‘ಮಾನವ ಗುರಾಣಿ’ ಕುಖ್ಯಾತಿಯ ಮೇಜರ್‌ ಬಂಧನ: ಸ್ಥಳೀಯ ಯುವತಿ ಜತೆ ಸಿಕ್ಕಿಬಿದ್ದ ಆರ್ಮಿ ಆಫೀಸರ್
ಸುದ್ದಿ ಸಾರ

‘ಮಾನವ ಗುರಾಣಿ’ ಕುಖ್ಯಾತಿಯ ಮೇಜರ್‌ ಬಂಧನ: ಸ್ಥಳೀಯ ಯುವತಿ ಜತೆ ಸಿಕ್ಕಿಬಿದ್ದ ಆರ್ಮಿ ಆಫೀಸರ್

ಕಳೆದ ವರ್ಷ ಏಪ್ರಿಲ್‌ ತಿಂಗಳಲ್ಲಿ ಕಾಶ್ಮೀರಿ ವ್ಯಕ್ತಿಯೊಬ್ಬನನ್ನು ಮಾನವ ಗುರಾಣಿಯನ್ನಾಗಿ ಬಳಸಿಕೊಂಡು, ಪತ್ರಿಕೆಗಳಲ್ಲಿ ಮುಖಪುಟದ ಸುದ್ದಿಯಾಗಿದ್ದ ಭಾರತೀಯ ಸೈನ್ಯದ ಮೇಜರ್‌ ಲೀತುಲ್‌ ಗೊಗೊಯ್‌ ಈಗ ಮತ್ತೆ ಸುದ್ದಿಯಾಗಿದ್ದಾರೆ. 

ಕಳೆದ ವರ್ಷ ಏಪ್ರಿಲ್‌ ತಿಂಗಳಲ್ಲಿ ಕಾಶ್ಮೀರಿ ವ್ಯಕ್ತಿಯೊಬ್ಬನನ್ನು ಮಾನವ ಗುರಾಣಿಯನ್ನಾಗಿ ಬಳಸಿಕೊಂಡು, ಪತ್ರಿಕೆಗಳಲ್ಲಿ ಮುಖಪುಟದ ಸುದ್ದಿಯಾಗಿದ್ದ ಭಾರತೀಯ ಸೈನ್ಯದ ಮೇಜರ್‌ ಲೀತುಲ್‌ ಗೊಗೊಯ್‌ ಈ ಮತ್ತೆ ಸುದ್ದಿಯಾಗಿದ್ದಾರೆ. ಮೇಜರ್‌ ಗೊಯೋಯ್‌ರನ್ನು ಶ್ರೀನಗರ ಪೊಲೀಸರು ಬುಧವಾರ ರಾತ್ರಿ ಬಂಧಿಸಿದ್ದಾರೆ. ಗೊಗೋಯ್‌ ಅಪ್ರಾಪ್ತ ಬಾಲಕಿ ಜತೆಯಲ್ಲಿ ಹೋಟೆಲ್ ರೂಮ್ ಪಡೆದುಕೊಳ್ಳಲು ಹೊರಟಿದ್ದರು ಎಂದು ಮೊದಲು ಸುದ್ದಿಯಾಗಿತ್ತು. ಇದೀಗ ಪೊಲೀಸರು ಸ್ಪಷ್ಟೀಕರಣವನ್ನು ನೀಡಿದ್ದು, ಮೇಜರ್ ಜತೆಗಿದ್ದಾಕೆಗೆ 18 ವರ್ಷ ತುಂಬಿದೆ ಎಂದಿದ್ದಾರೆ.

ಮೇಜರ್ ಗೊಗೋಯ್‌ ಪಂಜಾಬ್‌ ರೆಜಿಮೆಂಟ್‌ನ ರಾಷ್ಟ್ರೀಯ ರೈಫಲ್ಸ್‌ ತಂಡಕ್ಕೆ ಮರುನೇಮಕವಾಗಿದ್ದರು. ಗುರುವಾರದಿಂದ ಕಾಶ್ಮೀರದ ಬದ್ಗಾಮ್‌ ಜಿಲ್ಲೆಯ ಬೀವ್ರಾ ಎಂಬಲ್ಲಿ ಗೊಗೋಯ್‌ ಕಾರ್ಯ ಪ್ರಾರಂಭಿಸಬೇಕಿತ್ತು. ಬಧುವಾರವೇ ಶ್ರೀನಗರಕ್ಕೆ ಆಗಮಿಸಿದ ಗೊಗೋಯ್‌ ಆನ್‌ಲೈನ್‌ ಬುಕ್ಕಿಂಗ್‌ ಸೇವೆಯ ಮೂಲಕ ತಮ್ಮ ಹೆಸರಿನಲ್ಲಿಯೇ ಶ್ರೀನಗರದ ಗ್ರಾಂಡ್‌ ಮಮ್ತಾ ಹೋಟೆಲ್‌ನಲ್ಲಿ ಕೊಠಡಿಯನ್ನು ಕಾಯ್ದಿರಿಸಿದ್ದರು.

ಹೋಟೆಲ್‌ಗೆ ಬಂದ ಲೀತುಲ್‌ ಗೊಯೋಯ್‌, ತಮ್ಮ ಜತೆಗೆ ಮಹಿಳೆ ಮತ್ತು ಕಾರ್‌ ಚಾಲಕನನ್ನೂ ಕೂಡ ಕೊಠಡಿಗೆ ಕರೆದೊಯ್ಯುವುದಾಗಿ ತಿಳಿಸಿದಾಗ ಹೋಟೆಲ್‌ ಸಿಬ್ಬಂದಿಗಳು ವಿರೋಧಿಸಿದ್ದರು. ಮಧ್ಯ ಪ್ರವೇಶಿಸಿದ ಕಾರ್‌ ಚಾಲಕ ಹೋಟೆಲ್ ಸಿಬ್ಬಂದಿಗಳೊಂದಿಗೆ ವಾಗ್ವಾದಕ್ಕೆ ಇಳಿದಿದ್ದನು. ಸಿಬ್ಬಂದಿಗಳು ಪೊಲೀಸರಿಗೆ ಕರೆ ಮಾಡಿ ವಿಷಯ ಮುಟ್ಟಿಸಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು 3 ಜನರನ್ನೂ ಬಂಧಿಸಿ ಕರೆದೊಯ್ದಿದ್ದಾರೆ.

ಈಗಿನ ಮಾಹಿತಿ ಪ್ರಕಾರ, ಮೇಜರ್‌ ಗೊಗೋಯ್‌ರನ್ನು ಬಿಡುಗಡೆ ಮಾಡಿದ್ದು, ಸೇನಾ ಕರ್ತವ್ಯಕ್ಕೆ ಮರಳಲು ಅವಕಾಶ ಮಾಡಿಕೊಡಲಾಗಿದೆ. ಮಹಿಳೆ ಮತ್ತು ಕಾರ್‌ ಚಾಲಕರ ಕುರಿತು ಪೊಲೀಸರು ಇನ್ನು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಹಿಂದೆ ವ್ಯಕ್ತಿಯೊಬ್ಬನನ್ನು ಕಾರಿಗೆ ಕಟ್ಟಿ 'ಮಾನವ ಗುರಾಣಿ’ಯಾಗಿ ಬಳಸುವ ಮೂಲಕ ಮೇಜರ್‌ ಲೀತುಲ್‌ ಗೊಗೋಯ್‌ ದೊಡ್ಡ ಸುದ್ದಿಯಾಗಿದ್ದರು. ಮಾನವ ಹಕ್ಕುಗಳ ಉಲ್ಲಂಘನೆಯ ಆರೋಪ ಅವರ ಮೇಲೆ ಬಂದಿತ್ತು.

ಏನಿದು ಪ್ರಕರಣ?:

‘ಮಾನವ ಗುರಾಣಿ’ ಕುಖ್ಯಾತಿಯ ಮೇಜರ್‌ ಬಂಧನ: ಸ್ಥಳೀಯ ಯುವತಿ ಜತೆ ಸಿಕ್ಕಿಬಿದ್ದ ಆರ್ಮಿ ಆಫೀಸರ್

ಕಾಶ್ಮೀರದ ಬದ್ಗಾಮ್‌ ಜಿಲ್ಲೆಯ ಉಟಿಗಾಮ್ ಎಂಬ ಹಳ್ಳಿಯಲ್ಲಿ ಕಳೆದ ವರ್ಷ ಏಪ್ರಿಲ್ 19ರಂದು ಶ್ರೀನಗರ ಲೋಕಸಭೆ ಉಪ ಚುನಾವಣೆ ನಡೆಯುತಿತ್ತು. ಈ ಚುನಾವಣೆಯನ್ನು ಕಾಶ್ಮೀರ ಪ್ರತ್ಯೇಕವಾದಿಗಳು ವಿರೋಧಿಸಿದ್ದರು. ಚುನಾವಣೆಗೆ ನಿಯೋಜನೆಗೊಂಡಿದ್ದ ಸೇನಾ ಸಿಬ್ಬಂದಿಯನ್ನು ಪ್ರತಿಭಟನಾಕಾರರು ಸುತ್ತುವರೆದು ದಾಳಿ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ರಕ್ಷಿಸಿಕೊಳ್ಳುವ ನೆಪದಲ್ಲಿ ಲೀತುಲ್ ಗೊಗೋಯ್ ಸ್ಥಳೀಯ ವ್ಯಕ್ತಿ ಫಾರೂಖ್ ಅಹ್ಮದ್ ದಾರ್‌ ಎಂಬಾತನನ್ನು ಸೇನೆಗೆ ಸೇರಿದ ಜೀಪಿನ ಮುಂಬಾಗಕ್ಕೆ ಕಟ್ಟಿದ್ದರು. ಈ ದೃಷ್ಯವನ್ನು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿತ್ತು. ವೀಡಿಯೋ ರಾಷ್ಟ್ರಾದ್ಯಂತ ವೈರಲ್‌ ಆಗಿ ಭಾರತೀಯ ಸೇನೆ ಮುಜುಗರ ಅನುಭವಿಸುವಂತಾಗಿತ್ತು.

ಈ ಕುರಿತು ಲೀತುಲ್‌ ಗೊಗೋಯ್‌ ತಮ್ಮನ್ನು ತಾವು ಸಮರ್ಥಿಸಿಕೊಂಡಿದ್ದರು. “ಪ್ರತಿಭಟನಾಕಾರರು ಪೊಲೀಸ್‌ ಠಾಣೆಗೆ ಬೆಂಕಿ ಹಚ್ಚಲು ಸಿದ್ಧರಾಗಿದ್ದರು. ಅಲ್ಲಿದ್ದ ಹೆಂಗಸರು, ಮಕ್ಕಳನ್ನು ಕಾಪಾಡುವ ಸಲುವಾಗಿ ಫಾರೂಖ್‌ ಎಂಬಾತನನ್ನು ಜೀಪಿನ ಮುಂಭಾಗಕ್ಕೆ ಕಟ್ಟಿದೆ. ಇದರ ಬದಲು ಗೋಲಿಬಾರ್‌ ನಡೆಸಲುವಂತೆ ಆದೇಶಿಸಿದ್ದರೆ ಹಲವಾರು ಮಂದಿ ಪ್ರಾಣ ಕಳೆದುಕೊಳ್ಳಬೇಕಾಗುತ್ತಿತ್ತು,” ಎಂದಿದ್ದರು.

ಘಟನೆಯ ಕುರಿತು ಎಫ್‌ಐಆರ್‌ ಕೂಡ ದಾಖಲಾಗಿ, ಸೇನಾ ಕೋರ್ಟ್ ವಿಚಾರಣೆಯನ್ನು ನಡೆಸಿತ್ತು. ಮೇಜರ್‌ ಲೀತುಲ್‌ ಗೊಗೋಯ್‌ ಮೇಲಿದ್ದ ಕೇಸುಗಳನ್ನು ಕುಲಾಸೆಗೊಳಿಸಿದ ನ್ಯಾಯಾಲಯ, ಅವರ ಕಾರ್ಯವನ್ನು ಶ್ಲಾಘಿಸಿತ್ತು. ನಂತರದಲ್ಲಿ ಮೇಜರ್‌ ಗೊಗೋಯ್‌ಗೆ ಸೇನೆ ಪ್ರಶಂಸಾ ಪತ್ರವನ್ನೂ ಕೂಡ ನೀಡಿ ಗೌರವಿಸಿತ್ತು. ಅದೇ ಸೇನಾಧಿಕಾರಿ ಈಗ ಸ್ಥಳೀಯ ಯುವತಿಯ ಜತೆ ಹೋಟೆಲ್ ಕೋಣೆ ಸೇರಿಕೊಳ್ಳುವ ಹವಣಿಕೆಯಲ್ಲಿ ಬಂಧನಕ್ಕೊಳಗಾಗಿ ಬಿಡುಗಡೆಗೊಂಡಿದ್ದಾರೆ.