samachara
www.samachara.com
ಬಾಡಿಗೆ ಮನೆ ಸಿಕ್ಕಿಲ್ಲವೆಂದು ಅಖಿಲೇಶ್‌:  ಮಾಜಿ ಸಿಎಂಗೆ ಟ್ವೀಟಿಗರ ವ್ಯಂಗ್ಯದೇಟು
ಸುದ್ದಿ ಸಾರ

ಬಾಡಿಗೆ ಮನೆ ಸಿಕ್ಕಿಲ್ಲವೆಂದು ಅಖಿಲೇಶ್‌: ಮಾಜಿ ಸಿಎಂಗೆ ಟ್ವೀಟಿಗರ ವ್ಯಂಗ್ಯದೇಟು

ಟ್ವೀಟಿಗರ ಲೇವಡಿಗೆ ಒಳಗಾಗಿರುವುದು “ಎರಡು ವರ್ಷದಿಂದ ಹುಡುಕುತ್ತಿದ್ದರೂ ಲಕ್ನೋದಲ್ಲಿ ನನಗೆ ಡಬ್ಬಲ್ ಬೆಡ್ ರೂಂ ಮನೆಯೊಂದು ಸಿಕ್ಕಿಲ್ಲ” ಎಂದು ಹೇಳಿದ್ದ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ .

ನಮ್ಮನ್ನಾಳುವ ರಾಜಕಾರಣಿಗಳು, ಸರ್ಕಾರಗಳು, ವ್ಯವಸ್ಥೆಗಳು ಜನರ ಗೇಲಿಗೆ ಒಳಗಾಗುವುದುಂಟು. ಅವರ ದುರಾಸೆ, ಜನವಿರೋಧಿ ನಿರ್ಧಾರ, ವಿರೋಧಾಬಾಸದ ಹೇಳಿಕೆಗಳು ಜನರ ಟೀಕೆ, ಲೇವಡಿಗೆ ಸಾಮಾಜಿಕ ಜಾಲತಾಣಗಳು ವೇದಿಕೆಯಾಗುವುದುಂಟು. ದೇಶದ ದೊಡ್ಡ ರಾಜ್ಯದ ಯುವ ರಾಜಕಾರಣಿಯೊಬ್ಬರು ಈ ಬಾರಿ ಟ್ವಿಟರ್‌ನಲ್ಲಿ ಸಾಕಷ್ಟು ಗೇಲಿಗೊಳಗಾಗಿದ್ದಾರೆ. 

ಜನರ ಟ್ವೀಟ್ ಲೇವಡಿಗೆ ಒಳಗಾಗಿರುವುದು “ಎರಡು ವರ್ಷದಿಂದ ಹುಡುಕುತ್ತಿದ್ದರೂ ಲಕ್ನೋದಲ್ಲಿ ನನಗೆ ಡಬ್ಬಲ್ ಬೆಡ್ ರೂಂ ಮನೆಯೊಂದು ಸಿಕ್ಕಿಲ್ಲ” ಎಂದು ಹೇಳಿದ್ದ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ . ಜನರ ಸಾತ್ವಿಕ ಅವರನ್ನು ಚುಚ್ಚುವ ಮೂಲಕ ಗೇಲಿ ಮಾಡಿವೆ.

ಬಂಗಲೆ ಖಾಲಿ ಮಾಡುವಂತೆ ನೋಟಿಸ್

ಕಳೆದ ವರ್ಷದ ಡಿಸೆಂಬರ್‌ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅವರು ಅಧಿಕಾರ ಕಳೆದುಕೊಂಡು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ಅಖಿಲೇಶ್ ಯಾದವ್ ಸರ್ಕಾರಿ ಬಂಗಲೆಯನ್ನ ಖಾಲಿ ಮಾಡಿರಲಿಲ್ಲ. ಹೀಗಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಅಖಿಲೇಶ್‌ ಸೇರಿ 6 ಮಾಜಿ ಸಿಎಂಗಳಿಗೆ ಸರ್ಕಾರಿ ಮನೆಗಳನ್ನು ಖಾಲಿ ಮಾಡುವಂತೆ ನೋಟಿಸ್ ನೀಡಿದೆ.

ನೋಟಿಸ್ ಬಂದ ಬೆನ್ನಲ್ಲೇ ಬಹುಜನ ಸಮಾಜವಾದಿ ನಾಯಕ, ಮಾಜಿ ಮುಖ್ಯಮಂತ್ರಿ ಮಾಯಾವತಿ ವಾಸವನ್ನು ತಮ್ಮ ಖಾಸಗಿ ಬಂಗಲೆಗೆ ಬದಲಿಸಿದ್ದರು. ಇನ್ನೂ ಹಲವರು ಇದನ್ನು ಅನುಸರಿಸಿದರು.

ಆದರೆ ಮನೆ ಬದಲಾಯಿಸುತ್ತಿದ್ದ ಮಾಜಿ ಸಿಎಂ ಅಖಿಲೇಶ್‘ ಎರಡು ವರ್ಷದಿಂದ ಹುಡುಕುತ್ತಿದ್ದರೂ ಲಕ್ನೋದಲ್ಲಿ ನನಗೊಂದು ಮನೆ ಸಿಕ್ಕಿಲ್ಲ ಎಂಬ ಹೇಳಿಕೆ ಅವರಿಗೇ ಪೀಕಲಾಟವನ್ನು ತಂದಿಟ್ಟಿದೆ.

ದೇಶದ ಒಂದು ದೊಡ್ಡ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಅವರು ತಮ್ಮ ಚುನಾವಣಾ ಪ್ರಮಾಣ ಪತ್ರದಲ್ಲಿ ಸಾವಿರಾರು ಕೋಟಿ ರೂಪಾಯಿ ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ. ಅದರಲ್ಲಿ ಐಷಾರಾಮಿ ಕಾರುಗಳೂ, ಫ್ಲಾಟ್‌ಗಳೂ ಸೇರಿವೆ. ಆದರೆ ಅವನ್ನೆಲ್ಲಾ ಮರೆಮಾಚಿ ಮಧ್ಯಮ ವರ್ಗದ ಬಡವನಂತೆ “ ಲಕ್ನೋದಲ್ಲಿ ತಾವು ಎರಡು ವರ್ಷದಿಂದ ಎರಡು ಕೊಠಡಿಯ ಮನೆಯೊಂದನ್ನು ಬಾಡಿಗೆಗಾಗಿ ಹುಡುಕುತ್ತಿದ್ದೇನೆ” ಎಂದು ಹೇಳಿರುವುದು ಲೇವಡಿಗೆ ಒಳಗಾಗಿದೆ.

ಅಖಿಲೇಶ್ ಅವರ ಈ ಹೇಳಿಕೆಗೆ ಟ್ವೀಟಿಗರು ಭಾರಿ ಸಂಖ್ಯೆಯಲ್ಲಿ ಟ್ವೀಟ್ ಮಾಡಿದ್ದು ನಾನಾ ರೀತಿಯಲ್ಲಿ ಗೇಲಿ ಮಾಡಿದ್ದಾರೆ. ಅಂಜಲಿ ಎಂಬುವವರು ಟ್ವೀಟ್ ಮಾಡಿ “ ಪಾಪ ಈ ಬಡ ಹುಡುಗ ಬಾಡಿಗೆ ಮನೆ ಸಿಗಲು ಯಾರಾದರೂ ಸಹಾಯ ಮಾಡಿ’ ಎಂದು ಚುಚ್ಚಿದ್ದಾರೆ.

ಅನಂತ್ ಪುರೋಹಿತ್ ಅಗ್ನಿವೀರ್ ಎಂಬುವರು “ ನನ್ನ 900 ಸ್ಕ್ವಯರ್ ಫೀಟ್ ಫ್ಲಾಟ್ ಬಾಡಿಗೆಗಿದೆ. ತಿಂಗಳಿಗೆ 2 ಸಾವಿರ ಬಾಡಿಗೆ ಇದೆ. ಅಲ್ಲದೆ ಮಾಜಿ ಮುಖ್ಯಮಂತ್ರಿಗಳಿಗೆಂದು ಶೇ.10ರಷ್ಟು ರಿಯಾಯಿತಿ ನೀಡುತ್ತಿದ್ದೇನೆ. ಪ್ರೀತಿಯಿಂದ ಆಗಮಿಸಿ” ಎಂದು ಗೇಲಿ ಮಾಡಿದ್ದಾರೆ.

ಕೌಶಿಕ್ ಮುಖರ್ಜಿ ಎಂಬುವರು “ ಯಾಕೆ ನಿಮ್ಮ ತಮ್ಮನ ಬಳಿ ಇರುವ ಲ್ಯಾಂಬೊರ್ಗಿನಿಯನ್ನು ಪಡೆಯಬಾರದು. ಅದರೊಳಗೆ ನೀವು ತುಂಬಾ ಕೂಲ್ ಆಗಿ ಇರಬಹುದು’ ಎಂದು ವ್ಯಂಗ್ಯವಾಡಿದ್ದಾರೆ.

ಶ್ಯಾಮ್ ಚೆಟ್ಟಿಯಾರ್ ಎಂಬ ಟ್ವೀಟಿಗಾ “ ನಾನು ನಿಮಗಾಗಿ ಒಂದು ಬಾಡಿಗೆ ಮನೆಯನ್ನು ಹುಡುಕುತ್ತೇನೆ. ಅಲ್ಲದೆ ನಿಮಗಿರುವ ತುಂಬ ಬಡತನವನ್ನು ಪರಿಗಣಿಸಿ ಕಮಿಷನ್ ಹಣವನ್ನೂ ಪಡೆಯುವುದಿಲ್ಲ” ಲೇವಡಿ ಮಾಡಿದ್ದಾರೆ.

ಒಟ್ಟಿನಲ್ಲಿ ಇಷ್ಟುದಿನ ದೇಶದ ರಾಜಕಾರಣಿಗಳು ಬಡವರ ಮುಂದೆ ಸುಳ್ಳು ಭಾಷಣವನ್ನು ಹೊಡೆದು ಮರಳು ಮಾಡುತ್ತಿದ್ದರು. ಆದರೆ ವಿದ್ಯಾವಂತ ಮಂದಿ ನಮ್ಮನ್ನಾಳುವ ಪ್ರಭುಗಳ ಈ ಸುಳ್ಳು ಮತ್ತು ಕಪಟವನ್ನು ತಮ್ಮದೇ ಭಾಷೆ ತರಾಟೆಗೆ ತೆಗೆದುಕೊಂಡು ಗೇಲಿ ಮಾಡಿದ್ದಾರೆ.