ಚೈಲ್ಡ್ ಪೋರ್ನ್‌/ಅತ್ಯಾಚಾರದ ವೀಡಿಯೋ ಕಡಿವಾಣಕ್ಕೆ  ಸುಪ್ರಿಂಕೋರ್ಟ್‌ ದಂಡ
ಸುದ್ದಿ ಸಾರ

ಚೈಲ್ಡ್ ಪೋರ್ನ್‌/ಅತ್ಯಾಚಾರದ ವೀಡಿಯೋ ಕಡಿವಾಣಕ್ಕೆ ಸುಪ್ರಿಂಕೋರ್ಟ್‌ ದಂಡ

ಲೈಂಗಿಕ ದೌರ್ಜನ್ಯವನ್ನು ಒಳಗೊಂಡ ವೀಡಿಯೋಗಳಿಗೆ ಕಡಿವಾಣ ಹಾಕಲು ಹೊರಟ ಸುಪ್ರಿಂ ಕೋರ್ಟ್ ಹಲವಾರು ಜಾಲತಾಣಗಳಿಗೆ ಕೆಲವು ನಿರ್ದೇಶನಗಳನ್ನು ನೀಡಿ, ಪ್ರಗತಿಯ ವರದಿಯನ್ನು ನೀಡುವಂತೆ ಸೂಚಿಸಿತ್ತು. ಆದರೆ ಈವರೆಗೂ ವರದಿ ದೊರೆಯದ ಕಾರಣ ದಂಡ ವಿದಿಸಿದೆ.

ಯಾಹೂ, ಫೇಸ್‌ಬುಕ್‌ ಐರ್ಲೆಂಡ್, ಫೇಸ್‌ಬುಕ್ ಇಂಡಿಯಾ, ಗೂಗಲ್ ಇಂಡಿಯಾ, ಗೂಗಲ್ ಐಎನ್‌ಸಿ, ಮೈಕ್ರೋಸಾಫ್ಟ್‌ ಮತ್ತು ವಾಟ್ಸ್‌ಆಪ್‌ ಕಂಪೆನಿಗಳಿಗೆ ಸುಪ್ರಿಂ ಕೋರ್ಟ್ ತಲಾ 1 ಲಕ್ಷ ರೂಪಾಯಿ ದಂಡ ವಿಧಿಸಿದೆ. ಚೈಲ್ಡ್ ಪೋರ್ನೋಗ್ರಫಿ ಮತ್ತು ಅತ್ಯಾಚಾರದ ವೀಡಿಯೋಗಳ ಕುರಿತು ಸುಪ್ರಿಂ ಕೋರ್ಟ್ ನೀಡಿದ್ದ ನಿರ್ದೇಶನಗಳನ್ನು ಪಾಲಿಸದಿರುವುದೇ ಈ ದಂಡಕ್ಕೆ ಕಾರಣ.

ನ್ಯಾಯಮೂರ್ತಿ ಮದನ್‌ ಬಿ ಲೋಕೂರ್‌ ನೇತೃತ್ವದ ನ್ಯಾಯಪೀಠ ಈ ದಂಡವನ್ನು ವಿಧಿಸಿದೆ. ಜಾಲತಾಣಗಳಲ್ಲಿ ದೈತ್ಯರಾಗಿರುವ ಈ ಸಂಸ್ಥೆಗಳು ಮತ್ತು ಮೈಕ್ರೋಸಾಫ್ಟ್ ಕಂಪನಿ ತಾವು ಸ್ವೀಕರಿಸಿದ್ದ ಶಿಫಾರಸುಗಳಿಗೆ ಸಂಬಂಧಿಸಿದ ಪ್ರಗತಿಯ ಬಗ್ಗೆ ಚಿಕ್ಕ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕಿತ್ತು.

ಆದರೆ, ಇದುವರೆಗೆ ಈ ಯಾವ ಕಂಪನಿಗಳಿಂದಲೂ ಕೂಡ ವರದಿ ದೊರೆತಿಲ್ಲ. ಜತೆಗೆ ಸುಪ್ರಿಂ ಕೋರ್ಟ್ ನೀಡಿದ ಶಿಫಾರಸುಗಳನ್ನು ಪಾಲಿಸುವುದು ತಮ್ಮ ಕರ್ತವ್ಯ ಎಂದು ಈ ಕಂಪನಿಗಳು ತಿಳಿದಿಲ್ಲ ಎಂದಿರುವ ಸುಪ್ರಿಂ ಕೋರ್ಟ್ ಎಲ್ಲಾ ಕಂಪನಿಗಳಿಗೂ 2018ರ ಜೂನ್‌ 15ರವರೆಗೆ ಕಾಲಾವಕಾಶ ನೀಡಿದೆ. ಈ ಅವಧಿಯೊಳಗೆ ಕಂಪನಿಗಳು ಪ್ರಗತಿಯ ವರದಿಯನ್ನು ಸುಪ್ರಿಂ ಕೋರ್ಟ್‌ಗೆ ಸಲ್ಲಿಸಬೇಕಿದೆ. ಜತೆಗೆ 1 ಲಕ್ಷ ರೂ ದಂಡವನ್ನೂ ಕೂಡ ಪಾವತಿಸಬೇಕಿದೆ.

ಗೃಹ ಸಚಿವಾಲಯಕ್ಕೆ ಹೆಚ್ಚಿನ ಸಮಯವಿಲ್ಲ:

ಕೇಂದ್ರ ಸರಕಾರವು ಸೈಬರ್ ಕ್ರೈಮ್‌ ರಿಪೋರ್ಟಿಂಗ್‌ ಪೋರ್ಟಲ್‌ಅನ್ನು ಸಿದ್ಧಪಡಿಸುತ್ತಿದ್ದು, 2018ರ ಜುಲೈ ತಿಂಗಳ ವೇಳೆಗೆ ಈ ಕಾರ್ಯ ಪೂರ್ಣಗೊಂಡು ಪೋರ್ಟಲ್‌ ಬಿಡುಗಡೆಗೊಳ್ಳುತ್ತದೆ ಎಂದು ಸುಪ್ರಿಂ ಕೋರ್ಟ್‌ಗೆ ತಿಳಿಸಿತ್ತು. ಜತೆಗೆ ಸಿಸಿಟಿಎನ್‌ಎಸ್‌(ಕ್ರೈಮ್ ಅಂಡ್ ಕ್ರಮಿನಲ್ ಟ್ರಾಕಿಂಗ್‌ ನೆಟ್‌ವರ್ಕ್ ಅಂಡ್‌ ಸಿಸ್ಟಮ್)ನ ಜತೆಗೂಡಿ ಕೆಲಸ ನಿರ್ವಹಿಸುವುದಾಗಿ ತಿಳಿಸಿದ್ದ ಕೇಂದ್ರ ಸರಕಾರ, ಈ ಕಾರ್ಯ ಸಂಪೂರ್ಣಗೊಳ್ಳಲು 2 ತಿಂಗಳ ಕಾಲಾವಕಾಶದ ಅಗತ್ಯವಿದೆ ಎಂದಿತ್ತು. ಈ ಕುರಿತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಹಕಾರವನ್ನು ಪಡೆಯಲಾಗುವುದು ಎಂದು ಕೇಂದ್ರ ಸರಕಾರ ಸುಪ್ರಿಂ ಕೋರ್ಟ್‌ಗೆ ತಿಳಿಸಿತ್ತು.

ಕೇಂದ್ರದ ಮಾತುಗಳನ್ನು ಆಲಿಸಿದ ಸುಪ್ರಿಂ ಕೋರ್ಟ್, “ಪೋರ್ಟಲ್‌ ಕುರಿತಾದ ಹಲವಾರು ಕೆಲಸಗಳು ಬಾಕಿಯಿವೆ. ಈಗಾಗಲೇ ಕೇಂದ್ರ ಸರಕಾರ ಅಗತ್ಯಕ್ಕಿಂತ ಹೆಚ್ಚಿನ ಸಮಯವನ್ನು ತೆಗೆದುಕೊಂಡಿದೆ,” ಎಂದಿದ್ದು, ಹೆಚ್ಚಿನ ಕಾಲಾವಕಾಶ ನೀಡಲು ನಿರಾಕರಿಸಿದೆ. ಕೇಂದ್ರ ಸರಕಾರ ಕೇಳಿದ್ದ ಸಮಯವನ್ನೂ ಕೂಡ ಕಡಿತಗೊಳಿಸಿ ಈ ವರ್ಷದ ಜೂನ್‌ 30ರ ಒಳಗೆ ಪೋರ್ಟಲ್‌ಅನ್ನು ಸಿದ್ಧಪಡಿಸಬೇಕೆಂದು ಆದೇಶೀಸಿದೆ.

ಪ್ರಕರಣದ ಹಿನ್ನಲೆ:

ಪ್ರಜ್ವಲಾ ಎಂಬ ಸ್ವಯಂ ಸೇವಾ ಸಂಸ್ಥೆಯೊಂದು ಸುಪ್ರಿಂ ಕೋರ್ಟ್‌ಗೆ ಪತ್ರವೊಂದನ್ನು ಬರೆದಿತ್ತು. ಆ ಪತ್ರದಲ್ಲಿ ಲೈಂಗಿಕ ದೌರ್ಜನ್ಯ ಮತ್ತು ಹಿಂಸೆಯನ್ನು ಒಳಗೊಂಡ ವೀಡಿಯೋಗಳು ಜಾಲತಾಣಗಳಲ್ಲಿ ಲೀಲಾಜಾಲವಾಗಿ ದೊರೆಯುತ್ತಿದ್ದು, ಹಿಂಸೆಯನ್ನು ಪ್ರಚೋದಿಸುತ್ತಿವೆ ಎಂದಿತ್ತು. ಈ ಕುರಿತು ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಿಕೊಂಡ ಸುಪ್ರಿಂ ಕೋರ್ಟ್ ಸಮಿತಿಯೊಂದನ್ನು ನೇಮಿಸಿತ್ತು. ಈ ಸಮಿತಿ 2 ಸಂಪುಟಗಳಲ್ಲಿ ವರದಿಯನ್ನು ನೀಡಿ, 11 ಶಿಫಾರಸುಗಳನ್ನು ಮುಂದಿಟ್ಟಿತ್ತು.

ಅಜಿತ್‌ ಕುಮಾರ್‌ ನೇತೃತ್ವದ ಈ ಸಮಿತಿಗೆ ಫೇಸ್‌ಬುಕ್‌, ವಾಟ್ಸ್‌ಆಪ್‌ ಮೊದಲಾದ ಕಂಪನಿಗಳು ಸೇರಿದಂತೆ ಕೇಂದ್ರ ಸರಕಾರವೂ ಕೂಡ ಸಹಕರಿಸಿತ್ತು. ಸಮಿತಿಯ 11 ಶಿಫಾರಸುಗಳನ್ನು ಪಾಲಿಸಿ, ಬೆಳವಣಿಗೆಗಳ ಕುರಿತು ವರದಿ ನೀಡುವಂತೆ ಸುಪ್ರಿಂ ಕೋರ್ಟ್ ಸಂಬಂಧಿಸಿದ ಕಂಪೆನಿಗಳಿಗೆ ಸೂಚಿಸಿತ್ತು. ಆದರೆ ನೀಡಿದ ಸಮಯದೊಳಗೆ ವರದಿ ದೊರೆಯದ ಕಾರಣದಿಂದ ಸುಪ್ರಿಂ ಕೋರ್ಟ್ ಕಂಪೆನಿಗಳಿಗೆ ದಂಡವನ್ನು ವಿಧಿಸಿದೆ.