ಕೇಂದ್ರ ಸರಕಾರಕ್ಕೆ 4 ವರ್ಷ: ಸಾಧನೆ ಎಂದ ಮೋದಿ, ವಿಶ್ವಾಸ ದ್ರೋಹ ಎಂದ ವಿಪಕ್ಷ 
ಸುದ್ದಿ ಸಾರ

ಕೇಂದ್ರ ಸರಕಾರಕ್ಕೆ 4 ವರ್ಷ: ಸಾಧನೆ ಎಂದ ಮೋದಿ, ವಿಶ್ವಾಸ ದ್ರೋಹ ಎಂದ ವಿಪಕ್ಷ 

ಮೋದಿ ನೇತೃತ್ವದ ಕೇಂದ್ರ ಸರಕಾರ ಇಂದಿಗೆ ನಾಲ್ಕು ವರ್ಷಗಳನ್ನು ಪೂರೈಸಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ತಮ್ಮ ಸಾಧನೆಗಳನ್ನು ಜನತೆಯ ಮುಂದಿಡುತ್ತಾ ಸಾಗುತ್ತಿದ್ದರೆ, ಕಾಂಗ್ರೆಸ್‌ ಮೋದಿಯನ್ನು  ಟೀಕಿಸಿ ಕಿರುಪುಸ್ತಕ ಬಿಡುಗಡೆಗೊಳಿಸಿದೆ. 

ಕೇಂದ್ರ ಸರಕಾರ 4 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಸಾಧನೆಗಳನ್ನು ಜನರ ಮುಂದಿಟ್ಟಿದ್ದಾರೆ. ಕಳೆದ ಇಷ್ಟು ದಿನಗಳನ್ನು ನೋಡಿದರೆ ಅಭಿವೃದ್ಧಿ ಎನ್ನುವುದು ದೊಡ್ಡ ಜನಸಮೂಹದ ಚಳುವಳಿಯಂತೆ ಕಾಣಿಸತೊಡಗಿದೆ ಎಂದಿದ್ದಾರೆ.

“2014ರ ಈ ದಿನದಂದು ನಾವು ಭಾರತವನ್ನು ರೂಪಾಂತರಿಸುವ ಕಡೆಗೆ ನಮ್ಮ ಪಯಣವನ್ನು ಆರಂಭಿಸಿದ್ದೆವು,” ಎಂದು ಮೋದಿ ಟ್ವಿಟರ್‌ ಮೂಲಕ ಹೇಳಿದ್ದಾರೆ. “ಕಳೆದ ನಾಲ್ಕು ವರ್ಷಗಳಲ್ಲಿ ಅಭಿವೃದ್ಧಿ ಎನ್ನುವುದು ದೊಡ್ಡ ಸಾಮೂಹಿಕ ಚಳುವಳಿ ಎನ್ನುವಂತಾಗಿದೆ. ಭಾರತದ ಅಭಿವೃದ್ಧಿ ಪಥದಲ್ಲಿ ಎಲ್ಲಾ ಪ್ರಜೆಗಳು ಭಾಗವಹಿಸಿದ್ದಾರೆ. 125 ಕೋಟಿ ಭಾರತೀಯರು ಭಾರತವನ್ನು ಅತಿ ಎತ್ತರಕ್ಕೆ ಕೊಂಡೊಯ್ದಿದ್ದಾರೆ,” ಎಂದು ಮೋದಿ ಹೇಳಿದ್ದಾರೆ.

“ಸಾಫ್‌ ನಿಯತ್‌, ಸಹಿ ವಿಕಾಸ್‌” ಎಂಬ ಹ್ಯಾಷ್‌ಟ್ಯಾಗ್‌ ಅಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಸಾಧನೆಯನ್ನು ಬಿಂಬಿಸುವ ಸರಣಿ ವೀಡಿಯೋ, ಚಾರ್ಟ್‌ ಮತ್ತು ಗ್ರಾಫಿಕ್ಸ್‌ಗಳನ್ನು ಟ್ವಿಟರ್‌ ಮೂಲಕ ಹಂಚಿಕೊಂಡಿದ್ದಾರೆ.

“ನಮ್ಮ ಸರಕಾರದ ಮೇಲೆ ಧೃಢವಾದ ನಂಬಿಕೆಯಿರಿಸಿರುವ ನಾಗರಿಕರಿಗೆ ನಾನು ನಮಸ್ಕರಿಸುತ್ತೇನೆ. ಈ ಬೆಂಬಲ ಮತ್ತು ಪ್ರೀತಿ ಇಡೀ ಸರಕಾರದ ಬಲ ಮತ್ತು ಪ್ರೇರಣೆಗಳ ದೊಡ್ಡ ಸಂಪನ್ಮೂಲ,” ಎಂದು ಪ್ರಧಾನಿ ಮೋದಿ ಟ್ವಿಟ್‌ ಮಾಡಿದ್ದಾರೆ.

ನಮ್ಮ ಸರಕಾರ ಇದೇ ಉತ್ಸಾಹ ಮತ್ತು ಬದ್ಧತೆಯಿಂದ ಜನಗಳ ಸೇವೆಯನ್ನು ಮುಂದುವರಿಸುತ್ತದೆ ಎಂದು ಮೋದಿ ಹೇಳಿದ್ದಾರೆ.

ನಮಗೆ ಭಾರತ ಯಾವಾಗಲೂ ಮುಂದೆಯೇ ಇರುತ್ತದೆ ಎಂದಿರುವ ಮೋದಿ, “ನಮ್ಮ ಸರಕಾರ ಭವಿಷ್ಯವನ್ನು ಕೇಂದ್ರೀಕರಿಸಿದ ಮತ್ತು ಜನರಿಗೆ ಪೂರಕವಾದ ನಿರ್ಧಾರಗಳನ್ನು ಕೈಗೊಳ್ಳುತ್ತದೆ,” ಎಂದು ಜನತೆಗೆ ಭರವಸೆಯನ್ನು ನೀಡಿದ್ದಾರೆ.

ಕಿರು ಪುಸ್ತಕ ಬಿಡುಗಡೆ ಮಾಡಿದ ಕಾಂಗ್ರೆಸ್‌:

ಒಂದೆಡೆ ಮೋದಿ ತಮ್ಮ ಸಾಧನೆಗಳನ್ನು ಜನತೆಯ ಮುಂದಿಟ್ಟು ಜನರಿಗೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದರೆ, ಇನ್ನೊಂದೆಡೆ ಪ್ರತಿಪಕ್ಷ ಕಾಂಗ್ರೆಸ್‌ ಮೋದಿ ಸರಕಾರವನ್ನು ಹಿಡಿಯಾಗಿ ಟೀಕಿಸುತ್ತಿದೆ. ಮೋದಿ ಸರಕಾರ ನಾಲ್ಕು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಕಾಂಗ್ರೆಸ್‌ ಪಕ್ಷ ‘ಇಂಡಿಯಾ ಬಿಟ್ರೈಡ್‌’(ಭಾರತಕ್ಕೆ ದ್ರೋಹ) ಎಂಬ ಕಿರುಪುಸ್ತಕವನ್ನು ಬಿಡುಗಡೆಗೊಳಿಸಿದೆ. ವಿಶ್ವಾಸಘಾತಕ ದಿವಸ್‌ ಹೆಸರಿನಲ್ಲಿ ಹ್ಯಾಷ್‌ಟ್ಯಾಗ್‌ ಟ್ರೆಂಡ್‌ ಸೃಷ್ಟಿಸಿದೆ.

ಕಿರುಪುಸ್ತಕ ಬಿಡುಗಡೆಗೊಳಿಸಿದ ಕಾಂಗ್ರೆಸ್‌ ನಾಯಕರು.
ಕಿರುಪುಸ್ತಕ ಬಿಡುಗಡೆಗೊಳಿಸಿದ ಕಾಂಗ್ರೆಸ್‌ ನಾಯಕರು.

ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗುಲಾಂನಬಿ ಆಜಾದ್‌, ಅಶೋಕ್‌ ಗೆಹ್ಲೋಟ್‌ ಮತ್ತು ರಣದೀಪ್‌ ಸಿಂಗ್ ಸುರ್ಜೇವಾಲಾ ಮತ್ತಿತರ ಕಾಂಗ್ರೆಸ್‌ ನಾಯಕರು ‘ಭಾರತದಲ್ಲಿ ಎನ್‌ಡಿಎ ಸರಕಾರದ ಅಧಿಕಾರಾವಧಿಯಲ್ಲಿ ಭಯ ಮತ್ತು ದ್ವೇಷದ ವಾತಾವರಣ ಸೃಷ್ಟಿಯಾಗಿದೆ’ ಎಂದಿದ್ದಾರೆ.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಾಂಗ್ರೆಸ್‌ ನಾಯಕ ರಣದೀಪ್‌ ಸಿಂಗ್‌ ಸುರ್ಜೇವಾಲಾ, “ಮೋದಿ ಅಮಿತ್‌ ಶಾ ಜೋಡಿ ದೇಶಕ್ಕೆ ಹಾನಿಕಾರಕ ಎನ್ನುವುದನ್ನು ಜನ ಅರಿತಿದ್ದಾರೆ. ನಾಲ್ಕು ವರ್ಷದ ಮೋದಿ ಸರಕಾರವನ್ನು ವಿಶ್ವಾಸಘಾತುಕತನ, ಮೋಸಗಾರಿಕೆ, ಸೇಡು ಮತ್ತು ಸುಳ್ಳು ಎಂಬ ನಾಲ್ಕು ಪದಗಳಿಂದ ವ್ಯಾಖ್ಯಾನಿಸಬಹುದು,” ಎಂದಿದ್ದಾರೆ.

ದಲಿತ, ಆದಿವಾಸಿ, ಅಲ್ಪಸಂಖ್ಯಾತ ಮತ್ತು ಮಹಿಳೆಯರ ಕುರಿತು ಮಾತನಾಡುವ ಸಮಯದಲ್ಲಿ ರಾಜ್ಯಸಭಾದ ಪ್ರತಿಪಕ್ಷ ನಾಯಕ ಗುಲಾಂನಬೀ ಅಜಾದ್‌, “ಬಿಜೆಪಿ ಸರಕಾರದ ಅಡಿಯಲ್ಲಿ ಭಾರತದ ಯಾರೂ ಕೂಡ ಸುರಕ್ಷಿತರಾಗಿಲ್ಲ. ಪ್ರತಿಯೊಬ್ಬರೂ ಕೂಡ ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದಾರೆ,” ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್‌ ನಾಯಕ ಅಶೋಕ್‌ ಗೆಹ್ಲೋಟ್‌ ಮಾತನಾಡಿ, “ಮೋದಿಯ ನಾಲ್ಕು ವರ್ಷದ ಅಧಿಕಾರಾವಧಿಯಲ್ಲಿ ಭಯದ ವಾತಾವರಣ, ದ್ವೇಷ ಮತ್ತು ಹಿಂಸೆಗಳು ಸೃಷ್ಟಿಯಾಗಿವೆ ಎಂದಿದ್ದಾರೆ.

ಮಹಿಳಾ ಕಾಂಗ್ರೆಸ್‌ನ ಮುಖ್ಯಸ್ಥೆ ಸುಶ್ಮಿತಾ ದೇವ್‌ ಮೋದಿ ಅಧಿಕಾರಾವಧಿಯಲ್ಲಿ ಮಹಿಳೆಯರು ಸುರಕ್ಷಿತವಾಗಿಲ್ಲ ಎಂದು ದೂರಿದರೆ, ಯುವ ಕಾಂಗ್ರೆಸ್‌ನ ಮುಖ್ಯಸ್ಥ ಕೇಶವ್‌ ಯಾದವ್‌ ದೇಶದಲ್ಲಿ ಉದ್ಯೋಗಗಳು ಸೃಷ್ಟಿಯಾಗದೇ ಯುವಜನರ ಭವಿಷ್ಯ ಕತ್ತಲಲ್ಲಿದೆ ಎಂದು ಆರೋಪಿಸಿದ್ದಾರೆ.

ನರೇಂದ್ರ ಮೋದಿಯ ದುರಾಡಳಿತ ಕುರಿತು ಇಂಗ್ಲೀಷ್‌ ಮತ್ತು ಹಿಂದಿ ಭಾಷೆಗಳಲ್ಲಿ ಕಿರುಪುಸ್ತಕ ಬಿಡುಗಡೆಗೊಳಿಸಿರುವ ಕಾಂಗ್ರೆಸ್‌, ಪ್ರಧಾನಿ ನರೇಂದ್ರ ಮೋದಿಯವರ ಮುಂದೆ 40 ಪ್ರಶ್ನೆಗಳನ್ನಿಟ್ಟಿದೆ. ದೇಶದಲ್ಲಿನ ವಾತಾವರಣದ ಕುರಿತು ಕಿರುಚಿತ್ರವನ್ನೂ ಕೂಡ ಕಾಂಗ್ರೆಸ್‌ ಸಿದ್ಧಪಡಿಸಿದೆ.

ಒಂದೆಡೆ ಬಿಜೆಪಿ ತನ್ನ ಸಾಧನೆಗಳನ್ನು ಜನರ ಮುಂದೆ ಪ್ರಸ್ತುತ ಪಡಿಸುವಲ್ಲಿ ನಿರತವಾಗಿದ್ದರೆ, ಕಾಂಗ್ರೆಸ್ ದೋಷಾರೋಪಗಳ ಸುರಿಮಳೆಗೈಯ್ಯುತ್ತಿದೆ. ಇವರಿಬ್ಬರ ಮಧ್ಯೆ ಮೋದಿ ಸರಕಾರದಿಂದ ಜನರಿಗೆ ದೊರೆತಿರುವುದೇನು ಎನ್ನುವುದನ್ನು ಜನರೇ ನಿರ್ಧರಿಸಲಿದ್ದಾರೆ.