‘ರಾಜಕೀಯ ಚರ್ಚೆ’: ಆರ್‌ಎಸ್‌ಎಸ್‌ ಪ್ರಮುಖರನ್ನು ಭೇಟಿಯಾದ ಬಿಜೆಪಿ ನಾಯಕರು
ಸುದ್ದಿ ಸಾರ

‘ರಾಜಕೀಯ ಚರ್ಚೆ’: ಆರ್‌ಎಸ್‌ಎಸ್‌ ಪ್ರಮುಖರನ್ನು ಭೇಟಿಯಾದ ಬಿಜೆಪಿ ನಾಯಕರು

ಬಿಜೆಪಿಯ 6 ಜನ ಕೇಂದ್ರ ಸಚಿವರು ಮತ್ತು ಅಧ್ಯಕ್ಷರು ಆರ್‌ಎಸ್‌ಎಸ್‌ನ ನಾಯಕರನ್ನು ಭೇಟಿಯಾಗಿದ್ದಾರೆ. ಸರಕಾರದ ನೀತಿಗಳು, ಯೋಜನೆಗಳು ಮತ್ತು ಮುಂಬರಲಿರುವ ಚುನಾವಣೆಗಳ ರೂಪುರೇಶೆಗಳ ಬಗ್ಗೆ ಚರ್ಚೆ ಮಾಡಿದ್ದಾರೆ. 

ಭಾರತೀಯ ಜನತಾ ಪಾರ್ಟಿಯ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮತ್ತು ಇನ್ನಿತರ 6 ಜನ ಕೇಂದ್ರ ಸಚಿವರು ಸೋಮವಾರ ಸಂಜೆ ದೆಹಲಿಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಾಯಕರನ್ನು ಭೇಟಿ ಮಾಡಿದ್ದಾರೆ. ಕೇಂದ್ರ ಸರಕಾರದ ನೀತಿಗಳು ಮತ್ತು ಯೋಜನೆಗಳ ಕುರಿತು ಆರ್‌ಎಸ್‌ಎಸ್‌ ನಾಯಕರೊಂದಿಗೆ ಚರ್ಚಿಸಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಈ ಭೇಟಿಯ ಅಧ್ಯಕ್ಷತೆಯನ್ನು ಆರ್‌ಎಸ್‌ಎಸ್‌ನ ಜಂಟಿ ಕಾರ್ಯದರ್ಶಿ ಕೃಷ್ಣ ಗೋಪಾಲ್‌ ವಹಿಸಿದ್ದರು. ಭಾರತೀಯ ಜನತಾ ಪಕ್ಷದ ಉಪಾಧ್ಯಕ್ಷ ವಿನಯ್‌ ಸಹಸ್ರಬುದ್ದೆ, ಪ್ರಧಾನ ಕಾರ್ಯದರ್ಶಿ ರಾಮ್‌ ಮಹದೇವ್‌, ಕಾರ್ಯದರ್ಶಿ ರಾಮ್‌ ಲಾಲ್‌ ಭಾಗವಹಿಸಿದ್ದರು. ಕೇಂದ್ರ ಸರಕಾರದ ಪ್ರತಿನಿಧಿಗಳಾಗಿ ಸಚಿವರುಗಳಾದ ರಾಜ್ಯವರ್ಧನ್‌ ರಾಥೋರ್‌, ಜೆ. ಪಿ. ನಡ್ಡಾ, ಮೇನಕಾ ಗಾಂಧಿ, ಮಹೇಶ್‌ ಶರ್ಮಾ, ಪ್ರಕಾಶ್‌ ಜಾವ್ಡೇಕರ್‌ ಮತ್ತು ತವರ್‌ಚಾಂದ್‌ ಗೆಹ್ಲೋಟ್‌ ಉಪಸ್ಥಿತರಿದ್ದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಾಮಾಜಿಕ ಘಟಕ, ಶಿಕ್ಷಣ ಘಟಕ ಮತ್ತು ಸಿದ್ಧಾಂತದ ಕುರಿತು ಕೆಲಸ ನಿರ್ವಹಿಸುವ ಘಟಕದ ನಾಯಕರು ಕೇಂದ್ರ ಸಚಿವರೊಂದಿಗೆ ಸಭೆ ನಡೆಸಿದರು. ಸರಕಾರದ ನೀತಿಗಳು, ಯೋಜನೆಗಳ ಅನುಷ್ಠಾನವನ್ನು ಹೇಗೆ ಉತ್ತಮಗೊಳಿಸಬಹುದು ಎನ್ನುವುದರ ಕುರಿತು ಸಲಹೆಗಳನ್ನು ನೀಡಿದರು. ಮುಂದೆ ಬರಲಿರುವ ನೀತಿಗಳು ಕುರಿತು ಕೂಡ ಚರ್ಚೆ ನಡೆದಿದೆ ಎನ್ನಲಾಗಿದೆ.

ಈ ಸಭೆ ಇನ್ನೂ 2 ದಿನಗಳ ಕಾಲ ನಡೆಯುವ ಸಾಧ್ಯತೆಗಳಿವೆ. ಸಭೆಯಲ್ಲಿ ಈ ವರ್ಷ ನಡೆಯಲಿರುವ ರಾಜ್ಯಗಳ ವಿಧಾನಸಭಾ ಚುನಾವಣೆಗಳು ಮತ್ತು ಮುಂದಿನ ವರ್ಷದ ಲೋಕಸಭಾ ಚುನಾವಣೆಯ ರೂಪುರೇಶೆಗಳನ್ನು ಸಿದ್ಧಪಡಿಸಬಹುದು ಎಂದು ಕಳೆದ ವಾರ ‘ಹಿಂದೂಸ್ಥಾನ್‌ ಟೈಮ್ಸ್’ ವರದಿ ಮಾಡಿತ್ತು.

ಮಂಗಳವಾರ ಏರ್‌ ಇಂಡಿಯಾ ಸಂಸ್ಥೆಯೊಳಗಿನ ಬಂಡವಾಳ ಹಿಂತೆಗೆತ ಮತ್ತು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಇಂಧನ ದರಗಳ ಬಗ್ಗೆ ಚರ್ಚೆಯಾಗಬಹುದೆಂಬ ನಿರೀಕ್ಷೆಗಳಿವೆ. ಈ ಚರ್ಚೆಯಲ್ಲಿ ಹಣಕಾಸು ಮತ್ತು ರೈಲ್ವೆ ಸಚಿವ ಪಿಯೂಶ್‌ ಗೋಯಲ್‌ ಹಾಗೂ ವಾಣಿಜ್ಯ ಮತ್ತು ನಾಗರಿಕ ವಿಮಾನಯಾನ ಸಚಿವ ಸುರೇಶ್‌ ಪ್ರಭು ಉಪಸ್ಥಿತರಿರಲಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಈ ಸಭೆಯಲ್ಲಿ ಆರ್‌ಎಸ್‌ಎಸ್‌ನ ಭಾರತೀಯ ಮಜದೂರ್‌ ಸಂಘ, ಭಾರತೀಯ ಕಿಸಾನ್‌ ಸಂಘ,ಲಘು ಉದ್ಯೋಗ ಭಾರತಿ ಮತ್ತು ಸ್ವದೇಶಿ ಜಾಗ್ರನ್‌ ಮಂಚ್‌ಗಳ ನಾಯಕರು ತಮ್ಮ ವರದಿಗಳನ್ನು ಮಂಡಿಸಲಿದ್ದು, ಕೇಂದ್ರ ಸರಕಾರದ ಆರ್ಥಿಕ ನೀತಿಗಳ ಕುರಿತು ಪ್ರತಿಕ್ರಿಯೆ, ಸಲಹೆ ಸೂಚನೆಗಳನ್ನು ನೀಡಲಿದ್ದಾರೆ ಎಂದು ಸ್ಕ್ರೋಲ್‌ ಸುದ್ದಿ ಸಂಸ್ಥೆಯ ವರದಿ ತಿಳಿಸಿದೆ.