ಹೊಸ ರೈಲ್ವೆ ನೀತಿ: ಇನ್ನು ನಿಲ್ದಾಣಗಳಲ್ಲಿ ರಿಯಾಯ್ತಿ ಕಾಂಡೋಮ್, ಸಾನಿಟರಿ ಪ್ಯಾಡ್ ಲಭ್ಯ
ಸುದ್ದಿ ಸಾರ

ಹೊಸ ರೈಲ್ವೆ ನೀತಿ: ಇನ್ನು ನಿಲ್ದಾಣಗಳಲ್ಲಿ ರಿಯಾಯ್ತಿ ಕಾಂಡೋಮ್, ಸಾನಿಟರಿ ಪ್ಯಾಡ್ ಲಭ್ಯ

ರೈಲ್ವೆ ನಿಲ್ದಾಣಗಳಲ್ಲಿ ಶುಚಿತ್ವವನ್ನು ಕಾಪಾಡುವ ಸಲುವಾಗಿ ರೈಲ್ವೆ ಇಲಾಖೆ ಹೊಸದೊಂದು ನೀತಿಯನ್ನು ತಂದಿದೆ. ಈ ನೀತಿಯಡಿ ನಿಲ್ದಾಣಗಳಲ್ಲಿ ಕಡಿಮೆ ಬೆಲೆಗೆ ಸ್ಯಾನಿಟರಿ ಪ್ಯಾಡ್‌ ಮತ್ತು ಕಾಂಡೋಮ್‌ ಮಾರುವ ವ್ಯವಸ್ಥೆ ಜಾರಿಗೆ ಬರಲಿದೆ.

ಶನಿವಾರ ಭಾರತೀಯ ರೈಲ್ವೆ ನೂತನ ಶುಚಿತ್ವ ನೀತಿಯನ್ನು ತಂದಿದೆ. ಈ ನೀತಿಯ ಭಾಗವಾಗಿ ರೈಲ್ವೆ ನಿಲ್ದಾಣದ ಹೊರಗೆ ಮತ್ತು ಒಳಭಾಗದಲ್ಲಿ ಕಡಿಮೆ ಬೆಲೆಯಲ್ಲಿ ಸ್ಯಾನಿಟರಿ ಪ್ಯಾಡ್‌ ಮತ್ತು ಕಾಂಡೋಮ್‌ಗಳನ್ನು ಮಾರಲು ರೈಲ್ವೇ ಇಲಾಖೆ ನಿರ್ಧರಿಸಿದೆ.

“ಪ್ರತಿ ರೈಲ್ವೆ ನಿಲ್ದಾಣದಲ್ಲಿ ಇದಕ್ಕಾಗಿ ಒಂದು ಕೊಠಡಿ ಮೀಸಲಿರಿಸಲಾಗುವುದು. ಮಹಿಳೆಯರಿಗೆ ಕಡಿಮೆ ದರದ ಸ್ಯಾನಿಟರಿ ಪ್ಯಾಡ್‌ಗಳನ್ನು ಇಲ್ಲಿ ಒದಗಿಸಲಾಗುವುದು ಮತ್ತು ಬಳಕೆ ಮಾಡಿದ ಸ್ಯಾನಿಟರಿ ಪ್ಯಾಡ್‌ಗಳನ್ನು ವಿಲೇವಾರಿ ಮಾಡಲು ಕೂಡ ಕೊಠಡಿಯಲ್ಲಿ ಅವಕಾಶ ಮಾಡಲಾಗುವುದು. ಮತ್ತೊಂದು ಕೊಠಡಿಯಲ್ಲಿ ಪುರುಷರಿಗೆ ಕಾಂಡೋಮ್‌ಗಳನ್ನು ಮಾರಲಾಗುವುದು,” ಎಂದು ನೂತನ ನೀತಿ ಹೇಳಿದೆ.

ಇವಲ್ಲದೇ ಎಲ್ಲಾ ರೈಲ್ವೆ ನಿಲ್ದಾಣಗಳಲ್ಲಿ ಪುರುಷರಿಗೆ, ಮಹಿಳೆಯರಿಗೆ ಮತ್ತು ವಿಕಲ ಚೇತನರಿಗಾಗಿ ಪ್ರತ್ಯೇಕ ಶೌಚಾಲಯಗಳನ್ನು ತೆರೆಯುವ ಉದ್ದೇಶವನ್ನು ಈ ನೂತನ ನೀತಿ ಒಳಗೊಂಡಿದೆ. ಈ ಶೌಚಾಲಯಗಳ ಬಳಕೆ ಉಚಿತವಾಗಿರಲಿದ್ದು, ಕೇವಲ ಪ್ರಯಾಣಿಕರಷ್ಟೇ ಅಲ್ಲದೆ ನಿಲ್ದಾಣದ ಸುತ್ತಮುತ್ತ ವಾಸಿಸುವ ಜನರೂ ಇವನ್ನು ಬಳಸಬಹುದು. ಈ ಶೌಚಾಲಯಗಳಲ್ಲಿ ಭಾರತೀಯ ಹಾಗೂ ಪಾಶ್ಚಿಮಾತ್ಯ ಎರಡೂ ಶೈಲಿಯ ಕಮೋಡ್‌ಗಳನ್ನು ಅಳವಡಿಸಲಾಗುತ್ತದೆ.

ನೂತನ ಶೌಚಾಲಯ ನೀತಿ ಹೇಳುವ ಪ್ರಕಾರ ರೈಲ್ವೆ ನಿಲ್ದಾಣ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೈರ್ಮಲ್ಯ ಕಾಪಾಡಲು ಸಾಧ್ಯವಾಗದಿರುವುದಕ್ಕೆ ಸೌಲಭ್ಯಗಳ ಕೊರತೆಯೇ ಕಾರಣ. ನಿಲ್ದಾಣಗಳ ಹತ್ತಿರವಿರುವ ಕೊಳೆಗೇರಿ ಮತ್ತು ಹಳ್ಳಿಗಳ ಜನರು ರೈಲ್ವೆ ಹಳಿಗಳ ಪಕ್ಕ, ನಿಲ್ದಾಣಕ್ಕೆ ಸೇರಿದ ಪ್ರದೇಶಗಳಲ್ಲಿ ಮಲ- ಮೂತ್ರ ವಿಸರ್ಜನೆ ಮಾಡುತ್ತಾರೆ. ಇದರಿಂದ ನೈರ್ಮಲ್ಯ ಸಮಸ್ಯೆಯ ಜತೆಗೆ ಆರೋಗ್ಯ ಸಮಸ್ಯೆಗಳೂ ಕೂಡ ಉಂಟಾಗುತ್ತಿವೆ.

ನೂತನ ಶೌಚಾಲಯ ನೀತಿಯ ಪ್ರಕಾರ ಪ್ರತಿಯೊಂದು ರೈಲ್ವೆ ನಿಲ್ದಾಣದಲ್ಲಿ ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ 2 ಶೌಚಾಲಯಗಳು ಇರಲಿವೆ. ಒಂದು ಶೌಚಾಲಯ ರೈಲ್ವೆ ನಿಲ್ದಾಣದ ಹೊರಭಾಗದಲ್ಲಿ ಇರಲಿದ್ದು, ಮತ್ತೊಂದು ಶೌಚಾಲಯವನ್ನು ರೈಲ್ವೆ ನಿಲ್ದಾಣದ ಒಳಗೆ ನಿರ್ಮಿಸುವ ಗುರಿಯನ್ನು ರೈಲ್ವೆ ಇಲಾಖೆ ಹಾಕಿಕೊಂಡಿದೆ.

ಒಳಭಾಗದ ಶೌಚಾಲಯ ನಿಲ್ದಾಣಕ್ಕೆ ಭೇಟಿ ನೀಡುವವರಿಗಾಗಿದ್ದು, ಹೊರಗೆ ನಿರ್ಮಾಣವಾಗುವ ಶೌಚಾಲಯವನ್ನು ಸುತ್ತಮುತ್ತಲಿನ ಜನರು ಬಳಸಬಹುದು. ರಾಷ್ಟ್ರಾದ್ಯಂತ ಒಟ್ಟು 8,500 ರೈಲ್ವೆ ನಿಲ್ದಾಣಗಳಲ್ಲಿ ಈ ಸೌಲಭ್ಯಗಳನ್ನು ಒದಗಿಸಲು ರೈಲ್ವೆ ಇಲಾಖೆ ನಿರ್ಧರಿಸಿದ್ದು, ಇದಕ್ಕಾಗಿ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿಗಳ (corporate social responsibilities - CRS) ಈ ಯೋಜನೆ ಜಾರಿಗೊಳಿಸಲು ಇಲಾಖೆ ಮುಂದಾಗಿದೆ.

ಈ ಶೌಚಾಲಯಗಳಲ್ಲಿ ಶುಚಿತ್ವವನ್ನು ಕಾಪಾಡಲು 3 ಜನ ಸಿಬ್ಬಂದಿಯನ್ನು ನೇಮಿಸಲು ರೈಲ್ವೆ ಇಲಾಖೆ ನಿರ್ಧರಿಸಿದ್ದು, ಹೆಸರಾಂತ ಸ್ವಯಂ ಸೇವಾ ಸಂಸ್ಥೆಗಳ ಜತೆಗೂಡಿ ಈ ಯೋಜನೆಯನ್ನು ಕಾರ್ಯಗತಗೊಳಿಸಲು ರೈಲ್ವೆ ಇಲಾಖೆ ಮುಂದಾಗಿದೆ.