‘ಬಿಜೆಪಿಯಿಂದ ಸೇಡಿನ ರಾಜಕಾರಣ’: ತುರ್ತು ಸುದ್ದಿಗೋಷ್ಠಿಯಲ್ಲಿ ಡಿ.ಕೆ.ಬ್ರದರ್ಸ್‌ ಆರೋಪ
ಸುದ್ದಿ ಸಾರ

‘ಬಿಜೆಪಿಯಿಂದ ಸೇಡಿನ ರಾಜಕಾರಣ’: ತುರ್ತು ಸುದ್ದಿಗೋಷ್ಠಿಯಲ್ಲಿ ಡಿ.ಕೆ.ಬ್ರದರ್ಸ್‌ ಆರೋಪ

ತಮ್ಮ ನಿವಾಸದಲ್ಲಿ ಗುರುವಾರ ಬೆಳಿಗ್ಗೆ ತುರ್ತು ಸುದ್ದಿಗೋಷ್ಠಿ ನಡೆಸಿದ ಡಿ.ಕೆ. ಶಿವಕುಮಾರ್‌ ಮತ್ತು ಡಿ.ಕೆ. ಸುರೇಶ್‌, ಬಿಜೆಪಿ ಮೇಲೆ ಹರಿಹಾಯ್ದಿದ್ದಾರೆ. “ಬಿಜೆಪಿ ನಮ್ಮ ಮೇಲೆ ನಂಜಿನ ರಾಜಕಾರಣ ನಡೆಸುತ್ತಿದೆ” ಎಂದು ಆರೋಪಿಸಿದ್ದಾರೆ.

ಗುರುವಾರ ಬೆಳಿಗ್ಗೆ ಶಾಸಕ ಡಿ.ಕೆ. ಶಿವಕುಮಾರ್‌ ಮತ್ತವರ ಸಹೋದರ ಸಂಸದ ಡಿ.ಕೆ. ಸುರೇಶ್‌ ತುರ್ತು ಸುದ್ದಿಗೋಷ್ಠಿ ನಡೆಸಿ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಿರುದ್ಧ ಸೇಡಿನ ರಾಜಕಾರಣದ ಆರೋಪ ಮಾಡಿದ್ದಾರೆ.

“11 ಮಂದಿಯ ವಿರುದ್ಧ ಸಿಬಿಐ ಯಾವಾಗ ಬೇಕಾದರೂ ಸರ್ಚ್‌ ವಾರೆಂಟ್‌ ಹೊರಡಿಸಬಹುದು ಎಂಬ ಮಾಹಿತಿ ದೊರೆತಿದೆ. ದ್ವೇ‍ಷದ ರಾಜಕಾರಣ ನಡೆಸುತ್ತಿರುವ ಮೋದಿ ಮತ್ತು ಅಮಿತ್‌ ಶಾ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದ್ದಾರೆ. ನಮ್ಮ ಮೇಲೆ ಸಿಬಿಐ,ಇಡಿ ಮತ್ತು ಐಟಿ ಮೂಲಕ ಕೇಸ್‌ ದಾಖಲಿಸಿ ಸರ್ಚ್‌ ವಾರೆಂಟ್ ಹೊರಡಿಸಲು ಬೇಕಾದ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ” ಎಂದು ಡಿ.ಕೆ. ಸೋದರರು ಹೇಳಿದ್ದಾರೆ.

“ಬುಧವಾರ ಸಿಬಿಐ ಕೋರ್ಟ್‌ನಿಂದ ಸರ್ಚ್‌ ವಾರಂಟ್‌ ಪಡೆದಿರುವ ಬಗ್ಗೆ ನಮಗೆ ಮಾಹಿತಿ ಲಭ್ಯವಾಗಿದೆ. ಈ ಕುರಿತು 3-4 ತಿಂಗಳುಗಳಿಂದ ಅನೇಕ ಮಾಹಿತಿಗಳು ದೊರೆತಿವೆ. ಎಲ್ಲೆಲ್ಲಿ ಸಭೆ ನಡೆಸಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ ಎಂಬುದು ನಮಗೆ ಗೊತ್ತಿದೆ. ನಮ್ಮ ಕುಟುಂಬವನ್ನು ಬೆದರಿಸಿ ಬಗ್ಗಿಸಲು ಸಾಧ್ಯವಿಲ್ಲ, ನಾವು ಜಗ್ಗುವವರೂ ಅಲ್ಲ” ಎಂದಿದ್ದಾರೆ.

“ನಾವು ಎಲ್ಲದಕ್ಕೂ ಸಿದ್ದರಿದ್ದೇವೆ. ನಾವು ಎಂದೂ ತಪ್ಪು ಮಾಡಿದವರಲ್ಲ, ಕಾನೂನು ಮೀರಿ ರಾಜಕಾರಣ ಮಾಡಿದವರಲ್ಲ, ಅಕ್ರಮಗಳನ್ನು ಮಾಡಿಲ್ಲ. ಸುಳ್ಳು ಕೇಸ್‌ ದಾಖಲಿಸಿ ನಮ್ಮ ಧ್ವನಿ ಅಡಗಿಸಬಹುದು ಎಂದರೆ ಅದು ನಿಮ್ಮ ಭ್ರಮೆ. ಹುಟ್ಟು ಸಾವಿನ ನಡುವೆ ಏನು ಬೇಕಾದರೂ ನಡೆಯಬಹುದು, ಅಧಿಕಾರ ಸೇರಿದಂತೆ ಯಾವುದೂ ಶಾಶ್ವತವಲ್ಲ” ಎಂಬ ಆಧ್ಯಾತ್ಮಿಕ ಮಾತುಗಳನ್ನೂ ಅವರು ಆಡಿದ್ದಾರೆ.

“ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ರಚಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಡಿ.ಕೆ.ಶಿವಕುಮಾರ್ ಹಾಗೂ ನನ್ನನ್ನು ಬಿಜೆಪಿ ಟಾರ್ಗೆಟ್ ಮಾಡಿಕೊಂಡಿದೆ. ಇದು ಹೆಚ್ಚು ದಿನ ನಡೆಯುವುದಿಲ್ಲ. ನಮ್ಮ ಬಳಿ ಪೊಲಿಟಿಕಲ್‌ ಗೇಮ್‌ಗಳನ್ನು ಆಡಲು ಸಾಧ್ಯವಿಲ್ಲ” ಎಂದು ಡಿ.ಕೆ. ಸುರೇಶ್ ಹೇಳಿದ್ದಾರೆ.

“ದೇಶದ ಕಾನೂನಿಗೆ, ಸಾಂವಿಧಾನಿಕ ಸಂಸ್ಥೆಗಳಿಗೆ ನಮ್ಮ ಕುಟುಂಬ ಗೌರವ ನೀಡುತ್ತಲೇ ಬಂದಿದೆ, ನಾವು ಕಾನೂನಿನ ಪ್ರಕಾರವೇ ನಡೆಯುತ್ತೇವೆ” ಎಂದಿದ್ದಾರೆ.

ರಾಜ್ಯದಲ್ಲಿ ಅತಂತ್ರ ರಾಜಕಾರಣದ ದೊಂಬರಾಟ ಮುಗಿದು, ಇನ್ನೇನು ವಾತಾವರಣ ತಿಳಿಗೊಳ್ಳುತ್ತಿದೆ ಎನ್ನುವುದಕ್ಕಿಂತಲೂ ಮೊದಲೇ ಮತ್ತೊಂದು ರಾಜಕೀಯ ನಾಟಕಕ್ಕೆ ವೇದಿಕೆ ಸಜ್ಜಾದಂತೆ ತೋರುತ್ತಿದೆ. ಸಿಬಿಐ ಕೇಸು, ತನಿಖೆ, ವಾರೆಂಟ್‌ಗಳ ಹೆಸರಿನಲ್ಲಿ ಮತ್ತೊಂದು ಹೈಡ್ರಾಮಾ ನಡೆಯುವ ಲಕ್ಷಣಗಳು ಗೋಚರಿಸುತ್ತಿವೆ.