‘ವಿಶ್ವಾಸ ಮತ ಯಾಚನೆ’: ಒಂದು ಸರಳ ಸಾಂವಿಧಾನಿಕ ಪ್ರಕ್ರಿಯೆ
ಸುದ್ದಿ ಸಾರ

‘ವಿಶ್ವಾಸ ಮತ ಯಾಚನೆ’: ಒಂದು ಸರಳ ಸಾಂವಿಧಾನಿಕ ಪ್ರಕ್ರಿಯೆ

ಸರಳವಾಗಿರುವ ವಿಶ್ವಾಸ ಮತ ಯಾಚನೆಯ ಸಾಂವಿಧಾನಿಕ ಪ್ರಕ್ರಿಯೆ ಬಗ್ಗೆ ಮಾಹಿತಿ ಇಲ್ಲಿದೆ:

ಶನಿವಾರ ಸಂಜೆ 4 ಗಂಟೆಗೆ ಕರ್ನಾಟಕದ ವಿಧಾನಸಭೆಯಲ್ಲಿ ಬಹುಮತ ಪರೀಕ್ಷೆ ನಡೆಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಸರಳವಾಗಿರುವ ಸಾಂವಿಧಾನಿಕ ಪ್ರಕ್ರಿಯೆ ಹೇಗೆ ನಡೆಯಲಿದೆ? ವಿವರ ಇಲ್ಲಿದೆ:

1. ರಾಜ್ಯ ಶಾಸನಸಭೆಯ ಹಿರಿಯ ಶಾಸಕರನ್ನು ಕಾರ್ಯದರ್ಶಿ ಗುರುತಿಸಬೇಕಾಗಿದೆ - ಇವರು ಗರಿಷ್ಠ ಅವಧಿಗೆ ವಿಧಾನಸಭೆಗೆ ಆಯ್ಕೆಯಾದವರು ಆಗಿರುತ್ತಾರೆ.

2. ಶಾಸನಸಭೆಯ ಕಾರ್ಯದರ್ಶಿ ಈ ರೀತಿ ಗುರುತಿಸಿದ ವ್ಯಕ್ತಿಯ ಹೆಸರನ್ನು ಹಂಗಾಮಿ ಸ್ಪೀಕರ್ ಹುದ್ದೆಗೆ ಸೂಚಿಸಿ ರಾಜ್ಯಪಾಲರಿಗೆ ಶಿಫಾರಸ್ಸು ಮಾಡುತ್ತಾರೆ. ಇವರಿಗೆ ರಾಜ್ಯಪಾಲರು ಪ್ರತಿಜ್ಞಾ ವಿಧಿ ಬೋಧಿಸುತ್ತಾರೆ.

ಬಿಜೆಪಿಯ ಹಿರಿಯ ಶಾಸಕ ಕೆ.ಜಿ. ಬೋಪಯ್ಯ ಅವರನ್ನು ವಿಧಾನಸಭೆಯ ಸ್ಪೀಕರ್‌ ಆಗಿ ನೇಮಕಗೊಳಿಸಿ ರಾಜ್ಯಪಾಲ ವಜುಬಾಯಿ ವಾಲಾ ಹೊರಡಿಸಿರುವ ಆದೇಶದ ಪ್ರತಿ
ಬಿಜೆಪಿಯ ಹಿರಿಯ ಶಾಸಕ ಕೆ.ಜಿ. ಬೋಪಯ್ಯ ಅವರನ್ನು ವಿಧಾನಸಭೆಯ ಸ್ಪೀಕರ್‌ ಆಗಿ ನೇಮಕಗೊಳಿಸಿ ರಾಜ್ಯಪಾಲ ವಜುಬಾಯಿ ವಾಲಾ ಹೊರಡಿಸಿರುವ ಆದೇಶದ ಪ್ರತಿ

3. ನಂತರ ಹಂಗಾಮಿ ಸಭಾಧ್ಯಕ್ಷರು ಪ್ರಮಾಣ ವಚನ ಸ್ವೀಕರಿಸಲು ಸದನದಲ್ಲಿ ಹಾಜರಿರುವಂತೆ ಶಾಸನಸಭೆಯ ಪ್ರತಿ ಸದಸ್ಯರಿಗೆ ಮಾಹಿತಿ ನೀಡಲು ಶಾಸನಸಭೆಯ ಕಾರ್ಯದರ್ಶಿಗೆ ಸೂಚಿಸುತ್ತಾರೆ.

4. ಬಳಿಕ ಹೊಸದಾಗಿ ಚುನಾಯಿತರಾಗಿರುವ ಶಾಸನ ಸಭೆ ಸದಸ್ಯರು ಪ್ರಮಾಣವಚನ ಸ್ವೀಕರಿಸುತ್ತಾರೆ.

ಹೊಸ ಶಾಸಕರ ಪ್ರಮಾಣ ವಚನ ಸ್ವೀಕಾರ ದೀರ್ಘ ಪ್ರಕ್ರಿಯೆಯಾಗಿದ್ದು ಎಲ್ಲಾ ಸದಸ್ಯರು ಪ್ರಮಾಣ ವಚನ ಸ್ವೀಕರಿಸುವಷ್ಟರ ಹೊತ್ತಿಗೆ ಸುಪ್ರೀಂ ಕೋರ್ಟ್ ನೀಡಿರುವ ಸಂಜೆ 4 ಗಂಟೆವರೆಗಿನ ಸಮಯದ ಗಡುವು ಸಮೀಪಿಸಬಹುದು.
- ಕೆ.ಆರ್. ರಮೇಶ್ ಕುಮಾರ್, ಕರ್ನಾಟಕ ವಿಧಾನಸಭಾ ಮಾಜಿ ಸ್ಪೀಕರ್

5. ಶಾಸಕರ ಪ್ರಮಾಣ ವಚನ ಮುಗಿದ ನಂತರ, ಸುಪ್ರೀಂ ಕೋರ್ಟ್ ನ ಆದೇಶವವನ್ನು ಗೌರವಿಸಬೇಕಾಗುತ್ತದೆ.

ಈ ಸಂದರ್ಭದಲ್ಲಿ ಸ್ಪೀಕರ್ ಮುಂದೆ ಎರಡು ಆಯ್ಕೆಗಳಿರುತ್ತವೆ. ಒಂದು: ಹಂಗಾಮಿ ಸಭಾಧ್ಯಕ್ಷರು ವಿಶ್ವಾಸಮತದ ಪ್ರಕ್ರಿಯೆಯನ್ನು ನಡೆಸುತ್ತಾರೆ. ಅಥವಾ ಎರಡು: ನೂತನ ಸ್ಪೀಕರ್ ಅವರನ್ನು ಆಯ್ಕೆ ಮಾಡಬೇಕು.

6. ವಿಶ್ವಾಸ ಮತವನ್ನು ತೆಗೆದುಕೊಳ್ಳುವಾಗ ಮೊದಲಿಗೆ ‘ಧ್ವನಿ ಮತ’ ಪ್ರಕ್ರಿಯೆಯನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ನಂತರ ಶಾಸಕರನ್ನು ಅವರು ಸೂಚಿಸಿರುವ ಬೆಂಬಲದ ಮೇಲೆ ವಿಭಾಗಿಸಲಾಗುತ್ತದೆ. ಅಂದರೆ ಮೊದಲು ಕೋರಮ್ ಬೆಲ್ ಬಾರಿಸಲಾಗುತ್ತದೆ. ಅದಾದ ನಂತರ ಬಾಗಿಲನ್ನು ಮುಚ್ಚಲಾಗುತ್ತದೆ. ನಂತರ ಶಾಸಕರು ಎದ್ದು ನಿಲ್ಲುತ್ತಾರೆ. ಆಗ ಪರ ಮತ್ತು ವಿರೋಧ ಎರಡೂ ಭಾಗಗಳಲ್ಲಿರುವ ಶಾಸಕರನ್ನು ಲೆಕ್ಕ ಹಾಕಲಾಗುತ್ತದೆ.

7. ಈ ಪ್ರಕ್ರಿಯೆಯು ಪೂರ್ಣಗೊಂಡ ನಂತರ ಫಲಿತಾಂಶವನ್ನು ಸ್ಪೀಕರ್ ಘೋಷಿಸುತ್ತಾರೆ.

ಆ ಹೊತ್ತಿಗಾಗಿ ಜನರ ಕಾಯುವಿಕೆ ಈಗಲೇ ಆರಂಭವಾಗಿದೆ.