samachara
www.samachara.com
‘ಪತ್ರದ ಜತೆ ಎರಡು ಜೀವಂತ ಬುಲೆಟ್’; ಅಸ್ಸಾಮ್ ಶಾಸಕರೊಬ್ಬರಿಗೆ ಜೀವ ಬೆದರಿಕೆ
ಸುದ್ದಿ ಸಾರ

‘ಪತ್ರದ ಜತೆ ಎರಡು ಜೀವಂತ ಬುಲೆಟ್’; ಅಸ್ಸಾಮ್ ಶಾಸಕರೊಬ್ಬರಿಗೆ ಜೀವ ಬೆದರಿಕೆ

ಅಸ್ಸಾಮ್‌ನ ಮುಸ್ಲಿಂ ಶಾಸಕರೊಬ್ಬರಿಗೆ ಮುಸ್ಲಿಂ ಸಂಘಟನೆಯೊಂದು ಬೆದರಿಕೆ ಪತ್ರವನ್ನು ಕಳುಹಿಸಿದೆ. 15 ದಿನದೊಳಗೆ ಬಿಜೆಪಿ ಪಕ್ಷವನ್ನು ತೊರೆಯದಿದ್ದರೆ ಘೋರ ಪರಿಣಾಮವನ್ನು ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ.

ಅಸ್ಸಾಂನ ಬಿಜೆಪಿ ಶಾಸಕರೊಬ್ಬರಿಗೆ ಸಂಘಟನೆಯೊಂದು ಜೀವ ಬೆದರಿಕೆ ಒಡ್ಡಿದೆ. ಪತ್ರದ ಮೂಲಕ ಬೆದರಿಕೆ ಹಾಕಿದ್ದು, ಪತ್ರದ ಜತೆ ಎರಡು ಜೀವಂತ ಬುಲೆಟ್‌ಗಳನ್ನು ಇಟ್ಟು ಕಳುಹಿಸಲಾಗಿದೆ.

ಅಮೀನ್‌ ಹಕ್ ಲಷ್ಕರ್‌‌ ಹೀಗೆ ಬೆದರಿಕೆಯನ್ನು ಪಡೆದಿರುವ ಬಿಜೆಪಿಯ ಶಾಸಕರು. ಅಸ್ಸಾಮ್‌ ರಾಜ್ಯದ ಏಕೈಕ ಮುಸ್ಲಿಂ ಶಾಸಕರಾಗಿರುವ ಅಮೀನ್‌ರವರಿಗೆ ಜೀವ ಬೇದರಿಕೆಯನ್ನು ಹಾಕಿದ್ದು, ಇನ್ನು 15 ದಿನಗಳಲ್ಲಿ ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಬೇಕು ಎಂಬ ಎಚ್ಚರಿಕೆಯನ್ನು ನೀಡಲಾಗಿದೆ ಎಂದು ಪೊಲೀಸರು ಮಂಗಳವಾರ ಸುದ್ದಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಅಸ್ಸಾಮ್‌ನ ಕಚಾರ್‌ ಜಿಲ್ಲೆಯ ಸೋನಾಲಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಲಷ್ಕರ್‌ಗೆ ಶನಿವಾರವೇ ಈ ಬೆದರಿಕೆ ಪತ್ರ ತಲುಪಿತ್ತು. ಕೈಬರಹದಲ್ಲಿದ್ದ ಪತ್ರದ ಜತೆ .32 ಗನ್‌ನ 2 ಜೀವಂತ ಗುಂಡುಗಳೂ ಕೂಡ ಇದ್ದವು. ಕೆಂಪು ಇಂಕನ್ನು ಬಳಸಿ ಬಂಗಾಳಿ ಭಾಷೆಯಲ್ಲಿ ಬರೆದಿತ್ತು ಎನ್ನಲಾಗಿದೆ.

“ಆ ಪತ್ರವು ಕರಿಮಾಂಜ್‌ ಎಂಬಲ್ಲಿಯ ಅಂಚೆ ಕಚೇರಿಯಿಂದ ಮೇ 22ರಂದೇ ಪೋಸ್ಟ್‌ ಆಗಿತ್ತು. ಜೂನ್‌ 9ರಂದು ನನ್ನ ಕೈ ತಲುಪಿತ್ತು. ಮುಸ್ಲಿಂ ಆಗಿ ಬಿಜೆಪಿಯ ಜತೆ ಇರುವುದರಿಂದಾಗಿ ಈ ಬೆದರಿಕೆ ಬಂದಿದೆ,” ಎಂದು 52 ವರ್ಷದ ರಾಜಕಾರಣಿ ಲಷ್ಕರ್‌ ಸುದ್ದಿ ಮಾಧ್ಯಮಗಳಿಗೆ ಹೇಳಿದ್ದಾರೆ.

ಇದುವರೆಗೂ ಹೆಸರೇ ಕೇಳಿರದಿದ್ದ ಮುಸ್ಲಿಂ ಸಂಘಟನೆಯೊಂದು ಈ ಪತ್ರವನ್ನು ಕಳುಹಿಸಿದೆ ಎನ್ನಲಾಗಿದೆ. ‘ಸೇವ್‌ ಸೆಕ್ಯೂರ್‌ ಅಂಡ್‌ ಡೆವೆಲಪ್‌ಮೆಂಟ್‌ ಪ್ರೊಟೆಕ್ಷನ್‌ ಫೋರ್ಸ್‌ ಆಫ್‌ ಮುಸ್ಲಿಂ’ ಎಂಬ ಸಂಘಟನೆಯ ಬಾರಕ್‌ ವ್ಯಾಲಿ ಘಟಕದಿಂದ ಈ ಪತ್ರ ಬಂದಿದೆ.

“ಮೇ ತಿಂಗಳಿನಲ್ಲಿ ಸಿಟಿಜನ್‌ಶಿಪ್‌(ಅಮೆಂಡ್‌ಮೆಂಟ್‌) ಬಿಲ್‌-2016ರ ವಿಚಾರಣೆ ನಡೆಸಲು ಜಂಟಿ ಸಂಸದೀಯ ಸಮಿತಿ ಬಾರಕ್‌ ಪ್ರದೇಶಕ್ಕೆ ಬಂದಿದ್ದ ಸಂಧರ್ಭದಲ್ಲಿ ನಾನು ಕಾಯ್ದೆ ತಿದ್ದುಪಡಿಯನ್ನು ವಿರೋಧಿಸಲಿಲ್ಲ ಎಂಬ ಕಾರಣಕ್ಕಾಗಿ ಬೆದರಿಕೆ ಒಡ್ಡಲಾಗಿದೆ,” ಎಂದು ಲಷ್ಕರ್ ತಿಳಿಸಿದ್ದಾರೆ.

ಮುಂದುವರಿದು, “ರಾಜ್ಯ ಸರಕಾರದ ಕಾನೂನುಗಳು ಕಾನೂನುಬಾಹಿರ ಚಟುವಟಿಕೆಗಳಿಗೆ, ಭೂ ಮಾಫೀಯಾದ ವ್ಯಕ್ತಿಗಳಿಗೆ ಮಾರಕವಾಗಿ ಪರಿಣಮಿಸಿವೆ. ಅವರಿಂದಲೇ ಈ ಪತ್ರ ಬಂದಿರಬಹುದು,” ಎಂಬ ಸಂಶಯವನ್ನು ಕೂಡ ಶಾಸಕ ಲಷ್ಕರ್‌ ವ್ಯಕ್ತಪಡಿಸಿದ್ದಾರೆ.

ನೆರೆಯ ದೇಶಗಳ ಧಾರ್ಮಿಕ ಅಲ್ಪ ಸಂಖ್ಯಾತರಿಗೆ ಪೌರತ್ವವನ್ನು ನೀಡಲು ಪ್ರಯತ್ನಿಸುವ ಈ ಪ್ರಸ್ತಾಪಿತ ಬಿಲ್‌ ವಿರುದ್ಧ ಅಸ್ಸಾಮ್‌ನಲ್ಲಿ ಹೋರಾಟಗಳು ಜರುಗುತ್ತಲೇ ಬರುತ್ತಿವೆ. ಈ ಮಸೂದೆಯು ಬಾಂಗ್ಲಾದೇಶದಲ್ಲಿ ನೆಲಸಿರುವ ಹಿಂದೂಗಳು ಅಸ್ಸಾಮ್‌ಗೆ ಬಂದು ನೆಲೆಸಲು ಸಹಾಯ ಮಾಡಬಹುದು ಎಂಬ ಭಯ ಇಂತಹ ಕೃತ್ಯಗಳು ನಡಯಲು ಕಾರಣ ಎಂದೂ ಕೂಡ ಹೇಳಲಾಗುತ್ತಿದೆ.

ಸದ್ಯ ಶಾಸಕ ಲಷ್ಕರ್‌, ಸಿಲ್ಚಾರ್‌ ಪೋಲಿಸ್‌ ಠಾಣೆಯಲ್ಲಿ ಈ ಕುರಿತು ದೂರು ದಾಖಲಿಸಿದ್ದಾರೆ. ಜೀವ ಬೆದರಿಕೆಯಿರುವ ಕಾರಣದಿಂದ ರಾಜ್ಯ ಸರಕಾರವೂ ಕೂಡ ಲಷ್ಕರ್‌ಗೆ ಹೆಚ್ಚಿನ ಭದ್ರತೆಯನ್ನು ಒದಗಿಸಲು ಮುಂದಾಗಿದೆ.

“ಪತ್ರವು ಲಷ್ಕರ್‌ರಿಗೆ ಇನ್ನು 15 ದಿನಗಳಲ್ಲಿ ಪಕ್ಷವನ್ನು ತೊರೆಯದಿದ್ದರೆ ಘೋರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದೆ. ಈ ಕುರಿತು ತನಿಖೆ ಆರಂಭಿಸಿದ್ದೇವೆ. ಇನ್ನು ಕೆಲವೇ ದಿನಗಳಲ್ಲಿ ಬೆದರಿಕೆ ಪತ್ರ ಕಳುಹಿಸಿದವರನ್ನು ಬಂಧಿಸುತ್ತೇವೆ,” ಎಂಬ ವಿಶ್ವಾಸವನ್ನು ಸಿಲ್ಚಾರ್‌ ಪೊಲೀಸ್‌ ಠಾಣೆಯ ಅಧಿಕಾರಿ ಇಂದ್ರಜಿತ್‌ ಚಕ್ರಬೋರ್ತಿ ಪ್ರದರ್ಶಿಸಿದ್ದಾರೆ.

ಅಮೀನ್‌ ಹಕ್‌ ಲಷ್ಕರ್‌ 2016ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದಿದ್ದರು. ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಅನಮುಲ್‌ ಹಕ್‌ರನ್ನು 5,500 ಮತಗಳ ಅಂತರದಿಂದ ಸೋಲಿಸಿ, ಸೋನಾಲಿ ಕ್ಷೇತ್ರದ ಶಾಸಕರಾಗಿ ಹೊರಹೊಮ್ಮಿದ್ದರು. ಬಿಜೆಪಿ ಪಕ್ಷದಿಂದ ಚುನಾವಣೆಗೆ ನಿಂತಿದ್ದ 7 ಜನ ಮುಸ್ಲಿಂ ಅಭ್ಯರ್ಥಿಗಳ ಪೈಕಿ ಗೆದ್ದಿದ್ದು ಲಷ್ಕರ್ ಒಬ್ಬರೇ. ಈಗ ಅವರಿಗೂ ಕೂಡ ಕೊಲೆ ಬೆದರಿಕೆ ಬಂದಿದೆ. ಮುಸ್ಲಿಂ ಸಮುದಾಯದಿಂದಲೇ ಈ ಬೆದರಿಕೆ ಬಂದಿರುವ ಸಾಧ್ಯತೆಗಳು ಹೆಚ್ಚಿವೆ ಎನ್ನಲಾಗಿದ್ದು, ಈ ಕುರಿತು ರಾಜ್ಯ ಸರಕಾರ ಕೈಗೊಳ್ಳಲಿರುವ ಕ್ರಮಗಳೇನು ಎನ್ನುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.