‘ಸ್ವದೇಶಿ ಸಮೃದ್ಧಿ’: ಔಷಧಿ ಮಾರಾಟದಿಂದ ಸಿಮ್‌ ಕಾರ್ಡ್ ಕಡೆಗೆ ತಿರುಗಿದ ಬಾಬಾ ರಾಮ್‌ದೇವ್‌
ಸುದ್ದಿ ಸಾರ

‘ಸ್ವದೇಶಿ ಸಮೃದ್ಧಿ’: ಔಷಧಿ ಮಾರಾಟದಿಂದ ಸಿಮ್‌ ಕಾರ್ಡ್ ಕಡೆಗೆ ತಿರುಗಿದ ಬಾಬಾ ರಾಮ್‌ದೇವ್‌

ಸ್ವದೇಶಿ ಹೆಸರಿನಲ್ಲಿ ದೊಡ್ಡ ಮಾರುಕಟ್ಟೆಯನ್ನು ಸೃಷ್ಟಿಸಿಕೊಂಡ ಬಾಬಾ ರಾಮ್‌ದೇವ್‌ ಈಗ ಅದೇ ಸ್ವದೇಶಿ ಹೆಸರಿನಲ್ಲೇ ಟೆಲಿಕಾಂ ವಲಯಕ್ಕೆ ಲಗ್ಗೆ ಇಟ್ಟಿದ್ದಾರೆ. ಸಿಮ್‌ ಕಾರ್ಡ್ ತಂದು, ಅತ್ಯಾಕರ್ಷಕ ಸೇವೆಗಳನ್ನು ನೀಡಲು ಮುಂದಾಗಿದ್ದಾರೆ.

ಸ್ವದೇಶಿ ಹೆಸರಿನಲ್ಲಿ ದೊಡ್ಡ ಮಾರುಕಟ್ಟೆಯನ್ನು ಸೃಷ್ಟಿಸಿಕೊಂಡಿರುವ ರಾಮ್‌ದೇವ್‌ ಈಗ ಅದೇ ಸ್ವದೇಶಿ ಹೆಸರಿನಲ್ಲೇ ದೂರಸಂಪರ್ಕ ಕ್ಷೇತ್ರಕ್ಕೆ ಲಗ್ಗೆ ಇಟ್ಟಿದ್ದಾರೆ. ಸಿಮ್‌ ಕಾರ್ಡ್ ತಂದು, ಅತ್ಯಾಕರ್ಷಕ ಸೇವೆಗಳನ್ನು ಗ್ರಾಹಕರಿಗೆ ನೀಡಲು ಮುಂದಾಗಿದ್ದಾರೆ. ಈಗಾಗಲೇ ಔಷಧೀಯ ಕ್ಷೇತ್ರದಲ್ಲಿ ವಿದೇಶಿ ಕಂಪನಿಗಳು ಬಾಬಾ ರಾಮ್‌ದೇವ್‌ರಿಂದ ಪೆಟ್ಟು ತಿಂದಿವೆ. ಈಗ ರಿಲಯನ್ಸ್ ಜಿಯೋ, ಏರ್‌ಟೆಲ್‌ ಸೇರಿದಂತೆ ಉಳಿದೆಲ್ಲಾ ದೂರಸಂಪರ್ಕ ಸೇವೆಯನ್ನು ಕಲ್ಪಿಸಿರುವ ಕಂಪನಿಗಳು ಬಾಬಾ ರಾಮ್‌ದೇವ್‌ರಿಂದ ಪ್ರಬಲ ಸ್ಪರ್ಧೆ ಎದುರಿಸಬೇಕಾಗುವುದೇ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಭಾರತ್‌ ಸಂಚಾರ್‌ ನಿಗಮ್‌ ಲಿಮಿಟೆಡ್‌ (ಬಿಎಸ್‌ಎನ್‌ಎಲ್‌) ಸಂಸ್ಥೆಯ ಜತೆಗೂಡಿ ‘ಸ್ವದೇಶಿ ಸಮೃದ್ಧಿ’ ಸಿಮ್ ಕಾರ್ಡ್‌ಗಳನ್ನು ಪರಿಚಯಿಸಿರುವ ಬಾಬಾ ರಾಮ್‌ದೇವ್‌ ಮೊದಲಿಗೆ, ತಮ್ಮ ಪತಂಜಲಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಸಿಮ್‌ ಕಾರ್ಡ್‌ಗಳನ್ನು ಹಂಚಿದ್ದಾರೆ. ಸಿಮ್‌ ಕಾರ್ಡ್ ಬಿಡುಗಡೆ ಪ್ರಕ್ರಿಯೆ ಸಂಪೂರ್ಣಗೊಂಡ ನಂತರ ಪತಂಜಲಿ ಔಷಧ ಮಳಿಗೆಗಳಲ್ಲಿ ಶೇ.10ರಷ್ಟು ರಿಯಾಯಿತಿಯಲ್ಲಿ ಸಿಮ್‌ ಕಾರ್ಡ್‌ಗಳು ಮಾರಾಟಗೊಳ್ಳಲಿವೆ.

144 ರೂಪಾಯಿಗಳ ರೀಚಾರ್ಜ್‌ ಮಾಡಿಸಿದರೆ ಅನ್‌ಲಿಮಿಟೆಡ್‌ ಕಾಲ್‌ ಸೌಲಭ್ಯ, 2 ಜಿಬಿ ಡೆಟಾ ಮತ್ತು 100 ಎಸ್‌ಎಮ್‌ಎಸ್‌ಗಳು ದೊರೆಯಲಿವೆ. ಇದರ ಜತೆಗೆ ಆರೋಗ್ಯ, ಅಪಘಾತ ಮತ್ತು ಜೀವ ವಿಮಾ ಪಾಲಿಸಿಗಳ ಸೌಲಭ್ಯವೂ ದೊರೆಯಲಿದೆ.

ಸಿಮ್‌ ಕಾರ್ಡ್ ಬಿಡುಗಡೆ ಸಂ‍ದರ್ಭದಲ್ಲಿ ಮಾತನಾಡಿದ ಬಾಬಾ ರಾಮ್‌ದೇವ್‌, “ಸರಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಮತ್ತು ಪತಂಜಲಿ ಎರಡರ ಉದ್ದೇಶವೂ ಕೂಡ ದೇಶದ ಕಲ್ಯಾಣವೇ ಆಗಿದೆ. ಒಟ್ಟು 5 ಲಕ್ಷ ಪತಂಜಲಿ ಕೇಂದ್ರಗಳು ದೇಶದಲ್ಲಿದ್ದು, ಆದಷ್ಟು ಬೇಗ ಕೇಂದ್ರಗಳಲ್ಲಿ ಸಿಮ್‌ ಕಾರ್ಡ್‌ಗಳನ್ನು ಕೊಳ್ಳಬಹುದು,” ಎಂದರು.

ಸಿಮ್‌ ಕಾರ್ಡ್‌ಗಳು ಕೇವಲ ಕರೆ ಸೌಲಭ್ಯ ಮತ್ತು ಡೇಟಾ ಪ್ಯಾಕ್‌ಗಳನ್ನಷ್ಟೇ ಅಲ್ಲದೆ ಮತ್ತಷ್ಟು ವಿಶೇಷಣಗಳನ್ನು ಹೊಂದಿರಲಿದೆ ಎಂದು ರಾಮ್‌ದೇವ್‌ ಹೇಳಿದ್ದಾರೆ. ಕಾರ್ಡ್ ಕೊಳ್ಳುವುದರಿಂದ 2.5 ಲಕ್ಷ ಆರೋಗ್ಯ ವಿಮೆ ಮತ್ತು 5 ಲಕ್ಷ ಜೀವ ವಿಮೆ ಸೌಲಭ್ಯಗಳು ದೊರೆಯಲಿವೆ ಎಂದು ಸುದ್ದಿ ಸಂಸ್ಥೆಗಳಿಗೆ ತಿಳಿಸಿದ್ದಾರೆ. ರಸ್ತೆ ಅಪಘಾತಗಳಾದಾಗ ಮಾತ್ರ ವಿಮಾ ಸೌಲಭ್ಯವನ್ನು ಪಡೆದುಕೊಳ್ಳಬಹುದಿದೆ.

ಸ್ವದೇಶಿ ಸಮೃದ್ಧಿ ಸಿಮ್‌ ಕಾರ್ಡ್‌ ಉದ್ಘಾಟನೆಯ ವೇಳೆ ಬಿಎಸ್‌ಎನ್‌ಎಲ್‌ನ ಮುಖ್ಯ ನಿರ್ವಾಹಕ ಸುನಿಲ್‌ ಗಾರ್ಗ್‌ ಕೂಡ ಉಪಸ್ಥಿತರಿದ್ದರು. ಈ ವೇಳೆ ಮಾತನಾಡಿ, “ಪತಂಜಲಿಯ ಪ್ಲಾನ್‌, ಬಿಎಸ್‌ಎನ್‌ಎಲ್‌ನ ಉತ್ತಮ ಪ್ಲಾನ್‌ ಕೂಡಾ ಆಗಿದೆ. ಕೇವಲ 144 ರೂಪಾಯಿ ರೀಚಾರ್ಜ್‌ ಮಾಡಿಸಿದರೆ ದೇಶದ ಯಾವ ಮೂಲೆಯಿಂದ ಯಾವ ಮೂಲೆಗೆ ಬೇಕಾದರೂ ಕೂಡ ಕರೆ ಮಾಡಬಹುದು. ಜತೆಗೆ ನಾವು ಪ್ರತಿದಿನ 2 ಜಿಬಿ ಡೇಟಾವನ್ನು ನೀಡಲಿದ್ದೇವೆ. ಗ್ರಾಹಕರು 100 ಎಸ್‌ಎಂಎಸ್‌ಗಳನ್ನೂ ಪಡೆಯಲಿದ್ದಾರೆ. ಪಂತಜಲಿಯ ಸದಸ್ಯರಾದವರು ತಮ್ಮ ಗುರುತಿನ ಚೀಟಿಯನ್ನು ತೋರಿಸಿ ಸಿಮ್‌ ಕಾರ್ಡ್ ಪಡೆಯಬಹುದು. ಸಿಮ್ ಕಾರ್ಡ್ ಪಡೆದ ಕೆಲವು ಅವಧಿಯಲ್ಲೇ ಸಿಮ್‌ ಕಾರ್ಡ್‌ಅನ್ನು ಬಳಸಬಹುದಾಗಿದೆ,” ಎಂದಿದ್ದಾರೆ.

ಅಂತೂ ಇಂತು ಯೋಗ ಗುರುವಾಗಿದ್ದ ಬಾಬಾ ರಾಮ್‌ದೇವ್‌ ಔ‍ಷಧೀಯ ಕಂಪನಿಯನ್ನು ಕಟ್ಟಿ ಬೆಳಸಿ, ಈಗ ಟೆಲಿಕಾಂ ವಲಯಕ್ಕೂ ಕಾಲಿಡುತ್ತಿದ್ದಾರೆ. ಇನ್ನು ಕೆಲವೇ ತಿಂಗಳಲ್ಲಿ ಸ್ವದೇಶಿ ಹೆಸರಿನ ಸಿಮ್‌ ಕಾರ್ಡ್‌ ಗ್ರಾಹಕರ ಕೈಸೇರಲಿವೆ. ದೈತ್ಯ ಟೆಲಿಕಾಂ ಕಂಪನಿಗಳ ಮೇಲೆ ಬಾಬಾ ರಾಮ್‌ದೇವ್‌ ಸರಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ ಜತೆಗೆ ಮಾಡಿಕೊಂಡ ಈ ಒಪ್ಪಂದದಿಂದ ಆಗುವ ಪರಿಣಾಮಗಳೇನು ಎಂಬುದನ್ನು ಗಮನಿಸಬೇಕಿದೆ.