‘ಕ್ರಿಕೆಟ್ ಮ್ಯಾಚ್ ಫಿಕ್ಸಿಂಗ್’: ಡಿ- ಕಂಪನಿ ಲಿಂಕ್ ಬಯಲಿಗೆಳೆದ ತನಿಖಾ ವರದಿ
ಸುದ್ದಿ ಸಾರ

‘ಕ್ರಿಕೆಟ್ ಮ್ಯಾಚ್ ಫಿಕ್ಸಿಂಗ್’: ಡಿ- ಕಂಪನಿ ಲಿಂಕ್ ಬಯಲಿಗೆಳೆದ ತನಿಖಾ ವರದಿ

ಕ್ರೀಡೆಯಾಗಿ ಉಳಿದಿಲ್ಲದ ಕ್ರಿಕೆಟ್‌ನ ಮ್ಯಾಚ್‌ ಫಿಕ್ಸಿಂಗ್‌ ಹಿಂದೆ ಯಾವೆಲ್ಲಾ ಕೈಗಳು ಹೇಗೆಲ್ಲಾ ಕೆಲಸ ಮಾಡುತ್ತವೆ ಎಂಬುದನ್ನು ‘ಅಲ್‌ ಜಜೀರಾ’ದ ಹೊಸ ಕುಟುಕು ಕಾರ್ಯಾಚರಣೆ ಬಯಲು ಮಾಡಿದೆ.

ನಿನ್ನೆಯಷ್ಟೇ ಐಪಿಎಲ್‌ ಟೂರ್ನಿಮೆಂಟ್‌ ಮುಗಿದಿದೆ. ಇಷ್ಟು ದಿನ ಐಪಿಎಲ್‌ ಧ್ಯಾನದಲ್ಲಿದ್ದ ‘ಕ್ರಿಕೆಟ್‌ ಪ್ರಿಯರು' ಈಗ ಸ್ವಲ್ಪ ನಿರಾಳರಾಗಿದ್ದಾರೆ. ಆದರೆ, ಅಲ್‌ ಜಜೀರಾ ಸುದ್ದಿ ಸಂಸ್ಥೆ ಬಿಡುಗಡೆ ಮಾಡಿರುವ ಕುಟುಕು ಕಾರ್ಯಾಚರಣೆಯ ವಿಡಿಯೊ ಈಗ ಹಲವು ಬುಕ್ಕಿಗಳನ್ನು ಕಂಗಾಲು ಮಾಡಿದೆ.

ಐಪಿಎಲ್‌ ನಡೆದಷ್ಟೂ ದಿನ ಬುಕ್ಕಿಂಗ್‌ನಲ್ಲಿ ದುಡ್ಡು ಕಟ್ಟಿ ಒಂದಷ್ಟು ಜನ ಲಾಭ ಮಾಡಿಕೊಂಡಿದ್ದರೆ, ಉಳಿದವರು ಕೈ ಸುಟ್ಟುಕೊಂಡು ಆಟಗಾರರನ್ನೂ, ತಮ್ಮ ಅದೃಷ್ಟವನ್ನೂ ಬೈಯ್ದುಕೊಂಡಿರುತ್ತಾರೆ.

ಮೊನ್ನೆಮೊನ್ನೆಯಷ್ಟೇ ‘ಕೋಬ್ರಾಪೋಸ್ಟ್‌’ ಕುಟುಕು ಕಾರ್ಯಾಚರಣೆ ದೇಶದ ಮಾಧ್ಯಮ ಸಂಸ್ಥೆಗಳ ಹಾಗೂ ಉದ್ಯಮಿಗಳ ಬಣ್ಣ ಬಯಲು ಮಾಡಿದ್ದರೆ, ಈಗ ಅಲ್‌ ಜಜೀರಾ ಕ್ರಿಕೆಟ್‌ ಲೋಕದ ಅಂತರಂಗವನ್ನು ಕುಟುಕು ಕಾರ್ಯಾಚರಣೆ ಮೂಲಕ ತೆರೆದಿಟ್ಟಿದೆ.

Also read: ಕ್ರೀಡೆ ಮೀರಿದ ‘ಐಪಿಎಲ್ ವ್ಯವಹಾರ’; ಕ್ರಿಕೆಟ್ ಇಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ!

ಕ್ರಿಕೆಟ್‌ ಎಂಬುದು ಈಗ ಕ್ರೀಡೆಯಾಗಷ್ಟೇ ಉಳಿದಿಲ್ಲ. ಕ್ರಿಕೆಟ್‌ಗೆ ಈಗ ಕಳ್ಳ ವ್ಯವಹಾರ, ಕಪ್ಪು ಹಣ, ಜೂಜಾಟ ಸೇರಿದಂತೆ ಅದೆಷ್ಟೊ ಕಾನೂನು ಬಾಹಿರ ಕಾರ್ಯಗಳು ಅಂಟಿಕೊಂಡಿವೆ. ಇದಕ್ಕೆ ಪುಷ್ಟಿಕೊಡುವಂತಿದೆ ಅಲ್‌ಜಜೀರಾ ಕುಟುಕು ಕಾರ್ಯಾಚರಣೆಯ ವರದಿ.

ಹಣ ಒಂದಿದ್ದರೆ ಯಾವ ಯಾವ ದೇಶಗಳ, ಯಾವ ಯಾವ ಆಟಗಾರರ, ಯಾವ ಪಂದ್ಯಗಳು ಎಲ್ಲೆಲ್ಲಿ ನಡೆಯಬೇಕು ಎಂಬುದನ್ನು ಕುಳಿತಲ್ಲಿಯೇ ನಿರ್ಧರಿಸುವ ‘ಪ್ರೊಫೆಷನಲ್‌ ಫಿಕ್ಸರ್‌’ಗಳು ಕ್ರಿಕೆಟ್‌ ದುನಿಯಾದಲ್ಲಿದ್ದಾರೆ ಎಂಬುದನ್ನು ಈ ಕುಟುಕು ಕಾರ್ಯಾಚರಣೆಯೇ ವಿವರಿಸುತ್ತದೆ.

ಮುಂಬೈನಲ್ಲಿ ನಡೆದಿರುವ ಕುಟುಕು ಕಾರ್ಯಾಚರಣೆಯಲ್ಲಿ ಡಿ ಕಂಪೆನಿಯ (ದಾವೂದ್‌ ಇಬ್ರಾಹಿಂ ಗುಂಪು) ಅನೀಲ್‌ ಮುನಾವರ್‌ ಹೇಳುವ ಪ್ರಕಾರ ಶೇಕಡ 60ರಿಂದ 70ರಷ್ಟು ಪಂದ್ಯಗಳು ನಡೆಯುವುದು ಬುಕ್ಕಿಗಳ ಅಣತಿಯ ಮೇಲೆಯೇ.

ಕ್ರಿಕೆಟ್‌ ಪಂದ್ಯಗಳಲ್ಲಿ ಆಟಗಾರರು ‘ನಿಮಿತ್ತ ಮಾತ್ರ’ ಎಂಬುದು ಈ ಕುಟುಕು ಕಾರ್ಯಾಚರಣೆಯಿಂದ ಬಯಲಾಗಿದೆ. ಪಿಚ್‌ ಕ್ಯುರೇಟರ್‌ಗಳಿಂದ ಹಿಡಿದು ಆಟಗಾರರು, ಕ್ರಿಕೆಟ್‌ ಮಂಡಳಿಯ ಆಯಕಟ್ಟಿನ ಜಾಗದಲ್ಲಿರುವ ಪ್ರಭಾವಿಗಳವರೆಗೂ ಬುಕ್ಕಿಗಳ ಪಡೆ ಕ್ರಿಕೆಟ್‌ನಲ್ಲಿರುತ್ತದೆ ಎಂಬುದು ಇದರಿಂದ ಸಾಬೀತಾಗಿದೆ.

ನೀವು ಕ್ರಿಕೆಟ್ ಪ್ರಿಯರಾಗಿದ್ದರೆ ಮುಕ್ಕಾಲು ಗಂಟೆ ಬಿಡುವು ಮಾಡಿಕೊಂಡು ಮೇಲಿನ ವಿಡಿಯೋ ನೋಡಿ. ಕ್ರಿಕೆಟ್ ಜಗತ್ತಿನಲ್ಲಿ ಸಂಚಲನ ಹುಟ್ಟುಹಾಕಿರುವ ಈ ತನಿಖಾ ವರದಿ ಸೆಲೆಬ್ರಿಟಿ ಸ್ಟೇಟಸ್ ಪಡೆದುಕೊಂಡಿರುವ ಕ್ರೀಡೆ ತಲುಪಿರುವ ಇಂತಹ ಸ್ಥಿತಿಯನ್ನು ದಾಖಲೆ ಸಮೇತ ನಿರೂಪಿಸುತ್ತದೆ.