samachara
www.samachara.com
ಕೇರಳದಲ್ಲಿ ‘ಮರ್ಯಾದಾ ಹತ್ಯೆ’: ಲಾಭ ಪಡೆಯಲು ಮುಂದಾದ ರಾಜಕಾರಣಿಗಳು
ಸುದ್ದಿ ಸಾರ

ಕೇರಳದಲ್ಲಿ ‘ಮರ್ಯಾದಾ ಹತ್ಯೆ’: ಲಾಭ ಪಡೆಯಲು ಮುಂದಾದ ರಾಜಕಾರಣಿಗಳು

ಪ್ರತಿಷ್ಠೆಯ ಕಾರಣದಿಂದಾಗಿ ಕೊಲೆಗೀಡಾದ ಯುವಕನ ಸಾವು ಈಗ ಕೇರಳದ ರಾಜ್ಯ ರಾಜಕಾರಣದ ಮೇಲೆ ಪ್ರಭಾವ ಬೀರುತ್ತಿದೆ. ಆಡಳಿತ ಪಕ್ಷ ಸಿಪಿಐ(ಎಂ) ವಿರುದ್ಧದ ಅಸ್ತ್ರವಾಗಿ ಬಳಕೆಯಾಗುತ್ತಿದೆ.

samachara

samachara

ಶ್ರೀಮಂತ ಕ್ರೈಸ್ತ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದ, ದಲಿತ ಕ್ರೈಸ್ತ ಯುವಕನ ಮೃತ ದೇಹ ಸೋಮವಾರ ಪತ್ತೆಯಾಗಿದೆ. ಅಪಹರಣಗೊಂಡಿದ್ದ ವ್ಯಕ್ತಿ ಮೃತದೇಹವಾಗಿ ಪತ್ತೆಯಾಗಿರುವುದು ಕೇರಳೀಯರಲ್ಲಿ ಆಕ್ರೋಶವನ್ನು ಹುಟ್ಟುಹಾಕಿದೆ. 

ಮೌಂಟ್‌ ಮಾವೇಲಿಪ್ಪಡಿ ವಟ್ಟಪಾರಕ್ಕೆ ಸೇರಿದ ಜೋಸೆಫ್‌ ಎಂಬುವವರ ಪುತ್ರ ಕೆವಿನ್. ಪಿ. ಜೋಸೆಫ್‌ ಕೊಲೆಯಾದ ದುರ್ದೈವಿ. ಕೆವಿನ್‌ ಮತ್ತು ಕೊಲ್ಲಂ ಸಮೀಪದ ತೇನ್ಮಲ ಒಟ್ಟಕಲ್‌ ಶಾನ್‌ಭವನ್‌ ಎಂಬಲ್ಲಿ ವಾಸವಾಗಿದ್ದ, ದ್ವಿತೀಯ ಬಿ.ಕಾಂ ಓದುತ್ತಿದ್ದ 20 ವರ್ಷದ ಯುವತಿ ನಿನೂ ಚಾಕೋ ಪರಸ್ಪರ ಪ್ರೀತಿಸಿದ್ದರು. ಮೇ 24ರಂದು ಸಾರ್ವಜನಿಕ ವಿವಾಹ ಮಹೋತ್ಸವದಲ್ಲಿ ವಿವಾಹವನ್ನೂ ಕೂಡ ಮಾಡಿಕೊಂಡಿದ್ದರು. ನಿನೂ ತಂದೆ ಕ್ಯಾಥೋಲಿಕ್‌ ಕ್ರೈಸ್ತರಾಗಿದ್ದು ತಾಯಿ ಮುಸ್ಲಿಂ ಸಮುದಾಯಕ್ಕೆ ಸೇರಿದವರು.

ನವವಿವಾಹಿತ ಜೋಡಿ ಕೆವಿನ್‌ ಸಂಬಂಧಿ ಅನೀಶ್‌ ಎನ್ನುವವರ ಮನೆಗೆ ತೆರಳಿದ್ದರು. ಭಾನುವಾರ ಬೆಳಗ್ಗೆ ಯುವತಿ ನೀನೂ ಚಾಕೋ ಕುಟುಂಬದ ಸದಸ್ಯರು ಅನೀಶ್‌ ಮನೆಗೆ ನುಗ್ಗಿ, ಕೆವಿನ್‌ ಮತ್ತು ಅನೀಶ್‌ ಇಬ್ಬರನ್ನೂ ಕೂಡ ಅಪಹರಿಸಿದ್ದರು. ಈ ಕುರಿತು ನಿನೂ ಚಾಕೋ ತನ್ನ ತಮ್ಮ ಶಾನು ಮತ್ತು 10 ಮಂದಿ ಸೇರಿ ತನ್ನ ಗಂಡನನ್ನು ಅಪಹರಿಸಿದ್ದಾರೆ ಎಂದು ಪೊಲೀಸರಲ್ಲಿ ದೂರು ದಾಖಲಿಸಲು ಮುಂದಾಗಿದ್ದರು. ಆದರೆ ಈ ಕುರಿತು ಪೊಲೀಸರು ಗಮನ ಹರಿಸಿರಲಿಲ್ಲ.

ಅನೀಶ್‌ ಮತ್ತು ಕೆವಿನ್‌ರನ್ನು ಅಪಹರಿಸಿದ ತಂಡ, ಅನೀಶ್‌ ಮೇಲೆ ತೀವ್ರತರವಾಗಿ ಹಲ್ಲೆ ನಡೆಸಿ ರಸ್ತೆ ಮಧ್ಯದಲ್ಲೇ ಅನೀಶ್‌ರನ್ನು ಬಿಸಾಡಿತ್ತು. ಕೆವಿನ್‌ನನ್ನು ತಮ್ಮೊಟ್ಟಿಗೆ ಕರೆದೊಯ್ದಿತ್ತು. ಸೋಮವಾರ ಬೆಳಗ್ಗೆ ಸುಮಾರು 7 ಗಂಟೆಯ ಹೊತ್ತಿಗೆ ಕೊಲ್ಲಂ ಬಳಿಯ ಕಾಲುವೆಯೊಂದರ ಹತ್ತಿರ ಕೆವಿನ್‌ ಮೃತದೇಹವಾಗಿ ಬಿದ್ದಿದ್ದರು.

ಮರ್ಯಾದಾ ಹತ್ಯೆಗೆ ಬಲಿಯಾದ ಕೆವಿನ್‌.ಪಿ.ಜೋಸೆಫ್‌.
ಮರ್ಯಾದಾ ಹತ್ಯೆಗೆ ಬಲಿಯಾದ ಕೆವಿನ್‌.ಪಿ.ಜೋಸೆಫ್‌.

ಕೆವಿನ್‌ರ ಈ ಕೊಲೆಯನ್ನು ಮರ್ಯಾದಾ ಹತ್ಯೆ ಎಂದು ಕರೆಯಲಾಗಿದೆ. ಕೊಲೆಯಲ್ಲಿ ಭಾಗಿಯಾದವರು ನಿನೂಗೆ ಪರಿಚಿತರೇ ಆಗಿದ್ದಾರೆ. ಅವರಲ್ಲಿ ಕೆಲವರು ಸಿಪಿಐ(ಎಂ)ನ ಯುವ ಸಂಘಟನೆ ಡೆಮಾಕ್ರಟಿಕ್‌ ಯೂತ್‌ ಫೆಡರೇಷನ್‌ ಆಫ್‌ ಇಂಡಿಯಾ(ಡಿವೈಎಫ್‌ಐ)ದ ಸ್ಥಳೀಯ ಕಾರ್ಯಕರ್ತರು ಎನ್ನಲಾಗಿದೆ. ಸೋಮವಾರ ಸಂಜೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಜನರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಯುವಕನ ಕೊಲೆಯ ಸುದ್ದಿ ಹರಡುತ್ತಿದ್ದಂತೆ ಹಲವಾರು ದಲಿತ ಸಂಘಟನೆಗಳ ಸದಸ್ಯರು, ವಿಪಕ್ಷದ ರಮೇಶ್‌ ಚನ್ನಿತಲರ ನಾಯಕತ್ವದಲ್ಲಿ ನಡೆಯುತ್ತಿರುವ ಯುನೈಟೆಡ್‌ ಡೆಮಾಕ್ರಟಿಕ್‌ ಫ್ರಂಟ್‌ ಸದಸ್ಯರು, ಕೆಸಿ(ಎಂ) ಅಧ್ಯಕ್ಷ ಕೆ.ಎಂ.ಮಣಿ, ಶಾಸಕ ತಿರುವಾಂಕೂರು ರಾಧಾಕೃಷ್ಣನ್‌, ಕಾಂಗ್ರೆಸ್‌ ನಾಯಕಿ ಲತಿಕಾ ಸುಭಾಷ್‌ ಸೇರಿದಂತೆ ಇನ್ನಿತರರು ಗಾಂಧಿನಗರ ಪೊಲೀಸ್‌ ಠಾಣೆಯ ಮುಂದೆ ಯುವಕನ ಸಾವಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಯುವತಿ ಕೇಸು ದಾಖಲಿಸಲು ಮುಂದಾದಾಗ ಗಮನ ಹರಿಸದ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿಭಟನೆಯ ಕಾವು ಹೆಚ್ಚಾಗುತ್ತಿದ್ದಂತೆ ಕೇರಳದ ಸಿಪಿಐ(ಎಂ) ಸರಕಾರ ಗಾಂಧಿನಗರ ಪೊಲೀಸ್‌ ಠಾಣೆಯ ಅಧಿಕಾರಿ ಶಿಬುರನ್ನು ಕೊಟ್ಟಾಯಂ ಜಿಲ್ಲೆಯಿಂದ ವರ್ಗಾವಣೆ ಮಾಡಿದೆ. ವರಿಷ್ಟ ಪೊಲೀಸ್‌ ಅಧಿಕಾರಿ ವಿಜಯ್‌ ಸಕ್ಹಾರೆ ನೇತೃತ್ವದಲ್ಲಿ 4 ತನಿಖಾ ತಂಡಗಳನ್ನು ರಚಿಸಿದ್ದು, ಆದಷ್ಟು ಬೇಗ ತನಿಖೆಯನ್ನು ಪೂರ್ಣಗೊಳಿಸುವಂತೆ ಸೂಚಿಸಿದೆ.

ಪ್ರತಿಷ್ಠೆಯ ಕಾರಣದಿಂದಾಗಿ ಕೊಲೆಗೀಡಾದ ಯುವಕನ ಸಾವು ಈಗ ಕೇರಳದ ರಾಜ್ಯ ರಾಜಕಾರಣದ ಮೇಲೆ ಪ್ರಭಾವ ಬೀರುತ್ತಿದೆ. ಆಡಳಿತ ಪಕ್ಷ ಸಿಪಿಐ(ಎಂ) ವಿರುದ್ಧದ ಅಸ್ತ್ರವಾಗಿ ಬಳಕೆಯಾಗುತ್ತಿದೆ. ಯುವಕನೋರ್ವ ಹತ್ಯೆಗೆ ನ್ಯಾಯ ದೊರಕಿಸಬೇಕು ಎನ್ನುವುದಕ್ಕಿಂತ, ಆ ಸಾವನ್ನು ರಾಜಕೀಯ ದಾಳವನ್ನಾಗಿಸಿಕೊಂಡು ಲಾಭ ಮಾಡಿಕೊಳ್ಳುವ ಸ್ಥಿತಿ ತಲುಪಿರುವುದು ದೇಶದ ದುರಂತ ಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ.