ಜಯನಗರ ಮತದಾನ: ನಿರೀಕ್ಷೆಯಂತೆಯೇ ಮತಹಾಕದ ಅರ್ಧದಷ್ಟು ಬುದ್ಧಿವಂತ ಜನ!
ಸುದ್ದಿ ಸಾರ

ಜಯನಗರ ಮತದಾನ: ನಿರೀಕ್ಷೆಯಂತೆಯೇ ಮತಹಾಕದ ಅರ್ಧದಷ್ಟು ಬುದ್ಧಿವಂತ ಜನ!

ಹಲವು ಕಾರಣಗಳಿಂದ ರಾಜ್ಯದ ಗಮನ ಸೆಳೆದಿದ್ದ ಜಯನಗರದಲ್ಲಿ ವಿಧಾನಸಭಾ ಕ್ಷೇತ್ರದ ಚುನಾವಣೆ ಮತದಾನ ಪ್ರಕ್ರಿಯೆ ಮುಗಿದಿದೆ. ಜೂ. 16ರಂದು ವಿಜಯದ ಮಾಲೆ ಯಾರಿಗೆ ಎಂಬುದಷ್ಟೆ ಬಹಿರಂಗವಾಗಬೇಕಿದೆ. 

ಬೆಳಿಗ್ಗೆ ಮತದಾನ ಸಜಹವಾಗಿ ಮಂದಗತಿಯಲ್ಲೇ ನಡೆಯಿತು. 9ಕ್ಕೆ ಶೇ.10ರಷ್ಟು ಮತದಾನ ನಡೆದಿದ್ದರೆ 11ಕ್ಕೆ ಶೆ.22ರಷ್ಟಿತ್ತು. ಆದರೆ ಮಧ್ಯಾಹ್ನ 1 ಗಂಟೆ ಹೊತ್ತಿಗೆ ಚುರುಕು ಪಡೆದುಕೊಂಡು ಶೇ.34ರಷ್ಟು ದಾಖಲಿಸಿತು. ಸಂಜೆ 3 ಗಂಟೆಗೆ ಶೇ.42ರಷ್ಟು, 5 ಗಂಟೆ ಹೊತ್ತಿಗೆ ಶೇ. 51ರಷ್ಟು ಮತದಾನವಾಗಿತ್ತು. ಇದು ಸೋಮವಾರ ಬಾಕಿ ಉಳಿದಿದ್ದ ಜಯನಗರ ಮತಕ್ಷೇತ್ರದ ಮತದಾನದ ರಿಪೋರ್ಟ್.

ಈ ಕ್ಷೇತ್ರದಲ್ಲಿ ಬಿಜೆಪಿ, ಅಕಾಲಿಕ ಮರಣಕ್ಕೆ ತುತ್ತಾದ ಬಿ.ಎನ್. ಜಯಕುಮಾರ್ ಸಹೋದರ ಪ್ರಹ್ಲಾದ್‌ರನ್ನು ಕಣಕ್ಕಿಳಿಸಿದ್ದರೆ, ಕಾಂಗ್ರೆಸ್‌ ಪಕ್ಷ ತನ್ನ ಹಿರಿಯ ನಾಯಕ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯಾರೆಡ್ಡಿಯನ್ನು ಕಣಕ್ಕಿಳಿಸಿತ್ತು. ಹೀಗಾಗಿ ಕ್ಷೇತ್ರದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ಬಿರುಸಿನ ಪ್ರಚಾರ ನಡೆಸಿದ್ದವು.

ಆದರೆ, ಇವೆರಡರ ನಡುವೆ ಕುತೂಹಲ ಕಾಯ್ದುಕೊಂಡವರು ಲಂಚಮುಕ್ತ ಕರ್ನಾಟಕ ವೇದಿಕೆಯ ರವಿಕೃಷ್ಣಾ ರೆಡ್ಡಿ. ಜಯನಗರ ವಿಧಾನಸಭಾ ಕ್ಷೇತ್ರ ರಾಜ್ಯದ ವಿದ್ಯಾವಂತ ಮತದಾರರೇ ಹೆಚ್ಚಿರುವ ಕ್ಷೇತ್ರಗಳಲ್ಲಿ ಒಂದೆನಿಸಿದೆ. ಹೀಗಾಗಿ ರವಿ ಕೃಷ್ಣರೆಡ್ಡಿ ಅವರ ಸ್ಪರ್ಧೆ ಉಳಿದ ಎರಡೂ ಪಕ್ಷಗಳ ಮೇಲೂ ಪರಿಣಾಮ ಬೀರಬಹುದು ಎಂಬ ಲೆಕ್ಕಾಚಾರ ಹೊಂದಿತ್ತು.

ಇದಕ್ಕೆ ಪುಷ್ಟಿ ಎಂಬಂತೆ ಕಳೆದ 6 ತಿಂಗಳಿಂದ ಅವರ ಪ್ರಚಾರ ಕಾರ್ಯವೂ ಬಹುತೇಕ ವಿಭಿನ್ನವಾಗಿತ್ತು. ಹಿಂದೆ ಸಮಾಜವಾದಿ ಹೋರಾಟದ ಮೂಲಕ ಹುಟ್ಟಿಕೊಂಡಿದ್ದ ‘ ಒಂದು ಓಟು ಒಂದು ನೋಟು ’ ಅಭಿಯಾನ ಆರಂಭಿಸಿದ್ದರು. ಈ ಮೂಲಕ ಜನರಿಂದಲೇ ಚುನಾವಣಾ ಖರ್ಚಿನ ಹಣವನ್ನು ಸಂಗ್ರಹಿಸಿದ್ದರು.

ರವಿಕೃಷ್ಣಾ ರೆಡ್ಡಿ ಈ ಪ್ರಯತ್ನಕ್ಕೆ ಬುದ್ದಿಜೀವಿಗಳು, ಸ್ವಾತಂತ್ರ್ಯ ಹೋರಾಟಗಾರರು, ಸಾಮಾಜಿಕ ಹೋರಾಟಗಾರರು, ಸಾಹಿತಿಗಳು ಬೆಂಬಲ ಸೂಚಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಅವರ ಬಗ್ಗೆ ಸಾಕಷ್ಟು ಮಂದಿ ಒಲವು ವ್ಯಕ್ತಪಡಿಸುತ್ತಿದ್ದರು. ಪರಿಶಿಷ್ಟ ಜಾತಿ ಮತ್ತು ವರ್ಗ, ಪ್ರಗತಿಪರ ಆಶಯಗಳ ವಿದ್ಯಾವಂತರೂ ಅವರಿಗೆ ಸಾಮಾಜಿಕ ತಾಣಗಳಲ್ಲಿ ಸಾಕಷ್ಟು ಬೆಂಬಲ ವ್ಯಕ್ತಪಡಿಸಿತ್ತು. ಆದರೆ ಹೀಗೆ ಬೆಂಬಲ ಮತ್ತು ಒಲವು ತೋರುತ್ತಿದ್ದವರು ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಭೌತಿಕವಾಗಿಯೂ ಬೆಂಬಲ ಸೂಚಿಸಿದ್ದು ಕಂಡು ಬರಲಿಲ್ಲ.

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್‌. ಎಸ್. ದೊರೆಸ್ವಾಮಿ, ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಸಲಹೆಗಾರ ಎಸ್‌. ಆರ್.‌ ಹಿರೇಮಠ್, ಸಾಹಿತಿ ದೇವನೂರು ಮಹಾದೇವ, ಸ್ವರಾಜ್‌ ಪಕ್ಷದ ಮುಖ್ಯಸ್ಥ ಯೋಗೇಂದ್ರ ಯಾದವ್ ಮತ್ತಿತರ ಕೆಲವು ಮಂದಿ ಕ್ಷೇತ್ರಕ್ಕೆ ಬಂದು ಕ್ಯಾಂಪೇನ್‌ನಲ್ಲಿ ಪಾಲ್ಗೊಂಡಿದ್ದು ಹೊರತುಪಡಿಸಿದರೆ ಈ ವಲಯದ ಹೆಚ್ಚು ಮಂದಿ ಕಂಡು ಬರಲಿಲ್ಲ.

ಆದರೆ ಅವರ ಈ ಹೋರಾಟಕ್ಕೆ ನಿವೃತ್ತ ಅಧಿಕಾರಿಗಳು, ಐಟಿ ವಲಯದ ಸಹುದ್ಯೋಗಿ ಮಿತ್ರರು ಸ್ವಯಂ ಆಗಿ ಪ್ರಚಾರಕ್ಕೆ ಸಹಕಾರ ನೀಡಿದ್ದರು. ಇದು ಕ್ಯಾಂಪೇನ್‌ಗೆ ಮೆರಗು ಮತ್ತು ಶಕ್ತಿಯನ್ನು ನೀಡಿತ್ತು. ಈ ಯುವ ವರ್ಗ ಪ್ರಚಾರದಲ್ಲಿ ಪಾಲ್ಗೊಂಡು ನಿತ್ಯವೂ ಇಡೀ ಕ್ಷೇತ್ರವನ್ನು ಪೂರ್ಣವಾಗಿ ಒಮ್ಮೆ ಸುತ್ತಿ ಪ್ರಚಾರ ಮಾಡುತ್ತಿತ್ತು. ಹೀಗಾಗಿ ಕ್ಷೇತ್ರದೆಲ್ಲೆಡೆ ರವಿಕೃಷ್ಣಾ ರೆಡ್ಡಿ ಚಿರಪರಿಚಿತರಾಗಿದ್ದರು.

ಇನ್ನು ಬಿಸ್ಮಿಲ್ಲಾ ನಗರ, ಗುರಪ್ಪನ ಪಾಳ್ಯದಂತ ಬಡ ಮಧ್ಯಮ ವರ್ಗದ ಜನರಿರುವ ಪ್ರದೇಶಗಳ ಪಡಿತರ ಅಂಗಡಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹಠಾತ್ ಭೇಟಿ ನೀಡಿ ಭ್ರಷ್ಟಾಚಾರವನ್ನು ಬಯಲು ಮಾಡಿದ್ದರು. ತೂಕದಲ್ಲಿ ಮೋಸ, ಚಿಕಿತ್ಸೆ ನೀಡಲು ವಿಳಂಬದಂತಹ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡಿದ್ದರು. ಈ ಮೂಲಕ ಈ ಪ್ರದೇಶಗಳ ಜನರ ಒಲವು ಗಳಿಸಲು ತೀವ್ರ ಪ್ರಯತ್ನ ಮಾಡಿದ್ದರು.

ಇವುಗಳನ್ನು ಬಿತ್ತರಿಸಲು ಸಾಮಾಜಿಕ ಜಾಲತಾಣಗಳನ್ನು ರೆಡ್ಡಿ ಸಮರ್ಥವಾಗಿ ಬಳಸಿಕೊಂಡಿದ್ದರು. ಆದರೆ ಈ ಪ್ರದೇಶಗಳ ಮುಸ್ಲಿಮರು, ಅನ್ಯಭಾಷಿಕರು, ಕೂಲಿ ಕಾರ್ಮಿಕರು ಸಾಂಪ್ರದಾಯಕ ಮತದಾರರಾಗಿದ್ದರು. ಹೀಗಾಗಿ ಅವರು ರೆಡ್ಡಿಯವರ ಸ್ಪರ್ಧೆಯ ವಿಶೇಷತೆಯನ್ನು ಅರಿಯುವಲ್ಲಿ ಯಶಸ್ವಿಯಾಗಿರಲಿಲ್ಲ. ಇಲ್ಲಿನ ಮತದಾರರು ರವಿಕೃಷ್ಣಾರೆಡ್ಡಿಗೆ ಮತ ಹಾಕಿದ್ದಾರೆ ಎಂದು ಹೇಳಲಾಗದು.

ಅವರು ಹಣ, ಮದ್ಯ, ಕುಕ್ಕರ್ ಇತ್ಯಾದಿ ವಸ್ತುಗಳ ಆಮಿಷ ಒಡ್ಡುವುದರ ವಿರುದ್ಧ ರಾತ್ರಿ ಹೊತ್ತು ಅಭಿಯಾನವನ್ನೂ ನಡೆಸಿದ್ದರು. ಎದುರಾಳಿ ಪಕ್ಷಗಳ ಕಾರ್ಯಕರ್ತರು ಅಕ್ರಮವಾಗಿ ಹಣ, ಆಮಿಷಗಳನ್ನು ಒಡ್ಡುವ ಫೋಟೋ ಮತ್ತು ವಿಡಿಯೋ ದೃಶ್ಯಗಳನ್ನು ತಂದುಕೊಟ್ಟಲ್ಲಿ ಸೂಕ್ತ ಬಹುಮಾನವನ್ನು ನೀಡುವುದಾಗಿಯೂ ಘೋಷಿಸಿದ್ದರು. ರವಿಕೃಷ್ಣಾ ರೆಡ್ಡಿಯವರ ಈ ಇಚ್ಚಾಶಕ್ತಿ ಜನರನ್ನ ಸೆಳೆದಿತ್ತು. ಚುನಾವಣೆಯ ದಿನದವರೆಗೂ ನ್ಯಾಯ ಸಮ್ಮತ ಚುನಾವಣೆಗಾಗಿ ಆಯೋಗ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸುತ್ತಿದ್ದರು.

ಜಯನಗರ ಮತದಾನ: ನಿರೀಕ್ಷೆಯಂತೆಯೇ ಮತಹಾಕದ ಅರ್ಧದಷ್ಟು ಬುದ್ಧಿವಂತ ಜನ!

ಜಯನಗರದ ಚುನಾವಣೆ ಮುಗಿದಿದೆ. ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ನೇರ ಸ್ಪರ್ಧೆ ಎಂಬುದು ಮೇಲ್ನೋಟಕ್ಕೆ ಗೋಚರಿಸುತ್ತಿದೆ. ಆದರೆ ರವಿಕೃಷ್ಣಾ ರೆಡ್ಡಿ ಸ್ಪರ್ಧೆ ಪಾರದರ್ಶಕ ಚುನಾವಣೆಯ ಕಡೆಗೆ ಗಮನ ಸೆಳೆಯುವಲ್ಲಿ ಸಫಲವಾಗಿದೆ. ಪ್ರಜಾಪ್ರಭುತ್ವದ ಉಳಿವಿಗೆ ಇಂತಹದೊಂದು ಸ್ಪರ್ಧೆ ಎಲ್ಲಾ ಕ್ಷೇತ್ರಗಳಲ್ಲೂ ನಡೆಯಬೇಕಾದ ಅಗತ್ಯವಿದೆ.