samachara
www.samachara.com
ದೇಶಕ್ಕಾಗಿ ಯೋಧರು, ಬಿಜೆಪಿಗಾಗಿ ‘ಸೈಬರ್ ಯೋಧರು’!
ಸುದ್ದಿ ಸಾರ

ದೇಶಕ್ಕಾಗಿ ಯೋಧರು, ಬಿಜೆಪಿಗಾಗಿ ‘ಸೈಬರ್ ಯೋಧರು’!

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ಎಲ್ಲ ಕ್ಷೇತ್ರಗಳಲ್ಲೂ ಗೆಲ್ಲುವ ಉದ್ದೇಶದಿಂದ ಬಿಜೆಪಿ ತನ್ನ ಐಟಿ ಯೋಧರನ್ನು ಹುರಿಗೊಳಿಸುತ್ತಿದೆ. 2 ಲಕ್ಷ ಐಟಿ ಯೋಧರಿಗೆ ತರಬೇತಿ ನೀಡಿ, ಕಣಕ್ಕಿಳಿಸುವಲ್ಲಿ ಬಿಜೆಪಿ ಈಗಾಗಲೇ ಕಾರ್ಯನಿರತವಾಗಿದೆ.

`ಉತ್ತರ ಪ್ರದೇಶವನ್ನು ಗೆದ್ದರೆ ದೇಶದ ಅಧಿಕಾರದ ಚುಕ್ಕಾಣಿ ಹಿಡಿಯಬಹುದು’- ಹೀಗೊಂದು ಮಾತು ದೇಶದ ರಾಜಕೀಯ ವಲಯದಲ್ಲಿ ಜನಜನಿತ. ಇದೇ ಕಾರಣಕ್ಕೆ ಉತ್ತರ ಪ್ರದೇಶ ಗೆಲ್ಲಲು ರಾಜಕೀಯ ಪಕ್ಷಗಳು ಹೆಚ್ಚು ಶ್ರಮ ವಹಿಸುತ್ತವೆ. ದೇಶ ಕಂಡ ಅತಿ ಹೆಚ್ಚು ಪ್ರಧಾನಿಗಳು ಯುಪಿಯವರು. ಇನ್ನು ಏಳೆಂಟು ತಿಂಗಳಲ್ಲಿ ಎದುರಾಗಲಿರುವ ಲೋಕಸಭೆ ಚುನಾವಣೆಗೆ ಬಿಜೆಪಿ ಈಗಲೇ ಸಿದ್ದತೆ ನಡೆಸಿದ್ದು, ಯುಪಿಯನ್ನು ಗೆಲ್ಲಲು ಹೊಸ ತಂತ್ರಗಾರಿಕೆ ನಡೆಸಿದೆ.

ಸಾಮಾಜಿಕ ಜಾಲತಾಣಗಳ ಪ್ರಭಾವ ಬಲ್ಲ ಬಿಜೆಪಿ, ಮುಂದಿನ ಮೂರು ತಿಂಗಳಲ್ಲಿ ಯುಪಿಯಲ್ಲಿ ಎರಡು ಲಕ್ಷ ಸೈಬರ್ ಯೋಧರನ್ನು ಸಿದ್ದಗೊಳಿಸಲಿದೆ. ಈ ಬಗ್ಗೆ ಉತ್ತರ ಪ್ರದೇಶದ ಬಿಜೆಪಿ ಐಟಿ ಮುಖ್ಯಸ್ಥ ಸಂಜಯ್ ರಾಯ್ ಮಾಹಿತಿ ನೀಡಿದ್ದು, ತಮ್ಮ ಕಾರ್ಯತಂತ್ರ ಕುರಿತಂತೆ ವಿವರಿಸಿದ್ದಾರೆ.

2019ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಐಟಿ ವಿಂಗ್ ಉತ್ತರ ಪ್ರದೇಶದಲ್ಲಿ ಹೊಸ ಕಾರ್ಯತಂತ್ರ ರೂಪಿಸುತ್ತಿದೆ. ಮುಂದಿನ ಮೂರು ತಿಂಗಳಲ್ಲಿ ಎರಡು ಲಕ್ಷ ಸೈಬರ್ ಯೋಧರು ತರಬೇತಿ ಹೊಂದಲಿದ್ದು, ಇವರ ಮೂಲಕ ಚುನಾವಣೆ ಗೆಲ್ಲಲು ಬಿಜೆಪಿ ಸಿದ್ದವಾಗಿದೆ. ರಾಜ್ಯದ ಎಲ್ಲಾ ಭಾಗಗಳ ಯೋಧರು ಈ ಟೀಂನಲ್ಲಿರಲಿದ್ದಾರೆ.

ಹೀಗೆ ತರಬೇತಿ ಪಡೆಯಲಿರುವ ಸೈಬರ್ ಯೋಧರು ರಾಜ್ಯದ ಪ್ರತಿಯೊಬ್ಬ ನಾಗರೀಕನನ್ನು ತಲುಪಲಿದ್ದು, ರಾಜ್ಯ ಮತ್ತು ಕೇಂದ್ರದ ಯೋಜನೆಗಳು, ಅವು ಜನರಿಗೆ ತಲುಪುವ ಬಗ್ಗೆ ಮಾಹಿತಿ ನೀಡಲಿದ್ದಾರಂತೆ. ಬೂತ್ ಮಟ್ಟದಲ್ಲಿ ಸಾಮಾಜಿಕ ಜಾಲತಾಣ ಟೀಂ ರೆಡಿಯಾಗಲಿದ್ದು, ಪಕ್ಷವನ್ನು ಬೂತ್ ಮಟ್ಟದಲ್ಲಿ ಬೆಳೆಸಲು ಇದು ನೆರವಾಗುತ್ತದೆ ಎಂಬ ವಿಶ್ವಾಸ ಬಿಜೆಪಿಯದ್ದು.

ಅಭಿವೃದ್ದಿ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಸಾಮಾಜಿಕ ಜಾಲತಾಣಗಳ ಪ್ರಭಾವ ಪ್ರಮುಖವಾಗಿದೆ. ಹೀಗಾಗಿಯೇ ಸೈಬರ್ ಯೋದರನ್ನು ಸಜ್ಜುಗೊಳಿಸುತ್ತಿದ್ದು, ರಾಜ್ಯ ಮತ್ತು ಕೇಂದ್ರದ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ನೀಡಲಿದ್ದಾರೆ.
ಸಂಜಯ್ ರಾಯ್, ಯುಪಿ ಬಿಜೆಪಿ ಐಟಿ ವಿಂಗ್ ಮುಖ್ಯಸ್ಥ.

ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡೇ ರೂಪುಗೊಳ್ಳುತ್ತಿರುವ ಈ ಸೈಬರ್ ಯೋಧರ ತಂಡ ಲೋಕಸಭೆ ಚುನಾವಣೆ ನಂತರ ಮತ್ತೊಂದು ಚುನಾವಣೆಗೆ ಸಿದ್ದರಾಗಲಿದ್ದಾರೆ. ಪ್ರತಿ ಚುನಾವಣೆಯಲ್ಲಿ ಹೊಸದಾಗಿ ಸೇರ್ಪಡೆಯಾಗುವ ಯುವ ಮತದಾರರ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಅವರನ್ನು ತಮ್ಮತ್ತ ಸೆಳೆಯಲು ಈ ಕಸರತ್ತು ನಡೆಸಿದೆ. ಇಂದಿನ ಯುವ ಸಮೂಹ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಹೀಗಾಗಿ ಸಾಮಾಜಿಕ ಜಾಲತಾಣಗಳ ಮೂಲಕವೇ ಅವರನ್ನು ಸೆಳೆಯಲು ಸೈಬರ್ ಯೋಧರು ಸಿದ್ದವಾಗಿದ್ದಾರೆ.

2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಹಿಡಿಯಲು ಸಹಾಯವಾಗಿದ್ದು ಯುಪಿಯಲ್ಲಿನ ಜಯಭೇರಿ. ಇರುವ 80 ಲೋಕಸಭಾ ಸ್ಥಾನಗಳ ಪೈಕಿ 71ನ್ನು ಗೆದ್ದಿದ್ದ ಬಿಜೆಪಿ ಸುಲಭವಾಗಿ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿತ್ತು.

ದೇಶದಲ್ಲಿ ಬಿಜೆಪಿ ವಿರುದ್ಧ ಒಂದಾಗುತ್ತಿರುವ ರಾಜಕೀಯ ಪಕ್ಷಗಳು ಈ ಬಾರಿ ಬಿಜೆಪಿ ಜೊತೆಗಿನ ಸ್ಪರ್ಧೆಯನ್ನು ಮತ್ತಷ್ಟು ತೀವ್ರಗೊಳಿಸಲಿವೆ. ಯುಪಿಯಲ್ಲಿ ಗೆಲುವು ಸಾಧಿಸದಿದ್ದರೆ ಅಧಿಕಾರ ಹಿಡಿಯುವುದು ಕಷ್ಟ ಸಾಧ್ಯ. ಇದರ ಅರಿವಿರುವ ಬಿಜೆಪಿ ಜನರನ್ನು ಪ್ರತಿ ಹಂತದಲ್ಲಿ ತಲುಪುವ ಪ್ರಯತ್ನವಾಗಿ ಸೈಬರ್ ಯೋಧರನ್ನು ಸಿದ್ದಗೊಳಿಸುತ್ತಲಿದೆ. ಬಿಜೆಪಿ ಈ ಸೈಬರ್‌ ಚಟುವಟಿಕೆಗೆ ಉತ್ತರ ಪ್ರದೇಶದ ಜನ ಹೇಗೆ ಸ್ಪಂದಿಸಲಿದ್ದಾರೆ ಎನ್ನುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.