samachara
www.samachara.com
ಮೊದಲ ದಿನವೇ ರೈತರ ಮೂಗಿಗೆ ‘ಸಾಲ ಮನ್ನಾ’ ತುಪ್ಪ ಸವರಿದ ಸಿಎಂ ಯಡಿಯೂರಪ್ಪ
ಸುದ್ದಿ ಸಾರ

ಮೊದಲ ದಿನವೇ ರೈತರ ಮೂಗಿಗೆ ‘ಸಾಲ ಮನ್ನಾ’ ತುಪ್ಪ ಸವರಿದ ಸಿಎಂ ಯಡಿಯೂರಪ್ಪ

ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ಎರಡು ಗಂಟೆ ಕಳೆಯುವ ಮೊದಲೇ ಯಡಿಯೂರಪ್ಪ ರೈತರ ಬೆಳೆಸಾಲ ಮನ್ನಾ ಕಡತ ಓಪನ್ ಮಾಡಿದ್ದಾರೆ. ಮುಂದಿನ ಒಂದೆರಡು ದಿನಗಳಲ್ಲಿ ಈ ಕುರಿತು ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. 

ಹಲವಾರು ಏಳುಬೀಳುಗಳ ಮಧ್ಯೆಯೇ ಬಿ. ಎಸ್‌.ಯಡಿಯೂರಪ್ಪ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅಧಿಕಾರ ದೊರೆತ 2 ಗಂಟೆಯ ಅವಧಿಯ ಒಳಗೆಯೇ ರೈತರ ಮತ್ತು ನೇಕಾರರ ಸಾಲಮನ್ನಾ ಮಾಡುವುದಾಗಿ ಭರವಸೆ ನೀಡಿದ್ದಾರೆ. 

ಗುರುವಾರ ಬೆಳಗ್ಗೆ ರೈತರ ಹಾಗೂ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ, ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿರುವ ಬಿ.ಎಸ್‌.ಯಡಿಯೂರಪ್ಪ ಮೊದಲ ದಿನವೇ ರೈತರ ಬೆಳೆ ಸಾಲವನ್ನು ಮನ್ನ ಮಾಡುವ ಜನಪ್ರಿಯ ಘೋಷಣೆ ಮಾಡಿದ್ದಾರೆ. ಚುನಾವಣೆ ಮೊದಲು ಹಾಗೂ ಅಧಿಕಾರಕ್ಕೆ ಬಂದ ಮೇಲೆ ರೈತ ಸಾಲ ಮನ್ನಾ ಎಂಬುದು ಜನಪ್ರಿಯತೆ ತಂದುಕೊಡುತ್ತದೆ ಎಂಬುದನ್ನು ಯಡಿಯೂರಪ್ಪ ಅರ್ಥ ಮಾಡಿಕೊಂಡಿದ್ದಾರೆ.

ಬೆಳಗ್ಗೆಯೇ ರೈತರ ಸಾಲ ಮನ್ನದ ದಾಖಲೆ ಕಡತ ತರಿಸಿಕೊಂಡಿರುವ ಬಿಎಸ್‌ವೈ, ರೈತರ ಹಾಗೂ ನೇಕಾರರ 1 ಲಕ್ಷ ರೂಪಾಯಿಗಳವರೆಗಿನ ಬೆಳೆ ಸಾಲವನ್ನು ಮನ್ನ ಮಾಡುವ ಭರವಸೆಯನ್ನು ನೀಡಿದ್ದಾರೆ. ಸ್ಥಿರ ಸರಕಾರ ರಚನೆಗೆ ಇನ್ನೂ ಕೆಲವು ದಿನಗಳ ಅಗತ್ಯವಿದ್ದು 2-3 ದಿನಗಳೊಳಗೆ ಸಾಲ ಮನ್ನ ಮಾಡುವುದಾಗಿ ತಿಳಿಸಿದ್ದಾರೆ. ರಾಷ್ಟ್ರೀಕೃತ ಬ್ಯಾಂಕ್‌ಗಳು ಮತ್ತು ಸಹಕಾರ ಸಂಘಗಳಲ್ಲಿ ಸಾಲವನ್ನು ಮಾತ್ರ ಮನ್ನಾ ಮಾಡುವ ಯೋಚನೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯದ ಜನರ ಮುಂದಿಟ್ಟಿದ್ದಾರೆ.

ಇನ್ನು 2-3 ದಿನಗಳೊಳಗೆ ಸಾಲ ಮನ್ನ ಮಾಡುವುದಾಗಿ ತಿಳಿಸಿದ ಕೂಡಲೇ, ಯಡಿಯೂರಪ್ಪ ರೈತರ ಸಾಲವನ್ನು ಮನ್ನ ಮಾಡಿಬಿಟ್ಟರು ಎಂಬಂತೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡಲು ಆರಂಭಿಸಿತ್ತು. ಸಾಲ ಮನ್ನಾ ಆಗಿಯೇ ಬಿಟ್ಟಿತು ಎಂದು ಜನರಿಗೆ ತಲುಪಿಸುವ ಕೆಲಸವೂ ನಡೆಯಿತು. ಆದರೆ ಈ ಕುರಿತ ಗೊಂದಲಗಳಿಗೆ ಸ್ವತಃ ಯಡಿಯೂರಪ್ಪ ತೆರೆ ಎಳೆದರು.

ಸಂಜೆ ವೇಳೆಗೆ ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಯಡಿಯೂರಪ್ಪ, “ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕ್‌ಗಳಲ್ಲಿನ ರೈತರ ಮತ್ತು ನೇಕಾರರ 1 ಲಕ್ಷದ ವರೆಗಿನ ಸಾಲ ಮನ್ನಾ ಮಾಡುವ ಭರವಸೆ ನೀಡಿದ್ದೇನೆ. ಈ ಬಗ್ಗೆ ಮುಖ್ಯ ಕಾರ್ಯದರ್ಶಿ ಜೊತೆ ಚರ್ಚಿಸಿದ್ದೇನೆ, ನಾಳೆ ಈ ಸಂಬಂಧ ದಾಖಲೆ ಪರಿಶೀಲಿಸಿ 2 ದಿನದೊಳಗೆ ನಿರ್ಧಾರ ಘೋಷಿಸಲಾಗುವುದು,” ಎಂದು ತಿಳಿಸಿದರು.

ಮುಂದುವರಿದು ಮಾತನಾಡಿ, ರಾಜ್ಯಪಾಲರು ಬಹುಮತವನ್ನು ಸಾಬೀತು ಪಡಿಸಲು 15 ದಿನಗಳ ಕಾಲಾವಕಾಶವನ್ನು ನೀಡಿದ್ದಾರೆ. ಆದರೆ ನಮಗೆ ಅಷ್ಟು ದಿನಗಳ ಅಗತ್ಯವಿಲ್ಲ. ಅದರೊಳಗೆಯೇ ಬಹುಮತವನ್ನು ಸಾಬೀತು ಪಡಿಸಿ ಸ್ಥಿರ ಸರಕಾರವನ್ನು ರಚಿಸುವುದಾಗಿ ಹೇಳಿದ್ದಾರೆ. ಸಚಿವ ಸಂಪುಟ ಸಿದ್ಧವಾದ ಕೂಡಲೇ ಪ್ರಣಾಳಿಕೆಯಲ್ಲಿ ತಿಳಿಸಿದ್ದ ಭರವಸೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗುವುದಾಗಿ ಮಾಹಿತಿ ನೀಡಿದ್ದಾರೆ.

ಪ್ರಮಾಣ ವಚನ ಸ್ವೀಕರಿಸಿದ ಕೆಲ ಗಳಿಗೆಯಲ್ಲೇ ಯಡಿಯೂರಪ್ಪ ರೈತರ ಸಾಲಮನ್ನಾ ಮಾಡುವುದಾಗಿ ಭರವಸೆ ನೀಡಿರುವುದು ಹಾಗೂ 1 ಲಕ್ಷದಷ್ಟು ರೈತರಿಗೆ ಇದರಿಂದ ಲಾಭವಾಗುವುದಾಗಿ ತಿಳಿಸಿರುವುದು ಜನಪ್ರಿಯ ರಾಜಕೀಯ ನಡೆ ಎಂದು ರಾಷ್ಟ್ರೀಯ ಮಾಧ್ಯಮಗಳು ವಿಶ್ಲೇಷಿಸುತ್ತಿವೆ. ಕರ್ನಾಟಕದ ಆರ್ಥಿಕತೆಯ ಮುಖ್ಯಭಾಗವಾಗಿರುವ ರೈತರಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಬೆಂಬಲಿಗರೂ ಇದ್ದಾರೆ. ಸಾಲಮನ್ನದ ಘೋಷಣೆಯಿಂದ ಅವರೆಲ್ಲರನ್ನೂ ತನ್ನತ್ತ ಸೆಳೆಯುವ ಪ್ರಯತ್ನಕ್ಕೆ ಬಿಜೆಪಿ ಮುಂದಾಗಿದೆ ಎನ್ನುವ ಅಂಶಗಳು ಚರ್ಚೆಗೆ ಬರುತ್ತಿವೆ. ಯಾವ ಚರ್ಚೆ, ವಾದ ವಿವಾದಗಳಾದರೂ ಕೂಡ ಯಡಿಯೂರಪ್ಪರ ಸಚಿವ ಸಂಪುಟ ಸಿದ್ಧವಾಗಿ, ಸ್ಥಿರ ಸರಕಾರ ರೂಪುಗೊಂಡ ನಂತರವಷ್ಟೇ ರೈತರ ಸಾಲ ಮನ್ನ ಭರವಸೆ ಈಡೇರಲಿದೆ. ಅಲ್ಲೀವರೆಗೆ ಇದು ರೈತರ ಹೆಸರಿನಲ್ಲಿ ನಾಡಿನ ದೊಡ್ಡ ಸಂಖ್ಯೆಯ ಜನರ ಮೂಗಿಗೆ ತುಪ್ಪ ಸವರುವ ಕೆಲಸ ಅಷ್ಟೆ ಆಗಿ ಉಳಿಯಲಿದೆ.