ಅಣ್ವಸ್ತ್ರ ನಾಶಕ್ಕೆ ಮುಂದಾದ ಕಿಮ್‌ ಜಾಂಗ್‌-ಉನ್‌: ವಿಶ್ವಶಾಂತಿ ಎಡೆಗೆ ಇನ್ನೊಂದು ಹೆಜ್ಜೆ
ಸುದ್ದಿ ಸಾರ

ಅಣ್ವಸ್ತ್ರ ನಾಶಕ್ಕೆ ಮುಂದಾದ ಕಿಮ್‌ ಜಾಂಗ್‌-ಉನ್‌: ವಿಶ್ವಶಾಂತಿ ಎಡೆಗೆ ಇನ್ನೊಂದು ಹೆಜ್ಜೆ

ಇಡೀ ಜಗತ್ತಿಗೆ ಅಣ್ವಸ್ತ್ರ ದಾಳಿಯ ಭಯ ಹುಟ್ಟಿಸಿದ್ದ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್‌ ಜಾಂಗ್‌-ಉನ್‌, ಈಗ ಅಣ್ವಸ್ತ್ರ ನಾಶಕ್ಕೆ ಮುಂದಡಿಯಿಟ್ಟಿದ್ದಾರೆ. ಗುರುವಾರ ದೇಶದೊಳಗಿನ ಅಣ್ವಸ್ತ್ರ ಪರೀಕ್ಷಾ ಕೇಂದ್ರವೊಂದನ್ನು ಧ್ವಂಸಗೊಳಿಸಿದ್ದಾರೆ.

ಉತ್ತರ ಕೊರಿಯಾ ತನ್ನ ದೇಶದೊಳಗಿನ ಅಣ್ವಸ್ತ್ರ ಪರೀಕ್ಷಾ ಕೇಂದ್ರಗಳನ್ನು ನಾಶಪಡಿಸಲು ಮುಂದಾಗಿದೆ. ವಿದೇಶಿ ಪತ್ರಕರ್ತರ ಮುಂದೇ ಪರೀಕ್ಷಾ ಕೇಂದ್ರಗಳನ್ನು ನಾಶಪಡಿಸುತ್ತಿದೆ. ಗುರುವಾರ ವಿರಳ ಜನಸಂಖ್ಯೆಯನ್ನು ಹೊಂದಿರುವ ಪುಂಗ್ಯೆ-ರಿ ಪರ್ವತ ಪ್ರದೇಶದ ಮಧ್ಯೆಯಿದ್ದ ಅಣ್ವಸ್ತ್ರ ಪರೀಕ್ಷಾ ಕೇಂದ್ರವನ್ನು ಧ್ವಂಸಗೊಳಿಸಿದೆ.

ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್‌ ಜಾಂಗ್‌-ಉನ್ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಜತೆ ಮಾತುಕತೆ ನಡೆಸಿದ ಕೆಲವು ದಿನಗಳಲ್ಲೇ ಅಣ್ವಸ್ತ್ರ ಪರೀಕ್ಷಾ ಕೇಂದ್ರಗಳನ್ನು ಭಗ್ನಗೊಳಿಸುವ ಬಗ್ಗೆ ಮಾಹಿತಿ ನೀಡಿದ್ದರು. ಈಗ ಭಗ್ನಗೊಳಿಸುವ ಕಾರ್ಯ ಪ್ರಾರಂಭಗೊಂಡಿದೆ.

ಕಿಮ್‌ ಜಾಂಗ್‌-ಉನ್‌ರ ಈ ನಿರ್ಧಾರ ಸ್ವಾಗತಾರ್ಹವಾಗಿದ್ದು, ಜಗತ್ತಿನ ಮೇಲೆ ಸಕಾರಾತ್ಮಕ ಪರಿಣಾಮ ಬೀರಬಹುದು ಎನ್ನಲಾಗುತ್ತಿದೆ.

ಕೊರಿಯಾ ಪರ್ಯಾಯ ದ್ವೀಪ ಒಡೆದು 2 ಭಾಗಗಳಾಗಿತ್ತು. ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾ ಎಂಬ 2 ರಾಷ್ಟ್ರಗಳು ಉದಯಿಸಿದ್ದವು. ಭಾರತ-ಪಾಕಿಸ್ತಾನಗಳ ನಡುವಿನ ವೈರತ್ವಕ್ಕಿಂತಲೂ ಹೆಚ್ಚಿನ ಮತ್ಸರವನ್ನು ಸಾಧಿಸುತ್ತಿದ್ದ ಎರಡೂ ದೇಶಗಳ ನಡುವೆ ದಶಕಗಳ ಕಾಲ ಅಸಮಾಧಾನ ಹೊಗೆಯಾಡುತ್ತಿತ್ತು.

ಕಳೆದ ಏಪ್ರಿಲ್‌ ತಿಂಗಳಿನಲ್ಲಿ ಮೊದಲ ಬಾರಿಗೆ ಎರಡೂ ದೇಶಗಳ ನಾಯಕರ ಭೇಟಿ ಜಗತ್ತಿನ ಐತಿಹಾಸಿಕ ಭೇಟಿ ಎಂದು ಹೆಸರು ಪಡೆಯಿತು. ಪರಸ್ಪರರ ಕೈಕುಲುಕಿದ ಇಬ್ಬರೂ ನಾಯಕರು ತಮ್ಮೊಳಗಿನ ದ್ವೇಶಕ್ಕೆ ಕೊನೆಹಾಡಿದ್ದರು. ಇದರ ಭಾಗವಾಗಿ ಅಣ್ವಸ್ತ್ರ ನಾಶವನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು.

ಡೊನಾಲ್ಡ್ ಟ್ರಂಪ್‌ ಮತ್ತು ಕಿಮ್‌ ಜಾಂಗ್‌-ಉನ್‌ ಪರಸ್ಪರ ಕೆಸರೆರಚಾಟ ನಡೆಸುತ್ತ, ಟ್ರಂಪ್‌ ಭೇಟಿಯನ್ನು ಕಿಮ್ ಜಾಂಗ್ ನಿರಾಕರಿಸಿದ್ದರು. ಕಿಮ್‌ ಜಾಂಗ್‌ನ ನಡೆಗಳು ಕಾನೂನು ಬಾಹಿರವಾಗಿದ್ದು, ಅತಿರೇಖವನ್ನು ತಲುಪಿವೆ ಎಂದಿದ್ದ ಟ್ರಂಪ್‌, ಉತ್ತರ ಕೊರಿಯಾಗೆ ಯುದ್ಧದ ಭಯವನ್ನೂ ಕೂಡ ಬಿತ್ತಿದ್ದರು. ನಂತರದ ದಿನಗಳಲ್ಲಿ ಪರಿಸ್ಥಿತಿ ಬದಲಾಗಿತ್ತು. ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾಗಳ ಐತಿಹಾಸಿಕ ಭೇಟಿಗೆ ಮುನ್ನುಡಿ ಬರೆದಿದ್ದೇ ಟ್ರಂಪ್‌ ಎಂದು ಕೊಂಡಾಡಲಾಯಿತು. ನೋಬೆಲ್‌ ಶಾಂತಿ ಪ್ರಶಸ್ತಿಯನ್ನು ನೀಡಬೇಕೆಂಬ ಮಾತುಗಳೂ ಕೂಡ ಕೇಳಿ ಬಂದಿದ್ದವು. ಈಗ ಉತ್ತರ ಕೊರಿಯಾದ ಅಣ್ವಸ್ತ್ರ ನಾಶವೂ ಕೂಡ ಡೊನಾಲ್ಡ್‌ ಟ್ರಂಪ್‌ರ ಸಾಧನೆಯ ಗರಿಗಳಿಗೆ ಸೇರಿಸಲಾಗುತ್ತಿದೆ.

ಈ ಕುರಿತು ಮಾತನಾಡಿರುವ ಟ್ರಂಪ್‌, ಕಿಮ್‌ ಜಾಂಗ್‌ ನಿರ್ಧಾರ ಹೀಗೆ ಮುಂದುವರೆಯುವುದರ ಕುರಿತು ಸಂದೇಹವನ್ನು ವ್ಯಕ್ತ ಪಡಿಸಿದ್ದಾರೆ. ಇನ್ನೂ ಎರಡು ವಾರಗಳ ಕಾಲ ನಿರ್ಧಾರ ಹೀಗೆ ಇರುತ್ತದೆಯೇ ಎನ್ನುವುದನ್ನು ಕಾದು ನೋಡಬೇಕಿದೆ ಎಂದಿದ್ದಾರೆ.

ಯಾರ ವಾದಗಳು ಏನೇ ಆಗಿದ್ದರೂ ಕೂಡ ಕಿಮ್‌ ಜಾಂಗ್‌ ಕೈಗೊಂಡಿರುವ ಈ ನಿರ್ಧಾರವನ್ನು ಜಗತ್ತು ಸ್ವಾಗತಿಸಲೇಬೇಕಿದೆ. ಈ ನಿರ್ಧಾರ ಹೀಗೆ ಮುಂದುವರೆಯಲಿ ಎಂದು ಆಶಿಸಬೇಕಿದೆ.