಾಕ್ಷಿ ಧರಿಸಿದ್ದರಿಂದ ಆತನನ್ನು ಹಿಂದೂ ಉಗ್ರ ಎಂಬಂತೆ ಬಿಂಬಿಸಲಾಗಿದೆ. ಇದರಿಂದ ಭಾರತೀಯರ ಭಾವನೆಗಳಿಗೆ ಧಕ್ಕೆಯಾಗಿದೆ ಎಂಬ ಅಭಿಪ್ರಾಯಗಳೂ ವ್ಯಕ್ತವಾಗಿ ಪಿಗ್ಗಿ ವಿರುದ್ಧ ಪ್ರತಿಭಟನೆಗಳೂ ನಡೆದಿದ್ದವು.

ಪರಿಸ್ಥಿತಿ ಅರಿತ ಪ್ರಿಯಾಂಕ ಮತ್ತು ಎಬಿಸಿ ನೆಟ್‌ವರ್ಕ್‌ ಕ್ಷಮೆ ಕೇಳಿದ್ದರು. ಇಲ್ಲಿಗೆ ಪ್ರಕರಣ ಮುಗಿಯಿತು ಅಂತ ಎಲ್ಲರೂ ಅಂದುಕೊಳ್ಳುತ್ತಿರುವಾಗಲೇ ಪ್ರಖ್ಯಾತ ಬಾಣಸಿಗ ಅತುಲ್ ಕೊಚ್ಚರ್ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ. ಕ್ವಾಂಟಿಕೋದಲ್ಲಿನ ಪ್ರಿಯಾಂಕ ನಡೆಯನ್ನು ಖಂಡಿಸಲು ಹೋಗಿ ತಾವೇ ಖಂಡನೆಗೆ ಒಳಗಾಗಿದ್ದಾರೆ.

ಪ್ರಿಯಾಂಕರನ್ನು ಟ್ವೀಟ್‌ನಲ್ಲಿ ತರಾಟೆಗೆ ತೆಗೆದುಕೊಂಡ ಅತುಲ್ ಕೊಚ್ಚರ್ ಇಸ್ಲಾಂ ವಿರೋಧಿ ಹೇಳಿಕೆ ದಾಖಲಿಸಿದ್ದರು. ಇದು ಮತ್ತೊಂದು ವಿವಾದ ಸೃಷ್ಟಿಸಿದೆ. ಪ್ರಿಯಾಂಕ ವಿರುದ್ದ ದೇಶದಲ್ಲಿ ಪ್ರತಿಭಟನೆಗಳು ನಡೆದರೆ ಕೊಚ್ಚರ್ ವಿರುದ್ದ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿಭಟನೆಗಳು ಆರಂಭವಾಗಿವೆ. ಟ್ವೀಟ್ ಡಿಲೀಟ್ ಮಾಡಿ, ಕ್ಷಮೆ ಕೇಳಿದ್ದರೂ ಕೊಚ್ಚರ್ ತಮ್ಮ ಹೇಳಿಕೆಗೆ ಭಾರೀ ಬೆಲೆಯನ್ನೇ ತೆರಬೇಕಾಗಿದೆ.

ದುಬೈನ ಪ್ರಖ್ಯಾತ ಹೋಟೆಲ್ ಜೆಡಬ್ಲ್ಯೂ ಮ್ಯಾರಿಯೇಟ್ ಅತುಲ್ ಜೊತೆಗಿನ ತನ್ನ ಒಪ್ಪಂದವನ್ನು ರದ್ದುಪಡಿಸಿದೆ. ಬ್ರಿಟನ್ನಿನ ಹೋಟೆಲ್ ಹುಡುಕಾಟದ ಆಪ್ ತನ್ನ ಪಟ್ಟಿಯಿಂದ ಕೊಚ್ಚರ್ ರೆಸ್ಟೋರೆಂಟ್ ಹೆಸರನ್ನು ತೆಗೆದು ಹಾಕಿದೆ. ಬ್ರಿಟನ್ ನಾಗರೀಕರಾಗಿರುವ ಅತುಲ್ ಕೊಚ್ಚರ್ ರೆಸ್ಟೋರೆಂಟ್ ನಡೆಸುತ್ತಿದ್ದು, ಸೆಲೆಬ್ರಿಟಿ ಶೆಫ್ ಆಗಿ ಗುರುತಿಸಿಕೊಂಡಿದ್ದಾರೆ.

ಹಿಂದೂ ಉಗ್ರ- ಇಸ್ಲಾಂ ಭಯೋತ್ಪಾದನೆ: ಕ್ವಾಂಟಿಕೋದಿಂದ ಪ್ರಿಯಾಂಕವರೆಗೆ

ಈ ಬೆಳವಣಿಗೆಗೆಳ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಕೊಚ್ಚರ್ ತಮ್ಮ ಹೇಳಿಕೆಯಿಂದ ನೋವುಂಟಾಗಿದೆ. ಅಸೂಕ್ಷ್ಮ ಮತ್ತು ತಪ್ಪು ಹೇಳಿಕೆ ನೀಡಿದ್ದೇನೆ ಅದಕ್ಕಾಗಿ ನಾನು ಕ್ಷಮೆಯನ್ನು ಕೇಳುತ್ತೇನೆ. ದುಬೈನಲ್ಲಿರುವ ನನ್ನ ಸ್ನೇಹಿತರು ಮತ್ತು ಹಿತೈಷಿಗಳು ನನ್ನನ್ನು ಕ್ಷಮಿಸಿದ್ದಾರೆ ಎಂದು ಬಾವಿಸಿದ್ದೇನೆ. ಭವಿಷ್ಯದಲ್ಲಿ ನನ್ನನ್ನು ಬೆಂಬಲಿಸಲಿದ್ದಾರೆ ಎಂದು ನಂಬಿದ್ದೇನೆ ಎಂದಿದ್ದಾರೆ.

ಅತುಲ್ ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧದ ಅಲೆ ಸೃಷ್ಟಿಸಿದೆ. ಭಾರತೀಯ ಹಿಂದೂಗಳು ಕೆಲವರು ಅತುಲ್ ಬೆನ್ನಿಗೆ ನಿಂತಿದ್ದು, ಅವರ ಹೇಳಿಕೆಯಲ್ಲಿ ತಪ್ಪೇನಿದೆ, ಸತ್ಯವನ್ನೇ ನುಡಿದಿದ್ದಾರೆ ಎಂದಿದ್ದಾರೆ. ಹಿಂದೂ ವಿರೋಧಿಯಾಗಿ ನಡೆದುಕೊಂಡ ಪ್ರಿಯಾಂಕನಿಗೆ ಒಂದು ನ್ಯಾಯ, ಅತುಲ್ ಅವರಿಗೆ ಮತ್ತೊಂದು ನ್ಯಾಯ ಎಂಬರ್ಥದ ಟ್ವಿಟ್‌ಗಳು ಹರಿದಾಡಿವೆ.

ಇನ್ನೂ ಕೆಲವರು ಈ ರೀತಿ ಹೇಳಿಕೆ ನೀಡುವವರಿಗೆ ನಿರ್ಬಂದವೇ ಸರಿಯಾದ ನಿರ್ಧಾರ. ಈ ಕಾರಣಕ್ಕಾದರೂ ಪಾಠ ಕಲಿಯುತ್ತಾರೆ ಎಂದಿದ್ದಾರೆ.

ಧರ್ಮದ ವಿಚಾರಗಳು ಬಂದಾಗ ಪ್ರತಿಕ್ರಿಯೆಗಳು ಅಸೂಕ್ಷ್ಮವಾಗಿ ಇರುವುದೇ ಹೆಚ್ಚು.2016ರಲ್ಲಿ ಭಾರತದಲ್ಲಿ ಅಸಹಿಷ್ಣುತೆ ಇದೆ ಎಂದಿದ್ದ ಬಾಳಿವುಡ್ ನಟ ಅಮೀರ್ ಖಾನ್ ಅವರನ್ನು ಸ್ನ್ಯಾಪ್ ಡೀಲ್ ತನ್ನ ಅಂಬಾಸಿಡರ್ ಸ್ಥಾನದಿಂದ ಕಿತ್ತೊಗೆಯಬೇಕು ಎಂಬ ಒತ್ತಾಯ ಬಂದಿತ್ತು. ಈಗ ಕೊಚ್ಚರ್ ಹೇಳಿಕೆಯಿಂದ ಅವರ ಒಡೆತನದ ರೆಸ್ಟೋರೆಂಟ್ ಬಹಿಷ್ಕರಿಸಬೇಕು ಎಂಬ ಒತ್ತಾಯಗಳು ಕೇಳಿಬಂದಿವೆ.

ಹಿಂದು-ಹಿಂದು ಉಗ್ರತ್ವ: ಇಸ್ಲಾಂ-ಭಯೋತ್ಪಾದನೆ

ಬಾಲಿವುಡ್ ಮತ್ತು ಹಾಲಿವುಡ್‌ನಲ್ಲಿ ಧರ್ಮ ಮತ್ತು ಅದಕ್ಕೆ ಸಂಬಂಧಿಸಿದ ಅಪರಾಧ ಚಟುವಟಿಕೆಗಳನ್ನು ಭಿನ್ನ ನೆಲೆಯಲ್ಲಿ ಗುರುತಿಸುವ ಪ್ರಕ್ರಿಯೆಗಳು ಮೊದಲಿಂದಲೂ ನಡೆದಿಲ್ಲ. ಯಾವುದೇ ರೀತಿಯ ಅಪರಾಧ ಮಾಡುವ ವ್ಯಕ್ತಿಯೊಬ್ಬ ಮುಸ್ಲಿಂ ಆಗಿಯೇ ಬಹುತೇಕ ಸಂದರ್ಭಗಳಲ್ಲಿ ಗುರುತಿಸಿಕೊಂಡಿದ್ದಾನೆ. ಆ ಎಲ್ಲಾ ಅಪರಾಧಗಳಿಗೂ ಇಸ್ಲಾಂ ಕಾರಣ ಎಂಬ ರೀತಿಯ ನಿರೂಪಣೆಗಳು ಮುಖ್ಯವಾಹಿನಿಯ ಚಿತ್ರಗಳಲ್ಲಿ ಮೂಡಿವೆ.

ಸಿನಿಮಾ ಮತ್ತು ದೃಶ್ಯ ಮಾದ್ಯಮ ಪ್ರಭಾವಿ ಮಾಧ್ಯಮ ಆಗಿರುವುದರಿಂದ ಈ ರೀತಿಯ ಸಿದ್ದ ನಿರೂಪಣೆಗಳಿಂದ ಜನರ ಮನಸ್ಸಿನಲ್ಲಿ ಇಸ್ಲಾಂ ಮತ್ತು ಭಯೋತ್ಪದನೆ ಎಂಬ ಭಾವನೆ ಮೂಡಿಸಲಾಗಿದೆ. ಈಗ ಈ ನೆಲೆ ವಿಸ್ತೃತವಾಗಿದ್ದು ಹಿಂದೂ ಧರ್ಮಕ್ಕೂ ವ್ಯಾಪಿಸುತ್ತಿದೆ. ಅಪರಾಧ ಮಾಡುವನೊಬ್ಬ ಹಿಂದೂ ಆಗಿದ್ದರೆ ಹಿಂದೂ ಭಯೋತ್ಪಾದಕ ಎಂಬ ರೀತಿಯಲ್ಲಿ ಬಿಂಬಿಸಲಾಗುತ್ತಿದೆ ಕ್ವಾಂಟಿಗೋದಲ್ಲಿ ಈಗ ನಡೆದಿರುವುದು ಇದೇ.

ಧರ್ಮ ಮತ್ತು ಅಪರಾಧಗಳನ್ನು ಬೇರೆ-ಬೇರೆಯಾಗಿ ನೋಡದ ಹೊರತು ಈ ಸಮಸ್ಯೆ ಬಗೆಹರಿಯುವುದಿಲ್ಲ. ಪ್ರಿಯಾಂಕ ಮತ್ತು ಕೊಚ್ಚರ್ ಅಂತಹ ವ್ಯಕ್ತಿಗಳು ಮತ್ತೆ ಮತ್ತೆ ಕ್ಷಮೆ ಕೇಳುವಂತ ಘಟನೆಗಳು ನಡೆಯುತ್ತಲೇ ಇರುತ್ತವೆ. ಧರ್ಮದ ಬಗೆಗೆ ಅಪನಂಬಿಕೆ ಹೆಚ್ಚಾಗುತ್ತಲೇ ಹೋಗುತ್ತದೆ.