samachara
www.samachara.com
ಅಪ್ಪನ ಕ್ಷೇತ್ರ ಮರಳಿಸಿದ ಸೌಮ್ಯರೆಡ್ಡಿ; ಬಿಜೆಪಿ ಕೈ ತಪ್ಪಿದ ಹಾಲಿ ಕ್ಷೇತ್ರ
ಸುದ್ದಿ ಸಾರ

ಅಪ್ಪನ ಕ್ಷೇತ್ರ ಮರಳಿಸಿದ ಸೌಮ್ಯರೆಡ್ಡಿ; ಬಿಜೆಪಿ ಕೈ ತಪ್ಪಿದ ಹಾಲಿ ಕ್ಷೇತ್ರ

ಸೌಮ್ಯರೆಡ್ಡಿ ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿ.ಎನ್.ಪ್ರಹ್ಲಾದ್‌ರನ್ನು 2,889 ಮತಗಳಿಂದ ಮಣಿಸಿದ್ದಾರೆ. ಲಂಚಮುಕ್ತ ಕರ್ನಾಟಕ ನಿರ್ಮಾಣ ಹೋರಾಟದಲ್ಲಿದ್ದು,  3ನೇ ಬಾರಿ ಚುನಾವಣೆಗೆ ಇಳಿದಿದ್ದ ರವಿಕೃಷ್ಣಾರೆಡ್ಡಿ ಠೇವಣಿ ಕಳೆದುಕೊಂಡಿದ್ದಾರೆ.

ಬಿಜೆಪಿ ಶಾಸಕ ಬಿ ಎನ್ ವಿಜಯ್ ಕುಮಾರ್ ಅವರ ನಿಧನದಿಂದ ಮುಂದೂಡಲ್ಪಟ್ಟಿದ್ದ ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆ ಇದೇ ೧೧ರಂದು ನಡೆದಿದ್ದು, ಫಲಿತಾಂಶ ಹೊರಬಿದ್ದಿದೆ. ಕಾಂಗ್ರೆಸ್‌ನ ಸೌಮ್ಯರೆಡ್ಡಿ ಗೆಲುವು ಸಾಧಿಸಿದ್ದಾರೆ. 

ಕಾಂಗ್ರೆಸ್‌ನಿಂದ ಸೌಮ್ಯರೆಡ್ಡಿ, ಬಿಜೆಪಿಯ ಬಿ.ಎನ್.ಪ್ರಹ್ಲಾದ್‌, ಪಕ್ಷೇತರ ಅಭ್ಯರ್ಥಿ ರವಿಕೃಷ್ಣಾರೆಡ್ಡಿ ಸೇರಿದಂತೆ ಕಣದಲ್ಲಿ ಒಟ್ಟು 19 ಮಂದಿ ಅಭ್ಯರ್ಥಿಗಳಿದ್ದರು.

ಸೌಮ್ಯರೆಡ್ಡಿ ತಮ್ಮ ಸಮೀಪ ಪ್ರತಿಸ್ಪರ್ಧಿ ಬಿ.ಎನ್.ಪ್ರಹ್ಲಾದ್‌ ಅವರನ್ನು 2,889 ಮತಗಳ ಅಂತರದಿಂದ ಮಣಿಸಿದ್ದಾರೆ. ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯಲ್ಲಿ ತೊಡಗಿಸಿಕೊಂಡು 3ನೇ ಬಾರಿ ಚುನಾವಣಾ ರಾಜಕೀಯಕ್ಕೆ ಇಳಿದಿದ್ದ ರವಿಕೃಷ್ಣಾ ರೆಡ್ಡಿ ಠೇವಣಿ ಕಳೆದುಕೊಂಡಿದ್ದಾರೆ. ಸೌಮ್ಯರೆಡ್ಡಿ 54,457 ಮತಗಳನ್ನು ಪಡೆದಿದ್ದರೆ, ಬಿಜೆಪಿಯ ಬಿ.ಎನ್.ಪ್ರಹ್ಲಾದ್‌ 51,568 ಮತಗಳನ್ನು ಪಡೆದಿದ್ದಾರೆ. ರವಿಕೃಷ್ಣಾರೆಡ್ಡಿ ಪಡೆದಿರುವ ಮತಗಳು ಕೇವಲ 1,861.

ಜಯನಗರ ವಿಧಾನಸಭಾ ಕ್ಷೇತ್ರಕ್ಕೆ ಈ ಬಾರೀ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗಿತ್ತು. ಶೇ.55ರಷ್ಟು ಮತದಾನ ಪ್ರಮಾಣ ದಾಖಲಾಗಿತ್ತು. ಈ ಫಲಿತಾಂಶದಿಂದ ಬಿಜೆಪಿ ತನ್ನ ಒಂದು ಸ್ಥಾನ ಕಳೆದುಕೊಂಡಂತಾಗಿದೆ.

ಬಿಜೆಪಿಯ ಹಾಲಿ ಶಾಸಕ ಬಿ ಎನ್ ವಿಜಯ್ ಕುಮಾರ್ ಅವರ ನಿಧನದ ನಂತರ ಬಿಜೆಪಿಯಲ್ಲಿ ಟಿಕೆಟ್ ಗಾಗಿ ಪೈಪೋಟಿ ನಡೆದಿತ್ತು. ಸ್ಥಳಿಯ ಹಾಲಿ ಮತ್ತು ಮಾಜಿ ಕಾರ್ಪೋರೇಟರ್‌ಗಳು ಟಿಕೆಟ್‌ಗಾಗಿ ಲಾಭಿ ನಡೆಸಿದರೂ ಕೊನೆಗೂ ಬಿಜೆಪಿ ಅಳೆದು ತೂಗಿ ವಿಜಯ್ ಕುಮಾರ್ ಸಹೋದರ ಬಿ.ಎನ್.ಪ್ರಹ್ಲಾದ್‌ ಅವರನ್ನು ಕಣಕ್ಕಿಳಿಸಿತ್ತು.

ಬಿಟಿಎಂ ವಿಧಾನಸಭಾ ಕ್ಷೇತ್ರ ರಚನೆಗಿಂತ ಮುನ್ನ ಕ್ಷೇತ್ರವನ್ನು 4 ಬಾರಿ ಪ್ರತಿನಿಧಿಸಿದ್ದ ಕಾಂಗ್ರೆಸ್‌ನ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯರೆಡ್ಡಿ ವಿಜಯಮಾಲೆ ಧರಿಸಿದ್ದಾರೆ. ರಾಮಲಿಂಗಾರೆಡ್ಡಿ ನಂತರ ಈ ಕ್ಷೇತ್ರ ಬಿಜೆಪಿ ಭದ್ರ ಕೋಟೆಯೇ ಆಗಿತ್ತು. ಕ್ಷೇತ್ರ ತೊರೆದಿದ್ದ ರಾಮಲಿಂಗಾರೆಡ್ಡಿ ಪುತ್ರಿ ತಂದೆಯ ಹಳೇ ಕ್ಷೇತ್ರವನ್ನು ಗೆಲುವಿನೊಂದಿಗೆ ಕಾಂಗ್ರೆಸ್‌ಗೆ ಮರಳಿಸಿದ್ದಾರೆ.

ಈ ಗೆಲುವಿನೊಂದಿಗೆ ಕಾಂಗ್ರೆಸ್ ಒಂದು ಸ್ಥಾನ ಮೇಲಕ್ಕೇರಿದ್ದು, ಆರ್.ಆರ್.ನಗರ ಸೇರಿದಂತೆ ಒಟ್ಟು 80 ಸ್ಥಾನಗಳಲ್ಲಿ ಗೆಲುವು ಸಾಧಿಸಿದಂತಾಗಿದೆ. ಜಮಖಂಡಿ ಶಾಸಕ ಸಿದ್ದು ನ್ಯಾಮಗೌಡ ನಿಧನದಿಂದ ತೆರವಾಗಿರುವ ವಿಧಾಸಭಾ ಕ್ಷೇತ್ರಕ್ಕೇ ಇನ್ನಷ್ಟೇ ಚುನಾವಣೆ ನಡೆಯಬೇಕಿದೆ. ಹೀಗಾಗಿ ಕಾಂಗ್ರೆಸ್ಸಿನ ಈಗಿನ ಸಂಖ್ಯಾಬಲ 79.

ಫಲಿತಾಂಶ ಘೋಷಣೆಗೂ ಮುನ್ನವೇ ಸೋಲೊಪ್ಪಿಕೊಂಡ ಪಕ್ಷೇತರ ಅಭ್ಯರ್ಥಿ ರವಿಕೃಷ್ಣಾರೆಡ್ಡಿ ತಮ್ಮ ಫೇಸ್ ಬುಕ್ ಖಾತೆಯಲ್ಲಿ ತಮ್ಮನ್ನು ಬೆಂಬಲಿಸಿದ ಎಲ್ಲರ ಕ್ಷಮೆ ಕೋರಿದ್ದು, ಈ ಸಮಯ ನಮ್ಮದಲ್ಲ ಎಂದಿದ್ದಾರೆ.

ಅಪ್ಪನ ಕ್ಷೇತ್ರ ಮರಳಿಸಿದ ಸೌಮ್ಯರೆಡ್ಡಿ; ಬಿಜೆಪಿ ಕೈ ತಪ್ಪಿದ ಹಾಲಿ ಕ್ಷೇತ್ರ