ಮಹಾಮಳೆಗೆ ಮೈಯೊಡ್ಡಿದ ಮುಂಬೈ ನಗರಿ; ಅಸ್ತವ್ಯಸ್ತಗೊಂಡ ನಾಗರಿಕರ ಬದುಕು
ಸುದ್ದಿ ಸಾರ

ಮಹಾಮಳೆಗೆ ಮೈಯೊಡ್ಡಿದ ಮುಂಬೈ ನಗರಿ; ಅಸ್ತವ್ಯಸ್ತಗೊಂಡ ನಾಗರಿಕರ ಬದುಕು

ವಾರಾಂತ್ಯದಲ್ಲಿ ಮುಂಬೈ ನಗರ ಧಾರಾಕಾರ ಮಳೆಯನ್ನು ಪಡೆಯುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿತ್ತು. ಅದರಂತೆಯೇ ಈಗ ಮುಂಬೈ ನಗರ ಮೊದಲ ಸುತ್ತಿನ ಮುಂಗಾರು ಮಳೆಗೆ ಮೈಯೊಡ್ಡಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ.

ವಾರಾಂತ್ಯದಲ್ಲಿ ಮುಂಬೈ ನಗರ ಧಾರಾಕಾರ ಮಳೆಯನ್ನು ಪಡೆಯುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿತ್ತು. ಅದರಂತೆಯೇ ಈಗ ಮುಂಬೈ ನಗರ ಮೊದಲ ಸುತ್ತಿನ ಮುಂಗಾರು ಮಳೆಗೆ ಮೈಯೊಡ್ಡಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ.  

ಮಳೆಯ ಕಾರಣದಿಂದಾಗಿ ಮುಂಬೈ ನಗರದಿಂದ ಇತರೆಡೆಗೆ ತೆರಳಬೇಕಿದ್ದ ಸುಮಾರು 32 ವಿಮಾನಗಳು ತಡವಾಗಿ ಹೊರಟಿವೆ. ವಾತಾವರಣದ ಕಾರಣದಿಂದಾಗಿ ಮೂರು ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ಸ್ಥಳೀಯ ರೈಲುಗಳೂ ಕೂಡ 10ರಿಂದ 15 ನಿಮಿಷ ತಡವಾಗಿ ಸಂಚರಿಸುತ್ತಿವೆ. ಮಳೆಯಿಂದ ಉಂಟಾಗುವ ಅವಗಢಗಳನ್ನು ತಡೆಯುವ ಸಲುವಾಗಿ ಬಿಎಂಸಿ ( ಬ್ರಿಹನ್ಮುಂಬೈ ಮುನ್ಸಿಪಾಲ್ ಕಾರ್ಪೊರೇಷನ್) ಅಗತ್ಯ ಕ್ರಮಗಳನ್ನು ಈಗಾಗಲೇ ಕೈಗೊಂಡಿರುವುದಾಗಿ ತಿಳಿಸಿದೆ.

ಧಾರಾಕಾರ ಮಳೆಯ ಕಾರಣದಿಂದಾಗಿ ಮುಂಬೈ ನಗರದ ಹಲವಾರು ತಗ್ಗು ಪ್ರದೇಶಗಳು ನೀರಿನಲ್ಲಿ ಮುಳುಗಿವೆ. 2005ರಲ್ಲಿ ಬಿದ್ದ ಮಹಾಮಳೆಗೆ ಮುಂಬೈ ನಗರ ಸ್ತಬ್ಧವಾಗಿತ್ತು. ಈ ಬಾರಿಯೂ ಅಂತಹದೇ ಪರಿಸ್ಥಿತಿ ಉಂಟಾಗಬಹುದೆಂಬ ಸೂಚನೆಯನ್ನು ಜಲತಜ್ಞರು ನಿಡುತ್ತಿದ್ದಾರೆ.

ವಾರಾಂತ್ಯದಲ್ಲಿ ಅಗಾಧ ಪ್ರಮಾಣ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡದ ಬೆನ್ನಲ್ಲೇ, ಬಿಎಂಸಿ ತನ್ನೆಲ್ಲಾ ಉನ್ನತ ವರ್ಗದ ಅಧಿಕಾರಿಗಳ ರಜೆಯನ್ನು ರದ್ದುಗೊಳಿಸಿದೆ. ನಾಗರಿಕರಿಗೆ ಯಾವುದೇ ಸಮಸ್ಯೆ ಉಂಟಾಗದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದೆ.

ಸ್ಥಳೀಯ ಹವಾಮಾನ ಕೇಂದ್ರ ಜೂನ್ 8 ಮತ್ತು 9ರಂದು ಮುಂಬೈನಲ್ಲಿ ಹೆಚ್ಚಿನ ಮಳೆ ಸುರಿಯಲಿದ್ದು, ಎರಡು ದಿನಗಳ ಕಾಲ ನಾಗರಿಕರು ಹೆಚ್ಚಾಗಿ ಹೊರಬರಬಾರದೆಂದು ತಿಳಿಸಿತ್ತು. ಆಗಾಗ ಹವಾಮಾನ ಇಲಾಖೆಯಿಂದ ದೊರೆಯುವ ಮಾಹಿತಿಯನ್ನು ಆಧರಿಸಿ, ಕಾರ್ಯಕ್ರಮಗಳ ಪಟ್ಟಿಯನ್ನು ಸಿದ್ಧಗೊಳಿಸಿಕೊಳ್ಳುವಂತೆ ಸೂಚಿಸಿತ್ತು. ಮೀನುಗಾರರಿಗೂ ಕೂಡ ಮಳೆ ನಿಲ್ಲುವವರೆಗೂ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿತ್ತು.

ಮಳೆ ಪ್ರಮಾಣ ಹೆಚ್ಚಾಗಿ ಪ್ರವಾಹದ ಪರಿಸ್ಥಿತಿ ಉಂಟಾದರೆ ವಸತಿ ಕಲ್ಪಿಸಲು ಸ್ಥಳೀಯ ಶಾಲೆಗಳನ್ನು ಯಾವಾಗಲೂ ತೆರೆದಿರಿಸಲು ತಿಳಿಸಿದ್ದು, ಮಳೆಯಿಂದಾಗಿ ಅತಿ ಹೆಚ್ಚಿನ ಹಾನಿಗೆ ಒಳಗಾಗುವ ಪ್ರದೇಶಗಳಲ್ಲಿ ನೌಕಾದಳದ ಸಿಬ್ಬಂದಿಗಳನ್ನು ನೇಮಿಸಲಾಗಿದೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಮೂರು ತಂಡಗಳು ಮುಂಬೈನಲ್ಲಿ ಈಗಾಗಲೇ ಕಾರ್ಯನಿರತವಾಗಿವೆ. ಪರೇಲ್‌, ಮಂಕರ್ಡ್‌ ಮತ್ತು ಅಂದೇರಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಬಳಿ ಈ ತಂಡಗಳು ಬೀಡು ಬಿಟ್ಟಿವೆ. ಮೂರು ತಂಡಗಳ ಬಳಿಯೂ ಕೂಡ ಪ್ರವಾಹ ನಿರ್ವಹಣೆಗೆ ಅಗತ್ಯವಿರುವ ವಸ್ತುಗಳು ಇದ್ದು, ವಾಕಿ-ಟಾಕಿಗಳನ್ನೂ ಕೂಡ ಒದಗಿಸಲಾಗಿದೆ.

ಮುಂಬೈ ಮಹಾಮಳೆಗೆ ತತ್ತರಿಸುತ್ತಿರುವ ಬೆನ್ನಲ್ಲೇ ಕರ್ನಾಟಕದ ಕರಾವಳಿ ಭಾಗ, ಗೋವಾ ರಾಜ್ಯ ಮತ್ತು ಮಹಾರಾಷ್ಟ್ರದ ದಕ್ಷಿಣ ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳನ್ನು ಹವಾಮಾನ ಇಲಾಖೆ ಮುಂದಿಟ್ಟಿದೆ.

ಮಂಗಳೂರಿನ ನಂತರ ಮಹಾಮಳೆಗೆ ನಲುಗುತ್ತಿರುವ ಮುಂಬೈ ನಗರದ ಕುರಿತು ಸಾಮಾಜಿಕ ತಾಣಗಳಲ್ಲೂ ಕೂಡ ಸುದ್ದಿ ಹರಿದಾಡುತ್ತಿದೆ. ಮುಂಬೈ ನಾಗರಿಕರು ಟ್ವಿಟ್ಟರ್‌ ಮೂಲಕ ಹಂಚಿಕೊಂಡಿರುವ ಕೆಲ ಚಿತ್ರಗಳು ಹೀಗಿವೆ.