ಯಡಿಯೂರಪ್ಪ
ಸುದ್ದಿ ಸಾರ

ಸಾಲ ಮನ್ನಾ: ಮತ್ತೊಂದು ವಾರದ ಗಡುವು ನೀಡಿದ ಬಿಎಸ್‌ವೈ

ಸಾಲ ಮನ್ನಾ, ಸಂಪುಟ ರಚನೆ, ಸಿಎಂ ಕುಮಾರಸ್ವಾಮಿ ಇತ್ತೀಚಿನ ಹೇಳಿಕೆಗಳ ಕುರಿತು ಸೋಮವಾರದ ಪತ್ರಿಕಾಗೋಷ್ಠಿಯಲ್ಲಿ ಯಡಿಯೂರಪ್ಪ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. 

ರೈತರ ಬೆಳೆ ಸಾಲ ಮನ್ನಾಗೆ ಆಗ್ರಹಿಸಿ ಬಿಜೆಪಿ ನೀಡಿರುವ ಗಡುವು ಇನ್ನೊಂದು ವಾರ ಮುಂದೂಡಿಕೆಯಾಗಿದೆ.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಸ್ಪಷ್ಟೀಕರಣ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ, ರಾಜ್ಯದಲ್ಲಿ ನೂತನ ಸರಕಾರ ಅಸ್ಥಿತ್ವಕ್ಕೆ ಬಂದು ಐದು ದಿನಗಳ ಕಳೆಯುತ್ತಿದ್ದರೂ ಇನ್ನೂ ಪೂರ್ಣ ಪ್ರಮಾಣ ಸರಕಾರ ರಚನೆಯಾಗಿಲ್ಲ. ಸಿಎಂ ಕುಮಾರಸ್ವಾಮಿ ಇನ್ನೊಂದು ವಾರದ ಒಳಗೆ ಸಾಲ ಮನ್ನಾ ಕುರಿತು ಪ್ರಕಟಣೆ ಹೊರಡಿಸುವುದಾಗಿ ಹೇಳಿದ್ದಾರೆ. ಹೀಗಾಗಿ, ಬಿಜೆಪಿ ಇನ್ನೊಂದು ವಾರ ಮುಖ್ಯಮಂತ್ರಿ ಹೇಳಿಕೆಗಾಗಿ ಕಾಯಲಿದೆ ಎಂದರು.

“ಸಿಎಂ ಕುಮಾರಸ್ವಾಮಿ ಸಾಂದರ್ಭಿಕ ಶಿಶುವೋ, ಸನ್ನಿವೇಶದ ಶಿಶುವೋ ಏನೇ ಆಗಿರಲಿ. ಆದರೆ ಅವರು ರೈತರ ವಿಚಾರದಲ್ಲಿ ಕುಂಟು ನೆಪ ಹೇಳುವುದನ್ನು ನಿಲ್ಲಿಸಲಿ,’’ ಎಂದು ಬಿಎಸ್‌ವೈ ಖಾರವಾಗಿ ಪ್ರತಿಕ್ರಿಯೆ ನೀಡಿದರು.

ಪತ್ರಿಕಾಗೋಷ್ಠಿ ಆರಂಭದಲ್ಲಿಯೇ ಅಗಲಿದೆ ಕಾಂಗ್ರೆಸ್ ಶಾಸಕ, ಮಾಜಿ ಸಚಿವ ಸಿದ್ದು ನ್ಯಾಮಗೌಡ ಅವರ ಸಾವಿಗೆ ಸಂತಾಪ ವ್ಯಕ್ತಪಡಿಸಿದರು.

ನಂತರ, ಬಿಜೆಪಿ ಕರೆ ನೀಡಿದ ಬಂದ್ ಬಗ್ಗೆ ಮಾತನಾಡಿದ ಅವರು, “ಶಾಂತಿಯುತವಾಗಿ ರೈತರ ಪರವಾಗಿ ಬಂದ್ ನಡೆಸುತ್ತಿದ್ದ ಬಿಜೆಪಿ ನಾಯಕರನ್ನು ಪೊಲೀಸರು ಬಂಧಿಸಿದ್ದಾರೆ. ಇದು ಸರಕಾರದ ರೈತ ವಿರೋಧಿ ನೀತಿಯನ್ನು ತೋರಿಸುತ್ತದೆ,’’ ಎಂದರು.

ಇದೇ ಸಮಯದಲ್ಲಿ ಕುಮಾರಸ್ವಾಮಿ ಅವರ ಇತ್ತೀಚಿನ ಹೇಳಿಕೆಯನ್ನು ಪ್ರಸ್ತಾಪಿಸಿದ ಬಿಎಸ್‌ವೈ, “ಕುಮಾರಸ್ವಾಮಿ ತಾವು ಕಾಂಗ್ರೆಸ್ ಮುಲಾಜಿನಲ್ಲಿ ಇರುವುದಾಗಿ ಹೇಳಿಕೆ ನೀಡಿದ್ದಾರೆ. ಅಂದರೆ ಅವರು ರಾಜ್ಯದ ಜನರ ಮುಲಾಜಿನಲ್ಲಿ ಇಲ್ಲ ಎಂದು ಹೇಳುವ ಮೂಲಕ ಪ್ರಜಾತಂತ್ರ ವ್ಯವಸ್ಥೆಗೆ ಅಪಮಾನ ಮಾಡಿದ್ದಾರೆ. ಸ್ವತಂತ್ರ ಭಾರತದಲ್ಲಿ ಇಂತಹದೊಂದು ಹೇಳಿಕೆಯನ್ನು ಯಾವ ಮುಖ್ಯಮಂತ್ರಿಯೂ ನೀಡಿರಲಿಲ್ಲ. ಅವರು ಕೂಡಲೇ ಕ್ಷಮಾಪಣೆ ಕೇಳಬೇಕು,’’ ಎಂದರು.

“ದಿಲ್ಲಿಯಲ್ಲಿ ಭಾನುವಾರ ರಾಹುಲ್ ಗಾಂಧಿ ಜತೆ ಮಾತುಕತೆ ನಡೆದ ನಂತರವೂ ಸಂಪುಟ ರಚನೆಯ ಗೊಂದಲ ಮುಂದುವರಿದಿದೆ. ರಾಹುಲ್ ಗಾಂಧಿ ತಮ್ಮ ಸಹೋದ್ಯೋಗಿ ಗುಲಾಂ ನಬಿ ಆಜಾದ್ ಅವರಿಗೆ ಹೊಣೆಗಾರಿಕೆ ನೀಡಿದ ವಿದೇಶಕ್ಕೆ ಹೋಗಿದ್ದಾರೆ. ಅವರು ಒಂದು ವಾರ ಅಥವಾ ಹತ್ತು ದಿನಗಳ ಒಳಗೆ ವಾಪಾಸಾದ ನಂತರವೇ ಸಂಪುಟ ರಚನೆಯ ಸರ್ಕಸ್ ನಡೆಯಲಿದೆ. ಅಲ್ಲಿಯವರೆಗೆ ಖಾತೆ ಕಚ್ಚಾಟದಲ್ಲಿ ಮುಳುಗುವ ಇವರುಗಳ ಬಗ್ಗೆ ಜನ ರಾಜ್ಯ ಅಭಿವೃದ್ಧಿಯ ನಿರೀಕ್ಷೆಯನ್ನು ಮಾಡಲು ಸಾಧ್ಯವಿಲ್ಲ,’’ ಎಂದು ಯಡಿಯೂರಪ್ಪ ಹೇಳಿದರು.

ಇದೊಂದು ವಿಚಿತ್ರ ರಾಜಕೀಯ ಸನ್ನಿವೇಶ ಎಂದು ಬಣ್ಣಿಸಿದ ಯಡಿಯೂರಪ್ಪ ಆದಷ್ಟು ಬೇಗ ಸಂಪುಟ ರಚನೆ ಸರ್ಕಸ್ ಮುಗಿದು, ಜನರ ಅಭಿವೃದ್ಧಿ ಕಡೆಗೆ ಸರಕಾರ ಮುಖ ಮಾಡಲಿ ಎಂದು ಮಾರ್ಮಿಕವಾಗಿ ಆಶಯ ವ್ಯಕ್ತಪಡಿಸಿದರು.