ನಾ ಕೊಡೆ,ನೀ ಬಿಡೆ: ಇಬ್ಬರ ಪ್ರತಿಷ್ಠೆಗೆ ಆಮ್ ಆದ್ಮಿ ಕಂಗಾಲು
ಸುದ್ದಿ ಸಾರ

ನಾ ಕೊಡೆ,ನೀ ಬಿಡೆ: ಇಬ್ಬರ ಪ್ರತಿಷ್ಠೆಗೆ ಆಮ್ ಆದ್ಮಿ ಕಂಗಾಲು

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇರುತ್ತಾರೆ. ಕಳೆದ 3 ದಿನಗಳಿಂದ ದೆಹಲಿ ಲೆಫ್ಟಿನೆಂಟ್ ಜನರಲ್ ನಿವಾಸದಲ್ಲಿ ಸಂಪುಟ ಸಹೋದ್ಯೋಗಿಗಳ ಜತೆ ಅಹೋರಾತ್ರಿ ಧರಣಿ ನಡೆಸಿ ಸುದ್ದಿಯಲ್ಲಿದ್ದಾರೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇರುತ್ತಾರೆ. ಕಳೆದ ಮೂರು ದಿನಗಳಿಂದ ದೆಹಲಿ ಲೆಫ್ಟಿನೆಂಟ್ ಜನರಲ್ ನಿವಾಸದಲ್ಲಿ ಮೂವರು ಸಂಪುಟ ಸಹೋದ್ಯೋಗಿಗಳ ಜೊತೆ ಅಹೋರಾತ್ರಿ ಧರಣಿ ನಡೆಸಿ ಸುದ್ದಿಯಲ್ಲಿದ್ದಾರೆ.

ಎಲ್‌ಜಿ ನಿವಾಸದ ವೀಕ್ಷಕರ ಕೊಠಡಿಯಲ್ಲಿ ಕೇಜ್ರಿವಾಲ್ ಮತ್ತು ತಂಡ ನಡೆಸುತ್ತಿರುವ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದೆ. ಈ ಮಧ್ಯೆ ನೆನ್ನೆಯಿಂದ ಉಪವಾಸ ಕೈಗೊಂಡಿದ್ದ ಸತ್ಯೆಂದ್ರ ಜೈನ್ ಅವರ ಜೊತೆ ಮನೀಷ್ ಸಿಸೋಡಿಯಾ ಇಂದಿನಿಂದ ಅನಿರ್ದಿಷ್ಟಾವಧಿ ಉಪವಾಸ ಕೈಗೊಂಡಿದ್ದಾರೆ.

ದೆಹಲಿಯಲ್ಲಿ ಐಎಎಸ್ ಅಧಿಕಾರಿಗಳು ಆಡಳಿತಾತ್ಮಕ ಕೆಲಸ ಮಾಡಲು ಅಸಹಕಾರ ತೋರುತ್ತಿದ್ದಾರೆ. ತಾವು ಇದರ ಬಗ್ಗೆ ಗಮನ ವಹಿಸಿ ಮುಷ್ಕರ ನಿಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿ ಎಂಬುದು ಕೇಜ್ರಿವಾಲ್ ಮತ್ತವರ ಸಹೋದ್ಯೋಗಿಗಳ ಮನವಿ. ದೆಹಲಿಯ ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್ ಅವರನ್ನು ಕಳೆದ ಫೆಬ್ರವರಿಯಲ್ಲಿ ತಮ್ಮ ನಿವಾಸಕ್ಕೆ ಕರೆಸಿಕೊಂಡಿದ್ದ ಅರವಿಂದ್ ಕೇಜ್ರಿವಾಲ್ ಹಲ್ಲೆ ನಡೆಸಿದ್ದರು ಎಂಬ ಆರೋಪ ಕೇಳಿಬಂದಿದ್ದು, ಸಂಬಂಧಪಟ್ಟವರಿಂದ ವಿಚಾರಣೆಯೂ ನಡೆದಿದೆ.

ಈ ಮಧ್ಯೆ ಇದೇ ಕಾರಣ ಇಟ್ಟುಕೊಂಡು ದೆಹಲಿಯ ಐಎಎಸ್ ಅಧಿಕಾರಿಗಳು ಸರ್ಕಾರದ ಪಾಲಿಸಿ ಜಾರಿಗೆ ತರಲು ಅಸಹಕಾರ ತೋರುತ್ತಿದ್ದಾರೆ. ಇದಕ್ಕೆ ಅಂತ್ಯ ಹಾಡಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ, ಸಚಿವರಾದ ಸತ್ಯೇಂದ್ರ ಜೈನ್ ಮತ್ತು ಗೋಪಾಲ್ ರೈ ಲೆಫ್ಟಿನೆಂಟ್ ಗವರ್ನರ್‌ರನ್ನು ಭೇಟಿ ಆಗಿ ಚರ್ಚಿಸಲು ಕಳೆದ ಸೋಮವಾರ ಕಛೇರಿಗೆ ತೆರಳಿದ್ದರು. ಎಲ್ ಜಿ ನಿರಾಕರಿಸಿದ್ದರಿಂದ ವೀಕ್ಷಕರ ಕೊಠಡಿಯಲ್ಲಿ ಧರಣಿ ಆರಂಭಿಸಿದ್ದಾರೆ.

ಐಎಎಸ್ ಅಧಿಕಾರಿಗಳ ಪ್ರತಿಭಟನೆಯಿಂದ ಅಭಿವೃದ್ದಿ ಕಾರ್ಯಗಳಿಗೆ ಅಡಚಣೆ ಉಂಟಾಗುತ್ತಿದ್ದು, ದೆಹಲಿಯ ಜನರ ಹಿತದೃಷ್ಟಿಯಿಂದಲಾದರೂ ಸಮಸ್ಯೆ ಬಗೆಹರಿಸಿ ಎಂಬುದಾಗಿ ಮನವಿ ಮಾಡಿದ್ದರು. ಮತ್ತು ಸಮಸ್ಯೆ ಬಗೆಹರಿಯದ ಹೊರತು ಸಹೋದ್ಯೋಗಿಗಳ ಜೊತೆ ತಾವು ಕೈಗೊಂಡಿರುವ ಮುಷ್ಕರ ಕೈ ಬಿಡುವುದಿಲ್ಲ ಎಂಬುದಾಗಿಯೂ ತಿಳಿಸಿದ್ದರು. ಈ ಕುರಿತು ವೀಡಿಯೋ ಸಂದೇಶ ಬಿಡುಗಡೆಯಾಗಿದ್ದು, ಕೇಜ್ರಿವಾಲ್ ಲೆಫ್ಟಿನೆಂಟ್ ಗವರ್ನರ್ ಕುಮ್ಮಕ್ಕಿನಿಂದಲೇ ಐಎಎಸ್ ಅಧಿಕಾರಿಗಳು ಪ್ರತಿಭಟನೆಗಿಳಿದಿದ್ದು, ಸಮಸ್ಯೆ ಇತ್ಯರ್ಥವಾಗದ ಹೊರತು ಕದಲುವುದಿಲ್ಲ ಎಂಬ ಸಂದೇಶ ರವಾನಿಸಿದ್ದರು.

ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಲ್ ಮಾಧ್ಯಮಗಳಿಗೆ ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿದ್ದು, ಕೇಜ್ರಿವಾಲ್ ಆರೋಪಗಳನ್ನು ಅಲ್ಲಗಳೆದಿದ್ದಾರೆ. ಐಎಎಸ್ ಅಧಿಕಾರಿಗಳು ಎಂದಿನಂತೆ ತಮ್ಮ ಕೆಲಸ ಕಾರ್ಯಗಳಲ್ಲಿ ಭಾಗಿಯಾಗುತ್ತಿದ್ದು, ಕೇಜ್ರಿವಾಲ್ ಅಧಿಕಾರಿಗಳ ಜೊತೆ ಉತ್ತಮ ಸಂಬಂಧ ಹೊಂದಬೇಕು ಎಂದಿದ್ದಾರೆ. ಮತ್ತು ಈ ರೀತಿ ಧರಣಿ ನಡೆಸುವ ಮೂಲಕ ತಮ್ಮನ್ನು ಹೆದರಿಸುವ ಪ್ರಯತ್ನ ನಡೆಸಿದ್ದಾರೆ ಎಂದೂ ದೂರಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿರುವ ಐಎಎಸ್‌ ಅಸೋಸಿಯೇಷನ್ ಕೇಜ್ರಿವಾಲ್‌ ಆರೋಪಗಳನ್ನು ಅಲ್ಲಗೆಳೆದಿದೆ.

ನಾ ಕೊಡೆ,ನೀ ಬಿಡೆ: ಇಬ್ಬರ ಪ್ರತಿಷ್ಠೆಗೆ ಆಮ್ ಆದ್ಮಿ ಕಂಗಾಲು

ಇಂದು ಟ್ವಿಟ್ ಮಾಡಿರುವ ಅರವಿಂದ್ ಕೇಜ್ರಿವಾಲ್ ಐಎಎಸ್ ಅಧಿಕಾರಿಗಳನ್ನು ಕೇಂದ್ರ ಟೂಲ್ ನಂತೆ ಬಳಕೆ ಮಾಡುತ್ತಿದೆ ಎಂದಿದ್ದಾರೆ. ಒಟ್ಟಿನಲ್ಲಿ ಜನರ ಕೆಲಸ ಮಾಡಬೇಕಾದ ಮುಖ್ಯಮಂತ್ರಿ ಜನರ ಕೆಲಸಕ್ಕಾಗಿ ಮೂರು ದಿನಗಳಿಂದ ಧರಣಿ ಹೂಡಿದ್ದಾರೆ. ಜನರ ಹಿತದೃಷ್ಟಿಯಿಂದಲಾದರೂ ಸಮಸ್ಯೆಗೆ ಇತಿಶ್ರೀ ಹಾಡಬೇಕಾದ ಲೆಫ್ಟಿನೆಂಟ್ ಗವರ್ನರ್ ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿದ್ದು, ಇಬ್ಬರ ಜಗಳದಲ್ಲಿ ಪರಿತಪಿಸುತ್ತಿರುವುದು ಮಾತ್ರ ದೆಹಲಿಯ ಆಮ್ ಆದ್ಮಿ.